Tuesday, February 5, 2013

ಕೌನ್ ಬನೇಗಾ ಕರೋಡ್‌ಪತಿ’ ಹೆಸರಿನಲ್ಲಿ ವಂಚನೆ! ಫೆಬ್ರವರಿ -05-2013

ಮುಂಬೈ: ಬಾಲಿವುಡ್‌ನ ಖ್ಯಾತ ನಟ ಅಮಿತಾಭ್ ಬಚ್ಚನ್ ನಡೆಸಿಕೊಡುವ ಜನಪ್ರಿಯ ಕಾರ್ಯಕ್ರಮ ‘ಕೌನ್ ಬನೇಗಾ ಕರೋಡ್‌ಪತಿ’ ಹೆಸರಿನಲ್ಲಿ ಮುಂಗಡ ಶುಲ್ಕ ಪಾವತಿಸುವ ವಂಚನೆ ನಡೆಯುತ್ತಿದು,್ದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಮುಂಬೈ ಪೊಲೀಸರು ಎಚ್ಚರಿಸಿದ್ದಾರೆ.
ಕೆಬಿಸಿಯ ಒಂದು ಭಾಗವಾದ ಲಕ್ಕಿ ಡ್ರಾದಲ್ಲಿ ವಿಜೇತರಾಗಿರುವ ನಿಮಗೆ ಇಷ್ಟು ಹಣ ಬಂದಿದೆ, ಅದನ್ನು ಪಡೆಯಲು ನೀವು ನಿಗದಿತ ಬ್ಯಾಂಕ್‌ನಲ್ಲಿ ಇಂತಿಷ್ಟು ಹಣವನ್ನು ಠೇವಣಿ ಇರಿಸಬೇಕೆಂಬ ಅನಾಮಧೇಯ ಕರೆಗಳು ಬಂದರೆ ಎಚ್ಚರಿಕೆಯಿಂದ ಇರುವಂತೆ ಪೊಲೀಸರು ಜನತೆಗೆ ಮನವಿ ಮಾಡಿದ್ದಾರೆ.
ಅಮಿತಾಭ್ ಬಚ್ಚನ್ ಹಲವು ವರ್ಷಗಳಿಂದ ರಸಪ್ರಶ್ನೆಯ ರೂಪದ ಈ ಜನಪತ್ರಿಯ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವುದರಿಂದ ಎಂತಹವರೂ ಈ ವಂಚನೆಯ ಜಾಲಕ್ಕೆ ಬೀಳುವ ಸಾಧ್ಯತೆಗಳಿವೆ ಎಂದು ಪೊಲೀಸರು ಹೇಳಿದ್ದಾರೆ.
ಮುಂಬೈ ಮಹಾನಗರದಲ್ಲಿನ ವಾಸಿಯಾಗಿರುವ ಹೆಸರು ಬಹಿರಂಗಪಡಿಸಿಕೊಳ್ಳಲಿಚ್ಛಿಸದ 40 ವರ್ಷದ ಗೃಹಿಣಿಯೊಬ್ಬರು ತಮಗೆ ಬಂದ ಇಂತಹ ಕರೆ ಮತ್ತು ಆನಂತರದ ಅನುಭವವನ್ನು ಸುದ್ದಿ ಸಂಸ್ಥೆಯೊಂದಿಗೆ ಹಂಚಿಕೊಂಡಿದ್ದಾರೆ.
‘ಕೆಲ ದಿನಗಳ ಹಿಂದೆ 00ಯಿಂದ ಆರಂಭವಾಗುವ 14 ಅಂಕಿಗಳ ಸಂಖ್ಯೆಯೊಂದರಿಂದ ನನ್ನ ಮೊಬೈಲ್‌ಗೆ ಕರೆಯೊಂದು ಬಂದಿತ್ತು. ಅತ್ತ ಕಡೆಯ ವ್ಯಕ್ತಿ ತನ್ನನ್ನು ವಿಜಯ್ ಕುಮಾರ್ ಎಂದು ಪರಿಚಯಿಸಿಕೊಂಡು, ಕಿಬಿಸಿಯ ಲಕ್ಕಿ ಡ್ರಾದಲ್ಲಿ ನೀವು 10 ಲಕ್ಷ ರೂ.ಗಳನ್ನು ಗೆದ್ದಿದ್ದೀರಿ, ಅದಕ್ಕೆ ಧನ್ಯವಾದಗಳು ಎಂದ. ದೇಶಾದ್ಯಂತದ 50 ಅದೃಷ್ಟವಂತ ವ್ಯಕ್ತಿಗಳಲ್ಲಿ ನೀವೂ ಒಬ್ಬರಾಗಿದ್ದು, ಅದನ್ನು ಪಡೆಯಲು ನಿರ್ದಿಷ್ಟ ಬ್ಯಾಂಕ್‌ನಲ್ಲಿ ನೀವು ರೂ. 10,000 ಠೇವಣಿ ಇರಿಸಬೇಕು’ ಎಂದು ಹೇಳಿದ್ದ.
ಆನಂತರ ಅದೇ ಸಂಖ್ಯೆಯಿಂದ ಹಲವು ಬಾರಿ ಕರೆಗಳು ಬಂದಿತ್ತು. ಆಗ ಬೇರೆ ಬೇರೆ ವ್ಯಕ್ತಿಗಳು ನನ್ನೊಂದಿಗೆ ಮಾತನಾಡಿದ್ದರು. ಈ ವೇಳೆ ಅವರು ನಿಮ್ಮ ವೈಯಕ್ತಿಕ ಬ್ಯಾಂಕ್ ಖಾತೆಯ ಕುರಿತು ನಮಗೆ ತಿಳಿದಿದೆ ಎಂದರು.
ಆರಂಭದಲ್ಲಿ ಇದು ಕೆಬಿಸಿ ಕಾರ್ಯಕ್ರಮದ ತಂಡದವರದ್ದೇ ಕರೆ ಇರಬೇಕು ಎಂದು ನಾನು ಭಾವಿಸಿ ಅವರ ಕರೆಯನ್ನು ಹಗುರವಾಗಿ ಪರಿಗಣಿಸಿದ್ದೆ. ಆದರೆ ಯಾವಾಗ ಅವರು ನನ್ನ ಬ್ಯಾಂಕ್ ಖಾತೆಗಳು ಗೊತ್ತಿದೆ ಎಂದರೋ ಆಗ ನಾನು ಆಘಾತಕ್ಕೊಳಗಾದೆ. ಆನಂತರ ಅವರು ರಾಷ್ಟ್ರೀಕೃತ ಬ್ಯಾಂಕೊಂದರ ಖಾತೆ ಸಂಖ್ಯೆಯನ್ನು ಎಸ್ಸೆಮ್ಮೆಸ್ ಮಾಡಿ ಅನುರಾಗ್ ಸಿಂಗ್ ಚೌಹಾಣ್ ಎಂಬುವರ ಹೆಸರಿಗೆ ಹಣವನ್ನು ಠೇವಣಿ ಇರಿಸುವಂತೆ ಹೇಳಿದಾಗ ಸಮಸ್ಯೆಯಲ್ಲಿ ಸಿಲುಕಿದ್ದೇನೆ ಎನಿಸಿತು.

