Thursday, February 21, 2013

ತಮಿಳುನಾಡಿಗೆ ಸಿಂಹಪಾಲು;ಹರಿದು ಹಂಚಿದ ಕಾವೇರಿ


ತಮಿಳುನಾಡಿಗೆ ಸಿಂಹಪಾಲು;ಹರಿದು ಹಂಚಿದ ಕಾವೇರಿ

  *ಸುಪ್ರೀಂಗೆ ಕೇಳಿಸಲಿಲ್ಲ ರಾಜ್ಯದ ಅರಣ್ಯ ರೋದನ
ಬೆಂಗಳೂರು, ಫೆ.20: ರಾಜ್ಯ ಸರಕಾರದ ಹೋರಾಟವನ್ನು ಲೆಕ್ಕಿಸದ ಕೇಂದ್ರ ಜಲ ಸಂಪನ್ಮೂಲ ಇಲಾಖೆ ಕಾವೇರಿ ನ್ಯಾಯಾಧೀಕರಣದ ಐತೀರ್ಪಿನ ಅಂತಿಮ ಅಧಿಸೂಚನೆ ಹೊರಡಿಸಿದೆ. ಕಾವೇರಿ ನೀರು ನಿರ್ವಹಣಾ ಮತ್ತು ನಿಯಂತ್ರಣ ಮಂಡಳಿಯನ್ನು ರಚಿಸಲಾಗಿದೆ. ನ್ಯಾಯಾಧೀಕರಣದ ಅಂತಿಮ ತೀರ್ಪಿನ ಬಗ್ಗೆ ಕಾವೇರಿ ಜಲಾನಯನ ಪ್ರದೇಶ ವ್ಯಾಪ್ತಿಯ ನಾಲ್ಕು ರಾಜ್ಯಗಳ ಆಕ್ಷೇಪದ ತಕರಾರಿನ ನಡುವೆಯೂ ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಅಂತಿಮ ಅಧಿಸೂಚನೆಯ ಗೆಜೆಟ್ ಪ್ರಕಟಣೆಯನ್ನು ಕೇಂದ್ರ ಜಲಸಂಪನ್ಮೂಲ ಇಲಾಖೆ ಹೊರಡಿಸಿದ್ದು,90ದಿನಗಳ ಬಳಿಕ ಅಧಿಸೂಚನೆ ಜಾರಿಯಾಗಲಿದೆ. ಕಾವೇರಿ ಉಸ್ತುವಾರಿ ಸಮಿತಿಯನ್ನು ವಿಸರ್ಜಿಸಲಾಗಿದ್ದು, ಕಾವೇರಿ ನೀರು ನಿರ್ವಹಣಾ ಮತ್ತು ನಿಯಂತ್ರಣ ಮಂಡಳಿ ಅಸ್ತಿತ್ವಕ್ಕೆ ಬರಲಿದೆ. ಈ ಸಮಿತಿಗೆ ಪೂರ್ಣಾವಧಿ ಅಧ್ಯಕ್ಷರೊಬ್ಬರನ್ನು ನೇಮಕ ಮಾಡಲಾಗುವುದು.
ನೀರಾವರಿ ಹಾಗೂ ಕೃಷಿ ವಲಯಕ್ಕೆ ಪ್ರತ್ಯೇಕವಾಗಿ ಸದಸ್ಯರನ್ನು ನೇಮಕ ಮಾಡಲಾಗುವುದು. ಇದಲ್ಲದೆ ತಮಿಳುನಾಡು, ಕರ್ನಾಟಕ, ಕೇರಳ ಮತ್ತು ಪಾಂಡಿಚೇರಿ ರಾಜ್ಯಗಳಿಗೆ ಅರೆಕಾಲಿಕ ಸದಸ್ಯರನ್ನು ನೇಮಕ ಮಾಡುವ ಮೂಲಕ ಕಾವೇರಿ ನೀರು ಹಂಚಿಕೆಯ ನಿಗಾ ಜವಾಬ್ದಾರಿ ವಹಿಸಲಾಗುವುದು.
