Friday, February 22, 2013

ಹೈದರಾಬಾದ್‌ ಸ್ಫೋಟ: ನಿಷ್ಪಕ್ಷಪಾತ ತನಿಖೆಯಾಗಲಿಎರಡು ದಿನಗಳ ಮುಷ್ಕರ ತಣ್ಣಗಾಗುತ್ತಿದ್ದ ಹಾಗೆಯೇ ಹೈದರಾಬಾದ್‌ನಲ್ಲಿ ಸರಣಿ ಬಾಂಬ್ ಸ್ಫೋಟಿಸಿ, ದೇಶವನ್ನು ಮತ್ತೆ ತಲ್ಲಣಿಸುವಂತೆ ಮಾಡಿದೆ. 15ಕ್ಕೂ ಅಧಿಕ ಜನರು ಈ ಸ್ಫೋಟದಿಂದ ಮೃತಪಟ್ಟಿದ್ದಾರೆ. ಹೈದರಾಬಾದ್ ಕಳೆದ ಕೆಲವು ದಿನಗಳಿಂದ ದೇಶಾದ್ಯಂತ ಸುದ್ದಿಯಲ್ಲಿದೆ. ಇಲ್ಲಿನ ಶಾಸಕರೊಬ್ಬರು ಮಾಡಿದ ಉದ್ವಿಗ್ನಕಾರಿ ಭಾಷಣ ಮಾಧ್ಯಮಗಳಲ್ಲಿ ಸ್ಫೋಟಗೊಂಡು, ಅವರ ಬಂಧನವೂ ಆಯಿತು. ಇದೇ ಸಂದರ್ಭದಲ್ಲಿ ಪ್ರವೀಣ್ ತೊಗಾಡಿಯಾ ಎಂಬಾತ ಅಲ್ಲಲ್ಲಿ ತನ್ನ ಭಾಷಣಗಳ ಮೂಲಕ ಸರಣಿ ಸ್ಫೋಟಗಳನ್ನು ನಡೆಸುತ್ತಾ ಹೋದ. ಪೊಲೀಸರು ಇದಕ್ಕೆ ಮೂಕ ಸಾಕ್ಷಿಯಾದರು. ಆತನ ಮೇಲೆ ದುರ್ಬಲ ಪ್ರಕರಣವನ್ನು ದಾಖಲಿಸಿ, ಪೊಲೀಸರು ಕೈ ತೊಳೆದುಕೊಂಡರು. ಇತ್ತೀಚೆಗಷ್ಟೇ ಈ ದೇಶದ ಗೃಹ ಸಚಿವರು ಉಗ್ರರ ಕುರಿತಂತೆ ನೀಡಿದ ಹೇಳಿಕೆಯೂ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೊಳಗಾಯಿತು. ಅವರು ಹೇಳಿರುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಸಂಘಪರಿವಾರ ಮತ್ತು ಬಿಜೆಪಿ ಈ ದೇಶದಲ್ಲಿ ಭಯೋತ್ಪಾದನಾ ಶಿಬಿರಗಳನ್ನು ನಡೆಸುತ್ತಿವೆ ಎಂದಿದ್ದರು.
ಆದರೆ ಈ ಕುರಿತಂತೆ ಬಿಜೆಪಿ ಆಕ್ರೋಶಗೊಂಡು, ಶಿಂಧೆಯಿಂದ ವಿಷಾದದ ಹೇಳಿಕೆಯನ್ನು ಪಡೆಯುವಲ್ಲಿ ಕೊನೆಗೂ ಯಶಸ್ವಿ ಯಾಯಿತು. ಹೀಗೆ ಮಾಧ್ಯಮಗಳಲ್ಲಿ ಒಂದರ ಹಿಂದೆ ಒಂದರಂತೆ ಸ್ಫೋಟಗಳನ್ನು ಕಂಡು ತಲ್ಲಣಿಸಿದ ಜನರು, ಇದೀಗ ನಿಜವಾದ ಸ್ಫೋಟವನ್ನು ಎದುರಿಸಬೇಕಾಗಿದೆ. ಹೈದರಾಬಾದ್‌ನ ಸರಣಿ ಸ್ಫೋಟಗಳು ದೇಶವನ್ನು ತಲ್ಲಣಿಸುವಂತೆ ಮಾಡಿದೆ. ಸ್ಫೋಟ ನಡೆದ ಬೆನ್ನಿಗೇ ಮತ್ತೆ ಎಂದಿನಂತೆ ಮಾಧ್ಯಮಗಳು ಲಷ್ಕರ್ ತಯ್ಯಿಬಾ, ಇಂಡಿಯನ್ ಮುಜಾಹಿದೀನ್ ಎಂಬ ಹೆಸರುಗಳನ್ನು ತೇಲಿ ಬಿಡುತ್ತಿವೆ.
