Wednesday, February 27, 2013

1.52 ಲಕ್ಷ ಹುದ್ದೆಗಳ ಸೃಷ್ಟಿ



ಹೊಸದಿಲ್ಲಿ: ಆರ್ಥಿಕವಾಗಿ ಸಂಕಷ್ಟದಲ್ಲಿರುವುದರಿಂದ ಹೊರಗಿನಿಂದ ಸಾಲ ಪಡೆದು ರೈಲ್ವೆಯನ್ನು ಸುಧಾರಿಸುವುದಾಗಿ ಒಂದು ಕಡೆ ಹೇಳಿಕೊಳ್ಳುತ್ತಿರುವ ರೈಲ್ವೆ ಸಚಿವ ಪವನ್‌ಕುಮಾರ್ ಬನ್ಸಲ್ ಮತ್ತೊಂದು ಕಡೆ ಮುಂದಿನ ವರ್ಷ 1.52 ಲಕ್ಷ ಹೊಸ ಹುದ್ದೆಗಳನ್ನು ಸೃಷ್ಟಿಸಲಾಗುವುದು ಎಂದಿದ್ದಾರೆ.
ಭಾರತೀಯ ರೈಲ್ವೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಬದಲಾವಣೆ ಹೊಂದುತ್ತಿರುವುದರಿಂದ ಅದರ ಅಗತ್ಯಗಳಿಗೆ ತಕ್ಕಂತೆ ತನ್ನ ಕಾರ್ಯಪಡೆಯನ್ನು ಬದಲಿಸಿಕೊಳ್ಳಲು ಮುಂದಾಗಿದೆ ಎಂದು ಅವರು ತಿಳಿಸಿದ್ದಾರೆ.
ಯುವಕರಿಗೆ ಕೌಶಲ್ಯ ತರಬೇತಿ ನೀಡಲು ಅಗರ್ತಲಾ, ಚಂಡಿಗಢ, ಡೆಹ್ರಾಡೂನ್, ಇಂಫಾಲ, ಮಂಗಳೂರು, ನಾಗಪುರ, ಶಿಮ್ಲಾ ಸೇರಿದಂತೆ ದೇಶದ 25 ಸ್ಥಳಗಳಲ್ಲಿ ಕೌಶಲ್ಯ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ರೈಲ್ವೆಯ ಎಲೆಕ್ಟ್ರಾನಿಕ್ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ನಾಗಪುರದಲ್ಲಿ ವಿವಿದೋದ್ಧೇಶದ ತರಬೇತಿ ಸಂಸ್ಥೆ ಮತ್ತು ರೈಲ್ವೆ ಅಧಿಕಾರಿಗಳಿಗೆ ಹಣಕಾಸು ತರಬೇತಿಗೆ ಸಂಬಂಧಿಸಿದಂತೆ ಆಂಧ್ರ ಪ್ರದೇಶದ ಸಿಖಂದರಾಬಾದ್‌ನಲ್ಲಿ ಹಣಕಾಸು ತರಬೇತಿ ಸಂಸ್ಥೆಯನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಭಾರತೀಯ ರೈಲ್ವೆಗೆ ಸಂಬಂಧಿಸಿದ ವಿಷಯಗಳ ಕುರಿತಂತೆ ಕೇಂದ್ರೀಯ ವಿವಿಗಳು ಮತ್ತು ಇಂಧನ ಹಾಗೂ ಸಂಶೋಧನಾ ಸಂಸ್ಥೆ (ಟಿಇಆರ್‌ಐ)ಯಲ್ಲಿ ಪೀಠವೊಂದನ್ನು ಸ್ಥಾಪಿಸಿ ಐವರಿಗೆ ಫೆಲೋಶಿಪ್ ನೀಡಲಾಗುವುದು ಎಂದು ಅವರು ತಿಳಿಸಿದರು.

No comments:

Post a Comment