ಕೇಂದ್ರದ ಪ್ರತಿನಿಧಿಗಳು ಕಾವೇರಿ ಕಣಿವೆಯ ಎಲ್ಲ ಜಲಾಶಯಗಳ ಉಸ್ತುವಾರಿ ವಹಿಸಿಕೊಳ್ಳಲಿದ್ದು ನ್ಯಾಯಾಧೀಕರಣದ ಆದೇಶವನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ನಿಭಾಯಿಸಲಿದ್ದಾರೆ.ಕಾವೇರಿ ನ್ಯಾಯಾಧೀಕರಣದ ಅಂತಿಮ ತೀರ್ಪಿನ ಅಧಿಸೂಚನೆ ಜಾರಿಯಾದ ಬಳಿಕ ತಮಿಳುನಾಡಿಗೆ 419 ಟಿಎಂಸಿ, ಕರ್ನಾಟಕಕ್ಕೆ 270 ಟಿಎಂಸಿ, ಕೇರಳಕ್ಕೆ ೩೦ ಟಿಎಂಸಿ ಮತ್ತು ಪುದುಚೇರಿಗೆ ಏಳು ಟಿಎಂಸಿ ನೀರು ಹಂಚಿಕೆಯಾಗಲಿದೆ.
ಕಾವೇರಿ ಜಲವಿವಾದದ ಹಿನ್ನೆಲೆಯಲ್ಲಿ ರಚಿಸಲಾಗಿದ್ದ ಕಾವೇರಿ ನ್ಯಾಯಾಧೀಕರಣ 2007ರ ಫೆಬ್ರವರಿ ಐದರಂದು ಅಂತಿಮ ತೀರ್ಪು ನೀಡಿತ್ತು. ಕೇಂದ್ರ ಸರಕಾರ ಹಲವು ಕಾರಣಗಳನ್ನು ಮುಂದಿಟ್ಟುಕೊಂಡು ಅಧಿಸೂಚನೆ ಜಾರಿಗೊಳಿಸಿರಲಿಲ್ಲ.ಇದಲ್ಲದೆ ಅಂತಿಮ ಅಧಿಸೂಚನೆ ಜಾರಿಗೂ ಮುನ್ನ ಕಾವೇರಿ ನದಿ ನೀರು ಬಳಸುವ ರಾಜ್ಯಗಳ ತಕರಾರು ಬಗೆಹರಿಸುವಂತೆ ತಮಿಳುನಾಡು, ಕರ್ನಾಟಕ, ಕೇರಳ ಮತ್ತು ಪುದುಚೇರಿ ಸರಕಾರಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದವು.
ಕಾವೇರಿ ನ್ಯಾಯಾಧೀಕರಣದ ಐತೀರ್ಪಿನ ಅಧಿಸೂಚನೆ ಜಾರಿಯಾಗಿರುವುದರಿಂದ ಕರ್ನಾಟಕಕ್ಕೆ ಭಾರೀ ಸಮಸ್ಯೆಯಾಗಿದೆ. ಆದರೆ 1991ರ ತೀರ್ಪಿನ ಅನ್ವಯ ಕರ್ನಾಟಕ ಪ್ರತಿ ವರ್ಷ 205 ಟಿಎಂಸಿ ನೀರನ್ನು ತಮಿಳುನಾಡಿನ ಮೆಟ್ಟೂರು ಜಲಾಶಯಕ್ಕೆ ಬಿಡುಗಡೆ ಮಾಡಬೇಕಿತ್ತು. ಆದರೆ 2007ರ ಐತೀರ್ಪಿನ ಪ್ರಕಾರ ಕರ್ನಾಟಕ ತಮಿಳುನಾಡಿಗೆ ಪ್ರತಿ ವರ್ಷ ೧೯೨ ಟಿಎಂಸಿ ನೀರು ಹರಿಸಬೇಕಿದೆ.
