Wednesday, February 27, 2013

ಹಳಿ ತಪ್ಪದ ಬಜೆಟ್ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ಸರಕಾರ ಮಂಡಿಸುವ ಬಜೆಟ್‌ನ ಮೇಲೆ ಜನರಿಗೆ ವಿಶ್ವಾಸ ಅಷ್ಟಕ್ಕಷ್ಟೇ. ಕಣ್ಣೊರೆಸುವ ತಂತ್ರದ ಭಾಗವಾಗಿ ಸರಕಾರ  ಕೊಡುಗೆಗಳನ್ನು ಒಂದು ಕೈಯಲ್ಲಿ ನೀಡುತ್ತಾ, ಇನ್ನೊಂದು ಕೈಯಲ್ಲಿ ಹಿಂದೆಗೆದುಕೊಳ್ಳುತ್ತದೆ. ಈ ದೇಶದ ಜನಸಾಮಾನ್ಯರ ಬದುಕಿನ ನರನಾಡಿ ಯಂತಿರುವ ರೈಲು ಹಳಿಗಳ ಏರುಪೇರು, ಅವರ ಬದುಕಿನ ಮೇಲೆ ನೇರ ಪರಿಣಾಮ ಬೀರುತ್ತದೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಬರೇ ಪ್ರಯಾಣ ದರ ಮಾತ್ರವಲ್ಲ, ಸರಕು ದರ ಹಳಿ ತಪ್ಪಿದರೂ ಬದುಕು ಹಳಿ ತಪ್ಪಿ ಬಿಡುತ್ತದೆ. ಈ ಬಾರಿ ಸರಕಾರ ಪ್ರಯಾಣದರವನ್ನೇನೋ ಮುಟ್ಟುವುದಕ್ಕೆ ಹೋಗಿಲ್ಲ. ಆದರೆ ಸರಕು ದರದ ಮೇಲೆ ಕೈಯಾಡಿಸಿದೆ. ಪರೋಕ್ಷವಾಗಿ ಜನರ ಬದುಕಿನ ಮೇಲೆ ಅದು ಪರಿಣಾಮ ಬೀರಿಯೇ ಬೀರುತ್ತದೆ.ಪ್ರಯಾಣದರ ಏರಿಕೆಯಾಗಿಲ್ಲ ಎನ್ನುವುದರ ಕುರಿತಂತೆ ಸಂಭ್ರಮ ಪಡಬೇಕಾದುದೇನೂ ಇಲ್ಲ. ಸಾಧಾರಣವಾಗಿ ಬಜೆಟ್‌ನ ಸಂದರ್ಭದಲ್ಲಿ ಪ್ರಯಾಣ ದರ ಏರಿಕೆ ಮಾಡಿದರೆ ಅದು ಭಾರೀ ಸದ್ದು ಮಾಡುತ್ತದೆ. ಚರ್ಚೆಗಳು ನಡೆಯುತ್ತದೆ.
ಆದುದರಿಂದ, ಪ್ರಯಾಣ ದರವನ್ನು ಬಜೆಟ್‌ನ ಬಳಿಕ ಸದ್ದು ಗದ್ದಲವಿಲ್ಲದೆ ಸರಕಾರ ಏರಿಸಿ ಬಿಡುತ್ತದೆ. ಮಧ್ಯದಲ್ಲಿ ಹಾವಿನಂತೆ ಏರುತ್ತಾ ಹೋಗುವ ಪ್ರಯಾಣದ ದರವನ್ನು ನಾವು ಬಾಯಿ ಮುಚ್ಚಿ ಒಪ್ಪಿಕೊಳ್ಳುತ್ತೇವೆ.ಆದುದರಿಂದ, ಈ ರೈಲು ಬಜೆಟ್‌ನ್ನು ಎಷ್ಟರ ಮಟ್ಟಿಗೆ ನಾವು ನಂಬಬೇಕು ಎನ್ನುವುದನ್ನು ಕಾಲವೇ ತಿಳಿಸಬೇಕು. ಅಷ್ಟರಲ್ಲಿ ಯುಪಿಎ ಸರಕಾರ ಉರುಳಿ ಇನ್ನೊಂದು ಸರಕಾರ ಅಥವಾ ಅದೇ ಸರಕಾರ ಇನ್ನೊಂದು ರೂಪದಲ್ಲಿ ನಮ್ಮ ಮುಂದೆ ಪ್ರತ್ಯಕ್ಷವಾಗಬಹುದು. ಅಂತೂ ಈ ಬಾರಿಯ ಬಜೆಟ್‌ನ್ನು ಕೇಂದ್ರ ರೈಲ್ವೆ ಸಚಿವ ಪವನ್ ಕುಮಾರ್ ಬನ್ಸಾಲ್ ‘ಹಾವು ಸಾಯಬಾರದು, ಕೋಲು ಮುರಿಯಬಾರದು’ ಎಂಬಂತೆ ಮಂಡಿಸಿದ್ದಾರೆ.
