Thursday, February 14, 2013

ಕುಸ್ತಿಯ ವಿರುದ್ಧ ಐಒಸಿ ಕುಸ್ತಿಕ್ರೀಡೆ ಪ್ರಾಚೀನವಾದುದು. ಮನುಷ್ಯ ನಾಗರಿಕನಾಗುತ್ತಾ ಬಂದ ಹಾಗೆಯೇ ಕ್ರೀಡೆಯ ವ್ಯಾಖ್ಯಾನ ಬದಲಾಗುತ್ತಾ ಬಂತು. ಕ್ರೀಡೆಯೂ ನಾಗರಿಕವಾಗುತ್ತಾ ಬಂತು. ಈ ಹಿಂದೆ ಹುಲಿ, ಸಿಂಹಗಳ ಮಧ್ಯೆ ಮನುಷ್ಯನನ್ನು ಬಿಟ್ಟು ಆನಂದಿಸುವುದೂ ಕ್ರೀಡೆಯಾಗಿತ್ತು. ಸಾವಿನ ವರೆಗೆ ಹೋರಾಡುವ ಕ್ರೀಡೆಗಳು ರಾಜಪ್ರಭುತ್ವದ ಸಂದರ್ಭದಲ್ಲಿ ಕುಖ್ಯಾತಿ ಯನ್ನು ಪಡೆದಿತ್ತು. ಸಾವು, ನೋವು, ರಕ್ತ ಇತ್ಯಾದಿಗಳು ಕ್ರೀಡೆಯನ್ನು ಬೆಸೆದಿರುವುದನ್ನು ನಾವು ಅಲ್ಲಗಳೆಯಲಾಗುವುದಿಲ್ಲ. ಆದರೆ ಹೇಗೆ ಮನುಷ್ಯ ನಿಧಾನಕ್ಕೆ ತನ್ನ ಮೃಗೀಯ ಭಾವನೆಗಳನ್ನು ಅದುಮಿಟ್ಟುಕೊಂಡು ನಾಗರಿಕ ನಾಗುತ್ತಾ ಬಂದನೋ, ಅಲ್ಲಿಂದ ಕ್ರೀಡೆಯು ಹೆಚ್ಚು ಮಾನವೀಯವಾಗುತ್ತಾ ಬಂತು. ಮನುಷ್ಯನ ಶೌರ್ಯ, ಸಾಹಸ, ಶಕ್ತಿ, ಕೌಶಲ್ಯ, ಬುದ್ಧಿಮತ್ತೆ ಇತ್ಯಾದಿಗಳನ್ನು ಪ್ರದರ್ಶಿಸುವುದು ಕ್ರೀಡೆಯ ಪ್ರಮುಖ ಉದ್ದೇಶವಾಯಿತು. ಸಹೋದರತೆ, ಸೌಹಾರ್ದತೆಯನ್ನು ಬೆಳೆಸು ವುದು ಕ್ರೀಡೆಯ ಇನ್ನೊಂದು ಉದ್ದೇಶ ವಾಗಿಯೂ ಬೆಳೆಯಿತು. ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಕೊಲ್ಲುವುದನ್ನು, ಸಾಯಿಸುವುದನ್ನು ಆನಂದಿಸುವುದು ಕ್ರೀಡೆ ಯಲ್ಲ, ಅದು ಕ್ರೌರ್ಯ ಎನ್ನುವುದನ್ನು ನಾಗರಿಕ ಸಮಾಜ ಖಡಾಖಂಡಿತವಾಗಿ ಒಪ್ಪಿದೆ.
ಒಲಿಂಪಿಕ್ಸ್‌ನಲ್ಲೂ ಕ್ರೀಡೆ ಕಾಲ ಕಾಲಕ್ಕೆ ಮಾನವೀಯವಾಗುತ್ತಾ ಬಂದಿದೆ. ಆರಂಭದ ಕಾಲದಲ್ಲಿದ್ದ ಅದೆಷ್ಟೋ ಕ್ರೀಡೆಗಳನ್ನು ಅಮಾನವೀಯ ಎಂದು ತೆಗೆದು ಹಾಕಲಾಗಿದೆ. ಹಾಗೆಯೇ ಹೊಸ ಕ್ರೀಡೆಗಳನ್ನು ಕಾಲ ಕಾಲಕ್ಕೆ ಸೇರಿಸುತ್ತಾ ಬರಲಾಗಿದೆ. ಇದೀಗ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ 2020ರ ಒಲಿಂಪಿಕ್ಸ್‌ನಲ್ಲಿ ಕುಸ್ತಿ ಕ್ರೀಡೆಯನ್ನು ಕೈಬಿಡುವ ಕುರಿತಂತೆ ಚಿಂತನೆ ನಡೆಸುತ್ತಿದೆ. ಇದು ಕ್ರೀಡಾವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಒಲಿಂಪಿಕ್ಸ್‌ನಲ್ಲಿ ಭಾರತದ ಕುಸ್ತಿ ಪಟುಗಳು ಹೆಡೆ ಎತ್ತಿ ನಿಲ್ಲುತ್ತಿರುವ ಹೊತ್ತಿನಲ್ಲಿ ಕುಸ್ತಿ ಅಪಾಯಕಾರಿ ಆಟ ಎಂದು ಒಲಿಂಪಿಕ್ಸ್ ತಜ್ಞರಿಗೆ ಜ್ಞಾನೋದಯವಾಗಿರುವುದು ಅಚ್ಚರಿಯೇ ಸರಿ. ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಈವರೆಗೆ ನಾಲ್ಕು ಪದಕಗಳು ದೊರಕಿವೆ. ಅಷ್ಟೇ ಅಲ್ಲ, ಕುಸ್ತಿಯ ಕುರಿತಂತೆ ಭಾರತ ತನ್ನ ಶ್ರದ್ಧೆಯನ್ನು ಕೇಂದ್ರೀಕರಿಸತೊಡಗಿದೆ. ಆದರೆ ಇದೇ ಹೊತ್ತಿನಲ್ಲಿ ಒಲಿಂಪಿಕ್ಸ್‌ನಿಂದ ಕುಸ್ತಿಯೇ ಎತ್ತಂಗಡಿಯಾಗುವ ಸಾಧ್ಯತೆಗಳು ಕಾಣುತ್ತಿವೆ.