ಈ ಹಿಂದಿನ ಮಕ್ಕ ಮಸೀದಿ ಸ್ಫೋಟದ ಸಂದರ್ಭದಲ್ಲೂ ಹಲವು ಅಮಾಯಕರನ್ನು ಉಗ್ರಗಾಮಿಗಳೆಂದು ಬಂಧಿಸಿ, ಹಲವು ವರ್ಷ ಜೈಲಿನಲ್ಲಿ ಕೊಳೆಸಲಾಗಿತ್ತು. ಬಳಿಕ ನಿಜವಾದ ಆರೋಪಿಗಳು ಯಾರು ಎನ್ನುವುದು ಪತ್ತೆಯಾಯಿತು. ಹೈದರಾ ಬಾದ್‌ನಂತಹ ಮುಸ್ಲಿಮ್ ಪ್ರಾಬಲ್ಯದ ಪ್ರದೇಶಗಳಲ್ಲಿ ಸ್ಫೋಟ ನಡೆದರೆ, ಅಲ್ಲಿನ ಸ್ಥಳೀಯರು ಎರಡೆರಡು ರೀತಿಯಲ್ಲಿ ಸಂತ್ರಸ್ತರಾಗಬೇಕಾಗುತ್ತದೆ.ಒಂದು,ಸ್ಫೋಟದಿಂದ ನಡೆಯುವ ಹಾನಿಗೆ ತಮ್ಮ ಬಂಧುಬಳಗವನ್ನು ಕಳೆದುಕೊಳ್ಳಬೇಕಾಗುತ್ತದೆ.
ಇದಾದ ಬಳಿಕ ತನಿಖೆಯ ಹೆಸರಿನಲ್ಲಿ, ಪೊಲೀಸರಿಂದ ದೌರ್ಜನ್ಯಕ್ಕೊಳಗಾಗಬೇಕಾ ಗುತ್ತದೆ. ಬಹುಷಃ ಸ್ಫೋಟಕ್ಕಿಂತಲೂ ಹೆಚ್ಚು ನೋವುಕೊಡುವ ಸಂಗತಿಗಳು ಇವು. ಸಂತ್ರಸ್ತನಾದವನು ಒಂದೋ ಪ್ರಾಣವನ್ನು ಕಳೆದುಕೊಳ್ಳಬೇಕಾಗುತ್ತದೆ. ಅಥವಾ ಗಾಯಗೊಂಡು ಕೈ ಕಾಲುಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಆದರೆ ಭಯೋತ್ಪಾದಕನ ಹೆಸರಲ್ಲಿ ಒಮ್ಮೆ ಜೈಲಿಗೆ ಹೋಗಿ ಬಂದ ಅಮಾಯಕ, ಶಾಶ್ವತವಾಗಿ ಬದುಕಿದ್ದು ಸತ್ತಂತಿರಬೇಕಾಗುತ್ತದೆ. ಸಮಾಜದಲ್ಲಿ ಅಸ್ಪೃಶ್ಯನಾಗಿ ಬದುಕಬೇಕಾಗುತ್ತದೆ. ಅವನ ಹೃದಯಕ್ಕೆ ಆಗುವ ಗಾಯವನ್ನು ಬಣ್ಣಿಸಲು ಸಾಧ್ಯವಿಲ್ಲ. ಇದು ಒಣಗುವ ಗಾಯವಲ್ಲ. ಜೀವನಪೂರ್ತಿ ಈ ಗಾಯವನ್ನು ಅನುಭವಿಸಿಕೊಂಡು ಬರಬೇಕಾಗುತ್ತದೆ.
