Thursday, February 21, 2013

ದಯಾ ಭಿಕ್ಷೆ ಅರ್ಜಿ ಮರುಪರಿಶೀಲಿಸಿ: ಗೃಹ ಸಚಿವಾಲಯಕ್ಕೆ ರಾಷ್ಟ್ರಪತಿ ಸೂಚನೆ



ಹೊಸದಿಲ್ಲಿ: ರಾಷ್ಟ್ರಪತಿ ಭವನಕ್ಕೆ ಪ್ರಣವ್ ಮುಖರ್ಜಿ ಹೋದ ಬಳಿಕ ಇದುವರೆಗೂ ಗಲ್ಲು ಶಿಕ್ಷೆಗೊಳಗಾಗಿದ್ದ ಏಳು ದೋಷಿಗಳ ದಯಾ ಭಿಕ್ಷೆ ಅರ್ಜಿಯನ್ನು ತಿರಸ್ಕರಿಸಿದ್ದು, ಗಲ್ಲು ಶಿಕ್ಷೆಗೊಳಗಾಗಿರುವವರ ಮತ್ತಷ್ಟು ಪ್ರಕರಣಗಳನ್ನು ಅವರು ಪರಿಗಣನೆಗೆ ತೆಗೆದುಕೊಳ್ಳಲು ಬಯಸಿರುವುದರಿಂದ ದಯಾ ಭಿಕ್ಷೆಯನ್ನು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ತಮಗೆ ಕಳುಹಿಸುವುದಕ್ಕೆ ಮೊದಲು ಅವುಗಳನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಪ್ರಣವ್ ಮುಖರ್ಜಿ ಕೇಂದ್ರ ಗೃಹ ಸಚಿವಾಲಯಕ್ಕೆ ಸೂಚಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಮುಂಬೈ ಮೇಲಿನ 26/11 ದಾಳಿಗೆ ಸಂಬಂಧಿಸಿದಂತೆ ಸೆರೆ ಸಿಕ್ಕು ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಪಾಕಿಸ್ತಾನ ಮೂಲದ ಉಗ್ರ ಅಜ್ಮಲ್ ಕಸಬ್, ಸಂಸತ್ ಮೇಲಿನ ದಾಳಿಗೆ ಸಂಬಂಧಿಸಿದಂತೆ ಅಫ್ಝಲ್ ಗುರು ಹಾಗೂ ನರಹಂತಕ ವೀರಪ್ಪನ್‌ನ ನಾಲ್ವರು ಸಹಚರರು ಸಲ್ಲಿಸಿದ್ದ ದಯಾ ಭಿಕ್ಷೆ ಅರ್ಜಿಯನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ತಿರಸ್ಕರಿಸಿದ್ದರು.
ಬಾಕಿ ಇದ್ದ ಈ ಎಲ್ಲಾ ದಯಾ ಭಿಕ್ಷೆ ಅರ್ಜಿಗಳನ್ನು ಗೃಹ ಸಚಿವಾಲಯ ರಾಷ್ಟ್ರಪತಿ ಭವನಕ್ಕೆ ಕಳುಹಿಸಿತ್ತು.
 ಗಲ್ಲು ಶಿಕ್ಷೆಗೆ ಗುರಿಯಾಗಿರುವವರ ದಯಾ ಭಿಕ್ಷೆಯ ಮತ್ತಷ್ಟು ಪ್ರಕರಣಗಳನ್ನು ತೆಗೆದುಕೊಳ್ಳಲು ಮುಂದಾಗಿರುವ ರಾಷ್ಟ್ರಪತಿ ಇದೀಗ ಇಂತಹ ಅರ್ಜಿಗಳನ್ನು ತಮಗೆ ಕಳುಹಿಸುವ ಮುನ್ನ ಮರುಪರಿಶೀಲನೆ ನಡೆಸಿ ಕಳುಹಿಸುವಂತೆ ಗೃಹ ಸಚಿವಾಲಯಕ್ಕೆ ಸೂಚಿಸಿದ್ದಾರೆಂದು ಮೂಲಗಳು ತಿಳಿಸಿವೆ. ಕಳೆದ ವರ್ಷದ ನವೆಂಬರ್‌ನಲ್ಲಿ ಪುಣೆಯ ಯಾರವಾಡ ಜೈಲಿನಲ್ಲಿ ಕಸಬ್‌ನನ್ನು ಮತ್ತು ಈ ತಿಂಗಳ 9ರಂದು ಅಫ್ಝಲ್ ಗುರುವನ್ನು ದಿಲ್ಲಿಯ ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು.
ಗಲ್ಲು ಶಿಕ್ಷೆಗೆ ಗುರಿಯಾಗಿರುವ ನರಹಂತಕ ವೀರಪ್ಪನ್‌ನ ನಾಲ್ವರು ಸಹಚರರು ಸಲ್ಲಿಸಿದ್ದ ದಯಾ ಭಿಕ್ಷೆಯನ್ನು ಕಳೆದ ವಾರ ರಾಷ್ಟ್ರಪತಿ ಪ್ರಣವ್ ಮುಖರ್ಜಿ ತಿರಸ್ಕರಿಸಿದ್ದರು. ಅವರನ್ನು ಗಲ್ಲಿಗೇರಿಸುವುದಕ್ಕೆ ಸುಪ್ರೀಂಕೋರ್ಟ್ ಇಂದು ಆರು ವಾರಗಳವರೆಗೆ ತಡೆಯಾಜ್ಞೆ ನೀಡಿದೆ.

No comments:

Post a Comment