Saturday, February 16, 2013

1,455 ಮಂದಿಗೆ ಗಲ್ಲು: ಉ.ಪ್ರ. ಗರಿಷ್ಠ 370, ಗೋವಾ ಕನಿಷ್ಠ 1ಅಹ್ಮದಾಬಾದ್: 2001 ಮತ್ತು 2011ರ ನಡುವಿನ ಅವಧಿಯಲ್ಲಿ ಒಟ್ಟು 1,455 ಮಂದಿಗೆ ಅಥವಾ ಸರಾಸರಿ ವರ್ಷಕ್ಕೆ 132.27 ಮಂದಿಗೆ ಮರಣ ದಂಡನೆ ವಿಧಿಸಲಾಗಿದೆ. ಭಾರತ ಸರಕಾರದ ಗೃಹ ವ್ಯವಹಾರಗಳ ಸಚಿವಾಲಯದ ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ (ಎನ್‌ಸಿಆರ್‌ಬಿ)ಯಲ್ಲಿರುವ ದಾಖಲೆಗಳಿಂದ ಈ ವಿಷಯ ತಿಳಿದುಬರುತ್ತದೆ ಎಂದು ಏಶ್ಯನ್ ಸೆಂಟರ್ ಫಾರ್ ಹ್ಯೂಮನ್ ರೈಟ್ಸ್ (ಎಸಿಎಚ್‌ಆರ್) ತನ್ನ ವರದಿ ‘ದ ಸ್ಟೇಟ್ ಆಫ್ ಡೆತ್ ಪೆನಾಲ್ಟಿ ಇನ್ ಇಂಡಿಯಾ 2013’ರಲ್ಲಿ ಹೇಳಿದೆ.
ಈ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯ ಮರಣ ದಂಡನೆಯನ್ನು ಉತ್ತರ ಪ್ರದೇಶ (370)ದಲ್ಲಿ ನೀಡಲಾಗಿದೆ. ನಂತರದ ಸ್ಥಾನಗಳಲ್ಲಿ ಬರುವ ರಾಜ್ಯಗಳೆಂದರೆ ಬಿಹಾರ (132), ಮಹಾರಾಷ್ಟ್ರ (125), ಕರ್ನಾಟಕ ಮತ್ತು ತಮಿಳುನಾಡು (ತಲಾ 95), ಮಧ್ಯಪ್ರದೇಶ (87), ಝಾರ್ಖಂಡ್ (81), ಪಶ್ಚಿಮ ಬಂಗಾಳ (79), ದಿಲ್ಲಿ (71), ಗುಜರಾತ್ (57), ರಾಜಸ್ಥಾನ (38), ಕೇರಳ (34), ಒಡಿಶಾ (33), ಹರ್ಯಾಣ (31), ಅಸ್ಸಾಂ (21), ಜಮ್ಮು ಮತ್ತು ಕಾಶ್ಮೀರ (20), ಪಂಜಾಬ್ (19), ಛತ್ತೀಸ್‌ಗಢ (18), ಉತ್ತರಾಂಚಲ (16), ಆಂಧ್ರಪ್ರದೇಶ (8), ಮೇಘಾಲಯ (6), ಚಂಡೀಗಢ ಮತ್ತು ದಮನ್ ಮತ್ತು ದಿಯು (ತಲಾ 4), ಮಣಿಪುರ ಮತ್ತು ಹಿಮಾಚಲ ಪ್ರದೇಶ (ತಲಾ 3), ತ್ರಿಪುರ ಮತ್ತು ಪಾಂಡಿಚೇರಿ (ತಲಾ 2) ಮತ್ತು ಗೋವ (1).
ಉಳಿದ ರಾಜ್ಯಗಳು (ಅರುಣಾಚಲ ಪ್ರದೇಶ, ಮಿರೆರಾಮ್, ನಾಗಾಲ್ಯಾಂಡ್ ಮತ್ತು ಸಿಕ್ಕಿಂ) ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ದಾದ್ರಾ ಮತ್ತು ನಾಗರ್‌ಹವೇಲಿ ಮತ್ತು ಲಕ್ಷದ್ವೀಪಗಳಲ್ಲಿ ಯಾವುದೇ ಮರಣ ದಂಡನೆ ವಿಧಿಸಲಾಗಿಲ್ಲ.
