Sunday, February 17, 2013

ಗೀತಿಕಾ ತಾಯಿ ಆತ್ಮಹತ್ಯೆ: ಕಾಂಡ, ಛಡ್ಡಾ ವಿರುದ್ಧ ಪ್ರಚೋದನೆ ಮೊಕದ್ದಮೆ: ಮಗನಿಗೆ ಧೈರ್ಯದಿಂದಿರುವಂತೆ ಅನುರಾಧಾ ಸಲಹೆ




ಹೊಸದಿಲ್ಲಿ: ಗೀತಿಕಾ ಶರ್ಮಾರ ತಾಯಿಯ ಆತ್ಮಹತ್ಯೆಗೆ ಸಂಬಂಧಿಸಿ ದಿಲ್ಲಿ ಪೊಲೀಸರು ಹರ್ಯಾಣದ ಮಾಜಿ ಮಂತ್ರಿ ಗೋಪಾಲ್ ಕಾಂಡ ಮತ್ತು ಆತನ ಸಹಚರ ಅರುಣ ಛಡ್ಡಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
ತನ್ನ ಆತ್ಮಹತ್ಯೆ ಪತ್ರದಲ್ಲಿ ಅನುರಾಧಾ ಶರ್ಮಾ ಇವರಿಬ್ಬರ ಹೆಸರುಗಳನ್ನು ದಾಖಲಿಸಿರುವ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ತೆಗೆದುಕೊಂಡಿದ್ದಾರೆ.
ಮಾಜಿ ಗಗನಸಖಿ ಗೀತಿಕಾ ಶರ್ಮಾರ ತಾಯಿ ಅನುರಾಧಾ ಶರ್ಮಾ ನಿನ್ನೆ ಸಂಜೆ ಇಲ್ಲಿನ ಅಶೋಕ್ ವಿಹಾರ್‌ನಲ್ಲಿನ ತನ್ನ ಮನೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತನ್ನ ಸಾವಿಗೆ ಕಾಂಡ ಮತ್ತು ಛಡ್ಡಾ ಕಾರಣ ಎಂದು ತನ್ನ ಆತ್ಮಹತ್ಯೆ ಪತ್ರದಲ್ಲಿ ಅವರು ಬರೆದಿದ್ದರು.
ಗೀತಿಕಾ ಶರ್ಮಾ ಕೊಲೆ ಪ್ರಕರಣದಲ್ಲಿ ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ಕಾಂಡ ಮತ್ತು ಛಡ್ಡಾ ವಿರುದ್ಧ ಪೊಲೀಸರು 306ನೆ ವಿಧಿ (ಆತ್ಮಹತ್ಯೆಗೆ ಪ್ರಚೋದನೆ)ಯಡಿ ಪ್ರಕರಣ ದಾಖಲಿಸಿದ್ದಾರೆ.
ಮಗಳ ಸಾವಿನ ಬಳಿಕ ತಾನು ಖಿನ್ನತೆಗೊಳಗಾಗಿದ್ದೆ ಎಂದು ತನ್ನ ಪತ್ರದಲ್ಲಿ ಅನುರಾಧಾ ಹೇಳಿದ್ದಾರೆ ಹಾಗೂ ಗೀತಿಕಾ ಸಾವಿಗೆ ಕಾಂಡ ಮತ್ತು ಛಡ್ಡಾ ಕಾರಣ ಎಂದು ಆರೋಪಿಸಿದ್ದಾರೆ.
 
ತನ್ನ ಈ ನಿರ್ಧಾರಕ್ಕೆ ಕಾರಣವೇನು ಎಂಬುದನ್ನು ವಿವರಿಸಿ ಅನುರಾಧಾ ತನ್ನ ಮಗನಿಗೂ ಪತ್ರವೊಂದನ್ನು ಬರೆದಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಮಗನನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ ಧೈರ್ಯದಿಂದಿರುವಂತೆ ಅವರು ಮಗನಿಗೆ ಸಲಹೆ ನೀಡಿದ್ದಾರೆ.
ತನ್ನ ಕುಟುಂಬಕ್ಕೆ ಕಿರುಕುಳ ನೀಡಲಾಗುತ್ತಿರುವ ಹಿನ್ನೆಲೆಯಲ್ಲಿ ತಾನು ಈ ಅತಿರೇಕದ ಕ್ರಮವನ್ನು ತೆಗೆದುಕೊಳ್ಳುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ಕಾಂಡ ವಿರುದ್ಧದ ಪ್ರಕರಣವನ್ನು ಹಿಂದಕ್ಕೆ ಪಡೆಯುವಂತೆ ಕಾಂಡ ಕುಟುಂಬ ಗೀತಿಕಾ ಶರ್ಮಾ ಕುಟುಂಬದ ಮೇಲೆ ಒತ್ತಡ ಹೇರಿದ ಬಗ್ಗೆ ಯಾವುದೇ ದೂರು ಬಂದಿಲ್ಲ ಎಂದು ಪೊಲೀಸ್ ಅಧಿಕಾರಿ ಹೇಳಿದರು. ಅನುರಾಧಾ ಖಿನ್ನತೆಯಿಂದ ಬಳಲುತ್ತಿದ್ದರು ಹಾಗೂ ಗೀತಿಕಾ ಸಾವಿನ ಬಳಿಕ ಅವರನ್ನು ಒಂಟಿಯಾಗಿರಲು ಅವರ ಕುಟುಂದ ಸದಸ್ಯರು ಬಿಡುತ್ತಿರಲಿಲ್ಲ.
ನಿನ್ನೆಯೂ ಊಟಕ್ಕೆ ಬರುವಂತೆ ಮಗ ಅಂಕಿತ್ ಶರ್ಮಾ ಅನುರಾಧಾರಿಗೆ ಕರೆ ಮಾಡಿದ್ದ. ಆದರೆ, ಇದನ್ನು ತಿರಸ್ಕರಿಸಿದ್ದ ಅನುರಾಧಾ ಸಂಜೆ ಮನೆಯಲ್ಲಿ ಭೇಟಿಯಾಗಬಹುದೆಂದು ಹೇಳಿದ್ದರು.
ಆದರೆ, ನಿನ್ನೆ ಅನುರಾಧಾ ಕಚೇರಿಯಿಂದ ಬೇಗ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡರು.

ಕಳೆದ ವರ್ಷದ ಆಗಸ್ಟ್‌ನಲ್ಲಿ ಗೀತಿಕಾ ಆತ್ಮಹತ್ಯೆ ಮಾಡಿಕೊಂಡಿದ್ದರು. ತನ್ನ ಆತ್ಮಹತ್ಯೆಗೆ ಕಾಂಡ ನೀಡುತ್ತಿದ್ದ ಕಿರುಕುಳವೇ ಕಾರಣ ಎಂದು ಅವರು ಹೇಳಿದ್ದರು. ಕಾಂಡ ಒಡೆತನದ ಈಗ ದಿವಾಳಿಯಾಗಿರುವ ಎಂಡಿಎಲ್‌ಆರ್ ಏರ್‌ಲೈನ್ಸ್‌ನಲ್ಲಿ ಗೀತಿಕಾ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದರು. ಅವರು 2012 ಆಗಸ್ಟ್ 4ರಂದು ರಾತ್ರಿ ತನ್ನ ಮನೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದರು.

No comments:

Post a Comment