Monday, February 25, 2013

ಸಿರಿಯಾ: ಸಾಮ್ರಾಜ್ಯಶಾಹಿ ಹಸ್ತಕ್ಷೇಪ ಬೇಡಅರಬ್ ರಾಷ್ಟ್ರಗಳ ಪೈಕಿ ಇದೀಗ ಅಮೆರಿಕದ ನಿಯಂತ್ರಣಕ್ಕೆ ಒಳಪಡದೆ ಸ್ವತಂತ್ರ ವಾಗುಳಿದಿರುವ ಎರಡೇ ಎರಡು ದೇಶ ಗಳೆಂದರೆ ಸಿರಿಯಾ ಮತ್ತು ಇರಾನ್. ಇವರೆಡನ್ನು ಬಿಟ್ಟರೆ ಉಳಿದ ದೇಶಗಳು ವಾಶಿಂಗ್ಟನ್‌ನ ಸೂತ್ರದ ಬೊಂಬೆಗಳಂತೆ ಕುಣಿದಾಡುತ್ತಿವೆ. ಹೀಗೆ ಕುಣಿದಾಡಲು ನಿರಾಕರಿಸಿದ ಇರಾಕ್ ಮತ್ತು ಲಿಬಿಯಾಗಳನ್ನು ಅಮೆರಿಕನ್ ಸಾಮ್ರಾಜ್ಯಶಾಹಿ ಈಗಾಗಲೇ ಮುಗಿಸಿದೆ. ಆ ದೇಶಗಳ ನಾಯಕರಾಗಿದ್ದ ಸದ್ದಾಂ ಹುಸೈನ್ ಮತ್ತು ಗದಾಫಿಯನ್ನು ನಿರ್ದಯವಾಗಿ ಕೊಂದು ಹಾಕಿತ್ತು. ಹೀಗಾಗಿ ಆ ತೈಲ ಸಂಪನ್ನ ರಾಷ್ಟ್ರಗಳು ಅಮೆರಿಕದ ವಶಕ್ಕೊಳಪಟ್ಟಿವೆ. ಅಲ್ಲಿನ ತೈಲಸಂಪತ್ತಿನ ಲೂಟಿ ಅವ್ಯಾಹತವಾಗಿ ನಡೆದಿದೆ.ಅಮೆರಿಕದ ನಿಯಂತ್ರಣಕ್ಕೆ ಒಳಪಡದ ಅಮೂಲ್ಯವಾದ ತೈಲ ಸಂಪತ್ತಿನ ಲೂಟಿಗೆ ಅವಕಾಶ ನೀಡದ ಸಿರಿಯಾ ಮತ್ತು ಇರಾನ್‌ಗಳನ್ನು ಮುಗಿಸಲು ಸಾಮ್ರಾಜ್ಯಶಾಹಿ ಹುನ್ನಾರ ನಡೆಸುತ್ತಲೇ ಬಂದಿದೆ. ಯಾದವಿ ಕಲಹದಿಂದ ಅಪಾಯದಲ್ಲಿರುವ ಸಿರಿಯಾ ಪಾಶ್ಚಿಮಾತ್ಯ ದೇಶಗಳ ಸೇನಾಹಸ್ತಕ್ಷೇಪಕ್ಕೆ ಬಲಿಯಾಗುವ ಎಲ್ಲ ಆತಂಕಕಾರಿ ಸೂಚನೆಗಳು ಕಂಡುಬರುತ್ತಿವೆ.
ಒಂದೊಮ್ಮೆ ಸಿರಿಯಾವನ್ನು ಮುಗಿಸಿಬಿಟ್ಟರೆ ನಂತರ ಇರಾನ್‌ನನ್ನು ಸುಲಭವಾಗಿ ಹೊಸಕಿ ಹಾಕಬಹುದೆನ್ನುವುದು ಅಮೆರಿಕದ ಲೆಕ್ಕಾಚಾರವಾಗಿದೆ.ಇವೆರಡು ದೇಶಗಳನ್ನು ಆಕ್ರಮಿಸಿಕೊಂಡು ಬಿಟ್ಟರೆ  ಇಡೀ ಅರಬ್ ಭೂಭಾಗ ವಾಶಿಂಗ್ಟನ್‌ನ ನಿಯಂತ್ರಣಕ್ಕೆ ಒಳಪಡುತ್ತದೆ.ಸಿರಿಯಾದ ಆಂತರಿಕ ಬಿಕ್ಕಟ್ಟನ್ನು ದುರುಪಯೋಗಪಡಿಸಿಕೊಂಡು ಆ ದೇಶದ ಮೇಲೆ ದಾಳಿ ನಡೆಸಲು ಇಸ್ರೇಲ್ ಹುನ್ನಾರ ನಡೆಸುತ್ತಿದೆ. ಆದರೆ ಒಂದು ದೇಶದ ಆಂತರಿಕ ಬಿಕ್ಕಟ್ಟಿಗೆ ಸೇನಾ ಕಾರ್ಯಾಚರಣೆ ಪರಿಹಾರ ವಲ್ಲ.
