Wednesday, February 13, 2013

ಗುರು ಹೆಂಡತಿಗೆ ಬರೆದಿದ್ದ ಪತ್ರ 24 ಗಂಟೆಯಲ್ಲಿ ವಿತರಣೆ



ಹೊಸದಿಲ್ಲಿ, : ಸಂಸತ್ ಭವನ ದಾಳಿ ಪ್ರಕರಣದ ದೋಷಿ ಅಫ್ಝಲ್ ಗುರುವನ್ನು ನೇಣಿಗೇರಿಸುವ ಮೊದಲು ತನ್ನ ಹೆಂಡತಿಗೆ ಕೊನೆಯ ಪತ್ರವೊಂದನ್ನು ಬರೆದಿದ್ದ. ಆ ಪತ್ರವನ್ನು 24 ಗಂಟೆಗಳಲ್ಲಿ ಕಾಶ್ಮೀರದ ಸೊಪೋರ್‌ನಲ್ಲಿರುವ ಆತನ ಹೆಂಡತಿಗೆ ತಲುಪಿಸಲಾಗಿದೆ.
ಸೊಪೋರ್ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಕರ್ಫ್ಯೂ ಜಾರಿಯಲ್ಲಿದ್ದರೂ ಶೀಘ್ರವಾಗಿ ಪತ್ರವನ್ನು ತಲುಪಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಗುರುವಿಗೆ ಫಾಶಿ ಜಾರಿಗೊಳಿಸುವ ಕುರಿತ ಮಾಹಿತಿಯನ್ನೊಳಗೊಂಡ ಪತ್ರ ಎರಡು ದಿನ ತಡವಾಗಿ ಯಾಕೆ ಕುಟುಂಬಕ್ಕೆ ಸಿಕ್ಕಿತು ಎಂಬ ವಿವಾದಕ್ಕೆ ಮತ್ತೆ ಚಾಲನೆ ದೊರೆತಿದೆ.
ಗುರುವನ್ನು ಶನಿವಾರ ಗಲ್ಲಿಗೇರಿಸಲಾಗಿತ್ತು. ತನಗೆ ಟೆಲಿವಿಶನ್ ಚಾನಲ್‌ಗಳ ಮೂಲಕ ಈ ವಿಷಯ ಗೊತ್ತಾಗಿದೆ ಎಂದು ಆತನ ಕುಟುಂಬ ಹೇಳಿದೆ. ಫೆಬ್ರವರಿ 7ರ ಮಧ್ಯ ರಾತ್ರಿ ಈ ಕುರಿತ ಮಾಹಿತಿಯನ್ನು ಗುರು ಕುಟುಂಬಕ್ಕೆ ಸ್ಪೀಡ್‌ಪೋಸ್ಟ್ ಮೂಲಕ ಕಳುಹಿಸಲಾಗಿತ್ತು ಎಂದು ಸರಕಾರ ಹೇಳಿಕೊಂಡಿದೆ. ಪತ್ರ ಸರಿಯಾದ ಸಮಯಕ್ಕೆ ವಿತರಣೆಯಾಗಿದ್ದರೂ ಗಲ್ಲಿಗೇರುವ ಮುನ್ನ ಅಷ್ಟು ಕಡಿಮೆ ಅವಧಿಯಲ್ಲಿ ಕೊನೆಯ ಬಾರಿಗೆ ಗುರು ಕುಟುಂಬಕ್ಕೆ ಆತನನ್ನು ಭೇಟಿಯಾಗಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೆಚ್ಚಿನವರು ಭಾವಿಸುತ್ತಾರೆ.
ಅದೇ ವೇಳೆ, ಗುರು ತನ್ನ ಹೆಂಡತಿಗೆ ಬರೆದ ಪತ್ರವನ್ನು ಜೈಲು ಅಧಿಕಾರಿಗಳು ನಿನ್ನೆ ಅಂಚೆಗೆ ಹಾಕಿದ್ದರು ಹಾಗೂ ಅದು ಇಂದು ಹೆಂಡತಿಯ ಕೈಸೇರಿದೆ. ಶನಿವಾರ ಮುಂಜಾನೆ ಗಲ್ಲಿಗೇರುವ ಸ್ವಲ್ಪವೇ ಮುನ್ನ ಗುರು ಆ ಪತ್ರವನ್ನು ಬರೆದಿದ್ದ ಎಂದು ಜೈಲು ಅಧಿಕಾರಿಗಳು ಹೇಳಿದ್ದಾರೆ.
ಪತ್ರವನ್ನು ಬರೆದ ಮೂರು ದಿನಗಳ ಬಳಿಕ ಯಾಕೆ ಕಳುಹಿಸಿಕೊಡಲಾಯಿತು ಎಂಬ ಪ್ರಶ್ನೆಗೆ ಸರಕಾರದಿಂದ ವಿವರಣೆ ಬಂದಿಲ್ಲ.
ಶನಿವಾರದ ಬಳಿಕ ಕಾಶ್ಮೀರದ ಹೆಚ್ಚಿನ ಭಾಗಗಳ್ಲಲಿ ಕರ್ಫ್ಯೂ ವಿಧಿಸಲಾಗಿದೆ. ಕಣಿವೆಯ ಕೆಲವು ಭಾಗಗಳಲ್ಲಿ ಮುಂಜಾಗರೂಕತೆಯ ಕ್ರಮವಾಗಿ ಇಂಟರ್‌ನೆಟ್ ಮತ್ತು ಮೊಬೈಲ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

No comments:

Post a Comment