Monday, February 25, 2013

ಹೈದರಾಬಾದ್ ಅವಳಿ ಸ್ಫೋಟ: ‘ಇಂತಹ ದುರ್ಗತಿ ಯಾರಿಗೂ ಬೇಡ’ಹೈದರಾಬಾದ್: ‘ಇಂದು ನನ್ನ ಮಗನಿಗಾಗ ಪರಿಸ್ಥಿತಿ ನಾಳೆ ಬೇರೊಬ್ಬರ ಮಕ್ಕಳಿ ಗಾಗಬಾರದು, ಇಂತಹ ದುರ್ಗತಿ ಯಾರಿಗೂ ಬರಬಾದರು. ಅಮಾಯಕ ಜನರನ್ನು ಈ ರೀತಿ ಹತ್ಯೆ ಮಾಡುವುದು ಸಂಫೂರ್ಣ ವಾಗಿ ತಪ್ಪು, ನನ್ನಂತೆ ಇನ್ನೊಬ್ಬರ ಜೀವನವನ್ನು ಯಾರೂ ಹಾಳು ಮಾಡಬಾರದು’.
ಕಳೆದ ವಾರ ಹೈದರಾಬಾದ್‌ನಲ್ಲಿ ನಡೆದ ಅವಳಿ ಸ್ಫೋಟದಲ್ಲಿ ತನ್ನ 17 ವರ್ಷದ ಅಮಾಯಕ ಪುತ್ರ ಏಜಾಝ್‌ನನ್ನು ಕಳೆದುಕೊಂಡ ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿರುವ ಇಕ್ಬಾಲ್ ಅಹ್ಮದ್‌ರ ಮನದಾಳದ ಮಾತಿದು.
ಅವಳಿ ಸ್ಫೋಟ ನಡೆದಾಗ ಸ್ಥಳದಲ್ಲಿಯೇ ಏಜಾಝ್ ಮೃತಪಟ್ಟಿದ್ದ. ಆತನ ದೇಹ ಅರ್ಧ ಹಾರಿ ಹೋಗಿದ್ದರಿಂದ ಶ್ಮಶಾನಕ್ಕೆ ಆತನ ಕಳೇಬರವನ್ನು ತೆಗೆದುಕೊಂಡು ಹೋಗುವ ಮುಂಚೆ ಆತನ ದೇಹಕ್ಕೆ ಧಾರ್ಮಿಕ ವಿಧಿ ವಿಧಾನಗಳಂತೆ ಅಂತಿಮವಾಗಿ ಸ್ನಾನ ಮಾಡಿಸಲು ಆತನ ಕುಟುಂಬಕ್ಕೆ ಸಾಧ್ಯವಾಗದ ರೀತಿಯಲ್ಲಿ ದೇಹ ಛಿದ್ರವಾಗಿತ್ತು.
ಹೈದರಾಬಾದ್ ಅವಳಿ ಸ್ಫೋಟದ ಅತ್ಯಂತ ಚಿಕ್ಕ ವಯಸ್ಸಿನ ಸಂತ್ರಸ್ತನಾದ ಏಜಾಝ್ ಇಲ್ಲಿನ ಹೊರವಲಯದಲ್ಲಿರುವ ಸಂಜಯ್ ಗಾಂಧಿ ಸ್ಮಾರಕ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಟೊಮೊಬೈಲ್‌ಎಂಜಿನಿಯರಿಂಗ್‌ನ ವಿದ್ಯಾರ್ಥಿಯಾಗಿದ್ದ.
ಕಾಲೇಜಿನಿಂದ ಮನೆಗೆ ತೆರಳಲು ಪ್ರತಿದಿನ ಆತ ಮೂರು ಸಿಟಿ ಬಸ್‌ಗಳನ್ನು ಬದಲಿಸಬೇಕಿತ್ತು. ಹಾಗಾಗಿ ಆ ಕರಾಳ ದಿನದಂದು ಎಂದಿನಂತೆ ಆತ ದಿಲ್‌ಸುಖ್ ನಗರ್‌ನ ಬಸ್ ಸ್ಟಾಪ್‌ನಲ್ಲಿ ತನ್ನ ಬಸ್‌ಗಾಗಿ ಸ್ನೇಹಿತನೊಂದಿಗೆ ಕಾಯುತ್ತಾ ನಿಂತಿದ್ದ. ಆತನ ಇನ್ನಿಬ್ಬರು ಸ್ನೇಹಿತರು ಹಣ ಪಡೆಯಲು ಸಮೀಪದ ಎಟಿಎಂಗೆ ತೆರಳಿದ್ದರಿಂದ ಅವರು ಅದೃಷ್ಟದಿಂದ ಬಚಾವಾದರು. ಇದೇ ಸಮಯದಲ್ಲಿ ನಡೆದ ಸ್ಫೋಟದಲ್ಲಿ ಏಜಾಝ್ ಮತ್ತು ಆತನ ಮತ್ತೊಬ್ಬ ಸ್ನೇಹಿತ ಬಲಿಯಾದರು.
ದಿಲ್‌ಸುಖ್‌ನಗರದಲ್ಲಿ ಬಾಂಬ್ ಸ್ಫೋಟವಾದ ಸುದ್ದಿ ತಿಳಿಯುತ್ತಿದ್ದಂತೆಯೇ ನಾನು ಏಜಾಝ್‌ನ ಮೊಬೈಲ್‌ಗೆ ಕರೆ ಮಾಡಿದೆ.
ಅದು ಸ್ವಿಚ್ ಆಫ್ ಆಗಿತ್ತು. ಆದರೆ ನಾನು ಎದೆಗುಂದದೆ ನನ್ನ ಪತ್ನಿ ನೂರ್‌ಜಹಾನ್ ಜತೆ ಗಾಬರಿಯಿಂದಲೇ ದಿಲ್‌ಸುಖ್‌ನಗರ್‌ನ ಬಸ್ ನಿಲ್ದಾಣಕ್ಕೆ ತೆರಳಿದೆ.

