Thursday, February 14, 2013

ಅನೈತಿಕ ಪೊಲೀಸರ ಅಟ್ಟಹಾಸ


ಅಂಕಣ sanath kumar belagali 

ಮ೦ಗಳೂರಿನಲ್ಲಿ ಹೊಟೇಲುಗಳಲ್ಲಿ, ಐಸ್‌ಕ್ರೀಂ ಪಾರ್ಲರ್‌ಗಳಲ್ಲಿ ಮಾತಾಡುತ್ತ ಕುಳಿತ ಯುವಕ, ಯುವತಿಯರ ಮೇಲೆ ಹಲ್ಲೆ ಮಾಡುವ ಗೂಂಡಾಗಳನ್ನು ನೈತಿಕ ಪೊಲೀಸರು ಎಂದು ಮಾಧ್ಯಮಗಳು ವರ್ಣಿಸುತ್ತ ಬಂದಿವೆ. ಇಂಗ್ಲಿಷಿನ ‘MORAL POLICING’ ಶಬ್ದದ ಕನ್ನಡ ಅನುವಾದ ಅನೇಕ ಬಾರಿ ವಿಭಿನ್ನ ಅರ್ಥ ಕೊಡುತ್ತದೆ. ‘ಜೊತೆ ಸೇರಿ ಮಾತಾಡುವ ಯುವಕ-ಯುವತಿಯರು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರನ್ನು ನಾವು ರಿಪೇರಿ ಮಾಡುತ್ತೇವೆ. (ಹೋಂ ಸ್ಟೇನಲ್ಲಿ ಮಾಡಿದಂತೆ.)’ ಎಂಬುದು ಈ ಹಲ್ಲೆಕೋರರ ವಾದ. ಇವರು ಮಾಡುವುದನ್ನು ಅನೈತಿಕ ಪೊಲೀಸ್‌ಗಿರಿ ಎಂದು ವ್ಯಾಖ್ಯಾನಿಸಿದರೆ ಹೆಚ್ಚು ಸೂಕ್ತವಾಗುತ್ತದೆ. ಯಾಕೆಂದರೆ ಇವರ ನೈತಿಕತೆಯ ಮಾನದಂಡ ವಿಚಿತ್ರ ಮತ್ತು ಅನುಕೂಲ ಸಿಂಧುವಾಗಿದೆ.
ಉಡುಪಿಯ ಬಿಜೆಪಿ ಶಾಸಕನ ಪತ್ನಿಯ ಸಂಶಯಾಸ್ಪದ ಸಾವಿನ ಸಂದರ್ಭದಲ್ಲಿ ಈ ಅನೈತಿಕ ಪೊಲೀಸರು ಲಕ್ವಾ ಪಡೆದವರಂತೆ ತೆಪ್ಪಗೆ ಬಿದ್ದಿರುತ್ತಾರೆ. ಬಿಜೆಪಿ ಮಂತ್ರಿಯೊಬ್ಬ ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದನೆಂಬ ಆರೋಪ ಬಂದಾಗ ಈ ಹಿಂದುತ್ವ ರಕ್ಷಕರು ಪ್ರಜ್ಞಾಹೀನರಂತೆ ಬಿದ್ದಿರುತ್ತಾರೆ. ಪವಿತ್ರವಾದ ಶಾಸನಸಭೆಯಲ್ಲಿ ಹಾಡಹಗಲೆ ಬಿಜೆಪಿಯ ಮೂವರು ಮಂತ್ರಿಗಳು ಬ್ಲೂಫಿಲಂ ನೋಡಿದರೆ ಈ ದುರ್ಗಾ ವಾಹಿನಿಯ ದುರ್ಗೆಯರು ಮೌನವ್ರತ ತಾಳಿರುತ್ತಾರೆ.
ಕಲ್ಯಾಣಸಿಂಗ್ ಎಂಬ ಬಿಜೆಪಿಯ ಮಾಜಿ ಮುಖ್ಯಮಂತ್ರಿ ತನ್ನ ಪ್ರೇಯಸಿಗೆ ಸಕಲ ಸಂವಿಧಾನಾತ್ಮಕ ಅಧಿಕಾರವನ್ನು ನೀಡಿದಾಗ ಈ ಗಣವೇಷಧಾರಿಗಳು ಗಾಳಿಯಲ್ಲಿ ಲಾಠಿ ತಿರುಗಿಸುತ್ತಾ ನಿಂತಿರುತ್ತಾರೆ. ಈ ಅನೈತಿಕ ಪೊಲೀಸರು- ದುರ್ಗಾವಾಹಿನಿಯ ದುರ್ಗೆಯರು ರೌದ್ರಾವತಾರ ತಾಳುವುದು ಐಸ್‌ಕ್ರೀಂ ಪಾರ್ಲರುಗಳಲ್ಲಿ ಮಾತಾಡುತ್ತ ಕುಳಿತ ಬಡಪಾಯಿ ಯುವಕ-ಯುವತಿಯರ ಮೇಲೆ.