ಪ್ರಧಾನಿ ಇದನ್ನು ಸುಧಾರಣಾವಾದಿ ಬಜೆಟ್ ಎಂದು ಕರೆದಿರುವುದು, ಚಿದಂಬರಂ ಇದನ್ನು ‘ಅನುಷ್ಠಾನ ಯೋಗ್ಯ’ ಬಜೆಟ್ ಎಂದು ಕರೆದಿರುವುದು ಯೋಗ್ಯವಾಗಿಯೇ ಇದೆ. ಒಟ್ಟಿನಲ್ಲಿ ತೀರಾ ಅಂಗೈಯಲ್ಲಿ ಅರಮನೆಯನ್ನು ತೋರಿಸುವ ಕೆಲಸಕ್ಕೆ ಯುಪಿಎ ಸರಕಾರ ಇಳಿದಿಲ್ಲ. ಅದಷ್ಟಕ್ಕೇ ನಾವು ಈ ಬಜೆಟ್‌ನ ಪ್ರಾಮಾಣಿಕತೆಯನ್ನು ಮೆಚ್ಚಬೇಕು.
ಆಝಾದಿ ರೈಲ್ವೆ ಕೊಡುಗೆಯನ್ನು ಸಚಿವರು ನೀಡಿದ್ದಾರೆ. ಈ ಮೂಲಕ ದೇಶದ ಎಲ್ಲ ಸ್ವಾತಂತ್ರ ಹೋರಾಟ ಕ್ಷೇತ್ರಗಳನ್ನು ಜನಸಾಮಾನ್ಯ ಸಂದರ್ಶಿಸಿ ಬರಬಹುದಾಗಿದೆ. ಇದೊಂದು ರೀತಿ, ಭಾವನಾತ್ಮಕವಾಗಿ ಜನರನ್ನು ಮರುಳುಗೊಳಿಸುವ ಕೆಲಸ. ಆದರೂ ಇದರಲ್ಲಿ ಇನ್ಯಾವುದೇ ಪ್ರಚೋದನೆಗಳಿರದೇ ಇದ್ದುದರಿಂದ, ದೇಶಪ್ರೇಮದೊಂದಿಗೆ ನಂಟೂ ಇದ್ದುದರಿಂದ ಈ ರೈಲನ್ನು ನಾವೆಲ್ಲರೂ ಸ್ವಾಗತಿಸಬೇಕಾಗಿದೆ. ಹಾಗೆಯೇ ರೈಲ್ವೆ ಒಳಗಿನ ಸುಧಾರಣೆಗೂ ಬಜೆಟ್ ಒತ್ತು ನೀಡಿದೆ. ಕ್ಯಾಂಟೀನ್‌ಗಳ ಶುಚಿತ್ವದ ಬಗ್ಗೆಯೂ ಕಾಳಜಿಯನ್ನು ಹೊಂದಿದೆ.
ಮಹಿಳೆಯ ರಕ್ಷಣೆಯ ಬಗ್ಗೆಯೂ ಮಾತನಾಡಿದೆ. ಇವೆಲ್ಲವೂ ಎಷ್ಟರ ಮಟ್ಟಿಗೆ ಅನುಷ್ಠಾನಕ್ಕೆ ಬರಲಿದೆ ಎನ್ನುವುದನ್ನು ನಾವು ಕಾದು ನೋಡಬೇಕಾಗಿದೆ.  ಕರ್ನಾಟಕದ ಪಾಲಿಗೆ ಈ ಬಾರಿ ವಿಶೇಷವಲ್ಲದಿದ್ದರೂ, ತೀರ ಕಡೆಗಣಿಸಿಲ್ಲ ಎನ್ನುವ ಸಮಾಧಾನ. ಅದಕ್ಕೆ ಸಚಿವ ಮುನಿಯಪ್ಪ, ರಪ್ಪವೊಯ್ಲಿ, ಆಸ್ಕರ್‌ರಂತಹ ನಾಯಕರೂ ಸಾಕಷ್ಟು ಒತ್ತಡ ಹೇರಿರಬಹುದು ಎಂದು ನಾವು ನಂಬಬೇಕಾಗಿದೆ. ಆದರೂ ಶೆಟ್ಟರ್ ಬಜೆಟ್‌ನ ಕುರಿತಂತೆ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ.  