Thursday, February 21, 2013

ಬ್ರಿಟನ್‌ನ ಮೊಸಳೆ ಕಣ್ಣೀರುವ್ಯಾಪಾರಿಗಳು ಎಲ್ಲವನ್ನೂ ಲಾಭ ನಷ್ಟದ ದೃಷ್ಟಿಯಿಂದಲೇ ನೋಡುತ್ತಾರೆ. ದಮನಿಸುವುದರಿಂದ ಸಿಗುವ ಲಾಭವೆಷ್ಟು, ಖಂಡಿಸುವುದರಿಂದ ಎಷ್ಟು ಲಾಭ, ವಿಷಾದ ವ್ಯಕ್ಷಪಡಿಸುವುದರಿಂದ ತಾವು ಪಡೆದುಕೊಳ್ಳುವುದೆಷ್ಟು ಎನ್ನುವ ಲೆಕ್ಕಾಚಾರದ ಜೊತೆಗೆ ಅವರು ಹೆಜ್ಜೆಗಳನ್ನು ಮುಂದಿಡುತ್ತಾರೆ. ಅಂತೆಯೇ ಭಾರತಕ್ಕೆ ವ್ಯಾಪಾರ, ಹೂಡಿಕೆ ಅಭಿವೃದ್ಧಿ ಕುರಿತು ಚರ್ಚಿಸಲು ಬಂದ ಬ್ರಿಟಿಷ್ ಪ್ರಧಾನಿ ಅಮೃತಸರಕ್ಕೆ ಭೇಟಿ ನೀಡಿ, ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಕ್ಷಮೆ ಯಾಚಿಸುವ ಮೂಲಕ ಉದಾರತೆಯನ್ನು ಮೆರೆದಿದ್ದಾರೆ. ಇಂತಹದೊಂದು ಘಟನೆ ವಿಷಾದಕ್ಕೆ ಅರ್ಹ ಎನ್ನುವುದನ್ನು ಒಪ್ಪಿಕೊಳ್ಳಲು ಬ್ರಿಟನ್‌ನ ಪ್ರಧಾನಿಯೊಬ್ಬರಿಗೆ ಸುಮಾರು ನೂರು ವರ್ಷಗಳು ಬೇಕಾಯಿತು. ಬ್ರಿಟಿಷ್ ಇತಿಹಾಸ ಕಂಡ ಅತ್ಯಂತ ಅವಮಾನಕರ ಘಟನೆ ಇದು ಎಂದೂ ಅವರು ಒತ್ತಿ ಹೇಳಿದ್ದಾರೆ. ಬಹುಶಃ ಭಾರತದೊಂದಿಗಿನ ಸಂಬಂಧವನ್ನು ಉತ್ತಮ ಪಡಿಸಿಕೊಳ್ಳುವುದಕ್ಕೆ, ಈ ವಿಷಾದ ಬ್ರಿಟನ್ ಹಿರಿಯಣ್ಣ ನಮಗೆ ನೀಡಿರುವ ಒಂದು ಕೊಡುಗೆಯೆಂದು ನಾವು ಸಂಭ್ರಮಿಸಬಹುದಾಗಿದೆ.
ಒಂದಾನೊಂದು ಕಾಲದಲ್ಲಿ ಬ್ರಿಟಿಷರು ಈ ದೇಶವನ್ನು ಪ್ರವೇಶಿಸಿದ್ದೂ ವ್ಯಾಪಾರಿಗಳ ಮುಖವಾಡದಲ್ಲೇ. ಬಳಿಕ ಇಡೀ ದೇಶವನ್ನು ತಮ್ಮ ಮುಷ್ಟಿಯಲ್ಲಿ ತೆಗೆದುಕೊಂಡರು.  ಇಂದು ಬ್ರಿಟಿಷ್ ಪ್ರಧಾನಿಯ ಭಾರತ ಭೇಟಿ ಈ ದೇಶದ ಉದ್ಧಾರಕ್ಕೇನೂ ಅಲ್ಲ. ಒಂದಾನೊಂದು ಕಾಲದಲ್ಲಿ ಬ್ರಿಟಿಷರು ನಡೆಸಿದ ಹತ್ಯಾಕಾಂಡಕ್ಕೆ ಸುರಿಸಿರುವುದು ವೊಸಳೆ ಕಣ್ಣೀರಷ್ಟೇ. ಇಂದೂ ಅವರು ವ್ಯಾಪಾರವನ್ನೇ ಗುರಿಯಾಗಿಸಿಕೊಂಡು, ಈ ದೇಶವನ್ನು ಬೇರೆ ರೂಪದಲ್ಲಿ ಸುಲಿಯುವು ದಕ್ಕೆ, ದೋಚುವುದಕ್ಕೆ ದೃಷ್ಟಿ ನೆಟ್ಟಿದ್ದಾರೆ.
