Saturday, February 16, 2013

ಮುಂಬೈ: ತಲೆಯಿಲ್ಲದ ಮಗುವಿಗೆ ಜನ್ಮ ನೀಡಿದ ಮಹಿಳೆ



ಮುಂಬೈ: 30 ವರ್ಷದ ಮಹಿಳೆಯೊಬ್ಬರು ತನ್ನ ಪ್ರಥಮ ಪ್ರಸವದಲ್ಲಿ ಒಂದು ಆರೋಗ್ಯವಂತ ಮಗು ಹಾಗೂ ಒಂದು ತಲೆಯಿಲ್ಲದ ಮಗುವಿಗೆ ಗುರುವಾರ ಜನ್ಮ ನೀಡಿದ್ದಾರೆ.

ಅಂಗವೈಕಲ್ಯದ ಮಗು ಹುಟ್ಟುವಾಗಲೇ ಸತ್ತಿತ್ತು ಎಂದು ಇಲ್ಲಿನ ನ್ಯೂ ಮರೀನ್ ಲೈನ್ಸ್‌ನಲ್ಲಿರುವ ಬಾಂಬೆ ಹಾಸ್ಪಿಟಲ್‌ನ ವೈದ್ಯರು ಹೇಳಿದರು.
 ‘‘ಸತ್ತು ಹುಟ್ಟಿದ ಮಗುವನ್ನು ನೋಡಿದ ಹೆತ್ತವರು ಆಘಾತಕ್ಕೊಳಗಾಗಿದ್ದಾರೆ’’ ಎಂದು ಮಹಿಳೆಗೆ ಗರ್ಭಾವಸ್ಥೆಯಿಡೀ ಚಿಕಿತ್ಸೆ ನೀಡಿರುವ ಸ್ತ್ರೀರೋಗ ತಜ್ಞೆ ಡಾ. ಶಿಲ್ಪಾ ಅಂಬೇಕರ್ ಹೇಳಿದರು.


ವೈಜ್ಞಾನಿಕ ಪರಿಭಾಷೆಯಲ್ಲಿ ‘ಅಕಾರ್ಡಿಯ ಮಾನ್‌ಸ್ಟರ್’ ಎಂದು ಕರೆಯಲ್ಪಡುವ ಈ ಮಾದರಿಯ ಮಗುವಿನ ಜನನ 40,000 ಸಜೀವ ಜನನಗಳ ಪೈಕಿ ಒಂದರಂತೆ ಸಂಭವಿಸುತ್ತದೆ. ಮಗುವಿಗೆ ಹೊಟ್ಟೆ ಮಾತ್ರವಿತ್ತು, ತಲೆ, ಕುತ್ತಿಗೆ ಮತ್ತು ಮುಖಗಳಿರಲಿಲ್ಲ. ‘‘ಅದಕ್ಕೆ ಒಂದು ಕೈಯಿತ್ತು. ಹಾಗೂ ಕೈಬೆರಳುಗಳು ನೇರವಾಗಿ ಹೊಟ್ಟೆಯಿಂದ ಬಂದಿದ್ದವು’’ ಎಂದು ಡಾ. ಅಂಬೇಕರ್ ತಿಳಿಸಿದರು.
 
ಈ ಸ್ಥಿತಿಯಲ್ಲಿ ಕಾರ್ಯನಿರ್ವಹಿಸುವ ಹೃದಯವಿರುವುದಿಲ್ಲ ಎಂದರು. ಏಕ ಅಂಡದಿಂದ ಅಭಿವೃದ್ಧಿ ಹೊಂದುವ ಮೋನಿಝಿಗಸ್ ಅವಳಿಗಳಲ್ಲಿ ಹೆಚ್ಚಾಗಿ ಇದು ಕಂಡುಬರುತ್ತದೆ ಎಂದರು.

ಗರ್ಭದಲ್ಲಿರುವಾಗ ಅಸಹಜ ಭ್ರೂಣ ಪರೋಪಜೀವಿಯಂತೆ ವರ್ತಿಸುತ್ತಿತ್ತು. ಅದು ರಕ್ತ ಮತ್ತು ಪೌಷ್ಟಿಕಾಂಶಗಳನ್ನು ಆರೋಗ್ಯವಂತ ಭ್ರೂಣದಿಂದ ಪಡೆದುಕೊಳ್ಳುತ್ತಿತ್ತು.
 ಈ ಪರಿಸ್ಥಿತಿಯನ್ನು ಗರ್ಭದ ಐದನೆ ತಿಂಗಳಲ್ಲಿ ದಂಪತಿಗೆ ವಿವರಿಸಲಾಗಿತ್ತು ಹಾಗೂ ವೈದ್ಯಕೀಯ ಗರ್ಭಪಾತದ ಆಯ್ಕೆಯನ್ನು ಒದಗಿಸಲಾಗಿತ್ತು. ಆದರೆ, ಸಾಮಾನ್ಯ ಭ್ರೂಣಕ್ಕೆ ಹಾನಿ ಮಾಡಲು ತಾಯಿ ಇಚ್ಛಿಸದ ಹಿನ್ನೆಲೆಯಲ್ಲಿ ಗರ್ಭ ಮುಂದುವರಿದಿತ್ತು.

No comments:

Post a Comment