ಹಾಗಾಗಿ ನನ್ನ ಖಾತೆಗಳಿದ್ದ ಬ್ಯಾಂಕ್‌ಗಳಿಗೆ ತೆರಳಿ ಅಲ್ಲಿನ ಸಿಬ್ಬಂದಿಗೆ ವಿಷಯ ತಿಳಿಸಿದೆ. ಕೆಬಿಸಿಯ ತಂಡದವರು ಎಂದು ಹೇಳಿಕೊಂಡು ಕರೆ ಮಾಡಿದವರಿಗೆ ನೀವು ಸ್ಪಂದಿಸಿಲ್ಲದ ಕಾರಣ ಆತಂಕ ಪಡುವ ಅಗತ್ಯವಿಲ್ಲ ಎಂದು ಬ್ಯಾಂಕ್‌ನ ಸಿಬ್ಬಂದಿ ಹೇಳಿದರು. ಆದರೂ ಅನಾಮಿಕರು ಪದೇ ಪದೇ ಕರೆ ಮಾಡುತ್ತಿದ್ದರೇ ಹೊರತು ವಾಪಸು ಕರೆ ಮಾಡಿದಾಗ ಅವರಿಂದ ಯಾವುದೇ ಪ್ರತಿಕ್ರಿಯೆ ಬರುತ್ತಿರಲಿಲ್ಲ. ಈ ಸಂಬಂಧ ಪೊಲೀಸರಿಗೆ ವೌಖಿಕವಾಗಿ ದೂರೊಂದನ್ನು ನೀಡಬೇಕೆಂದು ಹಲವು ಬಾರಿ ಯೋಜಿಸಿದ್ದೆ, ಇದರಿಂದ ಅನಗತ್ಯ ಕಿರಿಕಿರಿಗಳು ಬೇಡ ಎಂದು ಸುಮ್ಮನಾದೆ ಎಂದು ಅವರು ಹೇಳಿದ್ದಾರೆ.
ಮಹಾನಗರದಲ್ಲಿ ಇದೇ ಮೊದಲ ಬಾರಿಗೆ ಕೆಬಿಸಿ ಹೆಸರಿನಲ್ಲಿ ಮುಂಗಡ ಶುಲ್ಕ ಪಾವತಿಯ ವಂಚನೆ ನಡೆಯುತ್ತಿದೆ. ಇಂತಹ ಬಿಳಿ ಕಾಲರ್‌ನ ಅಪರಾಧ ನಗರದಲ್ಲಿ ದಿನೇ ದಿನೇ ಎಚ್ಚರಿಕೆಯ ಗಂಟೆಯ ರೀತಿಯಲ್ಲಿ ಬೆಳೆಯುತ್ತಿದೆ. ಇಂತಹ ವಂಚನೆಯ ಕರೆಗಳಿಗೆ ನಾಗರಿಕರು ಮಾರು ಹೋಗದೆ ಅಂತಹ ಕರೆಗಳು ಬಂದಾಗ ಪೊಲೀಸರಿಗೆ ಅಂತಹ ಸಂಖ್ಯೆಗಳ ಸಮೇತ ಮಾಹಿತಿ ನೀಡಬೇಕು ಎಂದು ಆರ್ಥಿಕ ಮತ್ತು ಸೈಬರ್ ಅಪರಾಧ ವಿಭಾಗದ ಡಿಸಿಪಿ ಸಂಜಯ್ ಶಿಂಧೆ ಜನತೆಯಲ್ಲಿ ಮನವಿ ಮಾಡಿದ್ದಾರೆ.

No comments:

Post a Comment