ಪ್ರಸ್ತುತ ಒಲಿಂಪಿಕ್ಸ್‌ನಲ್ಲಿರುವ 26 ಕ್ರೀಡೆಗಳ ಸಾಧಕ ಬಾಧಕಗಳನ್ನು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಅಧ್ಯಯನ ನಡೆಸಿತ್ತು. ಐಒಸಿಗೆ ಒಂದು ಕ್ರೀಡೆಯನ್ನು ಹೊರಗಿಟ್ಟು ಮುಂದಿನ ವರ್ಷದಿಂದ ಹೊಸ ಕ್ರೀಡೆಯನ್ನು ಸೇರ್ಪಡೆಗೊಳಿಸುವ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಅದು ಕುಸ್ತಿಯ ವಿರುದ್ಧ ಕುಸ್ತಿಗಿಳಿ ದಂತಿದೆ. ಕುಸ್ತಿಯ ವಿರುದ್ಧದ ಮಾನದಂಡ ಗಳಲ್ಲಿ ಮುಖ್ಯವಾದುದು ಯಾವುದೆಂದು ಇಲ್ಲಿ ವಿವರಿಸಬೇಕಾಗಿಲ್ಲ. ಟಿ.ವಿ. ರೇಟಿಂಗ್‌ನ ಆಧಾರದಲ್ಲಿಯೇ ಐಒಸಿ ಈ ನಿರ್ಧಾರಕ್ಕೆ ಬಂದಂತಿದೆ ಎಂದು ಮೇಲ್ನೋಟಕ್ಕೆ ಸಾಬೀತಾ ಗುತ್ತಿದೆ. ಆದರೆ ಕುಸ್ತಿ ಎನ್ನುವುದು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಜನಪ್ರಿಯ ಕ್ರೀಡೆಯೆನ್ನುವುದು ಅದು ಮರೆತಿದೆ. ಕುಸ್ತಿ ಭಾರತಕ್ಕೆ ಮಾತ್ರ ಸೀಮಿತವಾದ ಸಾಂಪ್ರದಾಯಿಕ ಆಟವಲ್ಲ. ಸುಮಾರು 209 ದೇಶಗಳಲ್ಲಿ ಕುಸ್ತಿ ಜನಪ್ರಿಯವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕುಸ್ತಿಗೆ ಪ್ರಾಚೀನತೆಯಿದೆ. ಪರಂಪರೆ, ಸಂಸ್ಕೃತಿಯ ಹಿನ್ನೆಲೆಯಿದೆ.
