Monday, February 4, 2013

ಕಾಂಗ್ರೆಸ್ ಕಣ್ಣು ಮುಚ್ಚಾಲೆಯಾಟ ಫೆಬ್ರವರಿ -03-2013

ರಾವಳಿಯ ನಡಿಗೆಯುದ್ದಕ್ಕೂ ಕಾಂಗ್ರೆಸ್ ನಾಯಕರು ಆರೆಸ್ಸೆಸ್ ಸಂಘಟನೆಯ ಕುರಿತಂತೆ ತಮ್ಮ ಖಡ್ಗವನ್ನು ಎರ್ರಾಬಿರ್ರಿಯಾಗಿ ಝಳಪಿಸಿದ್ದಾರೆ. “ಕಾಂಗ್ರೆಸ್ ಗೆದ್ದರೆ ಪ್ರಭಾಕರ ಭಟ್ಟರ ಕೇಸನ್ನು ರೀ ಓಪನ್ ಮಾಡಿಸುವೆ” ಎಂದು ಸಿದ್ದರಾಮಯ್ಯ ಶಪಥ ಮಾಡಿದ್ದರೆ, ಇತ್ತ ಉಡುಪಿಯಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಪರಮೇಶ್ವರ್ ಇನ್ನಷ್ಟು ಉಗ್ರರಾಗಿ “ಆರೆಸ್ಸೆಸ್ ಶಿಬಿರಗಳಲ್ಲಿ ಶಾಲಾ ಮಕ್ಕಳನ್ನು ಸೇರಿಸಲಾಗುತ್ತಿದೆ. ಇದಕ್ಕೆ ನಾವು ಆಸ್ಪದ ನೀಡುವುದಿಲ್ಲ...ನಾವು ಸುಮ್ಮನಿರುವುದಿಲ್ಲ” ಎಂಬಿತ್ಯಾದಿಯಾಗಿ ಘರ್ಜಿಸಿದ್ದಾರೆ. ಏಕಾಏಕಿ ಆರೆಸ್ಸೆಸ್‌ನ ಕುರಿತಂತೆ ಈ ಪ್ರಮಾಣದ ಆಕ್ರೋಶ ಕಾಂಗ್ರೆಸ್‌ನಲ್ಲಿ ಯಾಕೆ ಉಕ್ಕಿ ಬರುತ್ತಿದೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ.  ಆರೆಸ್ಸೆಸ್‌ನ ಮೇಲೆ ಆಕ್ರೋಶವನ್ನು ತೋರಿಸುವ ಮೂಲಕ, ಕರಾವಳಿಯ ಅಲ್ಪಸಂಖ್ಯಾತರನ್ನು ಆಕರ್ಷಿಸಲು ನೋಡುತ್ತಿದೆ ಕಾಂಗ್ರೆಸ್. ಕಾಂಗ್ರೆಸ್‌ನ ಈ ಆಕ್ರೋಶ ನಿಜಕ್ಕೂ ಅದರ ಒಡಲಿನಿಂದ ಪ್ರಾಮಾಣಿಕವಾಗಿ ಉಕ್ಕಿ ಬಂದಿರುವುದೇ ಆಗಿದ್ದಿದ್ದರೆ, ಇಂದು ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಆರೆಸ್ಸೆಸ್‌ನ ಸಮಾವೇಶ ನಡೆಯುತ್ತಲೇ ಇರಲಿಲ್ಲ.
ಈ ದೇಶದಲ್ಲಿ ನಡೆದ ಉಗ್ರಗಾಮಿ ಚಟುವಟಿಕೆಗಳೊಂದಿಗೆ ಆರೆಸ್ಸೆಸ್‌ಗೆ ಸಂಬಂಧವಿದೆ ಎಂದು ಈ ದೇಶದ ಗೃಹಸಚಿವಾಲಯವೇ ಘೋಷಿಸಿದ ಬಳಿಕ, ಅಂತಹದೊಂದು ಉಗ್ರಗಾಮಿ ಸಂಘಟನೆಯ ಸಮಾವೇಶ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಸಮೀಪ ಹಮ್ಮಿಕೊಳ್ಳಲು ಅವಕಾಶ ಕೊಟ್ಟಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದನ್ನು ಮೊದಲು ಪರಮೇಶ್ವರ್ ದಿಲ್ಲಿಯ ಕೇಂದ್ರ ಸರಕಾರಕ್ಕೆ ಕೇಳಲಿ. ಆ ಬಳಿಕ ಇಲ್ಲಿನ ಅಲ್ಪಸಂಖ್ಯಾತರಿಗೆ ಬೆಣ್ಣೆ ಹಚ್ಚುವ ಮಾತನ್ನಾಡುವುದು ಒಳಿತು.