ಈ ಹಿಂದೆ ನ್ಯಾಯಾಧೀಕರಣ ನೀಡಿದ್ದ ಮಧ್ಯಾಂತರ ತೀರ್ಪಿನ ಅನ್ವಯ ಕಾವೇರಿ ಕಣಿವೆಯಲ್ಲಿ 11.22 ಲಕ್ಷ ಎಕರೆ ಭೂಪ್ರದೇಶ ದಲ್ಲಿ ಕೃಷಿ ಚಟುವಟಿಕೆ ನಡೆಸಬಹುದಾಗಿತ್ತು. ಐತೀರ್ಪಿನ ಆದೇಶದ ಪ್ರಕಾರ ಇದರ ವ್ಯಾಪ್ತಿ 18.8 ಲಕ್ಷ ಎಕರೆಗೆ ವಿಸ್ತಾರವಾಗಲಿದೆ. ಇದರಿಂದ ರಾಜ್ಯದ ರೈತರಿಗೆ ಕೃಷಿ ಭೂಮಿ ವಲಯ ವಿಸ್ತರಿಸಲು ಅನುಕೂಲವಾಗಲಿದೆ.
ಕರ್ನಾಟಕಕ್ಕೆ ನಿಗದಿಪಡಿಸಿರುವ 270 ಟಿಎಂಸಿ ನೀರು ಹಂಚಿಕೆಯ ಪೈಕಿ ೧೯೨ ಟಿಎಂಸಿ ನೀರು ಕೃಷಿ ವಲಯಕ್ಕೆ ಅಗತ್ಯವಿದೆ. ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ತುಮಕೂರು ಹಾಗೂ ಬೆಂಗಳೂರು ನಗರಕ್ಕೆ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ನೀರಿನ ಕೊರತೆಯಾಗಲಿದೆ.
ನ್ಯಾಯಾಧೀಕರಣದ ಅಂತಿಮ ತೀರ್ಪಿನ ಅಧಿಸೂಚನೆ ಜಾರಿಯಾಗಿರುವುದು ಕರ್ನಾಟಕಕ್ಕೆ ಅನುಕೂಲಕ್ಕಿಂತ ಹೆಚ್ಚಿನ ಅನನುಕೂಲವೇ ಹೆಚ್ಚಾಗಿದೆ. ಕರ್ನಾಟಕಕ್ಕೆ ಕಾವೇರಿ ಕಣಿವೆಯ ಜಲಾಶಯಗಳಿಂದ ಪ್ರತಿ ವರ್ಷ 465 ಟಿಎಂಸಿ ನೀರಿನ ಅಗತ್ಯವಿದೆ. ಆದರೆ ನ್ಯಾಯಾಧೀಕರಣದಲ್ಲಿ ಕೇವಲ ೨೭೦ ಟಿಎಂಸಿ ನೀರನ್ನು ನಿಗದಿಪಡಿಸಲಾಗಿದೆ.
ತಮಿಳುನಾಡಿನ ಅಂತರ್ಜಲ ಮಟ್ಟ 47 ಟಿಎಂಸಿಯಷ್ಟಿದೆ ಎಂದು ತಮಿಳುನಾಡು ಸರಕಾರವೇ ನ್ಯಾಯಾಧೀಕರಣದ ಮುಂದೆ ಹೇಳಿದೆ. ಆದರೆ ನ್ಯಾಯಾಧೀಕರಣ ಕೇವಲ 20 ಟಿಎಂಸಿಯಷ್ಟು ಮಾತ್ರ ಅಂತರ್ಜಲವಿದೆ ಎಂದು ದಾಖಲೆ ಮಾಡುವ ಮೂಲಕ 192 ಟಿಎಂಸಿ ನೀರು ಬಿಡುಗಡೆ ಮಾಡುವ ಕುರಿತು ತೀರ್ಪು ನೀಡುವ ಸಂದರ್ಭದಲ್ಲಿ ಕರ್ನಾಟಕದ ವಾದವನ್ನು ಪರಿಗಣಿಸಿರಲಿಲ್ಲ.
