Monday, February 4, 2013

ರಾಜ್ಯ ವಿಧಾನಸಭೆಯ ಬಜೆಟ್ ಅಧಿವೇಶನ ಆರಂಭ;ಸಿಎಂ ಶೆಟ್ಟರ್ ಸರಕಾರಕ್ಕೆ ರಾಜ್ಯಪಾಲರ ಶಬ್ಬಾಸ್‌ಗಿರಿ- ಫೆಬ್ರವರಿ -04-2013

ಬೆಂಗಳೂರು: ‘ರಾಜ್ಯ ಸರಕಾರ ಐದು ವರ್ಷಗಳಲ್ಲಿ ಆದಾಯ ಹೆಚ್ಚಿಸಿದ್ದು, ತನ್ನ ಅವಧಿಯಲ್ಲಿ 9ಲಕ್ಷ ಮನೆಗಳ ನಿರ್ಮಾಣ, 16 ಲಕ್ಷ ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮಿ ಯೋಜನೆಯ ಪ್ರತಿಫಲ, ಉದ್ಯೋಗ ಖಾತ್ರಿ ಯೋಜನೆಯಡಿ 7.32 ಲಕ್ಷ ಮಂದಿಗೆ ಉದ್ಯೋಗ, ‘ನಮ್ಮ ಗ್ರಾಮ-ನಮ್ಮ ರಸ್ತೆ’ ಯೋಜನೆಯಡಿ ರಸ್ತೆ ಅಭಿವೃದ್ಧಿ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಿದೆ ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಸರಕಾರದ ಕಾರ್ಯವೈಖರಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಸೋಮವಾರ ವಿಧಾನ ಮಂಡಲ ಜಂಟಿ ಅಧಿವೇಶನವನ್ನು ಉದ್ದೇಶಿಸಿ ತಮ್ಮ ಭಾಷಣ ಮಾಡಿದ ಅವರು, 900 ಅಟಲ್ ಜನಸ್ನೇಹಿ ಕೇಂದ್ರ ಸ್ಥಾಪನೆ. ಮುಂದಿನ ಐದು ವರ್ಷಗಳಲ್ಲಿ 12 ಲಕ್ಷ ಮನೆ ನಿರ್ಮಾಣದ ಗುರಿಹೊಂದಲಾಗಿದೆ. ಮುಂಬರುವ ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಪ್ರಜಾಪ್ರಭುತ್ವ ಹಕ್ಕು ಚಲಾಯಿಸಬೇಕೆಂದು ಅವರು ಕರೆ ನೀಡಿದರು.
ಶಾಸಕರು ಜನಸ್ನೇಹಿ ನೀತಿ ರಚನೆ ಉದ್ದೇಶದೊಂದಿಗೆ ತಮ್ಮ ಪಾತ್ರಗಳನ್ನು ರಚನಾತ್ಮಕವಾಗಿ ಹಾಗೂ ಪರಿಣಾಮಕಾರಿಯಾಗಿ ನಿರ್ವಹಿಸಬೇಕೆಂದು ಅವರು ಒತ್ತಾಯಿಸಿದರು. ಸರಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಗುಲ್ಬರ್ಗ ಮತ್ತು ಶಿವಮೊಗ್ಗ ವಿಮಾನ ನಿಲ್ದಾಣ ಅಭಿವೃದ್ಧಿ, ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳಿಗೆ ಹೆಚ್ಚಿನ ಸೌಲಭ್ಯವನ್ನು ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಹಣಕಾಸು ಸ್ಥಿತಿ ಉತ್ತಮ:  ರಾಜ್ಯದ 45 ಎಪಿಎಂಸಿಗಳಲ್ಲಿ ಇ-ಟ್ರೇಡಿಂಗ್ ವ್ಯವಸ್ಥೆ ಜಾರಿ, 17 ಸಾವಿರ ಕೋಟಿ ರೂ. ವೆಚ್ಚದಲ್ಲಿ ಕೃಷ್ಣಾ ಮೇಲ್ದಂಡೆ 3ನೆ ಹಂತದ ಕಾಮಗಾರಿ ಕೈಗೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದ ಅವರು,ಐದು ವರ್ಷಗಳ ಅವಧಿಯಲ್ಲಿ ರಾಜ್ಯದ ಆದಾಯ ಎರಡು ಪಟ್ಟು ಹೆಚ್ಚಳವಾಗಿದ್ದು, ಹಣಕಾಸು ನಿರ್ವಹಣೆ ಉಳಿದೆಲ್ಲ ರಾಜ್ಯಗಳಿಗಿಂತ ಉತ್ತಮವಾಗಿದೆ ಎಂದು ದೃಢೀಕರಣ ಪತ್ರ ನೀಡಿದರು.