ಉದ್ದೇಶ ಪೂರ್ವಕವಾಗಿ ಕರ್ನಾಟಕವನ್ನು ಕಡೆಗಣಿಸಲಾಗಿದೆ ಎಂದು ಅವರು ದೂರಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ನಾಯಕರು ನೀಡಿರುವ ಹೇಳಿಕೆಯನ್ನೇ ಒಂದಿಷ್ಟು ತಿದ್ದಿ ಶೆಟ್ಟರ್ ಪತ್ರಿಕೆಗಳಿಗೆ ಒಪ್ಪಿಸಿದ್ದಾರೆ. ಕೇಂದ್ರದ ಬಿಜೆಪಿ ನಾಯಕರು ಇಡೀ ಬಜೆಟ್‌ನ್ನು ‘ರಾಯ್‌ಬರೇಲಿ ಬಜೆಟ್’ ಎಂದು ವ್ಯಂಗ್ಯವಾಡಿದ್ದಾರೆ. ರಾಯ್‌ಬರೇಲಿಗೆ ಹೆಚ್ಚಿನ ಕೊಡುಗೆಗಳನ್ನು ನೀಡಿದ್ದಾರೆನ್ನುವುದು ಅವರ ಆರೋಪ. ಈ ಹಿಂದೆ ಮಮತಾ ಬ್ಯಾನರ್ಜಿ ಬಜೆಟ್ ಮಂಡಿಸಿದಾಗ ಅದು ಪಶ್ಚಿಮಬಂಗಾಳಕ್ಕಷ್ಟೇ ಸೀಮಿತವಾಗಿತ್ತು. ಲಾಲು ಬಿಹಾರಕ್ಕೆ ಸೀಮಿತವಾಗಿ ಬಜೆಟ್ ಮಂಡಿಸಿದ್ದರು. ಇದೀಗ ಮೊದಲ ಬಾರಿ ಕಾಂಗ್ರೆಸ್‌ನ ಸಚಿವರಿಗೆ ಬಜೆಟ್ ಮಂಡಿಸುವ ಅವಕಾಶ ಸಿಕ್ಕಿದೆ. ಅವರು ಸೋನಿಯಾಗೆ ನಿಷ್ಠರಾಗಿ ರಾಯ್‌ಬರೇಲಿಗೆ ಕೊಡುಗೆಗಳನ್ನು ನೀಡಿರುವುದರಲ್ಲಿ ಅಚ್ಚರಿಯೇನೂ  ಇಲ್ಲ. ಹಾಗೆಂದು ರಾಯ್‌ಬರೇಲಿಯನ್ನು ನಿರ್ಲಕ್ಷಿಸಬೇಕಾಗಿತ್ತು ಎನ್ನುವುದು ಉದ್ದೇಶವಲ್ಲ. ಈ ದೇಶದ ಹಿಂದುಳಿದ ಪ್ರದೇಶಗಳಿಗೆ ರೈಲಿನ ನರನಾಡಿಗಳನ್ನು ವಿಸ್ತರಿಸಿ, ಅಭಿವೃದ್ಧಿಯ ರಕ್ತಸಂಚಾರ ಮಾಡಿಸುವುದು ಸರಕಾರದ ಕರ್ತವ್ಯವಾಗಿತ್ತು. 
ಆದರೆ ಅಂತಹ ಯಾವ ಪ್ರಯತ್ನವೂ ಈ ಬಜೆಟ್‌ನಲ್ಲಿ ಕಾಣುತ್ತಿಲ್ಲ ಎನ್ನುವುದು ನಿಜ.ಸಿಕ್ಕಿದ್ದು ಸೀರುಂಡೆ ಎಂದು ಕರ್ನಾಟಕದ ಜನತೆ, ಸಿಕ್ಕಿದ್ದಷ್ಟಕ್ಕೇ ಸಂತೋಷ ಪಡಬೇಕು. ಈ ಹಿಂದೆ ಎನ್‌ಡಿಎ ಸರಕಾರವಿದ್ದಾಗಲೂ ಕರ್ನಾಟಕಕ್ಕೆ ದೊರಕಿದ್ದು ಅಷ್ಟಕ್ಕಷ್ಟೇ. ಕೇಂದ್ರ-ರಾಜ್ಯದ ತಿಕ್ಕಾಟದಲ್ಲಿ ಕರ್ನಾಟಕ ಸದಾ ಬಡವಾಗುತ್ತಲೇ ಬಂದಿದೆ. ದಿನಾ ಸಾಯುವವರಿಗೆ ಅಳುವವರು ಯಾರು ಅಲ್ಲವೆ?

No comments:

Post a Comment