Tuesday, February 26, 2013

ಮತ್ತೆ ತಲೆಯೆತ್ತಿದ ಅಕ್ಷರ ಭಯೋತ್ಪಾದಕರುಪ್ರಕರಣದ ವಿಚಾರಣೆಯನ್ನು ಪತ್ರಿಕೆಗಳೇ ನಡೆಸಿ, ತೀರ್ಪು ನೀಡುವುದರ ಬಗ್ಗೆ ಭಾರತದ ಮುಖ್ಯ ನ್ಯಾಯಮೂರ್ತಿ ಅಲ್ತಮಶ್ ಕಬೀರ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.  ಇತ್ತೀಚೆಗೆ ವಿಚಾರ ಸಂಕಿರಣವೊಂದನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು,  ಮಾಧ್ಯಮಗಳೇ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದು ತೀರಾ ಆತಂಕಕಾರಿ ವಿಚಾರ ಎಂದಿದ್ದಾರೆ ಮಾತ್ರವಲ್ಲದೆ, ಇದರಿಂದಾಗಿ ಆರೋಪಿಗಳ ವಿರುದ್ಧ ಪೂರ್ವಗ್ರಹ ಪೀಡಿತ ಅಭಿಪ್ರಾಯವುಂಟಾಗುವ ಸಾಧ್ಯತೆಯಿದೆ ಎಂದು  ಅಭಿಪ್ರಾಯ ಪಟ್ಟಿದ್ದಾರೆ. ಪತ್ರಿಕೆಗಳು ತಮ್ಮ ನೈತಿಕ ಗಡಿರೇಖೆಗಳನ್ನು ದಾಟಿ ಕೆಲಸ ಮಾಡುತ್ತಿವೆಯೋ ಎಂದರೆ, ಹೌದು ಎನ್ನಬೇಕಾಗಿದೆ. ಪತ್ರಿಕೆಯ ಕೆಲಸ, ವಸ್ತುನಿಷ್ಠವಾದ ವರದಿಗಳನ್ನು ನೀಡುವುದೇ ಹೊರತು, ಒಂದು ಪ್ರಕರಣವನ್ನು ವಿಚಾರಣೆ ನಡೆಸಿ ಯಾರು ಕಳ್ಳರು, ಯಾರು ಉಗ್ರರು ಎಂದು ತೀರ್ಪು ನೀಡುವುದಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳ  ಎಲ್ಲೆ ಮೀರಿದ ಕೃತ್ಯ ಗಳಿಂದಾಗಿ ನೂರಾರು ಅಮಾಯಕರು ಸಂತ್ರಸ್ತರಾಗುತ್ತಿದ್ದಾರೆ. ವರದಿ ಬರೆಯುವುದೆಂದರೆ, ತಮಗೆ ತೋಚಿದ ಕಪೋಲಕಲ್ಪಿತ ಕತೆಗಳನ್ನು ಬರೆಯುವುದೆಂದೇ ಹೊಸ ತಲೆಮಾರಿನ ಪತ್ರಕರ್ತರು ತಿಳಿದುಕೊಂಡಂತಿದೆ.
ಯಾವುದೇ ಅಧಿಕೃತ ದಾಖಲೆಗಳಿಲ್ಲದೆ, ಬಲ್ಲ ಮೂಲಗಳಿಂದ ಎಂಬ ಅಡಿಬರಹದಲ್ಲಿ  ಏನು ಬರೆದರೂ ಅದನ್ನು ಕೇಳುವವರಿಲ್ಲ ಎಂಬ ಉಡಾಫೆ ಪತ್ರಿಕೋದ್ಯಮ ವನ್ನು ಆವರಿಸಿಕೊಂಡಿದೆ. ಆದುದರಿಂದಲೇ, ಒಂದು ಬಾಂಬ್ ಸ್ಫೋಟ ನಡೆದರೆ, ತಮಗೆ ತೋಚಿದಂತೆ ಅದರ ಕುರಿತಂತೆ ತನಿಖೆ ನಡೆಸಿ, ಇಂತಹ ಸಂಘಟನೆಗಳೇ ಅಪರಾಧಿಗಳು ಎಂದು ಘೋಷಿಸಿ ಬಿಡುತ್ತವೆ. ಪೊಲೀಸರು, ನ್ಯಾಯಾಧೀಶರು ಮಾಡಬೇಕಾದ ಕೆಲಸವನ್ನು ಪತ್ರಿಕೆಗಳು ಮಾಡುತ್ತಿವೆ. ಇದು ಪರೋಕ್ಷವಾಗಿ ನಿಜವಾದ ತನಿಖೆಯ ಹಾದಿ ತಪ್ಪಿಸುವ ಉದ್ದೇಶ ವನ್ನು ಹೊಂದಿದೆ.