ಅಮೆರಿಕ ಮತ್ತು ಯುರೋಪಿನ ಶ್ರೀಮಂತ ರಾಷ್ಟ್ರಗಳೆಲ್ಲದರ ಗುರಿಯೂ ಇದೇ ಆಗಿದೆ. ಭಾರತ ಇಂದು ಸ್ವತಂತ್ರ ರಾಷ್ಟ್ರ ಎನ್ನುವುದನ್ನು ಒಪ್ಪಿಕೊಳ್ಳುವುದು ತೀರಾ ಕಷ್ಟ. ಇಂದಿಗೂ ಈ ದೇಶದ ಸೂತ್ರವಿರುವುದು ವಿಶ್ವಬ್ಯಾಂಕಿನ ಕೈಯಲ್ಲಿ. ಅವರು ಹೇಳಿದಲ್ಲಿ ನಾವು ಸಹಿ ಹಾಕಿದ್ದೇವೆ. ಅವರ ಮಾರ್ಗದರ್ಶನ ದಂತೆಯೇ ಈ ದೇಶದ ಬಜೆಟ್ ಸಿದ್ಧವಾಗ ಬೇಕು. ಇಲ್ಲಿನ ಕೃಷಿ ನೀತಿ ರಚನೆಯಾಗಬೇಕು. ಈ ದೇಶದ ಕೃಷಿ ವ್ಯವಸ್ಥೆ ಅಸ್ತವ್ಯಸ್ತವಾಗುವುದಕ್ಕೆ ಈ ಶ್ರೀಮಂತ ರಾಷ್ಟ್ರಗಳೇ ಕಾರಣ. ಉದಾರೀಕರಣದ ಹೆಬ್ಬಾಗಿಲು ತೆರೆದುಕೊಂಡ ದಿನದಿಂದ ಸೇನೆ ಗಡಿಯಲ್ಲಿ ಶತ್ರುಗಳ ನಿರೀಕ್ಷೆಯಲ್ಲಿದ್ದರೆ, ಇತ್ತ ದೇಶ ಶತ್ರುಗಳ ಪಾಲಾಗಿ ಬಿಟ್ಟಿದೆ. ಬೃಹತ್ ಉದ್ದಿಮೆದಾರರು ಈ ದೇಶದ ನೆಲದ ಮೇಲೆ ಹಕ್ಕು ಸ್ಥಾಪಿಸಿಕೊಂಡಿದ್ದಾರೆ. ಈ ದೇಶದ ಜನರು ಅವರಿಗೆ ತಮ್ಮ ನೆಲೆ,
ಮನೆ, ಮಠಗಳನ್ನು ಬಿಟ್ಟು ಬೀದಿ ಪಾಲಾಗಬೇಕಾಗಿದೆ. ಇಂತಹ ಸಂದರ್ಭದಲ್ಲಿ ಜಲಿಯನ್‌ವಾಲಾಬಾಗ್ ಹತ್ಯಾಕಾಂಡದ ಕುರಿತಂತೆ ಬ್ರಿಟನ್ ಪ್ರಧಾನಿ ಭಾರತಕ್ಕೆ ಬಂದು ಕಣ್ಣೀರು ಸುರಿಸಿರುವುದು ಕಾಲದ ವ್ಯಂಗ್ಯವೇ ಸರಿ.ಸಾವು ನೋವುಗಳ ಕುರಿತಂತೆ ಬ್ರಿಟನ್‌ಗೆ ನಿಜಕ್ಕೂ ವಿಷಾದಗಳಿದ್ದರೆ ಅದು ಅಫ್ಘಾನ್, ಇರಾಕ್, ಇರಾನ್‌ನಂತಹ ದೇಶಗಳಿಗೆ ಹೋಗಿ ಕಣ್ಣೀರು ಸುರಿಸಬೇಕು. ಹತ್ಯಾಕಾಂಡ ನಡೆದ ಎಷ್ಟೋ ವರ್ಷಗಳ ಬಳಿಕ ಅದಕ್ಕಾಗಿ ಕಣ್ಣೀರು ಸುರಿಸುವುದಕ್ಕಿಂತ, ಈಗ ತನ್ನ ಕೈಯಲ್ಲಿ ನಡೆಯುತ್ತಿರುವ ಹತ್ಯಾಕಾಂಡವನ್ನು ನಿಲ್ಲಿಸುವುದು ನಿಜಕ್ಕೂ ಜಲಿಯನ್ ವಾಲಾಬಾಗ್‌ನಂತಹ ಹತ್ಯಾಕಾಂಡಕ್ಕೆ ಸಲ್ಲಿಸುವ ಅರ್ಥಪೂರ್ಣ ವಿಷಾದವಾಗಿದೆ.