ಪ್ರಜಾಪ್ರಭುತ್ವ ಸ್ಥಾಪನೆ ಹೆಸರಿನಲ್ಲಿ ನಡೆಯುವ ಇಂತಹ ಸೇನಾ ಕಾರ್ಯಾಚರಣೆಯಲ್ಲಿ ಜನಸಾಮಾನ್ಯರ ಮಾರಣಹೋಮ ನಡೆಯುತ್ತದೆ. ಇರಾಕ್ ಮತ್ತು ಲಿಬಿಯಾಗಳು ಇದಕ್ಕೆ ಪ್ರತ್ಯಕ್ಷ ಉದಾಹರಣೆಗಳಾಗಿವೆ. ಆದ್ದರಿಂದ ಸಿರಿಯಾದ ಸಮಸ್ಯೆಗೆ ಸಂಧಾನ ಮಾರ್ಗವೊಂದೇ ಪರಿಹಾರವಾಗಿದೆ.
ಆದರೆ ಇಂತಹ ಸಂಧಾನ ಮಾರ್ಗ ಅಮೆರಿಕಕ್ಕೆ ಬೇಕಾಗಿಲ್ಲ. ಸಿರಿಯಾದ ವಿರೋಧಿ ಬಂಡುಕೋರ ಗುಂಪುಗಳಿಗೆ ಏಕೈಕ ಪ್ರಾತಿನಿಧಿಕ ಸಂಸ್ಥೆಯೆಂದು ಬರಾಕ್ ಒಬಾಮ ಆಡಳಿತ ಅಧಿಕೃತ ಮನ್ನಣೆ ನೀಡಿದೆ. ಬ್ರಿಟನ್, ಫ್ರಾನ್ಸ್ ಹಾಗೂ ಪರ್ಶಿಯನ್ ಕೊಲ್ಲಿ ಪ್ರದೇಶದ ರಾಜಪ್ರಭುತ್ವಗಳು ಈ ಬಂಡುಕೋರ ಗುಂಪುಗಳಿಗೆ  ಮಾನ್ಯತೆ ನೀಡಿವೆ. ಸಿರಿಯಾದ ಬಂಡುಕೋರ ಗುಂಪುಗಳು ಒಂದು ಗೂಡಿರುವುದರ ಹಿಂದೆ ಪಾಶ್ಚಿಮಾತ್ಯ ದೇಶಗಳ ಕೈವಾಡವಿದೆ.
ಸಿರಿಯಾದಲ್ಲಿನ ಆಂತರಿಕ ಯುದ್ಧ ಮತ್ತು ಆರ್ಥಿಕ ದಿಗ್ಬಂಧನದಿಂದಾಗಿ ಅಲ್ಲಿನ ಜನಸಾಮಾನ್ಯರು ತೀವ್ರ ತೊಂದರೆಗೆ ಒಳಗಾಗಿದ್ದಾರೆ. ಸಾವಿರಾರು ಮಂದಿ ಈಗಾಗಲೇ ಕೊಲ್ಲಲ್ಪಟ್ಟಿದ್ದಾರೆ. ಹತ್ತಾರು ಸಾವಿರ ಜನ ನಿರಾಶ್ರಿತರಾಗಿದ್ದಾರೆ. ಸಿರಿಯಾದಲ್ಲಿನ ಬಾಹ್ಯ ಹಸ್ತಕ್ಷೇಪದ ವಿರುದ್ಧ ರಶ್ಯ ಸೇರಿದಂತೆ ಕೆಲ ದೇಶಗಳು ಧ್ವನಿಯೆತ್ತಿವೆ. ಈ ಹಸ್ತಕ್ಷೇಪವನ್ನು ಇಡೀ ಜಗತ್ತು ಒಕ್ಕೊರಲಿನಿಂದ ವಿರೋಧಿ ಸಬೇಕಾಗಿದೆ. ಸಿರಿಯಾದ ಆಡಳಿತದ ಪ್ರಕಾರ ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ ಯಾವುದೇ ಕ್ಷಣದಲ್ಲಾದರೂ ಪಾಶ್ಚಿಮಾತ್ಯ ಸಾಮ್ರಾಜ್ಯಶಾಹಿ ಶಕ್ತಿಗಳು ಸೇನಾ ಕಾರ್ಯಾಚರಣೆ ನಡೆಸುವ ಅಪಾಯವಿದೆ.