ಸುಮಾರು 60 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯಿರುವ ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಕಾಡಲಿದೆ. ಕಬಿನಿ ಎರಡನೆ ಹಂತದ ಯೋಜನೆಗಳಿಗೆ ನೀರಿನ ಹಂಚಿಕೆ ಮಾಡದ ಕಾರಣ ಏತ ನೀರಾವರಿ ಯೋಜನೆಗಳು ಸ್ಥಗಿತವಾಗಲಿವೆ. ಬೆಂಗಳೂರು ನಗರಕ್ಕೆ 8.5 ಟಿಎಂಸಿ ಕುಡಿಯುವ ನೀರಿನ ಅಗತ್ಯವಿದೆ. ಆದರೆ ಇದನ್ನು ನ್ಯಾಯಾಧೀಕರಣ ಪರಿಗಣನೆಗೆ ತೆಗೆದುಕೊಂಡಿಲ್ಲ.
ಇದಲ್ಲದೆ ಮೆಟ್ಟೂರು ಜಲಾಶಯದ ಯೋಜನಾ ವರದಿ ಪ್ರಕಾರ 42ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯ ಜಲಾಶಯಕ್ಕಿದೆ. ಇಂತಹ ಸಂದರ್ಭದಲ್ಲಿ ನ್ಯಾಯಾಧೀಕರಣದ ತೀರ್ಪಿನ ಪ್ರಕಾರ 55 ಟಿಎಂಸಿ ನೀರನ್ನು ಕರ್ನಾಟಕ ಮೆಟ್ಟೂರು ಜಲಾಶಯಕ್ಕೆ ಬಿಡುಗಡೆ ಮಾಡಬೇಕಿದೆ.ಕೃಷಿ ವಲಯದ ವ್ಯಾಪ್ತಿಯನ್ನು ವಿಸ್ತರಿಸಲು ಅವಕಾಶವಿದ್ದರೂ ನೀರಿನ ಕೊರತೆಯಾಗುವುದರಿಂದ ಕೃಷಿ ಕ್ಷೇತ್ರದ ಮೇಲೆ ಭಾರೀ ಪರಿಣಾಮ ಬೀರಲಿದೆ.
ಖಂಡನೆ: ಕಾವೇರಿ ನ್ಯಾಯಾಧೀಕರಣದ ಐತೀರ್ಪಿನ ಅಧಿಸೂಚನೆಯನ್ನು ಕೇಂದ್ರ ಸರಕಾರ ತರಾತುರಿಯಲ್ಲಿ ಪ್ರಕಟಿಸಿದೆ ಎಂದು ಆಕ್ಷೇಪಿಸಿರುವ ಮುಖ್ಯಮಂತ್ರಿ ಜಗದೀಶ್‌ಶೆಟ್ಟರ್, ಇದರಿಂದ ರಾಜ್ಯಕ್ಕೆ ಭಾರೀ ಅನ್ಯಾಯವಾಗಲಿದೆ ಎಂದು ಹೇಳಿದ್ದಾರೆ.ಅಧಿಸೂಚನೆ ಜಾರಿಗೊಳಿಸುವ ಮುನ್ನ ರಾಜ್ಯದ ಮನವಿಯನ್ನು ಪುರಸ್ಕರಿಸುವಂತೆ ಮಾಡಿದ್ದ ಮನವಿಗೆ ಕೇಂದ್ರ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಇದರಿಂದ ಕಾವೇರಿ ಕಣಿವೆಯ ಜನರಿಗೆ ಸಮಸ್ಯೆಯಾಗಲಿದೆ. ಈ ಬಗ್ಗೆ ಕಾನೂನು ತಜ್ಞರು ಹಾಗೂ ರಾಜ್ಯದ ಸಂಸದರ ಜತೆ ಚರ್ಚಿಸಿ ಮುಂದಿನ ನಿಲುವು ಕೈಗೊಳ್ಳಲಾಗುವುದು ಎಂದು ಹೇಳಿದರು.
