Monday, February 4, 2013

3,000 ಐಎಎಸ್, ಐಪಿಎಸ್ ಅಧಿಕಾರಿಗಳು ಬೇಕಾಗಿದ್ದಾರೆ!ಫೆಬ್ರವರಿ -04-2013

ಹೊಸದಿಲ್ಲಿ: ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಕೊರತೆ ಎದ್ದು ಕಾಣುತ್ತಿದ್ದು, ಇದು ಎಲ್ಲೆಡೆಯೂ ಆಡಳಿತದ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತಿದೆ. ದೇಶಾದ್ಯಂತ ಶೇ. 30ರಷ್ಟು ಅಂದರೆ ಸುಮಾರು 3,000 ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಕೊರತೆ ಇದ್ದು, ಇದು ಇನ್ನೂ ಹಲವು ವರ್ಷಗಳವರೆಗೂ ಮುಂದುವರಿಯಲಿದೆ ಎಂದು ಹೇಳಲಾಗಿದೆ.
ಪ್ರಸಕ್ತ ಪರಿಸ್ಥಿತಿಯಲ್ಲಿ ಪ್ರಮುಖ ಹುದ್ದೆಗಳು ಖಾಲಿ ಬಿದ್ದಿವೆ. ಐಎಎಸ್ ಅಧಿಕಾರಿಗಳು ಬಹುಸಂಖ್ಯೆಯ ಪ್ರಭಾರ ಹುದ್ದೆಗಳನ್ನು ಅಲಂಕರಿಸಿ ಸಮರ್ಪಕವಾಗಿ ಕಾರ್ಯನಿರ್ವಹಿಸಲಾಗದೆ ಒದ್ದಾಡುತ್ತಿದ್ದರೆ, ತೊಂದರೆಗೊಳಗಾಗಿರುವ ಜಿಲ್ಲೆಗಳಲ್ಲಿ ಪೊಲೀಸ್ ಅಧಿಕಾರಿಗಳೇ ಇಲ್ಲದಂತಾಗಿದೆ. ಬಹುತೇಕ ರಾಜ್ಯಗಳಲ್ಲಿ ಹಿರಿಯ ಐಎಎಸ್ ಅಧಿಕಾರಿಗಳು ಒಂದಕ್ಕಿಂತ ಹೆಚ್ಚು ಹುದ್ದೆಗಳನ್ನು ನಿರ್ವಹಿಸುತ್ತಿರುವುದರಿಂದ ಹಲವಾರು ಸಂದರ್ಭಗಳಲ್ಲಿ ಅವರು ಪೇಚಿಗೆ ಸಿಲುಕಿಕೊಂಡಿದ್ದಾರೆ.
 ಉದಾಹರಣೆಗೆ ಜಾರ್ಖಂಡ್‌ನಲ್ಲಿ ಇಲಾಖೆಯೊಂದರ ನಿರ್ದೇಶಕರಾಗಿರುವ ಐಎಎಸ್ ಅಧಿಕಾರಿಯೊಬ್ಬರು ಮತ್ತೊಂದು ಇಲಾಖೆಯ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗೆಯೇ ಸಚಿವಾಲಯದ ಪ್ರಮುಖ ಹುದ್ದೆಯಲ್ಲಿರುವ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಕಚೇರಿಯಲ್ಲಿ ಬಾಹ್ಯ ಸಮಸ್ಯೆಗಳಿಗೆ ಸಂಬಂಧಿಸಿದಂತೆಯೂ ಹೊರಗೆ ಹೋಗಿ ಕಾರ್ಯನಿರ್ವಹಿಸಬೇಕಿದೆ. ಇದರಿಂದಾಗಿ ಅವರಿಗೆ ಎರಡೂ ಕಡೆ ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದೆ ಸಾಕಷ್ಟು ಸಮಯದಲ್ಲಿ ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.
ಜಾರ್ಖಂಡ್ ರಾಜ್ಯದಲ್ಲಿ ಒಟ್ಟು 208 ಐಎಎಸ್ ಅಧಿಕಾರಿಗಳ ಪೈಕಿ ಹಾಲಿ 114 ಮಂದಿ ಮಾತ್ರ ಇದ್ದಾರೆ. ಅದರಲ್ಲಿ 16 ಜನರು ಕೇಂದ್ರ ಸರಕಾರದ ಸೇವೆಗೆ ನಿಯೋಜನೆಗೊಂಡಿದ್ದಾರೆ.
ನಕ್ಸಲ್ ಬಾಧಿತ ರಾಜ್ಯವಾಗಿರುವ ಜಾರ್ಖಂಡ್‌ನಲ್ಲಿ ಐಪಿಎಸ್ ಅಧಿಕಾರಿಗಳ ಕೊರತೆ ಸಾಕಷ್ಟು ಪ್ರಮಾಣದಲ್ಲಿದೆ. ಇದರ ಜತೆಗೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಲ್ಲಿ ಅಸಮರ್ಥರಾಗಿರುವ ಅಧಿಕಾರಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠರ ಹುದ್ದೆಗೆ ಕಳುಹಿಸಲಾಗುತ್ತಿದೆ. ಕೇಂದ್ರ ಸೇವೆಗೆ ನಿಯೋಜನೆ ಮಾಡಿರುವ ಅಧಿಕಾರಿಗಳನ್ನು ವಾಪಸು ಕಳುಹಿಸಿ ಎಂದು ನಾವು ಕೇಂದ್ರಕ್ಕೆ ಹಲವು ಬಾರಿ ಪತ್ರ ಬರೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಜಾರ್ಖಂಡ್‌ನ ನಿವೃತ್ತ ಡಿಜಿಪಿ ವಿ.ಡಿ. ರಾಂ ಹೇಳಿದ್ದಾರೆ.
ಇನ್ನು ಮಧ್ಯ ಪ್ರದೇಶದಲ್ಲಿ ಐಪಿಎಸ್ ಅಧಿಕಾರಿಗಳ ಕೊರತೆ ಪೊಲೀಸ್ ಇಲಾಖೆಯ ನೈತಿಕತೆಯ ಮೇಲೆಯೇ ಪರಿಣಾಮ ಬೀರಿದೆ. ರಾಜ್ಯದ ಒಟ್ಟು 291 ಐಪಿಎಸ್ ಅಧಿಕಾರಿಗಳ ಬಲದಲ್ಲಿ ಕೇವಲ 238 ಅಧಿಕಾರಿಗಳಿದ್ದಾರೆ. ಇದರಿಂದಾಗಿ ಇರುವ ಅಧಿಕಾರಿಗಳಿಗೆ ರಜೆ ಹಾಕಲೂ ಸಮಸ್ಯೆಯಾಗಿದೆ.

