Saturday, February 2, 2013

ಇದೆಂತಹ ನ್ಯಾಯ? ಫೆಬ್ರವರಿ -02-2013

ಗಾಗಲೇ ಅಕ್ಕಿಯ ಬೆಲೆ ಹಕ್ಕಿಯಂತೆ ಗರಿ ಬಿಚ್ಚಿ ಆಕಾಶಕ್ಕೆ ನೆಗೆದಿದೆ. ನೀರುಳ್ಳಿ ಕತ್ತರಿಸುವಾಗ ಮನೆ ಮನೆಯ ಹೆಂಗಸರು, ಗಂಡಸರ ಕಣ್ಣಲ್ಲೂ ನೀರು ತೊಟ್ಟಿಕ್ಕುತ್ತದೆ. ತರಕಾರಿ ಮುಟ್ಟುವಂತಿಲ್ಲ ಎನ್ನುವ ಸ್ಥಿತಿಯಿದೆ. ಟೊಮೆಟೋ ಬಣ್ಣ ಇನ್ನಷ್ಟು ಕೆಂಪಗಾಗಿದೆ. ಟೊಮೆಟೋ ಸಾರು ಮಾಡಿ ಅನ್ನ ಉಣ್ಣೋಣ ಎಂದರೂ  ಮನೆಯ ಗಂಡಸರ ಕೈ ಕಟ್ಟುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಡೀಸೆಲ್ ಬೆಲೆ ಇನ್ನಷ್ಟು ಏರುವುದರ ಸೂಚನೆಯನ್ನು ನೀಡಿದ್ದಾರೆ ತೈಲ ಸಚಿವ ಎಂ.ವೀರಪ್ಪ ವೊಯ್ಲಿಯವರು. ಡೀಸೆಲನ್ನು ಮಾರುಕಟ್ಟೆಗಿಂತ ಕಡಿಮೆ ಬೆಲೆಗೆ ಮಾರುತ್ತಿರುವುದರಿಂದ ಉಂಟಾಗುತ್ತಿರುವ ನಷ್ಟ ಸಂಪೂರ್ಣ ನಿವಾರಣೆಯಾಗುವವರೆಗೆ ಅದರ ಬೆಲೆಯನ್ನು ಪ್ರತಿ ತಿಂಗಳು ಲೀ.ಗೆ 40-50 ಪೈಸೆ ಹೆಚ್ಚಿಸಲಾಗುವುದು ಎಂದು ಅವರು ಬೆದರಿಕೆಯೊಡ್ಡಿದ್ದಾರೆ. ಬಹುಶಃ ರಾಹುಲ್ ಗಾಂಧಿಯವರು ಕಾಂಗ್ರೆಸ್‌ನಲ್ಲಿ ಭಾವೀ ಪ್ರಧಾನಿಯಾಗಿ ಗುರುತಿಸಿಕೊಂಡಿರುವ ಸಂತೋಷಾರ್ಥ ಬಡಜನರ ಬದುಕಿನ ಮೇಲೆ ಪಟಾಕಿ ಸಿಡಿಸಿ ಸಂತಸ ಪಡುವುದಕ್ಕೆ ಹೊರಟಂತಿದೆ ಸರಕಾರ.
ಡೀಸೆಲನ್ನು ಮಾರುಕಟ್ಟೆಗಿಂತ ಕಡಿಮೆ ಬೆಲೆಗೆ ಮಾರುತ್ತಿರುವುದು ಹೊಸತಲ್ಲ. ಅದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ. ಇದರಿಂದಾಗಿ ಸರಕಾರಕ್ಕೆ ನಷ್ಟವುಂಟಾಗುವುದು ಕೂಡ ಗೊತ್ತಿರುವ ಅಂಶವೇ ಆಗಿದೆ. ಹಾಗೆ ನೋಡಿದರೆ, ಸರಕಾರಕ್ಕೆ ನಷ್ಟವುಂಟಾಗುತ್ತಿರುವುದು ಬರೇ ಡೀಸೆಲ್‌ನಿಂದಾಗಿ ಮಾತ್ರವಲ್ಲ. ಜನರ ಮೂಲಭೂತ ಆವಶ್ಯಕತೆಗಳನ್ನು ಈಡೇರಿಸುವಾಗ ಈ ನಷ್ಟ ತೀರಾ ಸಹಜ. ಜನರಿಗೆ ಇದರಿಂದ ಅನುಕೂಲವಾಗುವುದೇ ದೇಶಕ್ಕಾಗುವ ಅತಿ ದೊಡ್ಡ ಲಾಭ.
