Monday, February 25, 2013

20 ರೂ. ಬಾಕಿ ಇದ್ದಲ್ಲಿ ಮೊಬೈಲ್ ಸಂಖ್ಯೆ ನಿಷ್ಕ್ರಿಯಗೊಳ್ಳದು: ಟ್ರಾಯ್ಹೊಸದಿಲ್ಲಿ: ಪ್ರೀ ಪೇಡ್ ಮೊಬೈಲ್ ಸಂಖ್ಯೆ ಹೊಂದಿರುವ ಗ್ರಾಹಕರ ಮೊಬೈಲ್‌ನಲ್ಲಿ ಕನಿಷ್ಠ 20 ರೂ. ಬಾಕಿ ಇದ್ದಲ್ಲಿ ಬರುವ ಮಾರ್ಚ್ 22ರಿಂದ ಅಂತಹ ಸಂಖ್ಯೆ ನಿಷ್ಕ್ರಿಯ ಗೊಳ್ಳುವುದಿಲ್ಲ ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಹೇಳಿದೆ.
90 ದಿನಗಳವರೆಗೆ ಬಳಕೆಯಲ್ಲಿರದ ಮತ್ತು 20 ರೂ.ಗಿಂತಲೂ ಕಡಿಮೆ ಮೊತ್ತವಿರುವ ಪ್ರೀ ಪೇಡ್ ಮೊಬೈಲ್‌ಗಳನ್ನು ಮಾತ್ರ ನಿಷ್ಕ್ರಿಯಗೊಳಿಸುವಂತೆ ಟ್ರಾಯ್ ಎಲ್ಲಾ ದೂರಸಂಪರ್ಕ ಸಂಸ್ಥೆಗಳಿಗೆ ಸೂಚಿಸಿದೆ.
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ದೂರಸಂಪರ್ಕ ಗ್ರಾಹಕ ರಕ್ಷಣಾ ನಿಯಮದ ಹೊಸ ತಿದ್ದುಪಡಿಯ ಪ್ರಕಾರ, 20 ರೂ.ಗಿಂತ ಅಧಿಕ ಮೊತ್ತವನ್ನು ಪ್ರೀ ಪೇಡ್ ಸಂಖ್ಯೆಯ ಖಾತೆಯನ್ನು ಹೊಂದಿರುವ ಗ್ರಾಹಕರು ಮೊಬೈಲ್ ಬಳಕೆ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಅಂತಹ ವುಗಳನ್ನು ಯಾವುದೇ ದೂರಸಂಪರ್ಕ ಸೇವಾ ನಿರ್ವಾಹಕರು ನಿಷ್ಕ್ರಿಯಗೊಳಿಸುವಂತಿಲ್ಲ ಎಂದು ಹೇಳಲಾಗಿದೆ.
ಸರಾಸರಿ 6 ರೂ. ಬಾಕಿ ಹೊಂದಿರುವ ಮತ್ತು 30 ದಿನಗಳವರೆಗೆ ಬಳಕೆಯಾಗದ ಸುಮಾರು 20 ಕೋಟಿ ಪ್ರೀ ಪೇಡ್ ಮೊಬೈಲ್ ಸಂಖ್ಯೆಗಳು ನಿಷ್ಕ್ರಿಯ ಗೊಂಡಿರುವುದನ್ನು ಗಮನಿಸಿ ಟ್ರಾಯ್ ಈ ತಿದ್ದುಪಡಿಯನ್ನು ತಂದಿದೆ.
ಗ್ರಾಹಕನ ನಿಷ್ಕ್ರಿಯಗೊಂಡಿರುವ ಪ್ರೀಪೇಡ್ ಸಂಖ್ಯೆಯನ್ನು ಕ್ರಿಯಾಶೀಲಗೊಳಿಸಲು 15 ದಿನ ಕಾಲಾವಕಾಶ ನೀಡಲಿದ್ದು, ಅಷ್ಟರೊಳಗೆ ಅವರು ಅದನ್ನು ಸರಿಪಡಿಸಿಕೊಂಡಲ್ಲಿ ಹಿಂದಿನ ಸಂಖ್ಯೆಯನ್ನೇ ನೀಡಲಾಗುವುದು ಎಂದು ಟ್ರಾಯ್ ಹೇಳಿದೆ.
ಆದರೆ ನಿಷ್ಕ್ರಿಯಗೊಂಡ ಸಂಖ್ಯೆಯನ್ನು ಕ್ರಿಯಾಶೀಲಗೊಳಿಸಲು ದೂರಸಂಪರ್ಕ ಸೇವೆ ಒದಗಿಸುವ ಸಂಸ್ಥೆಗಳು ದುಬಾರಿ ಶುಲ್ಕವನ್ನು ಪಡೆಯಬಾರದು ಎಂದು ಅದು ಸೂಚಿಸಿದೆ.

No comments:

Post a Comment