ಹುಡುಗಿಯರು ಯುವಕರ ಜೊತೆ ಸಿಗರೇಟು ಸೇದುತ್ತ ಕುಳಿತುಕೊಳ್ಳುವುದೇ ಇವರ ದೃಷ್ಟಿಯಲ್ಲಿ ಮಹಾಪರಾಧ. ಇವರಿಗೆ ತಕ್ಕಂತೆ ಮಂಗಳೂರಿನ ಪೊಲೀಸರು ನರ್ತನ ಮಾಡುತ್ತಾರೆ. ಐಸ್‌ಕ್ರೀಂ ಪಾರ್ಲರ್‌ನಲ್ಲಿ ಕುಳಿತ ಯುವಕ, ಯುವತಿಯರನ್ನು ಪೊಲೀಸ್ ಠಾಣೆಗೆ ಕರೆತಂದು ರಕ್ಷಣೆಗಾಗಿ ಕರೆತಂದವೆಂದು ಹೇಳುತ್ತಾರೆ. ಆದರೆ ಹಲ್ಲೆ ಮಾಡಲು ಬಂದ ಫಟಿಂಗರನ್ನು ಪೊಲೀಸರು ಬಂಧಿಸುವುದಿಲ್ಲ. ಇದು ನಮ್ಮ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ.
ಮಂಗಳೂರಿನಲ್ಲಿ ಸರಕಾರದ ಆಡಳಿತ ಯಂತ್ರವೇ ಸಂಪೂರ್ಣ ವಿಫಲಗೊಂಡಿದೆ. ಸಂಘಪರಿವಾರದ ಗೂಂಡಾಪಡೆಗಳು ಸಾಮಾಜಿಕ ಜೀವನವನ್ನು ನಿಯಂತ್ರಿಸುತ್ತಿವೆ. ಯಾರು ಎಲ್ಲಿ ಹೋಗಬೇಕು? ಎಲ್ಲಿ ಹೋಗಬಾರದು? ಏನನ್ನು ಮಾಡಬೇಕು, ಏನನ್ನು ತಿನ್ನಬೇಕು ಎಂಬುದನ್ನೆಲ್ಲ ಈ ಗೂಂಡಾಪಡೆಗಳು ನಿರ್ಧರಿಸುತ್ತವೆ. ಪವಿತ್ರ ಗ್ರಂಥ ಕುರ್‌ಆನ್‌ನ ಕನ್ನಡ ಅನುವಾದದ ಬಿಡುಗಡೆಗೆ ಉಡುಪಿಯ ಪೇಜಾವರ ಸ್ವಾಮಿಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ ಅತಿಥಿಗಳಾಗಿ ಬರಲು ಒಪ್ಪಿಕೊಂಡಿದ್ದರು. ಆದರೆ ಈ ಗೂಂಡಾ ಪಡೆಯ ದೊಣ್ಣೆ ನಾಯಕರು “ಅಲ್ಲಿ ಹೋದರೆ ಹುಷಾರ್” ಎಂದು ಬೆದರಿಕೆ ಹಾಕಿದ ತಕ್ಷಣ ಇವರಿಬ್ಬರು ಕಾರ್ಯಕ್ರಮಕ್ಕೆ ಹೋಗಲಿಲ್ಲ.
ವಿಧಾನಸಭೆ ಹಾಗೂ ಲೋಕಸಭೆಯ ಚುನಾವಣೆಗಳು ಸಮೀಪ ಬಂದಾಗ ಈ ಕೋಮುವಾದಿ ಗೂಂಡಾಪಡೆಗಳಿಗೆ ನಶೆ ಏರುತ್ತದೆ, ವಿಎಚ್‌ಪಿ, ಬಜರಂಗದಳ, ಶ್ರೀರಾಮಸೇನೆ, ದುರ್ಗಾವಾಹಿನಿ, ಎಬಿವಿಪಿ ಇವೆಲ್ಲ ಒಮ್ಮೆಲೆ ಬೀದಿಗೆ ಬರುತ್ತವೆ. ಈ ದೇಶದ ಎಲ್ಲ ಹಿಂದೂಗಳನ್ನು ಸಂಪೂರ್ಣವಾಗಿ ಕೋಮುವಾದಿಗಳನ್ನಾಗಿ ಮಾಡಿ ಇಡಿ ದೇಶವನ್ನು ವೈದಿಕಶಾಹಿಯ ನೇಣಿಗೆ ಹಾಕುವುದು ಇವರ ಕಾರ್ಯಸೂಚಿಯಾಗಿದೆ. ಅದಕ್ಕೆ ಹಿಂದುಳಿದ ವರ್ಗಗಳ ಯುವಕರನ್ನು ಅತ್ಯಂತ ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತ ಬಂದಿದ್ದಾರೆ. ಎಲ್ಲೆಡೆ ಈ ಪ್ರಯೋಗ ಯಶಸ್ವಿಯಾಗದಿದ್ದರೂ ಗುಜರಾತ್ ಮತ್ತು ಮಂಗಳೂರಿನಂತಹ ಕಡೆ ಯಶಸ್ವಿಯಾಗುತ್ತಿದೆ.