ಈ ಹಿಂದು ಸಂಜೋತಾ ಎಕ್ಸ್‌ಪ್ರೆಸ್ ಮೇಲೆ ಬಾಂಬ್ ದಾಳಿ ನಡೆದಾಗ, ಮಕ್ಕಾ ಮಸೀದಿ, ಅಜ್ಮೀರ್ ಸ್ಫೋಟಗಳು ನಡೆದಾಗಲೂ ಮಾಧ್ಯಮಗಳೇ ತನಿಖೆ ನಡೆಸಿ ಹಲವು ಅಮಾಯಕರನ್ನು ಉಗ್ರರೆಂದು ಬರೆದಿದ್ದವು. ಪೊಲೀಸರೂ ಇದೇ ದಾರಿಯಲ್ಲಿ ನಡೆದು ಹಲವರನ್ನು ಬಂಧಿಸಿ ಅವರ ಮೇಲೆ ಕೇಸು ದಾಖಲಿಸಿದರು. ಆದರೆ ಬಳಿಕ ಅವರನ್ನೆಲ್ಲ ಬಿಡುಗಡೆ ಮಾಡಲಾಯಿತು. ಆಂಧ್ರ ಪ್ರದೇಶ ಸರಕಾರ ಕ್ಷಮೆಯನ್ನೂ ಯಾಚಿಸಿತು.
ಇದೀಗ ಹೈದರಾಬಾದ್ ಸ್ಫೋಟದಲ್ಲೂ ಅದುವೇ ನಡೆಯುತ್ತಿದೆ. ಪೊಲೀಸರ ತನಿಖೆಗಿಂತ ವೊದಲೇ ಪತ್ರಿಕೆಗಳು ತಮ್ಮ ತನಿಖೆಯನ್ನು ನಡೆಸಿ ಇಂಥವರೇ ಅಪರಾಧಿಗಳು ಎಂದು ಘೋಷಿಸ ತೊಡಗಿವೆ. ಇನ್ನೇನು ಅವರಿಗೆ ಶಿಕ್ಷೆ ವಿಧಿಸಲಷ್ಟೇ ಬಾಕಿ. ಕೆಲವು ಇಲಾಖೆಗಳು ಇದಕ್ಕೆ ಪೂರಕವಾಗಿ ತಾಳ ಹಾಕುತ್ತಿವೆ. ಈಗಾಗಲೇ ಬೇರೆ ಬೇರೆ ಉಗ್ರರ ಸಂಘಟನೆಗಳ ಹೆಸರನ್ನು ಘಟನೆಗೆ ಸಂಬಂಧಿಸಿ ತೇಲಿ ಬಿಡಲಾಗುತ್ತಿದೆ.
