Wednesday, February 6, 2013

ಕಾರಾಗೃಹಗಳಲ್ಲಿ ಮೊಬೈಲ್ ಜಾಮರ್, ಬಾಡಿಸ್ಕಾನರ್ ಅಳವಡಿಕೆ: ನಾರಾಯಣಸ್ವಾಮಿ



 ಫೆಬ್ರವರಿ -06-2013

ಬೆಂಗಳೂರು: ಕಾರಾಗೃಹಗಳಲ್ಲಿ ಮಾದಕ ವಸ್ತುಗಳು, ಮೊಬೈಲ್ ಸೇರಿದಂತೆ ಇನ್ನಿತರ ನಿರ್ಬಂಧಿತ ಸೌಲಭ್ಯಗಳು ಕೈದಿಗಳಿಗೆ ಲಭ್ಯವಾಗುತ್ತಿರುವುದಕ್ಕೆ ಕಡಿವಾಣ ಹಾಕಲು ಮೊಬೈಲ್ ಜಾಮರ್ ಹಾಗೂ ಬಾಡಿ ಸ್ಕಾನರ್‌ಗಳನ್ನು ಅಳವಡಿಸಲು ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಬಂದಿಖಾನೆ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದ್ದಾರೆ.
ಮಂಗಳವಾರ ವಿಧಾನಪರಿಷತ್‌ನಲ್ಲಿ ಜೆಡಿಎಸ್ ನಾಯಕ ಎಂ.ಸಿ.ನಾಣಯ್ಯ ಮಂಡಿಸಿದ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿನ ಎಲ್ಲ ಕಾರಾಗೃಹಗಳಿಗೆ ಮೊಬೈಲ್ ಜಾಮರ್ ಹಾಗೂ ಬಾಡಿ ಸ್ಕಾನರ್ ಅಳವಡಿಸಲು 25 ಕೋಟಿ ರೂ.ಗಳ ಅಗತ್ಯವಿದೆ. ಈಗಾಗಲೆ ಬೆಂಗಳೂರು ಹಾಗೂ ಮೈಸೂರಿನ ಕಾರಾಗೃಹಗಳಲ್ಲಿ ಮೊಬೈಲ್ ಜಾಮರ್ ಅಳವಡಿಸಲಾಗಿದ್ದು, ಬೆಳಗಾವಿ ಮತ್ತು ಬಳ್ಳಾರಿ ಕೇಂದ್ರ ಕಾರಾಗೃಹಗಳಿಗೆ ಜಾಮರ್ ಉಪಕರಣ ಅಳವಡಿಕೆಗೆ ಆದೇಶ ಹೊರಡಿಸಲಾಗಿದೆ ಎಂದರು. ಬೆಳಗಾವಿ ಕೇಂದ್ರ ಕಾರಾಗೃಹಕ್ಕೆ 3.94 ಕೋಟಿ ರೂ.ವೆಚ್ಚದಲ್ಲಿ ಜಾಮರ್ ಉಪಕರಣ ಅಳವಡಿಕೆಗೆ ಇಸಿಐಎಲ್ ಸಂಸ್ಥೆಗೆ ಆದೇಶ ನೀಡಲಾಗಿದ್ದು, ಶೀಘ್ರದಲ್ಲೆ ಕಾಮಗಾರಿ ಪ್ರಾರಂಭವಾಗಲಿದೆ.
ಕೈದಿಗಳಿಗೆ ಅಕ್ರಮವಾಗಿ ನಿಷೇಧಿತ ವಸ್ತುಗಳು ದೊರೆಯುವುದನ್ನು ನಿಯಂತ್ರಿಸಲು ಎಲ್ಲ ಕೇಂದ್ರ/ಜಿಲ್ಲಾ ಕಾರಾಗೃಹಗಳಿಗೂ ಬ್ಯಾಗೇಜ್ ಸ್ಕಾನರ್, ಹ್ಯಾಂಡ್ ಮೆಟಲ್ ಡಿಟೆಕ್ಟರ್ ಅಳವಡಿಸಲಾಗುತ್ತಿದೆ ಎಂದು ಅವರು ಹೇಳಿದರು.

No comments:

Post a Comment