ಅಲ್ಲಿನ ದೃಶ್ಯವನ್ನು ನೋಡಿ ತಲ್ಲಣಗೊಂಡರೂ ಧೈರ್ಯ ತಂದುಕೊಂಡು ಮಗನ ಹೆಸರನ್ನು ಕೂಗುತ್ತಾ ಅಲ್ಲಲ್ಲಿ ಓಡಾಡುತ್ತಿದ್ದೆ.
ಅಲ್ಲಿದ್ದ ಕೆಲವರು ಗಾಯಗೊಂಡವರನ್ನು ಸಮೀಪದ ಉಸ್ಮಾನಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ ಅಲ್ಲಿಗೆ ಹೋಗಿ ನೋಡಿ ಎಂದು ಸಲಹೆ ನೀಡಿದರು. ಆಸ್ಪತ್ರೆಗೆ ಹೋಗಿ ಗಾಯಗೊಂಡ ರೋಗಿಗಳನ್ನು ದಾಖಲು ಮಾಡಿದ ಕೊಠಡಿಯನ್ನೆಲ್ಲಾ ನೋಡಿದೆ ಎಲ್ಲಿಯೂ ನನ್ನ ಮಗನ ಮುಖ ಕಾಣಿಸಲಿಲ್ಲ ಎಂದು ಇಕ್ಬಾಲ್ ಅಹ್ಮದ್ ಹೇಳಿ ಭಾವುಕರಾದರು.
ಏನಾದರೂ ಆಗಲಿ ಎಂದು ಶವಾಗಾರಕ್ಕೆ ತೆರಳಿದಾಗ ಎರಡನೆಯ ಶವವೇ ನನ್ನ ಅಮಾಯಕ ಮಗನದ್ದಾಗಿತ್ತು. ಅಲ್ಲಿಂದ ನನಗೇನೂ ಮಾಡಲು ಸಾಧ್ಯವಾಗಲಿಲ್ಲ. ಸ್ವಲ್ಪ ಸಮಯ ನನ್ನ ಹ್ರದಯ ಬಡಿತವೇ ನಿಂತು ಹೋಗಿತ್ತು ಎಂದು ಕಣ್ಣೀರನ್ನು ನಿಯಂತ್ರಿಸಿಕೊಳ್ಳಲಾಗದೆ ಬಿಕ್ಕಲಾರಂಭಿಸಿದರು ಇಕ್ಬಾಲ್ ಅಹ್ಮದ್.

ಹಾಗೆ ಬಿಕ್ಕುತ್ತಲೇ ಮಾತು ಮುಂದುವರಿಸಿದ ಅವರು, ಭಯೋತ್ಪಾದಕರು ನಮ್ಮ ಜೀವವನ್ನು ತೆಗೆದುಕೊಂಡಿದ್ದಾರೆ. ಕೂಲಿ ಮಾಡಿಕೊಂಡೇ ಪ್ರತಿದಿನ ನಾನು ಜೀವಿಸಬೇಕಿದೆ. ಇಂದು ನನ್ನ ಮಗನಿಗಾಗ ಅನ್ಯಾಯ ಬೇರೊಬ್ಬರ ಮಗನಿಗೆ ಆಗಬಾರದು.
ಈ ಜನರು ಇಂದು ಅಮಾಯಕ ಜನರನ್ನು ಹತ್ಯೆ ಮಾಡುತ್ತಿರುವುದು ಸರಿಯಲ್ಲ. ನನ್ನಂತೆ ಇನ್ನೊಬ್ಬರ ಜೀವನ ಹಾಳಾಗಬಾರದು ಎಂದರು.
ಭಯೋತ್ಪಾದಕರ ಹೇಡಿತನದ ಬಗ್ಗೆ ಆಕ್ರೋಶವ್ಯಕ್ತಪಡಿಸಿದ ಅವರು, ಇಂತಹ ಕೃತ್ಯಗಳನ್ನು ನೀವು ಮಾಡಲು ಬಯಸಿದರೆ ಮೊದಲು ನನ್ನ ಎದುರು ಬನ್ನಿ ಮತ್ತು ಬಹಿರಂಗವಾಗಿ ನನ್ನ ಜತೆ ಹೋರಾಡಿ ಎಂದು ಇಕ್ಬಾಲ್ ಅಹ್ಮದ್ ಭಯೋತ್ಪಾದಕರಿಗೆ ಸವಾಲು ಹಾಕಿದರು

No comments:

Post a Comment