Thursday, February 28, 2013

ನೇತಾಜಿ ನಿವಾಸ ಪೂರ್ವಜರದ್ದಲ್ಲ: ಮಮತಾಗೆ ಕುಟುಂಬಸ್ಥರ ಪತ್ರ



ಕೋಲ್ಕತಾ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಕೊಡಲಿಯಾದಲ್ಲಿರುವ ನಿವಾಸ ಸ್ವ್ವಾತಂತ್ರ ಹೋರಾಟಗಾರ ಮತ್ತು ಇಂಡಿಯನ್ ನ್ಯಾಷನಲ್ ಆರ್ಮಿಯ ಸ್ಥಾಪಕ ನೇತಾಜಿ ಸುಭಾಶ್ಚಂದ್ರ ಬೋಸ್‌ಗೆ ಸೇರಿದ್ದಲ್ಲ ಎಂದು ಅವರ ಕುಟುಂಬಸ್ಥರು ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಬರೆದಿರುವ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

 ನೇತಾಜಿ ವಾಸಿಸುತ್ತಿದ್ದ ಈ ಮನೆಯನ್ನು ರಾಜ್ಯ ಸರಕಾರ ಸ್ವಾಧೀನಪಡಿಸಿಕೊಂಡು ಅಲ್ಲಿ ನೇತಾಜಿಯವರ ಪಾರಂಪರಿಕ ಸ್ಮಾರಕವನ್ನು ನಿರ್ಮಿಸಲು ನಿರ್ಧರಿಸಿತ್ತು. ಎರಡು ಅಂತಸ್ತುಗಳ ಈ ಮನೆಯಲ್ಲಿ ಕೇವಲ ಎರಡು ಕೊಠಡಿಗಳಿವೆ. ಒಂದು ಕೆಳ ಅಂತಸ್ತಿನಲ್ಲಿ ಮತ್ತೊಂದು ಮೇಲಿನ ಅಂತಸ್ತಿನಲ್ಲಿದೆ. ಇದು ನೇತಾಜಿಯವರ ತಂದೆ ಜಾನಕಿ ನಾಥ್‌ಗೆ ಸೇರಿದ್ದು, ಕಟ್ಟಡದ ಉಳಿದ ಭಾಗ ಅವರ ದೂರದ ಸಂಬಂಧಿಗಳಿಗೆ ಸೇರಿದ್ದಾಗಿದೆ ಎಂದು ಬೋಸ್ ಕುಟುಂಬದ ಸುಮಾರು 20 ಜನರು ಸಹಿ ಮಾಡಿರುವ ಪತ್ರದಲ್ಲಿ ಮಮತಾರಿಗೆ ತಿಳಿಸಲಾಗಿದೆ.
 
