Saturday, February 23, 2013

ಸರಕಾರವೆಂಬ ಹೆಣ ಇನ್ನೆಷ್ಟು ಕೊಳೆಯಬೇಕು?ಹೈದರಾಬಾದ್ ಸ್ಫೋಟದ ಗದ್ದಲದಲ್ಲಿ, ರಾಜ್ಯ ಸರಕಾರದೊಳಗೆ ನಡೆದ ಸಣ್ಣದೊಂದು ಕಂಪನ ಯಾರ ಗಮನವನ್ನೂ ಸೆಳೆದಂತಿಲ್ಲ. ಮತ್ತಿಬ್ಬರು ಸಚಿವರು ಬಿಜೆಪಿಗೆ ರಾಜೀನಾಮೆ ನೀಡಿರುವುದು ಸಣ್ಣ ವಿಷಯವೇನೂ ಅಲ್ಲ. ಸಚಿವರಾದ ಸಿ.ಪಿ. ಯೋಗೇಶ್ವರ್ ಮತ್ತು ರಾಜೂಗೌಡ ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗೂ ಸಚಿವ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ. ಹಾಗೆಯೇ ಇಂದು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಅಷ್ಟೇ ಅಲ್ಲ, ಯೋಗೇಶ್ವರ್ ಅವರು ತಮ್ಮ ನೆಲೆಯನ್ನು ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡೂ ಇದ್ದಾರೆ. ಪರಿಣಾಮವಾಗಿ, ಆಡಳಿತರೂಢ ಬಿಜೆಪಿ ಸರಕಾರದ ಸಂಖ್ಯಾ ಬಲ ಇನ್ನಷ್ಟು ಕುಸಿದಂತಾಗಿದೆ. ಸಾಲು ಸಾಲಾಗಿ ಸಚಿವರೇ ರಾಜೀನಾಮೆ ನೀಡುತ್ತಿರುವುದರಿಂದ, ಸರಕಾರ ಪರೋಕ್ಷವಾಗಿ ತನ್ನ ಅಸ್ತಿತ್ವವನ್ನೇ ಕಳೆದು ಕೊಳ್ಳುತ್ತಿದೆ. ಅಧಿಕೃತವಾಗಿ ಸರಕಾರ ಕುಸಿದಿಲ್ಲ ಎನ್ನುವುದನ್ನು ಬಿಟ್ಟರೆ, ಈ ಅವಸ್ಥೆಯಲ್ಲಿ ಒಂದು ಸರಕಾರ ಮುಂದುವರಿಯುವುದು ನಿಜಕ್ಕೂ ನಗೆಪಾಟಲಿನ ವಿಷಯವಾಗಿದೆ.
ಈವರೆಗೆ ಬಜೆಟ್ ಮಂಡಿಸುವುದು ಸರಕಾರದ ಪಾಲಿಗೆ ಪ್ರತಿಷ್ಠೆಯ ವಿಷಯ ವಾಗಿತ್ತು. ಶೆಟ್ಟರ್ ಮತ್ತು ಯಡಿಯೂರಪ್ಪ ನಡುವೆ ಈ ಕುರಿತು ಹಗ್ಗಜಗ್ಗಾಟ ನಡೆದಿತ್ತು. ಕೊನೆಗೂ ಸರಕಾರ ಬಜೆಟ್ ಮಂಡಿಸಿಯೇ ಬಿಟ್ಟಿತು. ಇದಾದ ಬಳಿಕ ಯಡಿಯೂರಪ್ಪ ಮೌನಕ್ಕೆ ಶರಣಾಗಿದ್ದಾರೆ. ಆದರೆ ಬಿಜೆಪಿಯೊಳಗಿನ ಭಿನ್ನಮತ ಮಾತ್ರ ಮೌನವಾದಂತಿಲ್ಲ. ಬಿಜೆಪಿಯ ಹಿರಿಯ ನಾಯಕ ಡಿ.ವಿ.ಸದಾನಂದ ಗೌಡ ಅವರೇ ಪಕ್ಷ ಬಿಡುವ ವದಂತಿ ಹರಡುತ್ತಿರುವಾಗ, ಇನ್ನುಳಿದವರ ಪಾಡೇನಾಗಬೇಕು?
ಶೆಟ್ಟರ್ ಕುರಿತಂತೆ ಡಿವಿ ಕೂಡ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿ ದ್ದಾರೆ. ಇಂತಹ ವಾತಾವರಣದಲ್ಲಿ ಸುಗಮ ವಾದ ಆಡಳಿತವನ್ನು ನೀಡುವುದು ಎಷ್ಟರ ಮಟ್ಟಿಗೆ ಸಾಧ್ಯ? ಇವೆಲ್ಲದರಿಂದ ಪಾರಾಗಲು, ಬಜೆಟ್ ಅಧಿವೇಶನ ಮುಗಿದಾಕ್ಷಣ ಸರಕಾರವನ್ನು ವಿಸರ್ಜಿಸುವ ಒಂದು ಅಭಿಪ್ರಾಯ ವರಿಷ್ಠರಲ್ಲಿತ್ತು. ಆದರೆ ಇದೀಗ ಸರಕಾರ ವಿಸರ್ಜಿಸುವುದು ಬಿಜೆಪಿಯೊಳಗಿನ ಕೆಲವರಿಗೆ ಇಷ್ಟವಿದ್ದಂತಿಲ್ಲ.
