Saturday, February 16, 2013

ಆಯೋಗದಿಂದ ಸರಕಾರಕ್ಕೆ ಪಾಠ



ಕೊನೆಗೂ ಹಿಡಿದ ಪಟ್ಟನ್ನು ಬಿಡದೇ ಇರುವ ಮೂಲಕ, ಚುನಾವಣಾ ಆಯೋಗ ತನ್ನ ಸಾರ್ವಭೌಮತೆಯನ್ನು ಎತ್ತಿ ಹಿಡಿದಿದೆ. ಜೊತೆಗೆ ನ್ಯಾಯ ವ್ಯವಸ್ಥೆಗೆ ಒಂದು ಬೆಲೆಯನ್ನೂ ತಂದುಕೊಟ್ಟಿದೆ. ಮಾರ್ಚ್ 7ಕ್ಕೆ ಪೌರಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಘೋಷಣೆ ಮಾಡಲಾಗಿದೆ. 7 ಮಹಾನಗರ ಪಾಲಿಕೆಗಳು, 43 ನಗರಸಭೆಗಳು, 93 ಪುರಸಭೆಗಳು ಮತ್ತು 65ಪಟ್ಟಣ ಪಂಚಾಯತ್‌ಗಳಿಗೆ ಚುನಾವಣೆ ನಡೆಯಲಿದೆ. ರಾಜಕಾರಣಿಗಳಿಗೆ ಭಾರೀ ಮುಖಭಂಗವುಂಟಾಗಿದೆ. ಎಲ್ಲ ಪಕ್ಷಗಳು ಒಂದಾಗಿ ಈ ಚುನಾವಣೆಯನ್ನು ಮುಂದೂಡಲು ಆಯೋಗದ ಮೇಲೆ ಒತ್ತಡವನ್ನು ಹೇರಿದ್ದವು. 2001ರ ಜನಗಣತಿ ಪ್ರಕಾರ ಚುನಾವಣೆ ನಡೆಯುತ್ತಿರುವುದರಿಂದ ಸಾಮಾಜಿಕ ನ್ಯಾಯ ಸಿಗುವುದಿಲ್ಲ ಎನ್ನುವುದು ಪಕ್ಷಗಳ ಕಾಳಜಿ.  ಚುನಾವಣೆಯು 2011ರ ಜನಗಣತಿ ಪ್ರಕಾರ ನಡೆಯಬೇಕು ಎನ್ನುವುದು  ಪಕ್ಷಗಳ ಆಗ್ರಹವಾಗಿದೆ.
ಆದರೆ ಆ ಜನಗಣತಿಯ ವಿವರ ಸಂಪೂರ್ಣವಾಗಿ ದೊರಕದೇ ಇರುವುದರಿಂದ ಚುನಾವಣೆ ತಡವಾಗುವ ಸಾಧ್ಯತೆಯಿತ್ತು. ಇದೀಗ ಆಯೋಗ ಹಟ ಹಿಡಿದಿರುವುದರಿಂದ 2001ರ ಜನಗಣತಿ ಆಧಾರದ ಮೇಲೆ 2007ರಲ್ಲಿ ಸಿದ್ಧಪಡಿಸಿದ ವಾರ್ಡ್‌ವಾರು ಮೀಸಲಾತಿ ಪಟ್ಟಿ ಅನ್ವಯವೇ ಚುನಾವಣೆ ನಡೆಯಲಿದೆ.
ಒಂದು ರೀತಿಯಲ್ಲಿ ಚುನಾವಣೆಯನ್ನು ಆದಷ್ಟು ಮುಂದೂಡುವ ಉದ್ದೇಶ ಎಲ್ಲ ಪಕ್ಷಗಳಿಗೂ ಇತ್ತು. ವಿಧಾನಸಭಾ ಚುನಾವಣೆ ನಡೆದ ಬಳಿಕವೇ ಸ್ಥಳೀಯ ಸಂಸ್ಥೆಯ ಚುನಾವಣೆ ನಡೆದರೆ ಚೆನ್ನಾಗಿತ್ತು ಎನ್ನುವುದು ಕೆಲವು ಪಕ್ಷಗಳ ಅಭಿಮತವೂ ಆಗಿದೆ. ಈ ಕಾರಣಕ್ಕಾಗಿಯೇ ಸರಕಾರ ಮೀಸಲಾತಿ ಪಟ್ಟಿಯನ್ನು ನೀಡುವುದಕ್ಕೆ ಮೀನಾಮೇಷ ಎಣಿಸತೊಡಗಿತು. ಎಷ್ಟು ಸಾಧ್ಯವೋ ಅಷ್ಟು ಸಮಯ ಮುಂದೆ ಹಾಕಿತು. ಪರಿಣಾಮವಾಗಿ ಚುನಾವಣಾ ಆಯೋಗದ ಕೈ ಕಟ್ಟಿತ್ತು.