ಇತ್ತೀಚೆಗೆ ಈ ಪುಂಡರ ಗುಂಪು ಹುಬ್ಬಳ್ಳಿಯಲ್ಲಿ ತಮಿಳುನಾಡಿನ ಈರೋಡಿ ನಿಂದ ಗೋವಾದ ಮೋಲೆಮ್‌ನ ಸರಕಾರಿ ಜಾನುವಾರು ಫಾರಂಗೆ ಸಾಗಿಸುತ್ತಿದ್ದ 36 ದನಗಳನ್ನು ಕಸಾಯಿ ಖಾನೆಗೆ ಸಾಗಿಸಲಾಗುತ್ತಿದೆ ಎಂದು ತಡೆಯಿತು. ಆರೆಸ್ಸೆಸ್‌ನ ಆಣತಿಯಂತೆ ಕುಣಿಯುವ ಪೊಲೀಸರು ಅವುಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡರು. 
ಆದರೆ ಗೋವಾದ ಬಿಜೆಪಿ ಸರಕಾರ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತು. ಅಲ್ಲಿನ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ರೈತರಿಗೆ ವಿತರಿಸಲು ಈ ದನಗಳನ್ನು ಕೊಂಡೊಯ್ಯುತ್ತಿರುವುದಾಗಿ ಸ್ಪಷ್ಟೀಕರಣ ನೀಡಿದರು. ಕೊನೆಗೆ ಹುಬ್ಬಳ್ಳಿಯ ಪೊಲೀಸ್ ಕಮಿಷನರ್ ಪದ್ಮನಯನರಿಗೆ ತಪ್ಪಿನ ಅರಿವಾಯಿತು. ಅವರು ಕೆಲ ಸಂಘಟನೆಗಳ ಒತ್ತಡಕ್ಕೆ ಮಣಿದು ದನಗಳನ್ನು ಹಿಡಿದಿಟ್ಟು ಕೊಂಡದು ದುರದೃಷ್ಟಕರ ಎಂದು ಹೇಳಿಕೆ ನೀಡಿದರು.
ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ದಿಲ್ಲಿಯ ಖ್ಯಾತ ಕಲಾವಿದ ಸಾಯಿನಾಥ ಕೃಷ್ಣಮಣಿ ಅವರ ಕಲಾಕೃತಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಕಲಾಕೃತಿಗಳಲ್ಲಿ ಹಿಂದೂ ದೇವತೆಗಳಿಗೆ ಅವಮಾನ ಮಾಡಲಾಗಿದೆ ಎಂದು ಈ ಕೋಮುವಾದಿ ಅನೈತಿಕ  ಪೊಲೀಸರು ತಕರಾರು ತೆಗೆದರು. ಕೊನೆಗೆ ಈ ಪುಂಡರ ಒತ್ತಡಕ್ಕೆ ಮಣಿದು ಕೆಲ ಕಲಾಕೃತಿಗಳನ್ನು ಪ್ರದರ್ಶನದಿಂದ ತೆಗೆಯಲಾಯಿತು. ಎಂ.ಎಫ್.ಹುಸೇನರಂಥ ಖ್ಯಾತ ಕಲಾವಿದರನ್ನು ದೇಶದಿಂದ ಓಡಿಸಿದವರಿಗೆ ಸಾಯಿನಾಥರಂಥ ಯುವ ಕಲಾವಿದರನ್ನು ಹತ್ತಿಕ್ಕುವುದು ದೊಡ್ಡದೇನಲ್ಲ.
ದಿಲ್ಲಿ ಆರ್ಟ್ ಗ್ಯಾಲರಿಯಲ್ಲಿ ಇತ್ತೀಚೆಗೆ ನಡೆದ ಕಲಾಕೃತಿಗಳ ಪ್ರದರ್ಶನದ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್ತಿನ ಮಹಿಳಾ ವಿಭಾಗವಾದ ದುರ್ಗಾವಾಹಿನಿ ಕಾರ್ಯಕರ್ತೆಯರು ಬಂದು ಗಲಾಟೆ ಮಾಡಿದರು. ಅಲ್ಲಿ ಬೆತ್ತಲೆ ಚಿತ್ರಗಳ ಪ್ರದರ್ಶನ ನಡೆದಿದೆ ಎಂಬುದು ಇವರ ತಕರಾರಾಗಿತ್ತು.
