Sunday, February 24, 2013

ಹೈದರಾಬಾದ್ ಉಗ್ರ ದಾಳಿ: ಯುವ ಮನಸುಗಳ ಕನಸು ಭಗ್ನಹೈದರಾಬಾದ್: ಕಳೆದ ಗುರುವಾರ ಸಂಜೆ ಐತಿಹಾಸಿಕ ನಗರಿ ಹೈದರಾಬಾದ್‌ನಲ್ಲಿ ನಡೆದ ಅವಳಿ ಬಾಂಬ್ ಸ್ಫೋಟ ಹಲವಾರು ಕುಟುಂಬಗಳ ತುತ್ತು ಅನ್ನದ ಆಶ್ರಯದಾತರನ್ನು ಕಳೆದುಕೊಂಡಿರುವ ಜತೆಗೆ ಯುವಜನತೆಯ ಕನಸುಗಳನ್ನು ಭಗ್ನಗೊಳಿಸಿ ಅವರ ಜೀವವನ್ನು ತೆಗೆದುಕೊಂಡಿದೆ.
ಹೌದು, ಅವಳಿ ಸ್ಫೋಟಕ್ಕೆ ಬಲಿಯಾದವರಲ್ಲಿ ಹೆಚ್ಚಿನವರು ಹಲವಾರು ಜಿಲ್ಲೆಗಳಿಂದ ಹಲವು ರೀತಿಯ ಕನಸನ್ನು ಹೊತ್ತು ಹೈದರಾಬಾದ್‌ಗೆ ಬಂದಿದ್ದ ಯುವ ಮನಸುಗಳು.
ಸ್ಫೋಟದಲ್ಲಿ ಬಲಿಯಾದ 16 ಜನರಲ್ಲಿ ಇಬ್ಬರು ಯುವ ಸ್ನೇಹಿತರು ಪೊಲೀಸ್ ಸಮವಸ್ತ್ರ ಧರಿಸಿ ಕರ್ತವ್ಯ ನಿರ್ವಹಿಸಬೇಕೆಂಬ ಕನಸು ಹೊತ್ತು ಹೈದರಾಬಾದ್‌ಗೆ ಬಂದಿದ್ದವರು.
ರಾಜ್ಯದ ಹಿಂದುಳಿದ ಜಿಲ್ಲೆಯಾದ ಅದಿಲಾ ಬಾದ್‌ನವರಾದ ರಾಜಶೇಖರ್ ಮತ್ತು ವಿಜಯ್ ಕುಮಾರ್ ಇಬ್ಬರೂ ಸ್ನೇಹಿತರು ಮತ್ತು ಎಂಬಿಎ ಪದವೀಧರರು. ಇಬ್ಬರೂ ಪೊಲೀಸ್ ಸಬ್ ಇನ್ಸ್ ಪೆಕ್ಟರ್‌ಗಳಾಗಬೇಕೆಂಬ ಕನಸು ಹೊತ್ತು ಅದರ ಪರೀ ಕ್ಷೆಗೆ ಹಾಜರಾಗಲು ಹೈದರಾಬಾದ್‌ಗೆ ಬಂದಿದ್ದರು.
ಈ ಇಬ್ಬರು ಇತರೆ ಇಬ್ಬರು ಸ್ನೇಹಿತರೊಂದಿಗೆ ಬಾಂಬ್ ಸ್ಫೋಟಿಸಿದ ಸ್ಥಳದಲ್ಲಿ ರಸ್ತೆ ಬದಿಯ ಟೀ ಸ್ಟಾಲ್‌ವೊಂದರಲ್ಲಿ ಟೀ ಕುಡಿಯುತ್ತಿದ್ದರು. ಸ್ಫೋಟದಲ್ಲಿ ಈ ಇಬ್ಬರು ಸ್ನೇಹಿತರು ಮೃತಪಟ್ಟರೆ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತ ರಾಜಶೇಖರ್‌ನ ತಂದೆ ದಿನಗೂಲಿ ನೌಕರನಾಗಿದ್ದರೆ, ವಿಜಯ್‌ಕುಮಾರ್ ತಂದೆ ಕೃಷಿಕ.
ಉದ್ಯೋಗ ತರಬೇತಿ ಸಂಸ್ಥೆಗಳ ತಾಣವಾಗಿರುವ ಮತ್ತು ರಾಜ್ಯದ ವಿವಿಧ ಜಿಲ್ಲೆಗಳಿಂದ ಹೈದರಾ ಬಾದ್‌ಗೆ ಆಗಮಿಸುವ ವಿದ್ಯಾರ್ಥಿಗಳಿಗೆ ದಿಲ್‌ಸುಖ್ ನಗರ್ ಮೂಲ ಆಶ್ರಯ ಕೇಂದ್ರವಾಗಿದೆ. ಹಾಗಾಗಿ ಇಲ್ಲಿಗೆ ಆಗಮಿಸಿದ್ದ ನಾಲ್ವರು ಸ್ನೇಹಿತರು ಇಲ್ಲಿಯೇ ಚಿಕ್ಕದೊಂದು ಕೊಠಡಿ ಪಡೆದು ವಾಸಿಸುತ್ತಿದ್ದರು.
