Saturday, February 9, 2013

ಪ್ರತಿಷ್ಠೆಗಾಗಿಯೇ ಮಂಡಿಸಿದ ಬಜೆಟ್ಫೆಬ್ರವರಿ -09-2013

ಜೆಟ್ ಮಂಡನೆ ಒಂದು ರೀತಿಯಲ್ಲಿ ಬಿಜೆಪಿಯ ವಿಜಯವೇ ಸರಿ. ಹಾಗೆಂದು ಈ ವಿಜಯಕ್ಕೂ ರಾಜ್ಯದ ಜನತೆಗೂ ಏನೇನೂ ಸಂಬಂಧವಿಲ್ಲ. ಯಡಿಯೂರಪ್ಪ ಮತ್ತು ಶೆಟ್ಟರ್ ಬಣಗಳ ನಡುವೆ ಕಳೆದ ಎರಡು ದಿನಗಳಿಂದ ಬಜೆಟ್ ಮಂಡನೆ ವಿಷಯಕ್ಕೆ ಸಂಬಂಧಿಸಿದಂತೆ ಜಗ್ಗಾಟ ನಡೆಯುತ್ತಿತ್ತು. ‘ಬಜೆಟ್ ಮಂಡನೆ ನಡೆಯುವುದಿಲ್ಲ” ಎಂದು ಯಡಿಯೂರಪ್ಪ ಸವಾಲು ಹಾಕಿದ್ದರೆ, “ನಡೆದೇ ನಡೆಯುತ್ತದೆ. ಬಜೆಟ್ ಮಂಡಿಸಿಯೇ ನಾನು ಅಧಿಕಾರದಿಂದ ಕೆಳಗಿಳಿಯುತ್ತೇನೆ” ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪ್ರತಿ ಸವಾಲು ಹಾಕಿದ್ದರು. ಇದೀಗ ಶೆಟ್ಟರ್ 1.17 ಲಕ್ಷ ಕೋಟಿ ರೂ.ಯಷ್ಟು ಬೃಹತ್ ವೊತ್ತದ ತಮ್ಮ ಕನಸಿನ ಬಜೆಟನ್ನು ಮಂಡಿಸಿ, ಯಡಿಯೂರಪ್ಪರ ಮುಂದೆ ಮೀಸೆ ತಿರುವಿದ್ದಾರೆ. ಯಡಿಯೂರಪ್ಪರ ವಿರುದ್ಧ ಬಿಜೆಪಿ ಸಾಧಿಸಿದ ಮೊದಲ ಗೆಲುವು ಇದಾಗಿದೆ. ಆದುದರಿಂದ ಈ ಬಜೆಟ್ ಸದ್ಯದ ಮಟ್ಟಿಗೆ ಬಿಜೆಪಿಯ ಯಶಸ್ಸನ್ನು ತಿಳಿಸುತ್ತದೆ. ಬಜೆಟ್ ಮಂಡನೆಯಾಗು ವವರೆಗಾದರೂ ಸರಕಾರ ಗಟ್ಟಿಯಾಗಿ ನಿಲ್ಲಲಿ ಎಂದು ಬೇಡುತ್ತಿರುವವರಿಗೆ ಈ ಮಂಡನೆ ತುಂಬಾ ಖುಷಿಯ ವಿಚಾರವೇ ಸರಿ.
ಎಲ್ಲರೂ ನಿರೀಕ್ಷಿಸಿದಂತೆ, ಮಠಗಳಿಗೆ ಈ ಬಾರಿಯ ಬಜೆಟ್‌ನಲ್ಲಿ ಭೂರಿ ಭೋಜನ. ಯಾವುದೇ ಶಾಲೆಕಾಲೇಜುಗಳಿಗಿಂತ, ಆಸ್ಪತ್ರೆಗಳಿಗಿಂತ ಹೆಚ್ಚು ಹಣವನ್ನು ಮಠ ಗಳಿಗೆ ಸುರಿಯಲಾಗಿದೆ. ಯಡಿಯೂರಪ್ಪ ರವರ ವಶದಲ್ಲಿರುವ ಮಠಗಳನ್ನು ತಮ್ಮ ಕಡೆಗೆ ವಾಲಿಸಲು ಇದು ಬಿಜೆಪಿಗೆ ಅಗತ್ಯವೂ ಆಗಿತ್ತು. ಒಂದು ರೀತಿಯಲ್ಲಿ ಮಠಗಳಿಗಾಗಿಯೇ ಈ ಬಾರಿಯ ಬಜೆಟ್ ಮಂಡಿಸಲಾಗಿದೆ ಎಂದರೆ ಅತಿಶಯೋಕ್ತಿಯಿಲ್ಲ.
