Saturday, February 16, 2013

ಕರಾವಳಿಗೆ ತಂಪೆರೆದ ಅಕಾಲಿಕ ಮಳೆ


ಕರಾವಳಿಗೆ ತಂಪೆರೆದ ಅಕಾಲಿಕ ಮಳೆ

ಮಂಗಳೂರು: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಹವಾಮಾನ ವೈಪರೀತ್ಯದಿಂದಾಗಿ ಮಂಗಳೂರು ನಗರ, ಪುತ್ತೂರು, ಸುಳ್ಯ, ಕಾಸರಗೋಡು ಸೇರಿದಂತೆ ಕರಾವಳಿಯ ವಿವಿಧೆಡೆ ನಿನ್ನೆ ರಾತ್ರಿ ಮತ್ತು ಇಂದು ಅಕಾಲಿಕ ಮಳೆಯಾಗಿದೆ.
ಮಂಗಳೂರು ನಗರದ ಹಲವೆಡೆ ಗುರುವಾರ ರಾತ್ರಿ ಮತ್ತು ಶುಕ್ರವಾರ ಬೆಳಗ್ಗೆ ಬಿರುಸಿನ ಮಳೆ ಸುರಿದಿದೆ. ರಾತ್ರಿ ಸುಮಾರು 2:20ರಿಂದ 2:30ರವರೆಗೆ ಮಳೆಯಾಗಿದ್ದರೆ, ಬೆಳಗ್ಗೆ 8:30ಕ್ಕೆ ಮಳೆ ಇಳೆಗೆ ತಂಪೆರೆದಿದೆ.
ನಗರದ ಜಪ್ಪಿನಮೊಗರು, ಹಂಪನಕಟ್ಟೆ ಮೊದಲಾದೆಡೆ ರಸ್ತೆ ಯಲ್ಲೇ ಮಳೆ ನೀರು ಶೇಖರಣೆ ಗೊಂಡು ದ್ವಿಚಕ್ರ ಸವಾರರು ಸಂಕಷ್ಟಪಡುವಂತಾಗಿತ್ತು.
ಕುಂಟಿಕಾನ: ಮೀನು ಸಾಗಾಟದ ಲಾರಿ ಪಲ್ಟಿ
ಮಳೆಯ ಅವಾಂತರಕ್ಕೆ ಶುಕ್ರವಾರ ಮುಂಜಾನೆ ನಗರದ ಎ.ಜೆ. ಆಸ್ಪತ್ರೆಯ ಬಳಿ ಮೀನು ಸಾಗಾಟ ಲಾರಿ ಯೊಂದು ಸ್ಕಿಡ್ ಆಗಿ ಉರುಳಿಬಿದ್ದು, ಅಪಾರ ಪ್ರಮಾಣದ ಮೀನು ರಸ್ತೆ ಪಾಲಾಗಿದೆ. ಘಟನೆಯಲ್ಲಿ ಲಾರಿ ಚಾಲಕ ರಿಯಾಝ್ ಮತ್ತು ಕ್ಲೀನರ್ ನಜೀಬ್ ಎಂಬವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಉಡುಪಿ-ಮಲ್ಪೆಯಿಂದ ಕೇರಳದ ಕೋಝಿಕ್ಕೋಡ್‌ಗೆ ಮೀನುಗಳನ್ನು ಕೊಂಡೊಯ್ಯುತ್ತಿದ್ದ ಲಾರಿ ಇದಾ ಗಿತ್ತು. ಮಳೆಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ ರಸ್ತೆಯಲ್ಲೇ ಉರುಳಿ ಬಿದ್ದಿದೆ. ಇದರಿಂದ ಅಪಾರ ಪ್ರಮಾಣದ ಮೀನು ರಸ್ತೆ ಪಾಲಾಗಿತ್ತು. ಈ ಮೀನುಗಳನ್ನು ಸ್ಥಳೀಯರು ಚೀಲಗಳಲ್ಲಿ ತುಂಬಿ ಕೊಂಡೊಯ್ಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಕಾಸರಗೋಡಿನಲ್ಲಿ ಭಾರೀ ವರ್ಷಧಾರೆ
ಕಾಸರಗೋಡು ಜಿಲ್ಲೆಯ ಹಲವೆಡೆ ಗುರುವಾರ ರಾತ್ರಿ ಗುಡುಗು ಮಿಂಚು ಸಹಿತ ಸಾಧಾರಣ ಮಳೆಯಾಗಿದೆ. ಕಾಸರಗೋಡಿನಲ್ಲಿ ಶುಕ್ರವಾರ ಬೆಳಗ್ಗೆ ಕೂಡಾ ಭಾರೀ ಮಳೆಯಾಗಿದೆ.