ಮತ್ತೊಂದೆಡೆ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಉಪಮುಖ್ಯಮಂತ್ರಿ ಆರ್.ಅಶೋಕ್, ಹರ್ಯಾಣ ಮತ್ತು ಪಂಜಾಬ್ ನಡುವಿನ ಜಲವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಕರಣ ತೀರ್ಪು ನೀಡಿ 20ವರ್ಷಗಳಾಗಿದೆ. ಆದರೂ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿಲ್ಲ. ಆದರೆ, ಕಾವೇರಿ ನ್ಯಾಯಾಧೀಕರಣದ ಅಂತಿಮ ತೀರ್ಪು ಬಂದ ಆರು ವರ್ಷದಲ್ಲಿ ಅಧಿಸೂಚನೆ ಹೊರಡಿಸುವ ಮೂಲಕ ಕರ್ನಾಟಕದ ವಿರುದ್ಧ ಮಲತಾಯಿ ಧೋರಣೆ ಅನುಸರಿಸಿದೆ ಎಂದು ಆರೋಪಿಸಿದರು.
ಕೇಂದ್ರ ಸರಕಾರ ಅಧಿಸೂಚನೆ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಮುಂದೆ ರಾಜ್ಯ ಸರಕಾರ ಯಾವ ಕ್ರಮ ಅನುಸರಿಸಬೇಕು ಎನ್ನುವ ಕುರಿತು ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಅವರು ಹೇಳಿದರು.
ಸ್ವಾಗತ: ಕೇಂದ್ರ ಸರಕಾರ ಕಾವೇರಿ ನ್ಯಾಯಾಧೀಕರಣದ ಅಂತಿಮ ತೀರ್ಪಿನ ಅಧಿಸೂಚನೆ ಪ್ರಕಟಿಸಿರುವುದನ್ನು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಸ್ವಾಗತಿಸಿದ್ದಾರೆ. 1991ರಿಂದ ನಿರಂತರ ಹೋರಾಟ ನಡೆಸಿದ್ದರ ಫಲ ಇದೀಗ ದೊರೆತಿದೆ ಎಂದು ಹೇಳಿದ್ದಾರೆ.ವೈಯಕ್ತಿಕವಾಗಿ ಇದು ನನ್ನ ಹೋರಾಟ ಹಾಗೂ ನನ್ನ ಸರಕಾರಕ್ಕೆ ದೊರೆತ ಗೆಲುವಾಗಿದೆ. ನನ್ನ ರಾಜಕೀಯ ಜೀವನದಲ್ಲಿ ಅತ್ಯಂತ ಸಂತಸದ ಕ್ಷಣ ಇದಾಗಿದೆ ಎಂದು ಹೇಳಿದ್ದಾರೆ.
ಪ್ರತಿಭಟನೆ: ಕಾವೇರಿ ನ್ಯಾಯಾಧೀಕರಣದ ಐತೀರ್ಪಿನ ಅಧಿಸೂಚನೆ ಪ್ರಕಟಿಸಿರುವುದನ್ನು ವಿರೋಧಿಸಿ ರಾಜ್ಯದಲ್ಲಿ ಕನ್ನಡಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿವೆ. ಬೆಂಗಳೂರಿನ ಕೇಂದ್ರ ರೈಲು ನಿಲ್ದಾಣಕ್ಕೆ ನುಗ್ಗಿದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಕಚೇರಿಯ ಗಾಜುಗಳನ್ನು ಪುಡಿ ಮಾಡಿದ್ದಾರೆ. ಮತ್ತೊಂದೆಡೆ ಮಾಜಿ ಶಾಸಕ ವಾಟಾಳ್ ನಾಗರಾಜ್ ಸೇರಿದಂತೆ ಹಲವು ಹೋರಾಟಗಾರರು ರಾಜಭವನ ಮುತ್ತಿಗೆಗೆ ಯತ್ನಿಸಿದಾಗ ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದ್ದಾರೆ.

No comments:

Post a Comment