Wednesday, February 6, 2013

ಅಂತ್ಯಕ್ರಿಯೆಯಾದ ನಂತರ ಎದ್ದು ಬಂದ ಸತ್ತ ವ್ಯಕ್ತಿ



 ಫೆಬ್ರವರಿ -06-2013

ಚೆನ್ನೈ: ಸತ್ತು ಹೋಗಿದ್ದಾನೆಂದು ಭಾವಿಸಿ ಕುಟುಂಬದವರು 10 ದಿನಗಳ ಹಿಂದೆ ಅಂತ್ಯಕ್ರಿಯೆ ನಡೆಸಿದ್ದ 20 ವರ್ಷದ ಯುವಕನೊಬ್ಬ ಮನೆಗೆ ಬಂದು ಅಚ್ಚರಿ ಮೂಡಿಸಿರುವ ಘಟನೆಯೊಂದು ವರದಿಯಾಗಿದೆ.
ಕೇರಳದ ಮಲಪುರಂ ಸಮೀಪದ ಈಶ್ವರಮಂಗಳಂನ 20 ವರ್ಷದ ಯುವಕ ಮುಹಮ್ಮದ್ ಹ್ಯಾರಿಸ್ ಎಂಬಾತನ ಮೃತ ದೇಹವನ್ನು ಇತ್ತೀಚೆಗೆ ಚೆನ್ನೈನ ಟ್ರಿಪ್ಲಿಕೇನ್‌ನ ಪೊಲೀಸರು ಆತನ ಪೋಷಕರಿಗೆ ಜನವರಿ 22ರಂದು ಹಸ್ತಾಂತರಿಸಿದ್ದರು.
ಇದು ತಮ್ಮ ಪುತ್ರನದೇ ಇರಬಹುದು ಎಂದು ಭಾವಿಸಿ ಅವರು ಅಂತ್ಯ ಸಂಸ್ಕಾರ ನಡೆಸಿದ್ದರು.
ಉದ್ಯೋಗವನ್ನರಸಿ ಮುಹಮ್ಮದ್ ಹ್ಯಾರಿಸ್ ಜನವರಿ 16ರಂದು ಚೆನ್ನೈಗೆ ಆಗಮಿಸಿ ಇಲ್ಲಿನ ವಸತಿ ಗೃಹವೊಂದರಲ್ಲಿ ವಾಸ್ತವ್ಯ ಹೂಡಿದ್ದ. ಜ. 18ರಂದು ಅತ ಇದ್ದಕ್ಕಿದ್ದಂತೆಯೇ ಕಣ್ಮರೆಯಾಗಿದ್ದನು. ವಸತಿ ಗೃಹದ ಮ್ಯಾನೇಜರ್ ಮತ್ತು ಇತರೆ ಸಿಬ್ಬಂದಿ ಆತ ವಾಸ್ತವ್ಯ ಹೂಡಿದ್ದ ಕೊಠಡಿಯನ್ನು ಪರಿಶೀಲಿಸಿದಾಗ ಅಲ್ಲಿ ಬ್ಯಾಗೊಂದು ಪತ್ತೆಯಾಗಿದ್ದು, ಅದರಲ್ಲಿದ್ದ ದೂರವಾಣಿ ಸಂಖ್ಯೆಯ ಸಹಾಯದಿಂದ ಹ್ಯಾರಿಸ್‌ನ ಪೋಷಕರಿಗೆ ಕರೆ ಮಾಡಿ, ನಿಮ್ಮ ಮಗ ನಾಪತ್ತೆಯಾಗಿದ್ದಾನೆ ಎಂಬ ವಿಷಯ ತಿಳಿಸಿದ್ದರು.ಅಲ್ಲದೆ ಪೊಲೀಸರಿಗೂ ಈ ಸಂಬಂಧ ದೂರೊಂದನ್ನು ನೀಡಿದ್ದರು. ಅದರಂತೆ ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನ ಪತ್ತೆ ಕಾರ್ಯದಲ್ಲಿ ತೊಡಗಿದ್ದರು.
ಚಿಂತಾದ್ರಿಪೇಟೆ ಸಮೀಪದ ಕೂರ್ಮ ನದಿಯಲ್ಲಿ ಪೊಲೀಸರು 20 ವರ್ಷದ ಯುವಕನೊಬ್ಬನ ಶವವನ್ನು ಜ. 20ರಂದು ಪತ್ತೆ ಮಾಡಿದ್ದರು.
ಈ ಶವ ಹ್ಯಾರಿಸ್‌ನದ್ದಿರಬಹುದು ಎಂಬ ಶಂಕೆಯ ಮೇಲೆ ಪೊಲೀಸರು ಆತನ ಪೋಷಕರಿಗೆ ವಿಷಯ ತಿಳಿಸಿದರು. ಚೆನ್ನೈಗೆ ಆಗಮಿಸಿದ ಪೋಷಕರು ಮೃತ ದೇಹದ ಎಡಗಾಲಿನಲ್ಲಿದ್ದ ಮಚ್ಚೆ ಮತ್ತು ಒಳುಡುಪುಗಳ ಆಧಾರದ ಮೇಲೆ ಇದು ತಮ್ಮ ಪುತ್ರನದ್ದೇ ಶವ ಎಂದು ಶವವನ್ನು ಪಡೆದು ಅಂತ್ಯ ಸಂಸ್ಕಾರ ನೆರವೇರಿಸಿದ್ದರು.
ಚೆನ್ನೈನಿಂದ ಹ್ಯಾರಿಸ್ ಇದ್ದಕ್ಕಿದ್ದಂತೆ ಬೆಂಗಳೂರಿಗೆ ಹೋಗಿ ಸಂಬಂಧಿಕರೊಬ್ಬರ ಮನೆಯನ್ನು ಸೇರಿದ್ದ. ಆತ ಕಳೆದ ಶನಿವಾರ ಕೇರಳದ ತನ್ನ ಮನೆಗೆ ಹಿಂದಿರುಗಿದಾಗ ಮನೆಯವರು ಸಂಭ್ರಮಿಸಿದರೂ ನೆರೆಹೊರೆಯವರು ಆತನನ್ನು ಅನುಮಾನದಿಂದಲೇ ನೋಡಲಾರಂಭಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದೀಗ ಹ್ಯಾರಿಸ್ ಬದಲಿಗೆ ಸಂಸ್ಕಾರ ಮಾಡಿರುವ ಶವವನ್ನು ಹೊರ ತೆಗೆದು ಅದನ್ನು ಗುರುತಿಸುವುದರಲ್ಲಿ ಪೊಲೀಸರು ನಿರತರಾಗಿದ್ದು, ಇದಕ್ಕಾಗಿ ಹ್ಯಾರಿಸ್‌ನ ಪೋಷಕರನ್ನು ಮತ್ತೆ ಚೆನ್ನೈಗೆ ಬರುವಂತೆ ತಿಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ

No comments:

Post a Comment