ಹೈದರಾಬಾದ್ ಸರಣಿ ಸ್ಫೋಟ ನಡೆದ ಬೆನ್ನಿಗೆ ಕೆಲವು ಹಿತಾಸಕ್ತಿಗಳು ಆರೋಪಿಗಳನ್ನು ಕಂಡು ಹಿಡಿದು ಬಿಟ್ಟಿವೆ. ಬೇರೆ ಬೇರೆ ಉಗ್ರ ಸಂಘಟನೆಗಳ ಹೆಸರನ್ನು ಉಲ್ಲೇಖಿಸಿ ತನಿಖೆಯನ್ನು ದಾರಿ ತಪ್ಪಿಸಲು ಪ್ರಯತ್ನಿ ಸುತ್ತಿವೆ. ಆದರೆ ಇಂದು ದೇಶದಲ್ಲಿ ನಡೆಯುವ ಯಾವುದೇ ಸ್ಫೋಟವನ್ನು ನಿರ್ದಿಷ್ಟ ಉಗ್ರಗಾಮಿ ಸಂಘಟನೆಗಳು ನಡೆಸಿವೆ ಎಂದು ಹೇಳ ಬರುವುದಿಲ್ಲ. ಅದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ನಮ್ಮ ಮುಂದೆ ಮಾಲೆಗಾಂವ್ ಸ್ಫೋಟ, ಅಜ್ಮೀರ್ ಸ್ಫೋಟ, ಮಕ್ಕಾ ಮಸೀದಿ ಸ್ಫೋಟಗಳಿವೆ.  ಇವೆಲ್ಲವನ್ನು ಮಾಡಿರುವುದು ಮುಸ್ಲಿಮ್ ಸಂಘಟನೆಗಳು ಎಂದು ಆರಂಭದಲ್ಲಿ ಆರೋಪಿಸಲಾಗಿತ್ತು.
ಆದರೆ ಇಂದು ಸತ್ಯ ಏನು ಎನ್ನುವುದು ಜಗತ್ತಿನ ಮುಂದೆ ಬಯಲಾಗಿದೆ. ಅಂತೆಯೇ ಹೈದರಾಬಾದ್‌ನಲ್ಲಿ ನಡೆದ ಸ್ಫೋಟದ ಕುರಿತಂತೆ ನಿಷ್ಪಕ್ಷಪಾತ ತನಿಖೆ ನಡೆಸುವುದು ಅತ್ಯಗತ್ಯವಾಗಿದೆ. ಇದರ ಹಿಂದೆ ಯಾವುದೇ ಸಂಘಟನೆಗಳಿರಲಿ, ಅವನ್ನು ನಿಷೇಧಿಸುವುದು ಸರಕಾರದ ಮೊದಲ ಆದ್ಯತೆಯಾಗಬೇಕು. ಈಗಾಗಲೇ ದೇಶದಲ್ಲಿ ನಡೆದ ಹಲವು ಉಗ್ರ ಚಟುವಟಿಕೆಗಳಲ್ಲಿ ಆರೆಸ್ಸೆಸ್ ಮುಖಂಡರಿರುವುದು ಬೆಳಕಿಗೆ ಬಂದಿದೆ. ಆದರೆ ಈವರೆಗೆ ಯಾವುದೇ ಕೇಸರಿ ಸಂಘಟನೆಗಳನ್ನು ನಿಷೇಧಿಸಲಾಗಿಲ್ಲ. ಆದುದರಿಂದಲೇ ಈ ದೇಶ ಇನ್ನೂ ಉಗ್ರಗಾಮಿ  ಹಿಂಸಾಚಾರದಿಂದ ನರಳುತ್ತಲೇ ಇರುವಂತಹ ಸನ್ನಿವೇಶವಿದೆ.
ಚುನಾವಣೆ ಹತ್ತಿರ ಬರುತ್ತಿದೆ. ವಿಧ್ವಂಸಕ ಶಕ್ತಿಗಳು ಜಾಗೃತವಾಗುವ ಹೊತ್ತು ಇದು. ಇಂತಹ ಸಂದರ್ಭದಲ್ಲಿ ನಮ್ಮ ಕಾನೂನು ವ್ಯವಸ್ಥೆಯೂ ಅತಿ ಹೆಚ್ಚು ಜಾಗೃತವಾಗಿರಬೇಕಾಗಿದೆ.  ಹೈದರಾಬಾದ್ ಸ್ಫೋಟದ ನಿಜವಾದ ಆರೋಪಿಗಳನ್ನು ಗುರುತಿಸಿ, ಅವರಿಗೆ ಮರಣದಂಡನೆಯನ್ನು ವಿಧಿಸುವುದು ಅತ್ಯಗತ್ಯವಾಗಿದೆ. ಅದು ಉಳಿದ ದುಷ್ಕರ್ಮಿಗಳಿಗೆ ಪಾಠವಾಗಲಿ. ಇನ್ನೊಂದು ಸ್ಫೋಟ ಈ ದೇಶದಲ್ಲಿ ನಡೆಯದಿರಲಿ.

No comments:

Post a Comment