ಸಮರ್ಪಕ ರೀತಿಯಲ್ಲಿ ತೆರಿಗೆ ಸಂಗ್ರಹವಾಗಿದೆ. ವಿತ್ತೀಯ ಕೊರತೆ, ಕೇಂದ್ರ ಸರಕಾರ-13ನೆ ಹಣಕಾಸು ಆಯೋಗ ನಿಗದಿಪಡಿಸಿದ ಮಿತಿಯನ್ನು ದಾಟಿಲ್ಲ. ಆರ್ಥಿಕ ಶಿಸ್ತು ಅತ್ಯುತ್ತಮವಾಗಿದೆ ಎಂದ ಅವರು, ಆರೋಗ್ಯ, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಸಾರಿಗೆ ಮುಂತಾದ ಇಲಾಖೆಗಳು ಚೆನ್ನಾಗಿ ಕೆಲಸ ನಿರ್ವಹಿಸಿದ್ದು, ಕೇಂದ್ರ ಸರಕಾರದ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಶ್ಲಾಘಿಸಿದರು.
ರಾಜ್ಯ ಸರಕಾರ ಸಿಬ್ಬಂದಿಗೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ‘ಸರ್ವೋತ್ತಮ’ ಪ್ರಶಸ್ತಿ ಸ್ಥಾಪಿಸಿದ್ದು, ಆಡಳಿತದಲ್ಲಿ ಸಿಬ್ಬಂದಿ ಕಾರ್ಯವೈಖರಿಯಲ್ಲಿಬದಲಾವಣೆ ತರಲಾಗಿದೆ ಎಂದ ಅವರು, ಗುಡಿಸಲು ಮುಕ್ತ ರಾಜ್ಯವನ್ನಾಗಿ ಮಾಡಲು ಸರಕಾರ ಪಣ ತೊಟ್ಟಿರುವುದು ಒಳ್ಳೆಯ ಸಂಗತಿ. ಕಾಲಮಿತಿಯಲ್ಲಿ ಎಲ್ಲರಿಗೂ ಮನೆ ಕಟ್ಟಿಕೊಟ್ಟು ಗುಡಿಸಲು ಮುಕ್ತ ರಾಜ್ಯವನ್ನಾಗಿ ಮಾಡಬೇಕೆಂದು ಸರಕಾರಕ್ಕೆ ಸಲಹೆ ಮಾಡಿದರು.
ಭೂ ಚೇತನ ಯೋಜನೆಯನ್ನು ಜಾರಿಗೆ ತರಲಾಗುತ್ತಿದ್ದು, ಕಳೆದ ವರ್ಷ 125 ಲಕ್ಷ ಮೆಟ್ರಿಕ್ ಟನ್ ಆಹಾರಧಾನ್ಯ ಉತ್ಪಾದನೆಯಾಗಿದ್ದು, ಬರ ಆವರಿಸಿಕೊಂಡಿದ್ದರೂ ಈ ವರ್ಷವೂ ಆಹಾರ ಧಾನ್ಯ ಉತ್ಪಾದನೆ 118 ಲಕ್ಷ ಮೆಟ್ರಿಕ್ ಟನ್ ಮುಟ್ಟಲಿದೆ ಎಂದು ಅವರು ಅಂಕಿ-ಅಂಶಗಳನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.
ರಾಜ್ಯವು ಇ-ಸಂಗ್ರಹಣೆಯಲ್ಲಿ 1.63 ಲಕ್ಷ ಕೋಟಿ ರೂ. ವಹಿವಾಟು ನಡೆಸಿದ್ದು, ಇದರಿಂದ ಶೇ.10ರಷ್ಟು ಸರಕಾರಕ್ಕೆ ಲಾಭ ಬಂದಿದೆ ಎಂದು ಮೆಚ್ಚುಗೆ ವ್ಯಕತಿಪಡಿಸಿದ ಅವರು, ಸಕಾಲ ಯೋಜನೆ ಮೂಲಕ ನಾಗರಿಕರ ಸೇವಾ ಖಾತರಿ ಮತ್ತು ನಾಗರಿಕರಿಗೆ ಸೌಲಭ್ಯವನ್ನು ವಿಳಂಬವಿಲ್ಲದೆ ಕಲ್ಪಿಸುತ್ತಿರುವುದು ದೇಶವ್ಯಾಪಿ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಬರ ಪರಿಸ್ಥಿತಿ ಯಶಸ್ವಿಯಾಗಿ ನಿಭಾಯಿಸಿದ್ದು ರೈತ ಸಂಕಷ್ಟಕ್ಕೆ ನೆರವಾಗಿದೆ. ತನ್ನ ಸರಕಾರ 25 ಸಾವಿರ ರೂ.ಬೆಳೆ ಸಾಲ ಮನ್ನಾ ಮಾಡಿದ್ದು, ಸಹಕಾರ ಸಂಘಗಳಿಗೆ 3600 ಕೋಟಿ ರೂ.ಸಾಲವನ್ನು ತುಂಬಿಕೊಟ್ಟಿದೆ. ಸುಮಾರು 15ಲಕ್ಷ ರೈತರಿಗೆ ಬೆಳೆಸಾಲ ಮನ್ನಾದಿಂದ ಪ್ರಯೋಜನ ಆಗಿದೆ ಎಂದು ರಾಜ್ಯಪಾಲರು ತಿಳಿಸಿದರು.
ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 371 ಕಲಂ ತಿದ್ದುಪಡಿ ಮಸೂದೆಗೆ ಲೋಕಸಭೆ ಒಪ್ಪಿಗೆ ನೀಡಿದ್ದು, ಆ ಭಾಗದ ಜನತೆಯ ಅಭಿವೃದ್ಧಿಗೆ ಸರಕಾರ ಕಂಕಣ ಬದ್ಧವಾಗಿದೆ ಎಂದು ರಾಜ್ಯಪಾಲರು ಇದೇ ವೇಳೆ ಭರವಸೆ ವ್ಯಕ್ತಪಡಿಸಿದರು.

