Thursday, February 28, 2013

ಸೂರ್ಯನೆಲ್ಲಿ ಪ್ರಕರಣ: ಕುರಿಯನ್ ಬಲಿಯಾಗಲೇಬೇಕಾದ ಕುರಿಯೆ?ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಅನೈತಿಕತೆ ಯನ್ನು ರಾಜಕಾರಣಿಗಳು ಒಂದು ಸಾಮಾಜಿಕ ಮೌಲ್ಯವನ್ನಾಗಿ ಪರಿವರ್ತಿಸುವ ಹಂತದಲ್ಲಿದ್ದಾರೆ. ಒಂದೆಡೆ ದಿಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಮೊಸಳೆ ಕಣ್ಣೀರು ಸುರಿಸುವ ಸರಕಾರ, ಆಳದಲ್ಲಿ ಆ ಕುರಿತಂತೆ ಎಷ್ಟರಮಟ್ಟಿಗೆ ಗಂಭೀರತೆಯನ್ನು ಹೊಂದಿದೆ ಎನ್ನುವುದಕ್ಕೆ ಸೂರ್ಯನೆಲ್ಲಿ ಅತ್ಯಾಚಾರ ಪ್ರಕರಣ ನಮ್ಮ ಮುಂದೆ ಉದಾಹರಣೆಯಾಗಿ ನಿಂತಿದೆ. ಅತ್ಯಾಚಾರ ಆರೋಪ ಇತರ ಅಕ್ರಮ, ಅವ್ಯವಹಾರಗಳಂತೆ ಅಲ್ಲ. ಅದು ಮನುಷ್ಯನ ಚಾರಿತ್ರವನ್ನು ಪ್ರಶ್ನಿಸುತ್ತದೆ. ಅತ್ಯಾಚಾರ ಆರೋಪವನ್ನು ಹೊಂದಿದ ಒಬ್ಬ ನಾಯಕ ಸಂಸತ್‌ನಲ್ಲಿರುವುದು, ಸಂಸತ್‌ಗೆ ಮಾಡುವ ಅವಮಾನವಾಗಿದೆ. ಚಾರಿತ್ರವಿಲ್ಲದ ಮನುಷ್ಯ ನಿಂದ ಪ್ರಾಮಾಣಿಕತೆಯನ್ನು ನಿರೀಕ್ಷಿಸುವುದೇ ನಮ್ಮ ಮೂರ್ಖತನವಾಗುತ್ತದೆ. ಆದರೆ ಅತ್ಯಾಚಾರ ಆರೋಪವನ್ನು ಹೊತ್ತ ನಾಯಕ ನೊಬ್ಬ ಈ ದೇಶದ ರಾಜ್ಯಸಭೆಯ ಉನ್ನತ ಸ್ಥಾನದಲ್ಲಿದ್ದರೆ, ಸಂಸತ್ತಿನ ಗತಿಯೇನಾಗಬೇಕು? ಇದೀಗ ಸೂರ್ಯನೆಲ್ಲಿ ಪ್ರಕರಣದಲ್ಲಿ ಆರೋಪಿ ಯಾಗಿ ಗುರುತಿಸಲ್ಪಡುತ್ತಿರುವ ರಾಜ್ಯಸಭೆ ಉಪ ಸಭಾಪತಿ ಪಿ.ಜೆ. ಕುರಿಯನ್ ವಿಚಾರ ಯುಪಿಎ ಸರಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ.
ಸೂರ್ಯನೆಲ್ಲಿ ಪ್ರಕರಣ ದಫನವಾಗಿ ಹೋಗುವ ಹಂತವನ್ನು ತಲುಪಿತ್ತು. ಸಂತ್ರಸ್ತರಿಗೆ ನ್ಯಾಯ ಮರೀಚಿಕೆಯಾಗಿ ಬಿಟ್ಟಿತ್ತು. ಆದರೆ ದಿಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ, ದೇಶದಲ್ಲಿ ಸಾಮೂಹಿಕ ಅತ್ಯಾಚಾರವನ್ನು ಗಂಭೀರವಾಗಿ ಪರಿಗಣಿಸುವಂತೆ ಮಾಡಿತು. ಎಲ್ಲಾ ಅತ್ಯಾಚಾರಗಳು ದೇಶದ ಪತ್ರಿಕೆಗಳ ಮುಖಪುಟಗಳಲ್ಲಿ ಪ್ರಕಟವಾಗಲಾರಂಭಿಸಿ ದವು. ಸಾರ್ವಜನಿಕ ಪ್ರತಿಭಟನೆ ನ್ಯಾಯಾ ಲಯದ ಮೇಲೂ ಪರೋಕ್ಷ ಒತ್ತಡವನ್ನು ಬೀರಿತು.