‘‘ಅಂದರೆ ಭಾರತದಲ್ಲಿ ಪ್ರತಿ ಮೂರು ದಿನಕ್ಕೂ ಕಡಿಮೆ ಅವಧಿಯಲ್ಲಿ ಒಂದು ಮರಣ ದಂಡನೆ ವಿಧಿಸಲಾಗುತ್ತದೆ. ಮರಣ ದಂಡನೆ ವಿಧಿಸುವಾಗ ‘ಅಪರೂಪದಲ್ಲಿ ಅಪರೂಪ’ ನಿಯಮವನ್ನು ನಿಯಮಿತವಾಗಿ ಅನ್ವಯಿಸಲಾಗುತ್ತದೆ. ಮರಣ ದಂಡನೆ ಎನ್ನುವುದು ಈಗ ಅಪವಾದ (ವಿನಾಯಿತಿ)ವಾಗಿ ಉಳಿದಿಲ್ಲ, ಬದಲಿಗೆ ನಿಯಮವೇ ಆಗಿದೆ’’ ಎಂದು ಭಾರತದಲ್ಲಿ ಮರಣ ದಂಡನೆ ರದ್ದುಪಡಿಸುವ ರಾಷ್ಟ್ರೀಯ ಚಳವಳಿಯ ಸಮನ್ವಯಕಾರ ಹಾಗೂ ಎಸಿಎಚ್‌ಆರ್ ನಿರ್ದೇಶಕ ಸುಹಾಸ್ ಚಕ್ಮಾ ಹೇಳಿದರು.
2001 ಮತ್ತು 2011ರ ನಡುವಿನ ಅವಧಿಯಲ್ಲಿ 4,321 ಕೈದಿಗಳ ಮರಣ ದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಲಾಗಿತ್ತು. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕ್ಷಮಾ ದಾನವನ್ನು ದಿಲ್ಲಿ (2462)ಯಲ್ಲಿ ನೀಡಲಾಗಿದೆ. ಈ ವರ್ಗದಲ್ಲಿ ನಂತರದ ಸ್ಥಾನಗಳಲ್ಲಿ ಬರುವ ರಾಜ್ಯಗಳೆಂದರೆ ಉತ್ತರಪ್ರದೇಶ (458), ಬಿಹಾರ (343), ಝಾರ್ಖಂಡ್ (300), ಮಹಾರಾಷ್ಟ್ರ (175), ಪಶ್ಚಿಮ ಬಂಗಾಳ (98), ಅಸ್ಸಾಂ (97), ಒಡಿಶಾ (68), ಮಧ್ಯಪ್ರದೇಶ (62), ಉತ್ತರಾಂಚಲ (46), ರಾಜಸ್ಥಾನ (33), ತಮಿಳುನಾಡು, ಪಂಜಾಬ್ ಮತ್ತು ಛತ್ತೀಸ್‌ಗಢ (ತಲಾ 24), ಹರ್ಯಾಣ ಮತ್ತು ಕೇರಳ (ತಲಾ 23), ಜಮ್ಮು ಮತ್ತು ಕಾಶ್ಮೀರ (18).
ಮರಣ ದಂಡನೆ ಶಿಕ್ಷೆಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ಎಸಿಎಚ್‌ಆರ್ ಚಳವಳಿ ನಡೆಸುತ್ತಿದೆ. ‘‘ರಾಷ್ಟ್ರಪಿತ ಮಹಾತ್ಮಾ ಗಾಂಧಿಯನ್ನು ಕೊಂದ ನಾಥೂರಾಮ್ ವಿನಾಯಕ ಗೋಡ್ಸೆಗೆ ಗಲ್ಲು ಶಿಕ್ಷೆ ನೀಡಲಾಯಿತಾದರೂ ಮುಂದೆ ನಡೆದ ರಾಜಕೀಯ ನಾಯಕರ ಹತ್ಯೆಯನ್ನು ತಡೆಗಟ್ಟುವಲ್ಲಿ ಅದು ಪ್ರತಿಬಂಧಕವಾಗಿ ಕೆಲಸ ಮಾಡಲಿಲ್ಲ. ಆ ಬಳಿಕ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ, ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್, ಸಂಸದ ಲಲಿತ್ ಮಾಕನ್ ಮತ್ತು ಇತರ ಹಲವಾರು ಗಣ್ಯ ರಾಜಕೀಯ ನಾಯಕರನ್ನು ಹತ್ಯೆ ಮಾಡಲಾಯಿತು’’ ಎಂದು ಅದು ಹೇಳುತ್ತದೆ

No comments:

Post a Comment