ಕಾನೂನು ಸುವ್ಯವಸ್ಥೆ ಉತ್ತಮ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದ್ದು, ಯಾವುದೇ ರೀತಿಯ ಕೋಮು ಸಂಘರ್ಷ ಸಂಭವಿಸಿಲ್ಲ. ಪೊಲೀಸರು ಉತ್ತಮವಾಗಿ ಕೆಲಸ ಮಾಡುತ್ತಿದ್ದು, ರಾಜ್ಯದಲ್ಲಿನ ನಕ್ಸಲ್ ಸಮಸ್ಯೆ ನಿಗ್ರಹಿಸುವಲ್ಲಿ ಪೊಲೀಸ್ ಪಡೆ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ರಾಜ್ಯಪಾಲರು ಶ್ಲಾಘಿಸಿದರು.
ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳು ಏಕಾಏಕಿ ಕರ್ನಾಟಕ ತೊರೆಯಲು ಮುಂದಾದಾಗ ಅದನ್ನು ಪರಿಣಾಮಕಾರಿಯಾಗಿ ಸರಕಾರ ನಿರ್ವಹಿಸಿದ್ದು, ಅವರನ್ನು ರಾಜ್ಯಕ್ಕೆ ವಾಪಸ್ ಕರೆಸುವಲ್ಲಿ ಯಶಸ್ವಿಯಾಗಿದೆ ಎಂದ ಅವರು, ಈ ಕಾರ್ಯದಲ್ಲಿ ಪೊಲೀಸರ ಪಾತ್ರ ಮಹತ್ವದ್ದು ಎಂದು ಹೇಳಿದರು

No comments:

Post a Comment