ಡೀಸೆಲ್ ಬೆಲೆ ಕಡಿಮೆಯಾಗಿ, ಸಾಗಾಟ ಬೆಲೆಯೂ ಕಡಿಮೆಯಾದರೆ ಅದರ ಅನುಕೂಲ ಜನಸಾಮಾನ್ಯರಿಗೆ ತಾನೆ? ಜನಸಾಮಾನ್ಯರಿಗೆ ಲಾಭವಾದರೆ ಅದು ಸರಕಾರಕ್ಕಾಗುವ ಅಥವಾ ದೇಶಕ್ಕಾಗುವ ಲಾಭವೇ ತಾನೆ? ಈ ದೇಶದಲ್ಲಿ ಭ್ರಷ್ಟಾಚಾರ, ಅವ್ಯವಹಾರ ಇತ್ಯಾದಿಗಳ ಮೂಲಕ ಸೋರಿಕೆಯಾಗುವ ಕೋಟಿ ಕೋಟಿ ನಷ್ಟಕ್ಕಿಂತ ಇದು ತೀರಾ ತೀರಾ ಸಣ್ಣ ಮೊತ್ತ. ಮೊಯ್ಲಿಯವರಿಗೆ ಇದು ಗೊತ್ತಿಲ್ಲದುದೇನಲ್ಲ. ದೇಶದ ಜನಕ್ಕೆ ಲಾಭವಾಗುವುದು ಸರಕಾರಕ್ಕಾಗುವ ನಷ್ಟ ಎಂದು ಭಾವಿಸುವ ರಾಜಕಾರಣಿಗಳಿಂದ ಈ ದೇಶದ ಅಭಿವೃದ್ಧಿ ಯಾವತ್ತೂ ಸಾಧ್ಯವಿಲ್ಲ. ಬೃಹತ್ ಉದ್ದಿಮೆದಾರರಿಗೆ ಲಾಭವಾದರೆ ಅದರಿಂದ ದೇಶಕ್ಕೆ ಲಾಭವಾಗುತ್ತದೆ ಎಂದು ನಂಬಿರುವ ಸರಕಾರದಿಂದ ಜನ ಸಾಮಾನ್ಯರ ಉದ್ಧಾರ ಸಾಧ್ಯವೂ ಇಲ್ಲ.
ಡೀಸೆಲ್ ಬೆಲೆಯಿಂದ ಸರಕಾರ ಸಂಪೂರ್ಣ ಹೆಗಲು ಜಾರಿಸಿದೆ. ಡೀಸೆಲ್ ಬೆಲೆ ಏರಿಕೆಗೆ ತಾವು ಜವಾಬ್ದಾರರಲ್ಲ ಎಂದು ಇಡೀ ದೇಶವನ್ನು ನಂಬಿಸಲು ಹೊರಟಿದೆ ಯುಪಿಎ ಸರಕಾರ. ಈ ಕಾರಣದಿಂದಲೇ ಡೀಸೆಲ್ ಬೆಲೆಯನ್ನು ನಿಯಂತ್ರಣ ಮುಕ್ತಗೊಳಿಸಲು ಕಳೆದ ಜ.17ರಂದು ನಿರ್ಧರಿಸಿತ್ತು. ನಷ್ಟ ನಿವಾರಣೆಯಾಗುವವರೆಗೆ ಪ್ರತಿ ತಿಂಗಳು ಬೆಲೆಯನ್ನು ಸ್ವಲ್ಪ ಸ್ವಲ್ಪವಾಗಿ ಏರಿಸುವುದಕ್ಕೆ ಸರಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಸಂಸ್ಥೆಗಳಿಗೆ ಅಧಿಕಾರ ನೀಡಿತ್ತು. ಆದರೆ ಈ ನಷ್ಟ ನಿವಾರಣೆಯಾಗುವ ದಿನ ಯಾವುದು? ಇದಕ್ಕೆ ವೊಯ್ಲಿಯವರು ಸ್ಪಷ್ಟವಾಗಿ ಉತ್ತರಿಸಿ ಯಾರೆ? ಸರಿ.
ಒಂದು ವೇಳೆ ನಷ್ಟ ನಿವಾರಣೆ ಯಾದಂದಿನಿಂದ ಡೀಸೆಲ್‌ನ ದರವನ್ನು ಇಳಿಸಲಾಗುತ್ತದೆಯೇ? ಮೊಯ್ಲಿಯವರ ಮಾತಿನ ಆಧಾರದಲ್ಲಿ ಹೇಳುವುದಾದರೆ ಪ್ರತಿ ವರ್ಷ ಕನಿಷ್ಠ 6 ರೂ. ಹೆಚ್ಚಿಸುವುದು ಅನಿವಾರ್ಯ ಎಂದಾಯಿತು. ಇದರ ಬೆನ್ನಿಗೇ ಸರಕು ಸಾಗಾಟ ವಾಹನಗಳೂ ಸಾಗಾಟದ ದರವನ್ನು ಹೆಚ್ಚಿಸುವುದಕ್ಕೆ ಹಟ ಹಿಡಿಯುತ್ತವೆ. ಸರಕಾರಿ ಬಸ್ಸುಗಳಿಂದ ಹಿಡಿದು, ಆಟೊ ರಿಕ್ಷಾ, ಟ್ಯಾಕ್ಸಿಗಳೂ ತಮ್ಮ ದರವನ್ನು ಏರಿಸುತ್ತವೆ. ಇಂದು ಬೆಲೆಯೇರಿಕೆಗೆ ಮುಖ್ಯ ಕಾರಣವೇ ಸಾಗಾಟ ದರ ಹೆಚ್ಚಳವಾಗಿರುವುದು.