ಕಾಸರಗೋಡಿನಲ್ಲಿ ಇಂದು ಬೆಳಗ್ಗೆ 10ರಿಂದ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಭಾರೀ ಮಳೆ ಸುರಿದಿದೆ. ಬೇಸಿಗೆಯ ದಗೆಯಿಂದ ಬಳಲುತ್ತಿದ್ದ ಜನತೆಗೆ ಅಕಾಲಿಕ ಮಳೆ ತಂಪೆರೆದಿದೆ. ನಿನ್ನೆ ರಾತ್ರಿಯಿಂದ ಹಲವೆಡೆ ಭಾರೀ ಹಾಗೂ ಕೆಲವೆಡೆ ತುಂತುರು ಮಳೆಯಾಗಿದೆ.
ಪುತ್ತೂರಿನ ಹೆಚ್ಚಿನ ಕಡೆಗಳಲ್ಲಿ ಸಾಧಾರಣ ಮಳೆ
ಪುತ್ತೂರು ತಾಲೂಕಿನ ವಿವಿಧೆಡೆಗಳಲ್ಲಿ ಗುರುವಾರ ರಾತ್ರಿ ಮತ್ತು ಶುಕ್ರವಾರ ಹಗಲು ಮಳೆಯಾಗಿದೆ.
ತಾಲೂಕಿನ ಸವಣೂರು, ಸರ್ವೆ, ಮುಂಡೂರು ಕಡೆಗಳಲ್ಲಿ ನಿನ್ನೆ ರಾತ್ರಿ ಮಳೆಯಾಗಿದ್ದರೆ, ಪುತ್ತೂರು ಪೇಟೆ, ಈಶ್ವರಮಂಗಲ, ಸುಳ್ಯಪದವು, ಕರ್ನೂರು, ಕಾವು, ಕೌಡಿಚ್ಚಾರು, ಕುಂಬ್ರ, ಕೊಳ್ತಿಗೆ, ಮಾಡಾವು, ಬಡಗನ್ನೂರು ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಗ್ಗೆ ಮಳೆಯಾಗಿದೆ. ನಿನ್ನೆ ರಾತ್ರಿ ದಿಢೀರ್ ಆಗಿ ಸುರಿದ ಮಳೆಯಿಂದಾಗಿ ಬಹಳಷ್ಟು ಕೃಷಿಕರು ಅಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆ ಒದ್ದೆಯಾಗಿದ್ದು,ಮಳೆ ನೀರಿನಲ್ಲಿ ಕೊಚ್ಚಿ ಹೋಗಿರುವುದಾಗಿ ತಿಳಿದು ಬಂದಿದೆ. ಸುಳ್ಯದಲ್ಲೂ ಸುರಿದಿದೆ ಮಳೆ
ಶುಕ್ರವಾರ ಪೂರ್ವಾಹ್ನ ಸುಳ್ಯ ತಾಲೂಕಿನ ಹಲವೆಡೆ ಭಾರೀ ಮಳೆ ಸುರಿಯಿತು. ಗುರುವಾರ ತಡ ರಾತ್ರಿ ಕೆಲವು ಕಡೆ ಮಳೆಯಾಗಿತ್ತು. ಭಾರೀ ಮಳೆಗೆ ಸುಳ್ಯ ನಗರದಲ್ಲಿ ಹಲವೆಡೆ ನೀರು ತುಂಬಿ ಹರಿದಿದ್ದು, ರಸ್ತೆಯಲ್ಲಿ ನೀರು ತುಂಬಿದ್ದರಿಂದ ವಾಹನ ಸವಾರರು ಪರದಾಡು ವಂತಾಗಿತ್ತು. ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.
ಮುಂದಿನ 2-3 ದಿನ ಮಳೆ ಸಾಧ್ಯತೆ
ಮುಂದಿನ ಎರಡು-ಮೂರು ದಿನಗಳ ಕಾಲ ಜಿಲ್ಲೆ ಹಾಗೂ ಕರಾವಳಿಯ ಹಲವೆಡೆ ಗುಡುಗು -ಮಿಂಚಿನಿಂದ ಕೂಡಿದ ಸಾಮಾನ್ಯ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾ ಮಾನ ಇಲಾಖೆಯ ಮೂಲ ಗಳು ತಿಳಿಸಿವೆ

No comments:

Post a Comment