ಒಂದು ವೇಳೆ ಸರಕಾರ ವಿಸರ್ಜಿಸಿದ್ದೇ ಆದರೆ ಇನ್ನಷ್ಟು ಮಂದಿ ವಲಸೆ ಹೋಗಬಹುದು ಎನ್ನುವುದು ಬಿಜೆಪಿಯ ಲೆಕ್ಕಾಚಾರ. ಎಲ್ಲಕ್ಕಿಂತ ಮುಖ್ಯವಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಹತ್ತಿರವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸರಕಾರವನ್ನು ವಿಸರ್ಜಿಸಿದರೆ, ಅದು ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಮೇಲೆ ಪರಿಣಾಮ ಬೀರುವುದು ಖಚಿತ. ಅಧಿಕಾರದಲ್ಲಿದ್ದು ಕೊಂಡು ಚುನಾವಣೆಯನ್ನು ಗೆಲ್ಲುವುದು ಸುಲಭ ಎನ್ನುವುದನ್ನು ಬಿಜೆಪಿ ಈಗಾಗಲೇ ಅರಿತುಕೊಂಡಿದೆ.
ಆದುದರಿಂದಲೇ ಸ್ಥಳೀಯ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಸರಕಾರ ಅಸ್ತಿತ್ವದಲ್ಲಿ ಇರಲೇ ಬೇಕಾಗಿದೆ.ಆದರೆ ಇದೀಗ ಇಬ್ಬರು ಸಚಿವರು ರಾಜೀನಾಮೆ ನೀಡಿದ್ದಾರೆ. ಮಾತ್ರವಲ್ಲ ಇನ್ನಷ್ಟು ಜನರು ರಾಜೀನಾಮೆ ನೀಡುವ ಸಾಧ್ಯತೆಗಳು ಇಲ್ಲದಿಲ್ಲ. ಹೀಗಿರುವಾಗ ಎಷ್ಟರಮಟ್ಟಿಗೆ ಸರಕಾರವನ್ನು ಸುಭದ್ರವಾಗಿ ಕೊಂಡೊಯ್ಯ ಬಹುದು ಎನ್ನುವ ಪ್ರಶ್ನೆ ಶೆಟ್ಟರ್‌ಗೆ ಎದುರಾಗಿದೆ. ಜೊತೆಗೆ, ಕೆಲವು ಸಂಸದರ ಮೇಲೆ ಈಶ್ವರಪ್ಪ ಅವರು ವರಿಷ್ಠರಲ್ಲಿ ದೂರಿಕೊಂಡಿದ್ದಾರೆ.
ಹೀಗಿರುವಾಗ ಒಳಗೂ ಹೊರಗೂ ಶತ್ರುಗಳನ್ನು ಕಟ್ಟಿಕೊಂಡು ಇನ್ನುಳಿದ ದಿನಗಳನ್ನು ಬಿಜೆಪಿ ಸರಕಾರ ಕಳೆಯಬಹುದು ಎನ್ನುವ ಭರವಸೆ ಶೆಟ್ಟರಿಗೂ ಇದ್ದಂತಿಲ್ಲ. ತೀರಾ ಹದಗೆಟ್ಟರೆ, ರಾತ್ರೋರಾತ್ರಿ ಶೆಟ್ಟರ್ ಅವರೇ ರಾಜೀನಾಮೆ ನೀಡಿ ಯಡಿಯೂರಪ್ಪರ ಜೊತೆಗೆ ಸೇರಿಕೊಂಡರೂ ಸೇರಿಕೊಂಡಾರು. ಬಿಜೆಪಿಯೊಳಗೆ ಏನು ನಡೆಯಬಹುದು, ಏನು ನಡೆಯಲಾರದು ಎನ್ನುವುದನ್ನು ಊಹಿಸುವುದು ಕಷ್ಟ.
ಇದೇ ಸಂದರ್ಭದಲ್ಲಿ ಬಿಜೆಪಿಯ ಸಚಿವರು ಶಾಸಕರ ಪಕ್ಷಾಂತರಕ್ಕೆ ಕಾಂಗ್ರೆಸ್ ಕಾರಣ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಜೋಕು ಸಿಡಿಸಿದ್ದಾರೆ. ಸಾಧಾರಣವಾಗಿ ಅಧಿಕಾರವಿಲ್ಲದ ಪಕ್ಷದಿಂದ ಅಧಿಕಾರವಿರುವ ಪಕ್ಷದೆಡೆಗೆ ಶಾಸಕರು ಪಕ್ಷಾಂತರ ಮಾಡುವುದು ಜಾಸ್ತಿ. ಬಿಜೆಪಿ ಅಧಿಕಾರ ಹಿಡಿಯುವಾಗ ಬೇರೆ ಬೇರೆ ಪಕ್ಷಗಳಿಂದ ಅದೆಷ್ಟು ಶಾಸಕರು ಹರಿದು ಬಂದರು ಎನ್ನುವುದು ಶೆಟ್ಟರಿಗೆ ಗೊತ್ತಿಲ್ಲದಿರುವ ವಿಷಯವಲ್ಲ.