ಮೇಲ್ನೋಟಕ್ಕೆ ಐಪಿಎಸ್ ಅಧಿಕಾರಿಗಳ ಈ ಕೊರತೆ ಸಣ್ಣ ಪ್ರಮಾಣದ್ದಾಗಿದೆ ಎಂದು ಇತರರಿಗೆ ಅನಿಸುತ್ತದೆ. ಆದರೆ ಈ ಕೊರತೆ ದೊಡ್ಡ ಕಂದಕವನ್ನೇ ಸೃಷ್ಟಿಸಿದೆ ಎಂದು ಐಜಿಪಿ (ಆಡಳಿತ) ಆನಂದ್ ಕುಮಾರ್ ಹೇಳಿದ್ದಾರೆ. ಎಸ್‌ಪಿ ಮತ್ತು ಎಸ್‌ಎಸ್‌ಪಿ ಹಂತದಲ್ಲಿ ಈ ಕೊರತೆ ಇದೆ. ಜಿಲ್ಲಾ ಮಟ್ಟದ ಹುದ್ದೆಗೆ ವರ್ಗಾವಣೆ ಮಾಡಲು ನಮ್ಮಲ್ಲಿ ಸೂಕ್ತವಾದ ಅಧಿಕಾರಿಗಳಿಲ್ಲ. ಶೇ. 10 ರಜೆಯನ್ನು ಮೀಸಲಿಡುವುದು ಕೂಡಾ ಆಡಳಿತಾತ್ಮಕವಾಗಿ ಸಮಸ್ಯೆಯನ್ನುಂಟು ಮಾಡುತ್ತದೆ ಎಂದು ಅವರು ಹೇಳಿದ್ದಾರೆ.
ಪಂಜಾಬ್‌ನಲ್ಲಿ ಒಟ್ಟು 221 ಐಎಎಸ್ ಮತ್ತು 172 ಐಪಿಎಸ್ ಹುದ್ದೆಗಳಿವೆ. ಪ್ರಸಕ್ತ ಅಲ್ಲಿರುವುದು 180 ಐಎಎಸ್ ಮತ್ತು 142 ಐಪಿಎಸ್ ಅಧಿಕಾರಿಗಳು. ಹೀಗಾಗಿ ಕೆಲವೊಮದು ಅಧಿಕಾರಿಗಳು ಮೂರು ಹುದ್ದೆಗಳನ್ನು ಏಕಕಾಲದಲ್ಲಿ ನಿರ್ವಹಿಸುತ್ತಿದ್ದಾರೆ.
ಕೇಂದ್ರಾಡಳಿತ ಪ್ರದೇಶವಾಗಿರುವ ಚಂಡಿಗಢದಲ್ಲಿ ಹಣಕಾಸು ಕಾರ್ಯದರ್ಶಿ 10-12 ಇಲಾಖೆಗಳನ್ನು ನೋಡಿಕೊಳ್ಳುವುದರಲ್ಲಿ ಹೈರಾಣಾಗಿದ್ದಾರೆ.
ಹರ್ಯಾಣದಲ್ಲಿ ಒಟ್ಟು 205 ಐಎಎಸ್ ಮತ್ತು 137 ಐಪಿಎಸ್ ಅಧಿಕಾರಿಗಳ ಹುದ್ದೆಗಳಿದ್ದು, ಇದರಲ್ಲಿ 163 ಐಎಎಸ್ ಮತ್ತು 102 ಯಪಿಎಸ್ ಅಧಿಕಾರಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಲ್ಲಿ 20 ಐಎಎಸ್ ಅಧಿಕಾರಿಗಳು ಕೇಂದ್ರದ ನಿಯೋಜನೆಯಲ್ಲಿದ್ದಾರೆ.

No comments:

Post a Comment