ವಿವಿಧ ಪ್ರಾದೇಶಿಕ ಪತ್ರಿಕೆಗಳು, ಟಿವಿ ಚಾನಲ್‌ಗಳು ಜನರಿಗೆ ‘ರೋಚಕ’ ಸುದ್ದಿಗಳನ್ನು ನೀಡುವ ಆತುರದಲ್ಲಿ ಇಡೀ ತನಿಖೆಯ ದಾರಿಯನ್ನು ತಪ್ಪಿಸುತ್ತಿವೆ. ಅಥವಾ ತನಿಖೆಯ ಮೇಲೆ ಒತ್ತಡವನ್ನು ಹೇರುತ್ತಿವೆ. ಸ್ಫೋಟ ನಡೆದ ಕೇವಲ ಒಂದು ತಾಸಿನೊಳಗಿನ ಅವಧಿಯಲ್ಲಿ ತೆಲುಗಿನ ಟಿ. ವಿ. ಚಾನಲ್ ಒಂದು, ಉಗ್ರಗಾಮಿ ಸಂಘಟನೆಯ ಹೆಸರನ್ನೂ ಹೇಳಿ ಬಿಟ್ಟಿತು. ಗುಪ್ತಚರದಳದಿಂದ ಉಗ್ರಗಾಮಿ ಸಂಘಟನೆಯ ಹೆಸರು ಬಹಿರಂಗ ಎಂದೂ ಹೇಳಿ ಬಿಟ್ಟಿತು. ತೆಲುಗು ವಾರ್ತಾ ಮಾಧ್ಯಮವೊಂದು ದಿಲ್‌ಖುಶ್ ನಗರ ಪ್ರದೇಶದ ಮಲಾಕ್‌ಪೇಟ್ ಮತ್ತು ಮೌಸಾರಂಬಾಗ್‌ನಲ್ಲಿ ವಾಸಿಸುತ್ತಿರುವ ಮುಸ್ಲಿಮ್ ನಿವಾಸಿಗಳು ಸ್ಫೋಟದ ಹಿಂದಿದ್ದಾರೆ ಎನ್ನುವ ವರದಿಯನ್ನು ತೇಲಿ ಬಿಟ್ಟಿತು.
ಇದು ಅಲ್ಲಿನ ಸ್ಥಳೀಯರಿಗೆ ತೀವ್ರ ಮುಜುಗರವನ್ನುಂಟು ಮಾಡಿತು ಮಾತ್ರವಲ್ಲ, ಅವರೆಲ್ಲ ಪೊಲೀಸರಿಗೆ ಹೆದರುತ್ತಾ ಕಾಲ ಕಳೆಯಬೇಕಾಯಿತು.ಸ್ಫೋಟ ನಡೆದ ಕೆಲವೇ ಗಂಟೆಗಳಲ್ಲಿ ಟಿ.ವಿ. ಮಾಧ್ಯಮಗಳು ಮತ್ತು ಮರುದಿನ ಮುದ್ರಣ ಮಾಧ್ಯಮಗಳು ಅಜ್ಮಲ್ ಕಸಬ್ ಹಾಗೂ ಅಫ್ಝಲ್ ಗುರು ಮರಣದಂಡನೆಗೆ ಪ್ರತೀಕಾರ ವಾಗಿ ಲಷ್ಕರೆ ತಯ್ಯಿಬಾ ಈ ಸ್ಫೋಟಗಳನ್ನು ನಡೆಸಿದೆ ಎಂಬಂತಹ ಸುದ್ದಿಗಳನ್ನು ನೀಡಿದವು.
ಪೊಲೀಸರೇ ಈ ವರದಿಗಳಿಂದ  ಅವಾಕ್ಕಾಗಿದ್ದರು. ವಿವಿಧ ವಾರ್ತಾಮಾಧ್ಯಮಗಳಿಗೆ ಈ ರೀತಿ ಬಾಲಿಶ ಹೇಳಿಕೆ ನೀಡಲು ಪ್ರೇರೇಪಿಸಿದ್ದು ಆರೆಸ್ಸೆಸ್ ಮುಖವಾಣಿಯಾಗಿರುವ ಶ್ರೀರಾಮ್ ಚಾನಲ್.  ಅದು ತನ್ನ ವರದಿಯಲ್ಲಿ ಅಫ್ಝಲ್ ಗುರುವನ್ನು ಗಲ್ಲಿಗೇರಿಸಿದ್ದಕ್ಕೆ ಸೇಡು ತೀರಿಸಲೋಸುಗ ಓಲ್ಡ್ ಸಿಟಿ ಭಯೋತ್ಪಾದಕರು ನಡೆಸಿದ ಸ್ಫೋಟ ಇದು ಎಂದು ಸುಳ್ಳನ್ನು ತೇಲಿ ಬಿಟ್ಟರೆ, ಉಳಿದ ಮಾಧ್ಯಮಗಳು ಅವುಗಳನ್ನು ಪ್ರಸಾದವೆಂಬಂತೆ ಸ್ವೀಕರಿಸಿ ಪ್ರಸಾರಮಾಡಿದವು. ಯಾವ ಉಗ್ರಗಾಮಿಗಳು ಇದರ ಹಿಂದೆ ಇದ್ದಾರೆ ಎನ್ನುವುದು ತಿಳಿದಿಲ್ಲ ಎಂದು ಪೊಲೀಸರು ಸ್ಪಷ್ಟವಾಗಿ ಹೇಳುತ್ತಿದ್ದರೂ, ಮಾಧ್ಯಮಗಳು ಇಂಡಿಯನ್ ಮುಜಾಹಿದೀನ್ ಎಂಬಿತ್ಯಾದಿ ಹೆಸರನ್ನು ಜಪಿಸುತ್ತಲೇ ಇದ್ದವು.