ಇವರಂತೆಯೇ ಎಂಬಿಎ ಪದವಿ ಪಡೆದು ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಐಎಎಸ್ ಅಧಿಕಾರಿಯಾಬೇಕೆಂದು ಕನಸು ಹೊತ್ತು ಕರೀಂನಗರ ಜಿಲ್ಲೆಯಿಂದ ಇಲ್ಲಿಗೆ ಬಂದಿದ್ದ ಯುವಕ ಜಿ. ತಿರುಪತಿ ಕೂಡಾ ಉಗ್ರರ ಕೃತ್ಯಕ್ಕೆ ಬಲಿಯಾಗಿದ್ದಾನೆ.
ಕಲ್ಲಿದ್ದಲು ಗಣಿಯೊಂದರಲ್ಲಿ ನೌಕರನಾ ಗಿರುವಾ ತನ ಪುತ್ರನಾದ ತಿರುಪತಿ ಆ ನತದೃಷ್ಟದ ದಿನ ಸಂಜೆ ತರಬೇತಿ ಕೇಂದ್ರದಿಂದ ಹೊರ ಬರುತ್ತಿದ್ದ. ಈತನ ಜತೆಗಿದ್ದ ಸ್ನೇಹಿತ ರವಿಕುಮಾರ್ ಗಂಭೀರವಾಗಿ ಗಾಯಗೊಂಡಿದ್ದಾನೆ.
 
ಬಿಎಸ್ಸಿ (ಕಂಪ್ಯೂಟರ್)ಯ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ ಶ್ರೀನಿವಾಸ ರೆಡ್ಡಿ ದಿಲ್‌ಸುಖ್ ನಗರದಲ್ಲಿರುವ ಸಾಯಿಬಾಬಾ ಮಂದಿರಕ್ಕೆ ಪ್ರತಿ ವಾರ ಭೇಟಿ ನೀಡುತ್ತಿದ್ದ. ಘಟನೆ ನಡೆದ ದಿನದಂದೂ ಕೂಡಾ ಆತ ಸಾಯಿ ಬಾಬಾ ಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ವಾಪಸು ಮನೆಗೆ ಹೋಗಲು ಬಸ್‌ಗಾಗಿ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದಾಗ ಬಾಂಬ್ ಸ್ಫೋಟಿಸಿತು.
ಕಳೆದ ಮೂರು ವರ್ಷಗಳ ಹಿಂದೆ ಹೈದರಾಬಾದ್‌ಗೆ ಬಂದು ಸಹೋದರಿ ಶ್ರೀಲತಾಳ ಮನೆಯಲ್ಲಿ ಆತ ನೆಲೆಸಿದ್ದ. ಘಟನೆ ನಡೆದು 12 ಗಂಟೆಗಳ ನಂತರ ಆತನ ಸಹೋದರಿ ಮತ್ತು ಭಾವ ಶವವನ್ನು ಪತ್ತೆ ಮಾಡಿದ್ದರು.
ಹೈದರಾಬಾದ್‌ನ ಸಂಷೋಷ್ ನಗರದ ವಾಸಿ ಸ್ವಪ್ನಾ ರೆಡ್ಡಿ ಇಲ್ಲಿನ ಇಸ್ಲಾಮಿಯಾ ತಾಂತ್ರಿಕ ಮತ್ತು ತಂತ್ರಜ್ಞಾನ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದರು ಜತೆಗೆ ಅದೇ ಕಾಲೇಜಿನಲ್ಲಿ ಅರೆಕಾಲಿಕವಾಗಿ ಗುಮಾಸ್ತೆಯ ಕರ್ತವ್ಯವನ್ನು ನಿರ್ವಹಿಸುತ್ತಿದ್ದಳು. ಅಂದು ಸಂಜೆ ಕೆಲ ಪುಸ್ತಕಗಳನ್ನು ಖರೀದಿಸಲು ಆಕೆ ಸ್ನೇಹಿತೆಯ ಜತೆ ದಿಲ್‌ಸುಖ್ ನಗರಕ್ಕೆ ಆಗಮಿಸಿದ್ದಳು. ಮತ್ತೆ ಮನೆಗೆ ಹಿಂದಿರುಗದೆ ಬಾಂಬ್‌ಗೆ ಬಲಿಯಾಗಿ ದ್ದಾಳೆ.