 ಸರಿ ಸುಮಾರು 150 ವರ್ಷಗಳ ಹಿಂದೆ ನೇತಾಜಿಯ ಅಜ್ಜ ನಿರ್ಮಿಸಿದ್ದ ಈ ಮನೆಗೆ ನೇತಾಜಿ ಆಗಾಗ ಭೇಟಿ ನೀಡುತ್ತಿದ್ದರೇ ಹೊರತು ಅವರು ಇಲ್ಲಿ ಎಂದೂ ವಾಸವಿರಲಿಲ್ಲ. ಅವರು ಇಲ್ಲಿ ವಾಸವಿದ್ದುದಕ್ಕೆ ರಾತ್ರೋ ರಾತ್ರಿ ದಾಖಲೆಯನ್ನು ನೀಡಲು ಸಾಧ್ಯವಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ನೇತಾಜಿ ಜನಿಸಿದ್ದು ಕಟಕ್‌ನಲ್ಲಿ ಆನಂತರ ಅವರು ವಿವಿಧ ಪ್ರದೇಶದಲ್ಲಿ ತಮ್ಮ ಜೀವನವನ್ನು ಕಳೆದಿದ್ದಾರೆ. ಅವರು ಸ್ವಂತದ್ದಾದ ಮನೆಯನ್ನು ಎಂದಿಗೂ ಕಟ್ಟಲಿಲ್ಲ. ಬದಲಿಗೆ ತಂದೆಯ ಮತ್ತು ಸಹೋದರರು ನಿರ್ಮಿಸಿದ್ದ ಮನೆಗಳಲ್ಲಿ ಅವರು ವಾಸಿಸುತ್ತಿದ್ದರು. ಕೋಲ್ಕತಾದ ಎಲ್ಗಿನ್ ರಸ್ತೆಯಲ್ಲಿ ಅವರ ತಂದೆ ನಿರ್ಮಿಸಿದ್ದ ಮನೆಯಿದ್ದು, ಅಲ್ಲಿ ಅವರು ಬಹಳಷ್ಟು ವರ್ಷ ವಾಸಿಸಿದ್ದರು. ಈ ಮನೆಯನ್ನು ಈಗಾಗಲೇ ನೇತಾಜಿ ಭವನವನ್ನಾಗಿ ಪರಿವರ್ತಿಸಲಾಗಿದೆ ಎಂದು ಬೋಸ್ ಕುಟುಂಬದ ವಕ್ತಾರ ಚಂದ್ರಕುಮಾರ್ ಬೋಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
 ಮಮತಾ ಬ್ಯಾನರ್ಜಿ ಯಾರದೋ ಮನೆಗೆ ಬಂದು ಈ ಮನೆಯ ವರಾಂಡಾದಲ್ಲಿ ನೇತಾಜಿ ಕಾಲಿರಿಸಿದ್ದರು ಅದಕ್ಕಾಗಿ ಇದನ್ನು ಸ್ವಾಧೀನಪಡಿಸಿಕೊಳ್ಳುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ. ರಾಜ್ಯದ ಖ್ಯಾತ ವಕೀಲರಾಗಿದ್ದ ಜಾನಕಿನಾಥ್ ಬೋಸ್‌ರಿಗೆ ಈ ಮನೆಯನ್ನು ಸಮರ್ಪಿಸಬೇಕು. ನೇತಾಜಿಯವರ ತಂದೆಯಾಗಿ ಅವರಿಗೆ ಅಂತಹ ಎಲ್ಲಾ ಹಕ್ಕುಗಳು ಇವೆ ಎಂದು ನೇತಾಜಿಯರವ ಸೋದರ ಮೊಮ್ಮಗ ಚಂದ್ರಕುಮಾರ್ ಬೋಸ್ ತಿಳಿಸಿದ್ದಾರೆ.
 
1935ರವರೆಗೆ ಕುಟುಂಬದ ಅರ್ಚಕ ಈ ಮನೆಯಲ್ಲಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ನಾರಾಯಣ ಪೂಜೆ ಮಾಡುತ್ತಿದ್ದರು.
ಅಲ್ಲದೆ ಬೋಸ್ ಕುಟುಂಬ ವಾರ್ಷಿಕವಾದ ದುರ್ಗಾ ಪೂಜೆ ಮತ್ತು ಸರಸ್ವತಿ ಫೂಜೆಯನ್ನು ಇಲ್ಲಿಯೇ ನಡೆಸುತ್ತಿತ್ತು.
ನೇತಾಜಿಯವರ ತಾಯಿ ಪ್ರಭಾವತಿ ಬೋಸ್ ಯಾವುದೇ ಕಾರಣಕ್ಕೂ ಈ ಮನೆಯಲ್ಲಿ ಈ ಆಚರಣೆ ನಿಲ್ಲಬಾರದು ಎಂದು ಹೇಳಿದ್ದರು. ಸ್ಥಳೀಯ ಜನರ ಅನುಕೂಲಕ್ಕಾಗಿ ಮನೆಯ ಗೇಟ್‌ನ ಬಳಿ ಅಂಚೆ ಕಚೇರಿಯೊಂದನ್ನು ಸ್ಥಾಪಿಸಲಾಗಿತ್ತು.
ಹಲವಾರು ವರ್ಷಗಳವರೆಗೂ ಅದರಿಂದ ಬಾಡಿಗೆಯನ್ನು ಕೂಡಾ ಸ್ವೀಕರಿಸಿರಲಿಲ್ಲ ಎಂದು ಮಮತಾ ಬ್ಯಾನರ್ಜಿಗೆ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ.

No comments:

Post a Comment