ಒಂದೆಡೆ ತೈಲಕ್ಕಾಗಿ ಅಮಾಯಕರ ಪ್ರಾಣವನ್ನು ತೆಗೆಯಲು ಟೊಂಕಕಟ್ಟಿರುವ ಪಶ್ಚಿಮರಾಷ್ಟ್ರಗಳು, ಇನ್ನೊಂದೆಡೆ ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಬಂದು, ಮಾಡಿದ ತಪ್ಪಿಗೆ ವಿಷಾದ ವ್ಯಕ್ತಪಡಿಸುವುದು ಸೋಗಲಾಡಿತನವನ್ನು ಎತ್ತಿ ತೋರಿಸುತ್ತದೆ. ವಿಶ್ವದಲ್ಲಿ ಶಾಂತಿ ನೆಲೆಸಬೇಕು ಎನ್ನುವ ಬಯಕೆ ಬ್ರಿಟನ್ ಪ್ರಧಾನಿ ಯವರದ್ದು ನಿಜವೇ ಆಗಿದ್ದರೆ ಇರಾಕ್‌ನಲ್ಲಿ, ಅಫ್ಘಾನಿಸ್ತಾನದಲ್ಲಿ ನಡೆಯು ತ್ತಿರುವ ಹಿಂಸಾಚಾರಕ್ಕೆ ನೀಡುತ್ತಿರುವ ಬೆಂಬಲವನ್ನು ಹಿಂದೆಗೆದುಕೊಳ್ಳಲಿ. ಫೆಲೆಸ್ತೀನಿ ಯರ ಮೇಲೆ ಇಸ್ರೇಲ್ ನಡೆಸುತ್ತಿರುವ ದಮನಕಾರಿ ನಿಲುವನ್ನು ಖಂಡಿಸಿ, ಅದರ ವಿರುದ್ಧ ಕ್ರಮ ತೆಗೆದುಕೊಳ್ಳಲಿ. ಆಗ ಬ್ರಿಟನ್‌ನ ಕಣ್ಣೀರಿಗೆ ಅರ್ಥ ಬರುತ್ತದೆ.
ಬ್ರಿಟನ್ ಪ್ರಧಾನಿಯ ಕಣ್ಣೀರು ಬೆಕ್ಕು ಸನ್ಯಾಸ ಸ್ವೀಕರಿಸಿದಂತಾಗಿದೆ. ಭಾರತವನ್ನು ದೋಚಲು ಬ್ರಿಟನ್ ಹೊಸ ವೇಷದೊಂದಿಗೆ ಬಂದಿದೆ. ಈ ವೇಷವನ್ನು ನಂಬಿದರೆ ಈ ದೇಶ ಇನ್ನೊಂದು ಹತ್ಯಾಕಾಂಡವನ್ನು ಎದುರಿಸಲು ಸಜ್ಜಾಗಬೇಕಾಗುತ್ತದೆ. ಈಗಾಗಲೇ ರೈತರ ಸಾಮೂಹಿಕ ಆತ್ಮಹತ್ಯೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಅದು ಹತ್ಯಾಕಾಂಡ ರೂಪವನ್ನು ಪಡೆಯಬಹುದು. ಬಹುರಾಷ್ಟ್ರೀಯ ಕಂಪೆನಿಗಳ ಪುಂಗಿಗೆ ದೇಶ ತಲೆದೂಗಿದ್ದೇ ಆದರೆ, ಮುಂದಿನ
ದಿನಗಳಲ್ಲಿ ಆಹಾರದ ಪರಾವಲಂಬನೆ ಯಿಂದಾಗಿ ದೇಶ ಸಂಪೂರ್ಣ ಪಾಶ್ಚಿಮಾತ್ಯರ ವಶವಾಗಲಿದೆ. ಈ ದೇಶಕ್ಕೆ ಬ್ರಿಟನ್‌ನ ಕಪಟ ವಿಷಾದಬೇಕಾಗಿಲ್ಲ. ಬದಲಿಗೆ,ಈ ದೇಶವನ್ನು ದೋಚುವ ತನ್ನ ವ್ಯವಹಾರ ತಂತ್ರದಿಂದ ಅದು ಹಿಂದಕ್ಕೆ ಸರಿದರೆ, ಅದುವೇ ಭಾರತಕ್ಕೆ ಭಾರೀ ದೊಡ್ಡ ಕೊಡುಗೆ.

No comments:

Post a Comment