ಬಿಜೆಪಿ ತನ್ನ ಅಧಿಕಾರಾವಧಿಯಲ್ಲಿ ಸಂಘಪರಿವಾರದ ದುಷ್ಕರ್ಮಿಗಳ ಮೇಲಿನ ಮೊಕದ್ದಮೆಗಳನ್ನು ಪದೇ ಪದೇ ಹಿಂದೆಗೆದಾಗ ಬಾಯಿ ಮುಚ್ಚಿ ಕುಳಿತ ಕಾಂಗ್ರೆಸ್, ಪಠ್ಯ ಪುಸ್ತಕದಲ್ಲಿ ಕೋಮು ವಿಷಗಳನ್ನು ಬೆರೆಸಿ ಅದನ್ನು ಸಾರ್ವಜನಿಕವಾಗಿ ವಿದ್ಯಾರ್ಥಿಗಳಿಗೆ ಕುಡಿಸಿದಾಗಲೂ ಅದರ ಕುರಿತು ಸಾರ್ವಜನಿಕವಾಗಿ ಬೊಬ್ಬಿರಿಯದ ಕಾಂಗ್ರೆಸ್, ಸಂಘಪರಿವಾರದ ಹುನ್ನಾರದಿಂದ ಹಲವು ಅಮಾಯಕ ಅಲ್ಪಸಂಖ್ಯಾತರನ್ನು ಬಿಜೆಪಿ ಸರಕಾರ ಜೈಲಿಗೆ ತಳ್ಳಿದಾಗಲೂ ಅದರ ಕುರಿತಂತೆ ತುಟಿ ಪಿಟಿಕ್ ಎಂದಿರಲಿಲ್ಲ.
ಸಂಘಪರಿವಾರ ಮಹಿಳೆಯರ ಮೇಲೆ ಸಾರ್ವಜನಿಕವಾಗಿ ಬರ್ಬರ ಲೈಂಗಿಕ ದೌರ್ಜನ್ಯ ಎಸಗಿರುವುದನ್ನು ಟಿ.ವಿ.ಯಲ್ಲಿ ಬಹಿರಂಗಗೊಳಿಸಿದ ಒಂದೇ ಕಾರಣಕ್ಕೆ ಪತ್ರಕರ್ತನೊಬ್ಬನನ್ನು ತಿಂಗಳುಗಳ ಕಾಲ ಜೈಲಲ್ಲಿಟ್ಟಾಗ ಸುಮ್ಮನಿದ್ದ ಕಾಂಗ್ರೆಸ್ ಇದೀಗ, ತನಗೆ ಅಧಿಕಾರ ಸಿಕ್ಕಿದರೆ ಅದೇನೋ ಮಾಡಿ ತೋರಿಸುತ್ತೇನೆ ಎಂದು ಸಾರ್ವಜನಿಕವಾಗಿ ಬೊಬ್ಬಿರಿಯುತ್ತಿದೆ.
ಇಂತಹ ಉತ್ತರಕುಮಾರನ ಪೌರುಷದ ಬಲದಿಂದಲೇ ಈ ದೇಶದಲ್ಲಿ ಆರೆಸ್ಸೆಸ್ ಬೆಳೆಯುತ್ತಾ ಬಂತು ಎನ್ನುವುದು ನಾವು ಕಂಡುಂಡ ಸತ್ಯವಾಗಿದೆ. ತಮಾಷೆ ನೋಡಿ. ಒಂದೆಡೆ ಕಾಂಗ್ರೆಸ್ ಕರಾವಳಿಯಲ್ಲಿ ಕಾಲ್ನಡಿಗೆ ನಡೆಸಿ ವ್ಯರ್ಥ ಕಾಲು ನೋಯಿಸಿಕೊಳ್ಳುತ್ತಿದೆ. ಮತ್ತೊಂದೆಡೆ, ನಮ್ಮ ಗೃಹಸಚಿವರು ಉಗ್ರರೆಂದು ಕರೆಸಿಕೊಂಡಿರುವ ಆರೆಸ್ಸೆಸ್, ಬಜ್ಪೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವೇ ತಮ್ಮ ವಿರಾಟ್ ಪ್ರತಾಪವನ್ನು ತೋರಿಸುತ್ತಿದೆ. ಈ ಸಮಾವೇಶಕ್ಕೆ ರಾಜ್ಯ ಸರಕಾರ ಸಂಪೂರ್ಣ ಆಡಳಿತ ಯಂತ್ರವನ್ನು ಬಳಸಿಕೊಂಡಿದೆ. ಕೇಂದ್ರ ಸರಕಾರವೂ ಮೌನ ತಾಳುವ ಮೂಲಕ ಈ ಸಮಾವೇಶಕ್ಕೆ ಪರೋಕ್ಷ ಬೆಂಬಲವನ್ನೂ ನೀಡಿದಂತಿದೆ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತೆ ಈ ದೇಶದ ಹೊಣೆ. ಪ್ರಯಾಣಿಕರಿಗೆ ಯಾವುದೇ ತೊಡಕುಂಟಾಗದಂತೆ ರಸ್ತೆ, ಹೆದ್ದಾರಿಗಳನ್ನು ಅಪಾಯ ಮುಕ್ತಗೊಳಿಸುವುದೂ ಕೂಡ ಸರಕಾರದ ಹೊಣೆಯಾಗಿದೆ. ಆದರೆ, ಆರೆಸ್ಸೆಸ್‌ನ ಈ ಸಮಾವೇಶಕ್ಕಾಗಿ ಪ್ರಯಾಣಿಕರು ಬಹಳಷ್ಟು ಬೆಲೆಯನ್ನು ತೆರಬೇಕಾಗಿದೆ. ಮುಖ್ಯವಾಗಿ, ಈ ಸಮಾವೇಶದ ಹಿನ್ನೆಲೆಯಲ್ಲಿ ಎಲ್ಲ ಪ್ರಯಾಣಿಕರು ಮೂರು ಗಂಟೆ ಬೇಗ ವಿಮಾನ ನಿಲ್ದಾಣವನ್ನು ತಲುಪಬೇಕು ಎಂದು ಪ್ರಕಣೆಯನ್ನು ಹೊರಡಿಸಲಾಗಿದೆ.