ಆದರೆ ಅಜಂತಾ-ಎಲ್ಲೋರಾ-ಹಳೆಬೀಡು, ಬೇಲೂರು, ಬಾದಾಮಿ, ಐಹೊಳೆಗಳಲ್ಲೂ ಇಂಥ ಬೆತ್ತಲೆ ಶಿಲ್ಪಗಳಿವೆ. ಮೈಥುನದಲ್ಲಿ ತೊಡಗಿದ ಯಕ್ಷ-ಯಕ್ಷಿಯರನ್ನು ಕಲ್ಲಿನಲ್ಲಿ ಕೆತ್ತಲಾಗಿದೆ. ನಾಳೆ ಇವರ ಹಿಂದೂ ರಾಷ್ಟ್ರ ನಿರ್ಮಾಣ ವಾದರೆ ಅವುಗಳನ್ನೆಲ್ಲ ನಾಶ ಮಾಡುತ್ತಾರೆಯೆ? ಈ ದುರ್ಗಾವಾಹಿನಿ ಎಂಬುದು 1990ರಲ್ಲಿ ರಾಮಜನ್ಮಭೂಮಿ ಚಳವಳಿಯ ಸಂದರ್ಭದಲ್ಲಿ ಅಸ್ತಿತ್ವಕ್ಕೆ ಬಂತು. ಬಜರಂಗದಳದವೂ ಅದೇ ಕಾಲಘಟ್ಟದಲ್ಲಿ ಕಣ್ಣು ಬಿಟ್ಟಿತು.
ಆರೆಸ್ಸೆಸ್‌ನ ಮಹಿಳಾ ವಿಭಾಗವಾದ ರಾಷ್ಟ್ರ ಪೇತಿಕಾದ ಇನ್ನೊಂದು ಉಗ್ರಗಾಮಿ ಗುಂಪಾದ ದುರ್ಗಾವಾಹಿನಿಗೆ ಸಾಧ್ವಿ ರಿತಂಬರಾ ನಾಯಕಿ. ಈ ಸಾಧ್ವಿಯ ಭಾಷಣದ ಕ್ಯಾಸೆಟ್ಟುಗಳು ಆಗ ದೇಶದ ತುಂಬ ಹರಿದಾಡುತ್ತಿದ್ದವು. ಈಕೆಯ ಕ್ಯಾಸೆಟ್ ಭಾಷಣ ಕೇಳಿದರೆ ಬಿನ್ ಲಾದೆನ್ ಖಂಡಿತ ನಾಚಿಕೆಯಿಂದ ತಲೆ ಕೆಳಗೆ ಮಾಡುತ್ತಿದ್ದ. ಅಷ್ಟೊಂದು ಬೆಂಕಿ ಅವರ ನಾಲಿಗೆಯಿಂದ ಭುಗಿಲೆದ್ದು ಬರುತ್ತಿತ್ತು.
1992ರ ರಾಮಜನ್ಮಭೂಮಿ ಚಳವಳಿಯ ನಂತರ ಹತ್ತು ವರ್ಷ ಕಾಲ ಹಾರಾಡಿ ಇತ್ತೀಚಿನ ಐದಾರು ವರ್ಷಗಳಿಂದ ತಣ್ಣಗಾಗಿದ್ದ ಈ ಭಯೋತ್ಪಾದಕ ಸಂಘಟನೆಗಳು ಈಗ ಮತ್ತೆ ಬೀದಿಗೆ ಬಂದಿವೆ. ಕರ್ನಾಟಕದ ಬಿಜೆಪಿ ಸರಕಾರದ ಹೊಲಸು, ನೀರಾ ರಾಡಿಯಾಳ ರಾಡಿ, ಗಡ್ಕರಿಯ ಅಜೀರ್ಣ ಭೋಜನದ ಕತೆ ಇವುಗಳನ್ನೆಲ್ಲ ಮುಚ್ಚಿ ಹಾಕಿ ಮತ್ತೆ ಬಿಜೆಪಿಯನ್ನು ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ತರುವುದು ಈ ಪುಂಡ ಪರಿವಾರದ ಹುನ್ನಾರವಾಗಿದೆ. ಬರಲಿರುವ ಚುನಾವಣೆಗಳಲ್ಲಿ ಪ್ರಗತಿಪರ ಜಾತ್ಯತೀತ ಶಕ್ತಿಗಳಿಗೆ ಇದೇ ಮುಖ್ಯ ಸವಾಲಾಗಿ ಪರಿಣಮಿಸಲಿದೆ.

No comments:

Post a Comment