Wednesday, February 13, 2013

ಹೆಣ್ಣು ಮಗು: ಮಹಿಳೆಯನ್ನು ಟೆರೇಸ್‌ನಿಂದ ದೂಡಿ ಹಾಕಿದ ಅತ್ತೆ



ಭೋಪಾಲ್: ಹೆಣ್ಣು ಶಿಶುವಿಗೆ ಜನ್ಮ ನೀಡಿದರು ಎಂಬ ಕಾರಣಕ್ಕಾಗಿ 22 ವರ್ಷ ಪ್ರಾಯದ ಯುವತಿಯೊಬ್ಬರನ್ನು ಅವರ ಅತ್ತೆ ಮನೆಯ ಟೆರೇಸ್‌ನಿಂದ ದೂಡಿ ಹಾಕಿದ ಘಟನೆ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಿಂದ ವರದಿಯಾಗಿದೆ.
ಬಲಿಪಶು ಮಹಿಳೆಗೆ ಈಗಾಗಲೇ ಎರಡು ವರ್ಷ ಪ್ರಾಯದ ಹೆಣ್ಣು ಮಗುವಿದೆ. ಈ ಬಾರಿ ಗಂಡು ಮಗುವಿಗೆ ಜನ್ಮ ನೀಡದಿದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂಬುದಾಗಿ ಎರಡನೆ ಗರ್ಭದ ವೇಳೆ ಆಕೆಯ ಗಂಡನ ಮನೆಯವರು ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.
ಮಹಿಳೆ ತಿಂಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಅಂದಿನಿಂದ ಗಂಡನ ಮನೆಯವರು ಆಕೆಗೆ ಚಿತ್ರ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಟೆರೇಸ್‌ನಿಂದ ಕೆಳಗೆ ಬಿದ್ದು ಮಹಿಳೆಯ ಬೆನ್ನು ಮೂಳೆಗೆ ಗಂಭೀರವಾದ ಏಟಾಗಿದೆ. ಅವರು ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಹಿಳೆ ಈಗ ತನ್ನ ಅತ್ತೆಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅತ್ತೆ ತಪ್ಪಿಸಿಕೊಂಡಿದ್ದಾಳೆ.

No comments:

Post a Comment