ಅತ್ಯಾಚಾರ ಪ್ರಕರಣವನ್ನು ನ್ಯಾಯಾಲಯ ಕಳೆದ ಕೆಲವು ತಿಂಗಳುಗಳಿಂದ ಗಂಭೀರವಾಗಿ ಪರಿಗಣಿಸಲಾರಂಭಿಸಿತು. ಇಂತಹ ಸಂದರ್ಭದಲ್ಲೇ ಹೂತುಹೋದ ಸೂರ್ಯನೆಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಭೂತ ಮತ್ತೆ ಮೇಲೆದ್ದು ನಿಂತಿತು. ಈ ದೇಶದ ಸರ್ವೋಚ್ಚ ನ್ಯಾಯಾಲಯ ಅದರ ಪುನರ್ ವಿಚಾರಣೆಯನ್ನು ಬಯಸಿತು. ಯಾರೆಲ್ಲ ಹೆಸರುಗಳು ಈ ಅತ್ಯಾಚಾರದಲ್ಲಿ ತಳುಕು ಹಾಕಿಕೊಂಡಿದೆಯೋ ಅವರೆಲ್ಲ ಮತ್ತೆ ಕಟಕಟೆಯನ್ನು ಹತ್ತುವಂತಾಯಿತು. ಎಲ್ಲರಿಗೂ ಗೊತ್ತಿರುವಂತೆ ಸೂರ್ಯನೆಲ್ಲಿ ಪ್ರಕರಣದಲ್ಲಿ ರಾಜಕಾರಣಿಗಳ ಹೆಸರುಗಳೂ ತಳಕು ಹಾಕಿಕೊಂಡಿವೆ.
ವಿವಿಧ ರಾಜಕಾರಣಿಗಳು ಈ ಅತ್ಯಾಚಾರ ಪ್ರಕರಣವನ್ನು ಹಿಡಿದುಕೊಂಡು ರಾಜಕೀಯ ಆಟವನ್ನು ಆಡಿದ್ದಾರೆ. ಇದೀಗ ಮತ್ತೆ ಆಟವನ್ನಾಡುವುದಕ್ಕೆ ಮುಂದಾಗಿದ್ದಾರೆ. ಈ ಪುನರ್ ವಿಚಾರಣೆಯಿಂದ ಸಂತ್ರಸ್ತರಿಗೆ ನ್ಯಾಯ ಸಿಗುತ್ತದೆ ಎನ್ನುವುದು ಹಾಸ್ಯಾಸ್ಪದ. ಆದರೆ ಕನಿಷ್ಠ ವಿಚಾರಣೆಯ ಹೆಸರಲ್ಲಿ ಮತ್ತೊಮ್ಮೆ ಅದು ಚರ್ಚೆಗೆ ಬರುವುದರಿಂದ ಸಮಾಜಕ್ಕೆ ಕೆಲವು ಲಾಭಗಳಿವೆ. ಮುಖ್ಯವಾಗಿ, ಆರೋಪಿಗಳಿಗೆ ಕನಿಷ್ಠ ಮಾನಸಿಕ ಹಿಂಸೆ ಯಾದರೂ ಆಗಬಹುದಲ್ಲವೆ? ಆದರೆ ಸೂರ್ಯನೆಲ್ಲಿ ಪ್ರಕರಣದಲ್ಲಿ ರಾಜ್ಯಸಭೆ ಉಪ ಸಭಾಪತಿ ಪಿ.ಜೆ.ಕುರಿಯನ್ ಹೆಸರು ಸಿಲುಕಿ ಕೊಂಡಿರುವುದು ಸರಕಾರಕ್ಕೆ ಗಂಟಲ ಮುಳ್ಳಾಗಿ ಪರಿಣಮಿಸಿದೆ.
ರಾಜ್ಯಸಭೆಯ ಚರ್ಚೆಯಲ್ಲಿ ಕುರಿಯನ್ ಕೇಂದ್ರ ಬಿಂದುವಾಗಿ ಬಿಟ್ಟಿದ್ದಾರೆ. ವೃತ್ತಿ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಗೆ ರಾಜ್ಯಸಭೆ ನಿನ್ನೆಯಷ್ಟೇ ಅಂಗೀಕಾರ ಮಾಡಿದೆ.  ಮನೆಗೆಲಸದವರು ಸೇರಿದಂತೆ ಉದ್ಯೋಗದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳಗಳಿಗೆ ಕಡಿವಾಣ ಹಾಕುವ ಮಹತ್ವದ ವಿಧೇಯಕವೊಂದನ್ನು ಮಂಗಳ ವಾರ ರಾಜ್ಯಸಭೆಯಲ್ಲಿ ಮಂಡಿಸಲಾಯಿತು ಮತ್ತು ಅಂಗೀಕರಿಸಲಾಯಿತು ಕೂಡ. ಆದರೆ ಇದೇ ಸಂದರ್ಭದಲ್ಲಿ ಗುರುವಾರ, ರಾಜ್ಯ  ಸಭೆಯ ಉಪಾಧ್ಯಕ್ಷರ ಹೆಸರು ಲೈಂಗಿಕ ಹಗರಣದಲ್ಲಿ ಸಿಲುಕಿಕೊಂಡು ಸರಕಾರ ಮುಜುಗರಕ್ಕೀಡಾಗಬೇಕಾಯಿತು.