ಶಾಸಕರನ್ನು ಹಣಕೊಟ್ಟು ಕೊಂಡುಕೊಳ್ಳುವ ಈ ವ್ಯವಹಾರಕ್ಕೆ ಆಪರೇಷನ್ ಕಮಲ ಎಂಬ ಹೆಸರನ್ನು ಬೇರೆ ಇಡಲಾಯಿತು. ಇದನ್ನು ತಮ್ಮ ಸಾಧನೆ ಯೆಂಬಂತೆ ಬಿಜೆಪಿ ಬಿಂಬಿಸಿತು. ಇದೀಗ, ಅದೇ ತಂತ್ರ ಬಿಜೆಪಿಗೆ ಮುಳುವಾಗಿದೆ. ಇಂದು ಬಿಜೆಪಿಯ ಶಾಸಕರು ಕೇವಲ ಕಾಂಗ್ರೆಸ್‌ಗೆ ಮಾತ್ರ ಸೇರುತ್ತಿರುವುದಲ್ಲ. ಕೆಜೆಪಿ, ಜೆಡಿಎಸ್ ಸೇರಿದಂತೆ ಹಲವು ಪಕ್ಷಗಳಿಗೆ ವಲಸೆ ಹೋಗುತ್ತಿದ್ದಾರೆ. ಬಿಜೆಪಿ ಆಡಳಿತ ಪಕ್ಷವಾಗಿರುವ ಸಂದರ್ಭದಲ್ಲಿ ಇಂತಹದೊಂದು ವಲಸೆ, ರಾಜೀನಾಮೆ ಆ ಪಕ್ಷಕ್ಕೆ ಬಹುದೊಡ್ಡ ಮುಖಭಂಗ.
ಇದಕ್ಕೆ ಕಾರಣ ಸ್ವತಃ ಬಿಜೆಪಿಯೇ ಹೊರತು ಇತರ ಪಕ್ಷಗಳಲ್ಲ. ಒಂದೆಡೆ ಕಾವೇರಿ ನೀರಿನ ವಿಷಯಕ್ಕೆ ಸಂಬಂಧಿಸಿ ಕರ್ನಾಟಕಕ್ಕೆ ಭಾರೀ ಅನ್ಯಾಯವಾಗಿದೆ. ಕನಿಷ್ಠ ಈ ಅನ್ಯಾಯವನ್ನು ಮುಂದಿಟ್ಟು ಮುಖ್ಯಮಂತ್ರಿ ಶೆಟ್ಟರ್ ರಾಜೀನಾಮೆ ನೀಡಿದರೆ, ಬಿದ್ದರೂ ಮೂಗು ಮಣ್ಣಾಗಲಿಲ್ಲ ಎಂದು ಹೇಳಿಕೊಳ್ಳಬಹುದು. ಕಾವೇರಿ ತೀರ್ಪನ್ನು ಪ್ರತಿಭಟಿಸಿ ಎಲ್ಲ ಶಾಸಕರು ಒಂದಾಗಿ ರಾಜೀನಾಮೆ ನೀಡಿದರೆ, ಆ ಮೂಲಕವಾದರೂ ಕೇಂದ್ರಕ್ಕೆ ಒತ್ತಡ ಹೇರಿದಂತಾಗುತ್ತದೆ.
ಸರಕಾರದ ವಿಸರ್ಜನೆಯ ಮೂಲಕವಾದರೂ ನಾಡಿಗೆ ಒಂದಿಷ್ಟು ಪ್ರಯೋಜನ ಸಿಕ್ಕಿತು ಎಂದು ಜನರು ನಿಟ್ಟುಸಿರು ಬಿಡಬಹುದು. ಹೆಣವನ್ನು ಇನ್ನಷ್ಟು ದಿನಗಳ ಕಾಲ ಇಟ್ಟು ಕೊಳೆಸಿ, ಅದರ ವಾಸನೆಯನ್ನು ದೇಶಾದ್ಯಂತ ಹರಡುವುದಕ್ಕೆ ಬದಲು, ಆದಷ್ಟು ಬೇಗ ದಫನ ಮಾಡುವುದು ಬಿಜೆಪಿ ಪಾಲಿಗೆ ಎಲ್ಲ ರೀತಿಯಲ್ಲೂ ಒಳ್ಳೆಯದು.

No comments:

Post a Comment