Friday, February 22, 2013


ಹೈದರಾಬಾದ್: ಅವಳಿ ಸ್ಫೋಟ ಕನಿಷ್ಠ 15 ಬಲಿ

ಶುಕ್ರವಾರ - ಫೆಬ್ರವರಿ -22-2013

*80ಕ್ಕೂ ಅಧಿಕ ಮಂದಿಗೆ ಗಾಯ   *ಸ್ಫೋಟಕ್ಕೆ ಬೈಕ್, ಸೈಕಲ್ ಬಳಕೆ
*ದಿಲ್ಲಿ, ಮುಂಬೈಗಳಲ್ಲಿ ರೆಡ್ ಅಲರ್ಟ್
ಹೈದರಾಬಾದ್, ಫೆ.21: ಆಂಧ್ರಪ್ರದೇಶದ ರಾಜಧಾನಿ ಹೈದರಾಬಾದ್ ನಗರದಲ್ಲಿ ಗುರುವಾರ ನಡೆದ ಸರಣಿ ಬಾಂಬ್ ಸ್ಫೋಟಕ್ಕೆ ಕನಿಷ್ಠ 15 ಮಂದಿ ಬಲಿಯಾಗಿದ್ದಾರೆ ಹಾಗೂ ೮೦ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ದಿಲ್‌ಸುಖ್‌ನಗರ್ ಪ್ರದೇಶದ ಜನದಟ್ಟಣೆಯ ಬಸ್‌ನಿಲ್ದಾಣದ ಬಳಿ ಸಂಜೆ 7 ಗಂಟೆಯ ಆಸುಪಾಸಿನಲ್ಲಿ ಅವಳಿ ಬಾಂಬ್‌ಗಳು ಸ್ಫೋಟಿಸಿವೆಯೆಂದು ಪೊಲೀಸರು ತಿಳಿಸಿದ್ದಾರೆ.ಘಟನೆಯ ಬಳಿಕ ಇಡೀ ಪ್ರದೇಶವನ್ನು ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳಗಳು ಸುತ್ತುವರಿದಿದ್ದು, ಶೋಧ ಕಾರ್ಯಾಚರಣೆಯನ್ನು ಆರಂಭಿಸಿವೆ.
ದಿಲ್‌ಸುಖ್ ನಗರದ ಬಸ್ ನಿಲ್ದಾಣದ ಬಳಿ ಇರುವ  ವೆಂಕಟಾದ್ರಿ ಥಿಯೇಟರ್  ಬಳಿ ಸಂಜೆ 7:00 ಗಂಟೆಯ ವೇಳೆಗೆ ಮೊದಲ ಬಾಂಬ್ ಸ್ಫೋಟಿಸಿತು.  ಐದು ನಿಮಿಷಗಳ ಬಳಿಕ ಕೊನಾರ್ಕ್ ಚಿತ್ರಮಂದಿರದ ಬಳಿ ಇರುವ ಡಾಬಾವೊಂದರ ಬಳಿ ಇನ್ನೊಂದು ಬಾಂಬ್ ಸಿಡಿದಿದೆ. ಈ ಎರಡೂ ಚಿತ್ರಮಂದಿರಗಳು ಕೇವಲ 500 ಅಡಿಗಳ ಅಂತರದಲ್ಲಿವೆ. ಸ್ಫೋಟ ಸಂಭವಿಸಿದ ಸ್ಥಳಗಳಿಗೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತಂಡ ಧಾವಿಸಿದೆ.
ಸ್ಫೋಟದ ಬಳಿಕ ಭಯಭೀತರಾದ ಜನರು ದಿಕ್ಕಾಪಾಲಾಗಿ ಓಡಾಡಲು ತೊಡಗಿದಾಗ, ಆ ಸ್ಥಳದಲ್ಲಿ ಕಾಲ್ತುಳಿತವೂ ಉಂಟಾಯಿತು ಎಂಬುವುದಾಗಿ ಪೊಲೀಸರು ಹೇಳಿದ್ದಾರೆ.
ಸರಣಿ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಭೀತಿಯಿದೆ ಎಂದು ಅವರು ತಿಳಿಸಿದ್ದಾರೆ.
“ಇದೊಂದು ಭಯೋತ್ಪಾದಕ ದಾಳಿಯೆಂದು ಮೇಲ್ನೋಟಕ್ಕೆ ಕಂಡುಬರುತ್ತದೆಯಾದರೂ, ಘಟನೆಯ ಬಗ್ಗೆ ಇನ್ನಷ್ಟೇ ಪೂರ್ಣ ಮಾಹಿತಿ ದೊರೆಯ ಬೇಕಾಗಿದೆ” ಎಂದು  ಆಂಧ್ರದ ಪೊಲೀಸ್ ಮಹಾನಿರ್ದೇಶಕ ವಿ. ದಿನೇಶ್ ರೆಡ್ಡಿ ತಿಳಿಸಿದ್ದಾರೆ.
ದಿಲ್ಲಿಯಲ್ಲಿ ಆಂತರಿಕ ಭದ್ರತೆ ಕುರಿತ ಸಭೆಯಲ್ಲಿ ಪಾಲ್ಗೊಂಡಿದ್ದ ಆಂಧ್ರ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ, ಸರಣಿ ಸ್ಫೋಟದ ಸುದ್ದಿ ತಿಳಿಯುತ್ತಿದ್ದಂತೆಯೇ ಹೈದರಾಬಾದ್‌ಗೆ ಮರಳಿದ್ದಾರೆ. ಸ್ಫೋಟದ ಗಾಯಾಳುಗಳಿಗೆ ನಗರದ ಉಸ್ಮಾನಿಯಾ ಹಾಗೂ ಯಶೋದಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆಯೆಂದು ಮೂಲಗಳು ಹೇಳಿವೆ.
ಹೊಸದಿಲ್ಲಿಯಲ್ಲಿ ಕಟ್ಟೆಚ್ಚರ
ಹೈದರಾಬಾದ್‌ನಲ್ಲಿ ಸರಣಿ ಸ್ಫೋಟ ನಡೆದ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮವಾಗಿ ದೇಶದ ರಾಜಧಾನಿ ಹೊಸದಿಲ್ಲಿಯಲ್ಲೂ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ. ಭದ್ರತಾಪಡೆಗಳನ್ನು ಕಟ್ಟೆಚ್ಚರದಲ್ಲಿರಿಸಲಾಗಿದ್ದು, ನಗರದ ಕಣ್ಗಾವಲನ್ನು ಬಿಗಿಗೊಳಿಸಲಾಗಿದೆಯೆಂದು  ದಿಲ್ಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

No comments:

Post a Comment