ಪ್ರಮುಖ ಜಾತಿಗಳಾದ ರಶೈವ, ಒಕ್ಕಲಿಗ ಮಠಗಳಿಗೆ ನೀಡಿ ಉಳಿದ ಚಿಲ್ಲರೆಯನ್ನು ಇತರ ಹಿಂದುಳಿದ ವರ್ಗಗಳ ಮಠಗಳಿಗೂ ಅಲ್ಪಸ್ವಲ್ಪ ಹಂಚಲಾಗಿದೆ. ಈ ಮೂಲಕ ಬಿಜೆಪಿ ಎಲ್ಲ ಜನಸಮುದಾಯ ವನ್ನು ತನ್ನ ಬಗಲಲ್ಲಿ ಹಾಕಿಕೊಳ್ಳಲು ಯತ್ನಿಸಿದೆ. ಇದೇ ಸಂದರ್ಭದಲ್ಲಿ ಎಂದಿನಂತೆ ಅಲ್ಪಸಂಖ್ಯಾತರಿಗೆ ಅಲ್ಪಸ್ವಲ್ಪ ಬೆಣ್ಣೆಯನ್ನು ಮೂಗಿಗೆ ಒರೆಸಲಾಗಿದೆ. ಜೊತೆಗೆ 22, 310 ಕೋಟಿ ರೂ. ಗಾತ್ರದ ಪ್ರತ್ಯೇಕ ಕೃಷಿ ಬಜೆಟ್‌ನ್ನೂ ಮಂಡಿಸಿದೆ.
ಕೋಟೆ ಸೂರೆ ಹೋದ ಬಳಿಕ ದಿಡ್ಡಿ ಬಾಗಿಲು ಹಾಕಿದಂತೆ, ಇನ್ನೇನೂ ಕುಸಿದು ಬೀಳುವ ಹೊತ್ತಿನಲ್ಲಿ ಸರಕಾರ ಮಂಡಿಸಿರುವ ಕೃಷಿ ಯೋಜನೆಗಳೆಲ್ಲ ಅನುಷ್ಠಾನಕ್ಕೆ ಬರುತ್ತದೆಯೇ ಎಂದು ಯಾರೂ ಪ್ರಶ್ನಿಸಬಾರದು. ಈವರೆಗಿನ ಅದೆಷ್ಟು ಪ್ರಣಾಳಿಕೆಗಳು ಅನುಷ್ಠಾನಕ್ಕೆ ಬಂದಿವೆ? ಬಜೆಟ್‌ನಲ್ಲಿ ಮಂಡಿಸಿದ ಅದೆಷ್ಟು ಯೋಜನೆಗಳು ಕಾರ್ಯಗತವಾಗಿವೆ? ಇದು ಉತ್ತರ ವಿಲ್ಲದ ಪ್ರಶ್ನೆಗಳು. ಮುಖ್ಯವಾಗಿ ಬಜೆಟ್‌ನಲ್ಲಿ ಕೃಷಿಗಾಗಿ ಬಹಳಷ್ಟು ಯೋಜನೆಗಳಿವೆ. ಅದಕ್ಕಾಗಿ ನಾವು ನಾಲಗೆ ಚಪ್ಪರಿಸಬೇಕು.
ಸರಕಾರ ಕೊನೆಗೂ ಗೋದಾಮಿನಲ್ಲಿ ಕೊಳೆಯುತ್ತಿರುವ ಅಕ್ಕಿಯನ್ನು ಜನರಿಗೆ ಹಂಚುವ ತೀರ್ಮಾನ ಮಾಡಿದಂತಿದೆ. ಬಡತನಕ್ಕಿಂತ ಕೆಳಗಿನವರಿಗೆ 2 ರೂ.ನಲ್ಲಿ ಅಕ್ಕಿ ಹಂಚುವುದಕ್ಕೆ ಧೈರ್ಯ ತೋರಿದೆ. ಕೇಳುವುದಕ್ಕೆ ಬಹಳ ಹಿತವಾಗಿರುವ ಹೊಟ್ಟೆ ತಣಿಯುವ ಭರವಸೆಯಿದು. ಎಷ್ಟು ದಿನಗಳ ಕಾಲ ಎನ್ನುವುದನ್ನು ಮಾತ್ರ ವಿವರಿಸಿಲ್ಲ. ಮೀನುಗಾರರಿಗಾಗಿಯೂ ಹಲವು ಯೋಜನೆಗಳಿವೆ. ಶಿಕ್ಷಕರಿಗೂ ಕೆಲವು ಕೊಡುಗೆಗಳಿವೆ.