ವ್ಯಾಪಾರಿಗಳೇ ಹೇಳುವಂತೆ, ನೀರುಳ್ಳಿಯನ್ನು ತಾವು ರೈತರಿಗೆ ಕೆ.ಜಿ.ಗೆ 5 ರೂ. ಕೊಟ್ಟು ತೆಗೆದುಕೊಳ್ಳುತ್ತೇವೆ. ಉಳಿದಂತೆ ಭಾಗಶಃ ವೆಚ್ಚ ಸಾಗಾಟಕ್ಕೇ ಸಲ್ಲುತ್ತದೆ. ರೈತರಿಂದ 5 ರೂ. ಕೊಟ್ಟು ಖರೀದಿಸುವ ನೀರುಳ್ಳಿಯನ್ನು ನಾವು 20 ರೂ.ಗೆ ಮಾರಬೇಕಾಗುತ್ತದೆ. ಆದರೆ ಈ ಮಾರಾಟದಿಂದ ತಮಗೆ ದಕ್ಕುವುದು ತೀರಾ ಕಡಿಮೆ. ಸಾಗಾಟದ ವೆಚ್ಚ ಜಾಸ್ತಿಯಾಗುತ್ತಾ ಹೋದ ಹಾಗೆ ತಾವೂ ಅನಿವಾರ್ಯವಾಗಿ ತರಕಾರಿ ಸೇರಿದಂತೆ ದಿನಸಿ ದರಗಳನ್ನು ಹೆಚ್ಚಿಸಬೇಕಾಗುತ್ತದೆ ಎಂದು ಅಳಲು ವ್ಯಕ್ತ ಪಡಿಸುತ್ತಾರೆ. ಮೊಯ್ಲಿಯವರ ಮಾತುಗಳನ್ನು ನಂಬಿದಂತೆಯೇ ಜನಸಾಮಾನ್ಯರು ವ್ಯಾಪಾರಿಗಳ ಈ ಅಳಲನ್ನೂ ನಂಬಬೇಕಾಗುತ್ತದೆ. ಹೀಗಾದರೆ ಜನಸಾಮಾನ್ಯರು ಹೇಗೆ ಬದುಕಬೇಕು?
ಮೊಯ್ಲಿಯವರ ಮಾತನ್ನು ಆಧರಿಸಿ ಹೇಳುವುದಾದರೆ ಈ ದೇಶದ ಎಲ್ಲ ನಷ್ಟಗಳ ಮೂಲ, ಡೀಸೆಲ್ ಬೆಲೆಯೇ ಆಗಿದೆ. ಒಂದು ವೇಳೆ ಡೀಸೆಲ್ ನಷ್ಟ ತುಂಬಿದರೆ ಈ ದೇಶದ ನಷ್ಟಗಳೆಲ್ಲ ತುಂಬುತ್ತವೆ ಎಂಬಂತಹ ಅರ್ಥ ಬರುವ ಮಾತುಗಳನ್ನಾಡಿದ್ದಾರೆ. ಅವರು ಮುತ್ಸದ್ದಿಯೇ ಆಗಿದ್ದರೆ ಡೀಸೆಲ್ ಬೆಲೆಯೇರಿಕೆಯನ್ನು ತಡೆಯಲು ಬೇರೆ ದಾರಿಗಳನ್ನು ಹುಡುಕಬೇಕಾಗಿತ್ತು. ಅಥವಾ ಅದಕ್ಕಾಗಿ ಜನಸಾಮಾನ್ಯರೇ ಬೆಲೆ ತೆರುವಂತಾಗದೆ,  ಬೃಹತ್ ಉದ್ದಿಮೆದಾರರು ಬೆಲೆ ತೆರುವ ಮಾರ್ಗವನ್ನು ಹುಡುಕಬೇಕಾಗಿತ್ತು. ಡೀಸೆಲ್ ಬೆಲೆಯೇರಿಕೆಯ ನಿರ್ಧಾರ ಜನಸಾಮಾನ್ಯರ ಬದುಕಿನ ಮೇಲಾದ ಗಾಯಗಳಿಗೆ ಬರೆ ಎಳೆದಂತೆ. ಇದಕ್ಕೆ ಸೂಕ್ತ ಔಷಧಿ ಹುಡುಕದೆ ಇದ್ದರೆ ದೇಶದ ಭಾಗಶಃ ಜನರ ಬದುಕು ಅಧೋಗತಿಯನ್ನು ತಲುಪುತ್ತದೆ.

No comments:

Post a Comment