ಈಗ ಅಧಿಕಾರದಲ್ಲಿರುವ ಬಶರ್ ಅಲ್ ಅಸ್ಸಾದ್ ತಮ್ಮ ಅಧಿಕಾರಾವಧಿಯಲ್ಲಿ  ಸಿರಿಯಾದಲ್ಲಿ ಸಾಕಷ್ಟು ಸುಧಾರಣೆಗಳನ್ನು ತಂದಿದ್ದಾರೆ. ತೈಲ ಸಂಪತ್ತಿನಿಂದ  ಕೂಡಿದ ದೇಶದಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದಾರೆ. ಅದೇ ರೀತಿ ಇಸ್ರೇಲ್‌ನ ಜನಾಂಗವಾದಿ ಹಾಗೂ ವಿಸ್ತರಣವಾದಿ ನೀತಿ ವಿರುದ್ಧ ಅಸಾದ್ ಸರಕಾರ ಧ್ವನಿಯೆತ್ತಿ ಪ್ರತಿಭಟಿಸಿದೆ. ಫೆಲೆಸ್ತೀನ್ ಸ್ವತಂತ್ರ ರಾಷ್ಟ್ರಕ್ಕೆ ಬೆಂಬಲ ನೀಡಿದೆ. ಈ ಸ್ವತಂತ್ರ ಹಾಗೂ ಸ್ವಾಭಿಮಾನಿ ನೀತಿಯು ಸಿರಿಯಾಕ್ಕೆ ಮುಳುವಾಗಿ ಪರಿಣಮಿಸಿದೆ. ತಮ್ಮ ಆಣತಿಯಂತೆ ನಡೆದುಕೊಳ್ಳದ ಸಿರಿಯಾದ ವಿರುದ್ಧ ಅಮೆರಿಕ ನೇತೃತ್ವದ ಸಾಮ್ರಾಜ್ಯಶಾಹಿ ಶಕ್ತಿಗಳು ಪಿತೂರಿ ನಡೆಸಿವೆ.
ಇಂತಹ ಸನ್ನಿವೇಶದಲ್ಲಿ ವಿಶ್ವಸಂಸ್ಥೆ ಮಧ್ಯಪ್ರವೇಶ ಮಾಡಬೇಕು. ವಿದೇಶಿ ಸೇನಾ ಆಕ್ರಮಣದ ಅಪಾಯದ ಅಂಚಿನಲ್ಲಿರುವ ಸಿರಿಯಾವನ್ನು ರಕ್ಷಿಸಬೇಕು. ಅಲ್ಲಿನ ಅಸ್ಸಾದ್ ಸರಕಾರ ಹಾಗೂ ವಿರೋಧಿ ಬಂಡುಕೋರ ಬಣಗಳ ನಡುವೆ ಮಾತುಕತೆ ನಡೆಯಬೇಕು.ವಿಶ್ವಸಂಸ್ಥೆ ಅಂತಹ ಮಾತುಕತೆ ನಡೆಯಲು ವೇದಿಕೆ ಸಿದ್ಧಮಾಡುವುದು ಅಗತ್ಯವಾಗಿದೆ.
ಆದರೆ ಸೋವಿಯತ್ ರಶ್ಯದ ಪತನದ ನಂತರ ವಿಶ್ವಸಂಸ್ಥೆಯನ್ನು ನಿಯಂತ್ರಿಸುತ್ತಿರುವ ಅಮೆರಿಕನ್ ಸಾಮ್ರಾಜ್ಯಶಾಹಿ ಶಕ್ತಿಗಳು ಇಂತಹ ಸಂಧಾನ ಪ್ರಕ್ರಿಯೆಗೆ ಅವಕಾಶ ನೀಡುವುದಿಲ್ಲ. ಇದಕ್ಕೆ ಇರಾನ್ ಮತ್ತು ಸಿರಿಯಾಗಳು ಪ್ರತ್ಯಕ್ಷ ಉದಾಹರಣೆಗಳಾಗಿವೆ. ಇಂತಹ ಪರಿಸ್ಥಿತಿಯಲ್ಲಿ ರಶ್ಯ ಮತ್ತು ಚೀನಾ ಸೇರಿದಂತೆ ಜಗತ್ತಿನ ಉಳಿದ ದೇಶಗಳು ಸುಮ್ಮನಿರಬಾರದು. ವಿಶ್ವಂಸ್ಥೆಯ ಮೇಲೆ ಒತ್ತಡ ತಂದು ಸಿರಿಯಾ ಸಮಸ್ಯೆಯನ್ನು ಶಾಂತಿಯುತವಾಗಿ ಇತ್ಯರ್ಥಪಡಿಸಲು ಮುಂದಾಗಬೇಕಾಗಿದೆ. ಈ ನಿಟ್ಟಿನಲ್ಲಿ ಭಾರತವು ಕೂಡ ತನ್ನ ಸ್ಪಷ್ಟ ನಿಲುವನ್ನು ಪ್ರಕಟಿಸಬೇಕಾಗಿದೆ. ಹೀಗೆ ಜಗತ್ತಿನ ಒತ್ತಡ ಬಂದರೆ ಮಾತ್ರ ಸಾಮ್ರಾಜ್ಯಶಾಹಿ ದುರಾಕ್ರಮಣದಿಂದ ಸಿರಿಯಾವನ್ನು ಪಾರು ಮಾಡಲು ಸಾಧ್ಯ.

No comments:

Post a Comment