ಯಡಿಯೂರಪ್ಪ ಹೇಳುತ್ತಾರೆ, “ಈ ಹಿಂದೆ ನಾನು ಮಂಡಿಸಿದ ಬಜೆಟ್‌ನ ಮಾದರಿಯಲ್ಲೇ ಇದೂ ಇದೆ. ಇದರಿಂದ ಏನೂ ಪ್ರಯೋಜನವಿಲ್ಲ” ಹಾಗಾಂದರೆ, ಹಿಂದೆ ಯಡಿಯೂರಪ್ಪ ಮಂಡಿಸಿದ್ದ ಬಜೆಟ್ ಕೂಡ ಏನೂ ಪ್ರಯೋಜನವಿರಲಿಲ್ಲ ಎಂದಾಯಿತಲ್ಲ! ಅದೇನೇ ಇರಲಿ. ಬಜೆಟ್ ಏನೋ ಬಾಯಲ್ಲಿ ಜೊಲ್ಲು ಸುರಿಸುವಂತೆಯೇ ಇದೆ.
ಆದರೆ ಒಟ್ಟು ಬಜೆಟ್‌ನ ಯೋಜನೆಗಳಿಗೆ ಯಾವುದೇ ಗೊತ್ತು ಗುರಿಗಳಿಲ್ಲ. ನೀಡಿದ ಭರವಸೆಗಳನ್ನು ಹೇಗೆ ಈಡೇರಿಸಬಹುದು ಎನ್ನುವುದಕ್ಕೆ ಸ್ಪಷ್ಟ ನಕ್ಷೆಗಳಿಲ್ಲ. ಬಹುಶಃ ಮುಂದಿನ ಬಾರಿಯೂ ನಮ್ಮನ್ನೇ ಆಡಳಿತಕ್ಕೆ ತಂದರೆ ಈ ಬಜೆಟ್ ಜಾರಿಗೆ ಬರುತ್ತದೆ ಎಂದು ಜನರಿಗೆ ಹೇಳಲು ಹೊರಟಿದೆ ಈ ಸರಕಾರ.
ಹಿಂದಿನ ಬಜೆಟ್‌ನ ಕತೆ ಏನಾಯಿತು ಎಂದು ಗೊತ್ತಿದ್ದವರು ಈ ಬಾರಿಯ ಬಜೆಟ್‌ನ ಕುರಿತಂತೆ ಗಂಭೀರ ಚರ್ಚೆಗೆ ಇಳಿಯಲಾರರು. ಇದೊಂದು ರೀತಿಯ ಪ್ರತಿಷ್ಠೆಯ ಬಜೆಟ್. ಎಷ್ಟು ಜಾರಿ ಗೊಳ್ಳುತ್ತದೆ ಎನ್ನುವುದಕ್ಕಿಂತ, ಬಿಜೆಪಿ ಸರಕಾರ ಈ ಬಜೆಟ್ ಮಂಡಿಸಿತಲ್ಲ, ಅದೇ ದೊಡ್ಡದು ಎಂಬಂತೆ ಬಿಜೆಪಿ ನಾಯಕರು ನಿಟ್ಟುಸಿರು ಬಿಡುತ್ತಿದ್ದಾರೆ.
ರಾಜ್ಯದ ಮೇಲೆ ಇನ್ನೂ ಎಪ್ಪತ್ತು ಸಹಸ್ರ ಕೋಟಿ ರೂ. ಸಾಲದ ಹೊರೆಯನ್ನು ಹೊರಿಸಿದ ಈ ಬಜೆಟ್, ನಾಡಿನ ಭವಿಷ್ಯದ ಆತಂಕಗಳ ಕೈಮರವಾಗಿದೆ ಎಂದಷ್ಟೇ ಹೇಳಿ, ಬಜೆಟ್ ಚರ್ಚೆಯನ್ನು ಮುಗಿಸಿ ಬಿಡಬಹುದು.

No comments:

Post a Comment