Friday, February 1, 2013

ಉದ್ಯೋಗ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ: ಅಗ್ರ ಪಟ್ಟಿಯಲ್ಲಿ ಭಾರತ



ಮುಂಬೈ: ಉದ್ಯೋಗ ಸ್ಥಳದಲ್ಲಿ ಮಹಿಳಾ ಉದ್ಯೋಗಿಗಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳಿಗೆ ಸಂಬಂಧಿಸಿದಂತೆ ಎಲ್‌ಪಿಎಸ್‌ಒಎಸ್ ಸಂಸ್ಥೆ 22 ದೇಶಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಭಾರತ ಕೆಟ್ಟ ದಾಖಲೆಯನ್ನು ಹೊಂದಿದ್ದು ಅಗ್ರ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ಮಹಿಳಾ ಉದ್ಯೋಗಿಗಳ ಉದ್ಯೋಗ ಸ್ಥಳದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಸಮೀಕ್ಷೆಯಲ್ಲಿ ಭಾರತದಲ್ಲಿನ ಶೇ. 26 ಮಹಿಳಾ ಉದ್ಯೋಗಿಗಳು ಹಲವಾರು ರೀತಿಯಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದೇವೆ ಎಂದು ತಿಳಿಸಿದ್ದಾರೆ.
ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಅಧಿಕ ಪ್ರಮಾಣದಲ್ಲಿ ಉದ್ಯೋಗ ಸ್ಥಳದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿರುವುದರಿಂದ ಅದು ಮೊದಲ ಸ್ಥಾನದಲ್ಲಿದೆ ಎಂದಿದೆ.
ಅಧ್ಯಯನ ವರದಿಯ ಪ್ರಕಾರ, ಶೇ. 18 ಲೈಂಗಿಕ ದೌರ್ಜನ್ಯವನ್ನು ಹೊಂದಿರುವ ಚೀನಾ ಮತ್ತು ಶೇ. 16 ಪ್ರಕರಣಗಳನ್ನು ಹೊಂದಿರುವ ಸೌದಿ ಅರೇಬಿಯಾ ನಂತರದ ಸ್ಥಾನದಲ್ಲಿವೆ.
ಆಕ್ಸ್‌ಫಮ್ ಇಂಡಿಯಾ ಮತ್ತು ಐಎಂಆರ್‌ಬಿ ಇಂಟರ್‌ನ್ಯಾಷನಲ್ 2011-12ರಲ್ಲಿ ನಡೆಸಿದ ಮತ್ತೊಂದು ಅಧ್ಯಯನದಲ್ಲಿ ಶೇ. 17 ಮಹಿಳೆಯರು ತಮ್ಮ ಉದ್ಯೋಗ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯವನ್ನು ಎದುರಿಸಿರುವುದಾಗಿ ಹೇಳಿದ್ದಾರೆ.
ಅಧ್ಯಯನದ ಸಮಯದಲ್ಲಿ 18ರಿಂದ 45 ವರ್ಷದ ನಡುವಿನ 400 ಮಹಿಳೆಯರ ಸಮೀಕ್ಷೆ ನಡೆಸಲಾಗಿತ್ತು. ಇದರಲ್ಲಿ ಶೇ. 17 ಮಂದಿ ಮಾತ್ರ ಉದ್ಯೋಗ ಸ್ಥಳದಲ್ಲಿನ ಮಹಿಳಾ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಹೊರಡಿಸಿರುವ ಮಾರ್ಗಸೂಚಿಯ ಬಗ್ಗೆ ತಿಳಿದಿದ್ದಾರೆ ಎಂದು ವರದಿ ಹೇಳಿದೆ.
ಎಲ್ಲಾ ಕ್ಷೇತ್ರದಲ್ಲಿಯೂ ಮಹಿಳಾ ಲೈಂಗಿಕ ಕಿರುಕುಳ ಸಾಮಾನ್ಯವಾಗಿದೆ. ಕೆಲ ಸಂದರ್ಭದಲ್ಲಿ ಮಹಿಳೆಯರು ಹಿರಿಯ ಅಧಿಕಾರಿಗಳು ಮತ್ತು ಕೆಲವೊಮ್ಮೆ ಕಿರಿಯ ಸಹೋದ್ಯೋಗಿಗಳಿಂದಲೂ ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ ಎಂದು ಟಾಟಾ ಸಾಮಾಜಿಕ ವಿಜ್ಞಾನ ಸಂಸ್ಥೆಯಲ್ಲಿ ‘ಉದ್ಯೋಗ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ’ ಕುರಿತು ಪಿಎಚ್‌ಡಿ ಮಾಡುತ್ತಿರುವ ಅನಘಾ ಸರ್ಪೋಟ್ದರ್ ಹೇಳಿದ್ದಾರೆ.
ಉದ್ಯೋಗ ಸ್ಥಳದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತಿ ಸರಕಾರಿ ಇಲಾಖೆಗಳು ಮತ್ತು ಖಾಸಗಿ ಸಂಸ್ಥೆಗಳು ಸಂತ್ರಸ್ತರಿಂದ ದೂರು ಸ್ವೀಕರಿಸಿ ಅವರಿಗೆ ನ್ಯಾಯ ದೊರಕಿಸಿಕೊಡಲು ಪ್ರತ್ಯೇಕ ವಿಭಾಗವೊಂದನ್ನು ಸ್ಥಾಪಿಸಬೇಕಿದೆ ಮತ್ತು ದೂರು ನೀಡಿದ 10 ದಿನಗಳೊಳಗೆ ತನಿಖೆಯನ್ನು ನಡೆಸಬೇಕಿರುವುದು ಕಡ್ಡಾಯವಾಗಿದೆ ಎಂದು ಮಹಿಳಾ ಹಕ್ಕುಗಳ ಕಾರ್ಯಕರ್ತೆ ಹಾಗೂ ಅರ್ಥಶಾಸ್ತ್ರ ಉಪನ್ಯಾಸಕಿ ವಿಭೂತಿ ಪಟೇಲ್ ಹೇಳಿದ್ದಾರೆ

No comments:

Post a Comment