ಆದರೆ ಸುಪ್ರೀಂಕೋರ್ಟ್ ಸರಕಾರದ ದುರುದ್ದೇಶಕ್ಕೆ ಸರಿಯಾದ ಪಾಠವನ್ನೇ ಕಲಿಸಿತು. ಸರಕಾರ ಸೂಕ್ತ ಸಮಯದಲ್ಲಿ ಮೀಸಲಾತಿ ಪಟ್ಟಿ ನೀಡದೇ ಇದ್ದರೆ, 2001ರ ಗಣತಿಯನ್ನು ಬಳಸಿಕೊಂಡು ಚುನಾವಣೆ ನಡೆಸಿ ಎಂದು ಆಯೋಗಕ್ಕೆ ಅನುಮತಿ ನೀಡಿತು. ಇದರಂತೆ ಚುನಾವಣೆ ನಡೆಸಲು ಮುಂದಾದಾಗ ಆಯೋಗದ ವಿರುದ್ಧ ಅಧಿವೇಶನದಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.
ಆದರೆ ರಾಜಕಾರಣಿಗಳ ನಿರ್ಣಯಕ್ಕೆ ಬೆಲೆಯನ್ನು ಕಲ್ಪಿಸದ ಆಯೋಗ, ನ್ಯಾಯಾಲಯದ ಆದೇಶವನ್ನು ಪಾಲಿಸಿಯೇ ಸಿದ್ಧ ಎಂದು ಹಟ ಹಿಡಿಯಿತು. ಆಯೋಗ ಮತ್ತು ಸರಕಾರದ ನಡುವೆ ಹಗ್ಗ ಜಗ್ಗಾಟವೇ ನಡೆಯಿತು. ಇದೀಗ ಕೊನೆಗೂ ಈ ಜಗ್ಗಾಟದಲ್ಲಿ ಹಗ್ಗ ಆಯೋಗದ ಪಾಲಾಗಿದೆ. ಸರಕಾರ ಚುನಾವಣೆ ನಡೆಸಲು ಒಪ್ಪಿಕೊಂಡಿದೆ.
ಮುಂದಿನ ವಿಧಾನಸಭಾ ಚುನಾವಣೆಗೆ ಮುನ್ನವೇ ನಡೆಯುವ ಸ್ಥಳೀಯ ಚುನಾವಣೆಯಿಂದ ನಿಜಕ್ಕೂ ರಾಜಕೀಯ ಪಕ್ಷಗಳು ಆತಂಕಗೊಂಡಿವೆ. ಈ ಸ್ಥಳೀಯ ಚುನಾವಣೆ ನಡೆದು ನಿಟ್ಟುಸಿರು ಬಿಡುವ ಹೊತ್ತಿಗೆ ಮಹಾಚುನಾವಣೆ ಎದುರಾಗುತ್ತದೆ. ಮಹಾ ಚುನಾವಣೆಯ ಮೇಲೆ, ಸ್ಥಳೀಯ ಚುನಾವಣೆಯ ಫಲಿತಾಂಶ ಪರಿಣಾಮವನ್ನು ಬೀರಬಹುದು ಎನ್ನುವ ಭಯ ಎಲ್ಲ ಪಕ್ಷಗಳನ್ನೂ ಕಾಡತೊಡಗಿದೆ. ಈ ಭಯದ ಹಿಂದೆ ಕಾರಣಗಳು ಇಲ್ಲದೇ ಇಲ್ಲ.
