Tuesday, February 26, 2013

ಮಗಳ ಪ್ರೇಮ ವ್ಯವಹಾರ ನಿಲ್ಲಿಸಲುಮಾಂತ್ರಿಕನಿಗೆ 75,000 ರೂ. ನೀಡಿದ ತಾಯಿ



ಸೂರತ್: ನಗರದ ಮಾಂತ್ರಿಕನೊಬ್ಬ ತನಗೆ ಸುಮಾರು 75,000 ರೂ. ವಂಚನೆ ಮಾಡಿದ್ದಾನೆಂದು ತಾಯಿಯೊಬ್ಬಳು ಪೊಲೀಸರಿಗೆ ದೂರು ನೀಡಿದ್ದಾಳೆ.
ತನ್ನ ಮಗಳ ಪ್ರೇಮ ವ್ಯವಹಾರವನ್ನು ಅಂತ್ಯಗೊಳಿಸುವುದಾಗಿ ನಂಬಿಸಿ ಮಾಂತ್ರಿಕ ಪ್ರವೀಣ್ ಎಂಬಾತ ತನ್ನಿಂದ 75,000 ರೂ. ಪಡೆದಿದ್ದನು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಬಹಳಷ್ಟು ಬಾರಿ ಹಣ ಹಿಂದಿರುಗಿಸುವಂತೆ ಒತ್ತಾಯಿಸಿದರೂ ಆತ ಹಣ ವಾಪಸು ನೀಡಲು ನಿರಾಕರಿಸಿದ್ದಾನೆಂದು ಜ್ಯೋತಿ ಸೈಲರ್ ಎಂಬವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಬಿಎಡ್ ವ್ಯಾಸಂಗ ಮಾಡುತ್ತಿರುವ ಜ್ಯೋತಿ ಸೈಲರ್‌ರ ಮಗಳು ಕಾಲೇಜಿಗೆ ಆಟೊದಲ್ಲಿ ಹೋಗುತ್ತಿದ್ದಳು. ಈ ಸಂದರ್ಭದಲ್ಲಿ ಆಕೆ ಆಟೊ ಚಾಲಕನನ್ನು ಪ್ರೇಮಿಸತೊಡಗಿದಳು. ಇದು ಜ್ಯೋತಿ ಸೈಲರ್‌ರ ಗಮನಕ್ಕೆ ಬಂದ ನಂತರ ಅವರು ಮಗಳನ್ನು ಕೂರಿಸಿಕೊಂಡು ಹಲವು ಬಾರಿ ಈ ಪ್ರೇಮ ವ್ಯವಹಾರವನ್ನು ನಿಲ್ಲಿಸುವಂತೆ ಮನವೊಲಿಸಲು ಯತ್ನಿಸಿದರೂ ಅದು ವಿಫಲವಾದ ಹಿನ್ನೆಲೆಯಲ್ಲಿ ಅವರ ಪ್ರೇಮ ವ್ಯವಹಾರವನ್ನು ಅಂತ್ಯಗೊಳಿಸಲು ಅಂತಿಮವಾಗಿ ಮಾಂತ್ರಿಕನೊಬ್ಬನ ಮೊರೆ ಹೋಗಲು ನಿರ್ಧರಿಸಿದರು.
 
ನಂತರ ಆಕೆ ಪ್ರವೀಣ್ ಎಂಬ ತಾಂತ್ರಿಕನನ್ನು ಸಂಪರ್ಕಿಸಿ ಸಹಾಯ ಯಾಚಿಸಿದರು. ಸಮಸ್ಯೆಯನ್ನು ಬೇಗನೆ ಪರಿಹರಿಸುವುದಾಗಿ ಭರವಸೆ ನೀಡಿದ ಆತ ಅದಕ್ಕಾಗಿ 35,000 ರೂ. ಬೇಡಿಕೆ ಇಟ್ಟಿದ್ದ. ಒಟ್ಟಿಗೆ ಅಷ್ಟೊಂದು ಹಣ ನೀಡಲು ಅಸಾಧ್ಯ ಎಂದ ಆಕೆ ಆರಂಭದಲ್ಲಿ 16,000 ರೂ. ನೀಡಿ ಆನಂತರ 60,000 ರೂ. ವೌಲ್ಯದ ಚಿನ್ನಾಭರಣವನ್ನು ಆತನಿಗೆ ನೀಡಿದ್ದರು.
ಹಲವು ವಾರಗಳ ನಂತರವೂ ಮಗಳ ಪ್ರೇಮ ವ್ಯವಹಾರ ಮುಂದುವರಿದಿದ್ದರಿಂದ ಆಕೆ ಮಾಂತ್ರಿಕ ಪ್ರವೀಣ್ ಬಳಿ ಹೋಗಿ ಹಣ ಮತ್ತು ಆಭರಣ ಹಿಂದಿರುಗಿಸುವಂತೆ ಮನವಿ ಮಾಡಿದರೂ ಆತ ಅವುಗಳನ್ನು ನೀಡಲು ನಿರಾಕರಿಸಿದ್ದರಿಂದ ಜ್ಯೋತಿ ಸೈಲರ್ ಅಂತಿಮವಾಗಿ ಮಾಂತ್ರಿಕನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

No comments:

Post a Comment