ಆರೆಸ್ಸೆಸ್ ಸಮಾವೇಶ ಯಾವುದೇ ಸರಕಾರಿ ಕಾರ್ಯಕ್ರಮವಲ್ಲ. ಗಣರಾಜ್ಯೋತ್ಸವ, ಸ್ವಾತಂತ್ರೋತ್ಸವದ ಮೆರವಣಿಗೆ ಇಲ್ಲಿ ನಡೆಯುತ್ತಿಲ್ಲ. ಹೀಗಿರುವಾಗ, ಯಾಕಾಗಿ ಪ್ರಯಾಣಿಕರು ಈ ಪ್ರಯಾಣದ ತೊಡಕನ್ನು ಅನುಭವಿಸಬೇಕು? ಆರೆಸ್ಸೆಸ್ ಸಮಾವೇಶವಿರುವುದರಿಂದ ಹೆಚ್ಚಿನವರು ತಮ್ಮ ಪ್ರಯಾಣವನ್ನೇ ಮೊಟಕು ಮಾಡಿದ್ದಾರೆ. ಯಾಕೆಂದರೆ, ಬಜ್ಪೆ ಪ್ರದೇಶದಲ್ಲಿ ಹಿಂಸಾಚಾರ ಸಂಭವಿಸುವ ಭಯ ಎಲ್ಲರನ್ನೂ ಕಾಡುತ್ತಿತ್ತು.
ಈ ಸಮಾವೇಶಕ್ಕಾಗಿ ಸರಕಾರಿ ಬಸ್ಸುಗಳನ್ನೇ ಹೆಚ್ಚುವರಿಯಾಗಿ ಒದಗಿಸಲಾಗಿದೆ. ಇದರಿಂದಾಗಿ ಹಲವೆಡೆ ಪ್ರಯಾಣಿಕರಿಗೆ ಬಸ್ಸುಗಳ ಕೊರತೆ ಎದುರಾಗಿದೆ. ಯಾವುದೇ ಸರಕಾರ ಅಥವಾ ದೇಶಕ್ಕೆ ಸಂಬಂಧಿಸದ, ಒಂದು ಶಂಕಿತ ಉಗ್ರಗಾಮಿ ಸಂಘಟನೆಯ ಸಮಾವೇಶಕ್ಕೆ ಜನರು ಯಾಕಾಗಿ ಇಂತಹ ಸಮಸ್ಯೆಗಳನ್ನು ಎದುರಿಸಬೇಕು? ಕಾಂಗ್ರೆಸ್ ಪ್ರಯತ್ನಿಸಿದರೆ, ಬಜ್ಪೆ ವಿಮಾನ ನಿಲ್ದಾಣ ಸಮೀಪ ಹಮ್ಮಿಕೊಂಡ ಸಮಾವೇಶವನ್ನು ತಡೆಯಬಹುದಾಗಿತ್ತು.
ಆದರೆ ಅದನ್ನು ಮಾಡದೆಯೇ, ತನಗೆ ಅಧಿಕಾರಕೊಡಿ. ನಾನು ಅದೇನನ್ನೋ ಮಾಡಿ ತೋರಿಸುತ್ತೇನೆ ಎಂದು ಬೊಬ್ಬಿರಿದ ಕಾಂಗ್ರೆಸ್, ಅಲ್ಪಸಂಖ್ಯಾತರ ಜೊತೆಗೆ ಸಮಯ ಸಾಧಕ ರಾಜಕಾರಣವನ್ನು ಮಾಡುತ್ತಿದೆ. ಇಂತಹ ಕಣ್ಣು ಮುಚ್ಚಾಲೆಯಾಟ ಕ್ಕಿಂತ, ಕಾಂಗ್ರೆಸ್ ಪಕ್ಷ ಆರೆಸ್ಸೆಸ್ ಜೊತೆಗೆ ಜಂಟಿಯಾಗಿ ಸೇರಿಕೊಂಡಿದ್ದರೆ, ಅದು ಅಲ್ಪಸಂಖ್ಯಾತ ಸಮುದಾಯಕ್ಕೆ ಕಾಂಗ್ರೆಸ್ ನೀಡಬಹುದಾಗಿದ್ದ ಅತಿ ದೊಡ್ಡ ಕೊಡುಗೆಯಾಗಿ ಬಿಡುತ್ತಿತ್ತು.

No comments:

Post a Comment