ಸೂರ್ಯನೆಲ್ಲಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಕುರಿಯನ್ ಅವರ ಸಮರ್ಥನೆಗೆ ಸರಕಾರ ನಿಲ್ಲಬೇಕಾದಂತಹ ಪರಿಸ್ಥಿತಿ ಇರು ವಾಗ, ರಾಜ್ಯಸಭೆಯಲ್ಲಿ ಅಂಗೀಕರಿಸಲ್ಪಟ್ಟ ವಿಧೇಯಕಕ್ಕೆ ಗೌರವವಾದರೂ ಎಲ್ಲಿದೆ? ಬಹುಶಃ ವಿಧೇಯಕ ಜಾರಿಯಾಗುವ ಸಂದರ್ಭ ದ ಸೋಲಿನ ಸೂಚನೆಯನ್ನು ಕುರಿಯನ್ ಹೆಸರೇ ಸಾಬೀತು ಮಾಡುವಂತಿದೆ.ನಿಜ. ಸರಕಾರ ಹೇಳುತ್ತಿದೆ, ಕುರಿಯನ್ ಈ ಪ್ರಕರಣದಲ್ಲಿ ನೇರವಾಗಿ ಬಾಗಿಯಾಗಿಲ್ಲ ಎಂದು. ಸರಕಾರದ ಸಮರ್ಥನೆ ನಿಜವೇ ಆಗಿರಬಹುದು. 
ಆದರೆ ಪರೋಕ್ಷವಾಗಿ ಕುರಿಯನ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪವನ್ನು ಸಂತ್ರಸ್ತ ಕುಟುಂಬ ಈಗಾಗಲೇ ಆರೋಪಿಸಿದೆ. ಈ ಆರೋಪ ದಿಂದ ಮುಕ್ತರಾಗುವವರೆಗೆ ಕುರಿಯನ್ ಕನಿಷ್ಠ ಉಪಸಭಾಧ್ಯಕ್ಷ ಸ್ಥಾನದಿಂದ ದೂರ ಉಳಿಯುವುದು ಸಹ್ಯವಾದ ಕ್ರಮವಾಗಿದೆ. ಅದರಿಂದ ಸರಕಾರದ ಘನತೆಯೂ, ರಾಜ್ಯಸಭೆಯ ಘನತೆಯೂ ಉಳಿದಂತಾ ಗುತ್ತದೆ.  ಪ್ರಕರಣ ವಿಚಾರಣಾ ಹಂತದಲ್ಲಿ ರುವುದರಿಂದ, ನೈತಿಕ ದೃಷ್ಟಿಯಿಂದ ಕುರಿಯನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಲೇಬೇಕಾಗುತ್ತದೆ.
ಇದರ ಬದಲು ಆರೋಪ ಮಾಡಿದವರನ್ನು ದಮನಿಸುವುದು, ಫೇಸ್‌ಬುಕ್‌ನಲ್ಲಿ ಕಮೆಂಟ್ ಮಾಡಿದವರು, ಅದನ್ನು ಹಂಚಿಕೊಂಡವರ ಮೇಲೆ ಪ್ರಕರಣ ದಾಖಲಿಸುವುದು ಇವೆಲ್ಲ ಪರೋಕ್ಷವಾಗಿ   ಅವರ ಮೇಲಿರುವ ಆರೋಪಗಳಿಗೆ ಇನ್ನಷ್ಟು ಪುಷ್ಠಿಯನ್ನು ನೀಡುತ್ತದೆ. ಆದುದರಿಂದ, ಕುರಿಯನ್ ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ನಡೆದು, ನ್ಯಾಯವನ್ನು ತಮ್ಮದಾಗಿಸಿ ಕೊಳ್ಳಬೇಕು. ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕುವುದರಿಂದ, ಆರೋಪದಿಂದ ಮುಕ್ತರಾಗ ಬಹುದು ಎನ್ನುವುದು ಭ್ರಮೆ ಮಾತ್ರ. ಅಂತಹ ಪ್ರಯತ್ನದಿಂದ ಅವರ ವರ್ಚಸ್ಸು ಇನ್ನಷ್ಟು ಕೆಡುತ್ತಾ ಹೋಗುತ್ತದೆ. ತಕ್ಷಣ ತಮ್ಮ ರಾಜ್ಯಸಭಾ ಉಪ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕು. ಅವರು ಸದ್ಯಕ್ಕೆ ಮಂದೆಯೊಳಗಿರುವ ಕಪ್ಪು ಕುರಿ. ಅದನ್ನು ಬಲಿಕೊಡುವುದು ಸರಕಾರಕ್ಕೆ ಸದ್ಯದ ಸ್ಥಿತಿಯಲ್ಲಿ ಅನಿವಾರ್ಯ.

No comments:

Post a Comment