ಇಷ್ಟಕ್ಕೂ ಕುಸ್ತಿಯನ್ನು ಅಪಾಯಕಾರಿ ಆಟವೆಂದು ಒಲಿಂಪಿಕ್ಸ್‌ನಿಂದ ತೆಗೆದು ಹಾಕುವುದಾದರೆ ಸಂತೋಷವೇ. ಆದರೆ ಇದರ ಜೊತೆ ಜೊತೆಗೇ ಬಾಕ್ಸಿಂಗ್‌ನ್ನು ಕೂಡ ತೆಗೆದು ಹಾಕಬೇಕಲ್ಲವೆ? ಬಾಕ್ಸಿಂಗ್‌ನ ಕುರಿತಂತೆ ಟೀಕೆಗಳು ಹಲವು ವರ್ಷಗಳಿಂದ ಕೇಳಿ ಬರುತ್ತಿವೆ. ಆ ಆಟದ ಕ್ರೌರ್ಯ ಅಪಾಯ ಎಲ್ಲರಿಗೂ ತಿಳಿದಿರುವ ಸಂಗತಿ ಯಾಗಿದೆ. ಬಾಕ್ಸಿಂಗ್‌ನಿಂದಾಗಿ ಈಗಾಗಲೇ ವಿಶ್ವದ ಇಬ್ಬರು ಕ್ರೀಡಾಳುಗಳು ಮೃತಪಟ್ಟಿದ್ದಾರೆ. ಹಲವರು ಗಂಭೀರ ಗಾಯಗೊಂಡಿದ್ದಾರೆ. ಮುಖ್ಯವಾಗಿ, ಬಾಕ್ಸಿಂಗ್‌ನಿಂದ ಕ್ರೀಡಾಳು ಸಾರ್ವಜನಿಕರ ಮುಂದೆ ಗಾಯಾಳುವಾಗ ಬೇಕಾಗುತ್ತದೆ. ಬಾಕ್ಸಿಂಗ್‌ನ ಅಪಾಯಕ್ಕೆ ಹೋಲಿಸಿದರೆ ಕುಸ್ತಿ ಏನೇನೂ ಅಲ್ಲ. ತಮಾಷೆಯೆಂದರೆ 2016ರಲ್ಲಿ ಗಾಲ್ಫ್ ಮತ್ತು ರಗ್ಬಿ ಆಟ ಒಲಿಂಪಿಕ್ಸ್‌ಗೆ ಕಾಲಿಡುತ್ತಿದೆ. ಗಾಲ್ಫ್ ಜನಸಾಮಾನ್ಯರ ಆಟವಲ್ಲ. ಅದು ಶ್ರೀಮಂತರ ಶೋಕಿ ಮಾತ್ರ. ಹಾಗೆಯೇ ರಗ್ಬಿ ಅಪಾಯಕಾರಿ ಆಟ. ಹೀಗೆಲ್ಲ ಇರುವ ಸಂದರ್ಭದಲ್ಲಿ ಕುಸ್ತಿಯ ಮೇಲೆ ಐಒಸಿಯ ಕಣ್ಣು ಬಿದ್ದಿರುವುದು ನಿಗೂಢವಾಗಿದೆ.
ಒಲಿಂಪಿಕ್ಸ್ ವರ್ಷದಿಂದ ವರ್ಷಕ್ಕೆ ಶ್ರೀಮಂತರ ಪ್ರವಾಸೋದ್ಯಮವಾಗಿ ಪರಿವರ್ತನೆ ಹೊಂದುತ್ತಿದೆ. ಅದು ಸಂಪೂರ್ಣ ಉದ್ಯಮ ರೂಪವನ್ನು ತಾಳುತ್ತಿದೆ. ಕ್ರಿಕೆಟ್‌ನಂತಹ ಆಟದತ್ತ ಆಸಕ್ತಿ ವಹಿಸಿರುವ ಅದು ನಿಜವಾದ ಕ್ರೀಡೆಗಳ ಕಡೆಗೆ ನಿರ್ಲಕ್ಷ ನೋಟ ಬೀರುತ್ತಿದೆ. ಉದ್ಯಮಿಗಳನ್ನು, ಪ್ರವಾಸಿಗರನ್ನು ತಣಿಸುವ ಕಡೆಗೆ ಅದು ವಾಲುತ್ತಿದೆ. ಟಿವಿಗ ರೇಟಿಂಗ್‌ಗಳು ಅದಕ್ಕೆ ಮುಖ್ಯವಾಗುತ್ತಿದೆ. ಹಾಗೆಯೇ ವೇಶ್ಯಾವಾಟಿಕೆ, ಮದ್ಯ, ಡ್ರಗ್ಸ್ ಇತ್ಯಾದಿಗಳು ಒಲಿಂಪಿಕ್ಸ್‌ನ್ನು ಬಲವಾಗಿ ಸುತ್ತುವರಿದಿದೆ. ಕ್ರೀಡೆಗಳ ಸೌಹಾರ್ದ ವೌಲ್ಯಗಳನ್ನು ಗಾಳಿಗೆ ತೂರುತ್ತಿದೆ. ಈ ಎಲ್ಲ ಕಾರಣಗಳಿಂದ ಕುಸ್ತಿಯ ವಿರುದ್ಧ ಒಲಿಂಪಿಕ್ಸ್ ತಳೆದ ನಿಲುವುಗಳನ್ನು ನಾವು ಪ್ರಶ್ನಿಸಬೇಕಾಗುತ್ತದೆ.
ಎಲ್ಲಕ್ಕಿಂತ ಮುಖ್ಯವಾಗಿ ಬಾಕ್ಸಿಂಗ್‌ನಂತಹ ಅಪಾಯಕಾರಿ, ಅಮಾನವೀಯ ಗುದ್ದಾಟಕ್ಕೆ ಅವಕಾಶಕೊಟ್ಟು ಕುಸ್ತಿಯನ್ನು ಬಗ್ಗು ಬಡಿಯುವುದು ಸರಿಯಲ್ಲ.

No comments:

Post a Comment