ಸ್ಥಳೀಯ ಚುನಾವಣೆಯಲ್ಲಿ ಭಾಗವಹಿಸುವವರು ಬಿಜೆಪಿ ತಳಮಟ್ಟದ ನಾಯಕರು, ಕಾರ್ಯಕರ್ತರು. ಇಲ್ಲಿ ಭಿನ್ನಮತ ಕಾಣಿಸಿಕೊಂಡದ್ದೇ ಆದರೆ ಅದರ ಪರಿಣಾಮ, ಮುಂದಿನ ಚುನಾವಣೆಯಲ್ಲಿ ಕಾಣಿಸಿಕೊಳ್ಳುತ್ತದೆ.  ನಗರಪಾಲಿಕೆ, ಪಂಚಾಯತ್ ಚುನಾವಣೆಗಳಲ್ಲಿ ಯಾರು ಯಾರಿಗೆ ಟಿಕೆಟ್ ಸಿಗಲಿಲ್ಲವೋ, ಅವರು ಮತ್ತು ಅವರ ಹಿಂಬಾಲಕರು ಬೇರೆ ಬೇರೆ ಪಕ್ಷಗಳ ದಾರಿ ಹಿಡಿಯುವ ಸಾಧ್ಯತೆಯಿದೆ.
ಇತ್ತ, ಬಿಜೆಪಿ-ಕೆಜೆಪಿಯ ನಡುವಿನ ಗೊಂದಲಗಳು ಸ್ಥಳೀಯ ಚುನಾವಣೆಯ ದೆಸೆಯಿಂದಾಗಿ ತಾರಕಕ್ಕೇರಲಿದೆ. ಸ್ಥಳೀಯ ಚುನಾವಣೆಗಳು ಬಿಜೆಪಿಯ ಜೊತೆಗೆ ಎಷ್ಟು ಕಾರ್ಯಕರ್ತರಿದ್ದಾರೆ ಮತ್ತು ಕೆಜೆಪಿಯ ಜೊತೆಗೆ ಎಷ್ಟು ಕಾರ್ಯಕರ್ತರಿದ್ದಾರೆ ಎನ್ನುವುದನ್ನು ನಿರ್ಧರಿಸಲಿದೆ. ಸ್ಥಳೀಯವಾಗಿ ಬಿಜೆಪಿ ಒಡೆಯುವುದಕ್ಕೆ ಈ ಚುನಾವಣೆ ಕಾರಣವಾಗಲಿದೆ. ಹಾಗೆಯೇ ಯಾರು ಈ ಚುನಾವಣೆಯಲ್ಲಿ ಗೆಲ್ಲುತ್ತಾರೆಯೋ ಅವರು, ಮುಂದಿನ ಮಹಾಚುನಾವಣೆಗೆ ಈ ಗೆಲುವನ್ನು ಪೂರಕವಾಗಿ ಬಳಸಿಕೊಳ್ಳುವ ಅವಕಾಶವಿದೆ.
ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಒಂದು ಚುನಾವಣೆಯನ್ನು ಪದೇ ಪದೇ ಮುಂದೆ ಹಾಕುತ್ತಾ ಬಂದರೆ ಅದು ಸ್ಥಳೀಯ ಅಭಿವೃದ್ಧಿಯ ಮೇಲೆ ಮಾರಕ ಪರಿಣಾಮವನ್ನು ಬೀರಲಿದೆ. ನಿಜಕ್ಕೂ ಮೀಸಲಾತಿಯ ಕುರಿತಂತೆ ಸರಕಾರಕ್ಕೂ ಇತರ ಪಕ್ಷಗಳಿಗೂ ಕಾಳಜಿಯಿದ್ದಿದ್ದರೆ ಆಯೋಗಕ್ಕೆ ಮೊದಲೇ ಮೀಸಲಾತಿ ವಿವರಗಳನ್ನು ನೀಡಲು ಮುಂದಾಗಬೇಕಿತ್ತು ಅಥವಾ ಒತ್ತಡ ಹೇರಬೇಕಾಗಿತ್ತು. ಈಗ ಚುನಾವಣಾ ಆಯೋಗದ ಜೊತೆಗೆ ಗುದ್ದಾಡುವುದರಲ್ಲಿ ಅರ್ಥವೂ ಇಲ್ಲ. ನ್ಯಾಯವೂ ಇಲ್ಲ.  ಪಕ್ಷಗಳಿಗೆ ಚುನಾವಣೆಯನ್ನು ಎದುರಿಸದೆ ಬೇರೆ ದಾರಿಯೇ ಇಲ್ಲ. ಆಯೋಗ ತನ್ನ ದೃಢ ನಿಲುವಿನ ಮೂಲಕ ಸರಕಾರಕ್ಕೆ ಸರಿಯಾದ ಪಾಠವನ್ನೇ ಕಲಿಸಿದೆ.

No comments:

Post a Comment