ಸಣ್ಣ ಪುಟ್ಟ ವ್ಯಾಪಾರ ಮಾಡುವಾತನ ಮಗಳಾದ ರಜಿತಾ ಕೂಡಾ ಬಾಂಬ್ ಸ್ಫೋಟಕ್ಕೆ ಸಿಲುಕಿ ಗಂಭೀರ ವಾಗಿ ಗಾಯ ಗೊಂಡಿದ್ದು, ಇದೀಗ ಆಕೆಯ ಕಾಲನ್ನು ವೈದ್ಯರು ಕತ್ತರಿಸಿ ಹಾಕಬೇಕಿದೆ. ತನ್ನ ಪದವಿ ಮುಗಿಸಿ ಬ್ಯಾಂಕ್ ಆಧಿಕಾರಿಯಾಗಿ ತಂದೆಗೆ ಸಹಾಯ ಮಾಡಬೇಕೆಂಬ ಆಕೆಯ ಕನಸು ಇದೀಗ ನುಚ್ಚುನೂರಾಗಿದೆ.
ವಾಹನಗಳ ರಿಪೇರಿ ಮಾಡುವ ಅಸ್ಗರ್ ಅಲಿ ಎಂಬಾತನ 17 ವರ್ಷದ ಪುತ್ರನಾದ ಏಜಾಝ್ ಅಹ್ಮದ್ ನಗರದ ಹೊರ ವಲಯದ ಪಾಲಿಟೆಕ್ನಿಕ್ ಕಾಲೇಜೊಂದರಲ್ಲಿ ವಿದ್ಯಾರ್ಥಿಯಾಗಿದ್ದ. ಎಂದಿನಂತೆ ಮನೆಯಿಂದ ಬೆಳಗ್ಗೆ ಹೋಗಿದ್ದ ಆತ ಸಂಜೆ ಮನೆಗೆ ಹಿಂದಿರುಗಲು ಬಸ್ ನಿಲ್ದಾಣದಲ್ಲಿ ನಿಂತಿದ್ದ. ಆದರೆ ಸಾವು ಆತನ ಹಿಂದೆ ನಿಂತಿತ್ತು.
ಅನಾರೋಗ್ಯದಿಂದ ಬಳಲುತ್ತಿದ್ದ ತಂದೆಗೆ ನೆರವಾಗಲು ಮತ್ತು ಕುಟುಂಬದ ಇತರೆ ಸದಸ್ಯರಿಗೆ ಸಹಾಯ ಮಾಡಲು 22 ವರ್ಷದ ಮುಹಮ್ಮದ್ ರಫೀಕ್ ಪಿಯುಸಿಯ ನಂತರ ಕಾಲೇಜು ತೊರೆದು ದಿಲ್‌ಸುಖ್ ನಗರದಲ್ಲಿ ಕೆಲಸ ಮಾಡುತ್ತಿದ್ದ. ಸಂಜೆ ಕೆಲಸ ಮುಗಿಸಿ ಮನೆಗೆ ಹಿಂದಿರುಗಲು ಬಸ್ ನಿಲ್ದಾ ಣದಲ್ಲಿ ನಿಂತಿದ್ದ ಆತ ಮತ್ತೆ ಮನೆಗೆ ಮರಳಲಿಲ್ಲ.
ರಾಜಸ್ಥಾನದಿಂದ ಮೂರು ತಿಂಗಳ ಹಿಂದಷ್ಟೇ ಹೈದರಾಬಾದ್‌ಗೆ ಬಂದು ಟೀ ಸ್ಟಾಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದಾತನ ಹೆಸರು ಚೋಗಾರಾಮ್ ಕಲಾಜಿ.
ಈತನಿಗೆ ಇಲ್ಲಿ ಸಿಗುತ್ತಿದ್ದುದು ತಿಂಗಳಿಗೆ ನಾಲ್ಕು ಸಾವಿರ ರೂ. ಸಂಬಳ. ಆತನ ತಂದೆ ಮೃತಪಟ್ಟಿದ್ದ ರಿಂದ ಕುಟುಂಬದ
ನಿರ್ವಹಣೆ ಆತನ ಮೇಲೆಯೇ ನಿಂತಿತ್ತು. ಹಾಗಾಗಿ ಆತ ತನ್ನ ಸಂಬಳದ ಹೆಚ್ಚಿನ ಭಾಗವನ್ನು ತಾಯಿಗೆ ಕಳುಹಿಸುತ್ತಿದ್ದ. ಆದರೆ ಉಗ್ರರು ನಡೆಸಿದ ಸ್ಫೋಟಕ್ಕೆ ಆತ ಬಲಿಯಾದ.
ಹೀಗೆ ಬಾಂಬ್ ಸ್ಫೋಟಕ್ಕೆ ಬಲಿಯಾದವರ ಹಿಂದೆ ಒಂದೊಂದು ಕಥೆಗಳಿವೆ. ಇದೀಗ ಅವಳಿ ಸ್ಫೋಟ ಹಲವರ ಕನಸುಗಳನ್ನು ನುಚ್ಚುನೂರು ಮಾಡಿರುವ ಜತೆಗೆ ಹಲವು ಕುಟುಂಬಗಳಿಗೆ ಆಸರೆಯಾಗಿದ್ದವರೂ ಇಲ್ಲದಂತಾಗಿ ಅವರ ಬದುಕು ಮತ್ತಷ್ಟು ದಯನೀಯವಾಗಿದೆ

No comments:

Post a Comment