ಪರಿಣಾಮವಾಗಿ ಜನರನ್ನು ಸಂತೃಪ್ತಿ ಪಡಿಸಲು ಹೈದರಾಬಾದ್‌ನ ಹಲವು ಮುಸ್ಲಿಮ್ ತರುಣರನ್ನು ಬಂಧಿಸಿ, ಎರಡು ದಿನ ಜೈಲಲ್ಲಿಟ್ಟು ವಿಚಾರಣೆಯ ನಾಟಕವಾಡಿ ಬಿಡುಗಡೆ ಮಾಡಲಾಯಿತು. ದುರದೃಷ್ಟವೆಂದರೆ, ಪೊಲೀಸರು ವಶಪಡಿಸಿಕೊಂಡ ಈ ನಿರಪರಾಧಿಗಳ ಬಗ್ಗೆಯೂ ಪತ್ರಿಕೆಗಳು ಬಾಯಿಗೆ ಬಂದಂತೆ ವಾಂತಿಮಾಡಿಕೊಂಡವು. ಈ ಹಿಂದೆ ಮಕ್ಕಾ ಮಸೀದಿ ಸ್ಫೋಟದ ಸಂದರ್ಭದಲ್ಲಿ ಏನು ನಡೆಯಿತೋ ಅದುವೇ ಹೈದರಾಬಾದ್ ಸ್ಫೋಟದಲ್ಲೂ ಮರುಕಳಿಸಿದೆ. ಮಾಧ್ಯಮಗಳು ಹಿಂದಿನ ತಪ್ಪಿನಿಂದ ಪಾಠ ಕಲಿತಿಲ್ಲ ಎಂಬುದರ ಅರ್ಥವಾದರೂ ಏನು? ಪಾಠ ಕಲಿಯುವುದು ಅವುಗಳಿಗೆ ಬೇಕಿಲ್ಲ.
ಉದ್ದೇಶಪೂರ್ವಕವಾಗಿಯೇ ಇವುಗಳು ತನಿಖೆಯನ್ನು ದಾರಿ ತಪ್ಪಿಸಲು ಮುಂದಾಗಿವೆ. ಪೊಲೀಸರು, ಕಾನೂನು ವ್ಯವಸ್ಥೆ ಪತ್ರಿಕೆಗಳ ಈ ಬೇಜವಾಬ್ದಾರಿತನವನ್ನು ಗಂಭೀರವಾಗಿ ಸ್ವೀಕರಿಸಬೇಕಾಗಿದೆ. ಬಾಯಿಗೆ ಬಂದಂತೆ ಬೊಗಳುವ ಪತ್ರಿಕೆಗಳ ವಿರುದ್ಧ ಕಟುವಾಗಿ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕಾಗಿದೆ. ತಮ್ಮ ಅಕ್ಷರ ಭಯೋತ್ಪಾದನೆಗೆ ಕಡಿವಾಣ ಹಾಕಿಕೊಳ್ಳದೇ ಇದ್ದರೆ, ಮುಂದಿನ ದಿನಗಳಲ್ಲಿ ಪತ್ರಿಕೆಗಳು ಚಾನಲ್‌ಗಳ ವಿಶ್ವಾಸಾರ್ಹತೆಯನ್ನು ಸಂಪೂರ್ಣ ಕಳೆದುಕೊಂಡು, ಜನತೆಯ ಮುಂದೆ ನಗೆಪಾಟಲಿಗೀಡಾಗಬೇಕಾಗುತ್ತವೆ

No comments:

Post a Comment