Wednesday, January 9, 2013

ದಿಲ್ಲಿ ಸಾಮೂಹಿಕ ಅತ್ಯಾಚಾರ ಪ್ರತಿಧ್ವನಿ:ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡಲು ಹೆದರುತ್ತಿರುವ ಮಹಿಳೆಯರು



- ಜನವರಿ -09-2013

ಹೊಸದಿಲ್ಲಿ: ದಿಲ್ಲಿಯಲ್ಲಿ 23 ವರ್ಷ ಪ್ರಾಯದ ಅರೆವೈದ್ಯಕೀಯ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಬಳಿಕ ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡಲು ಮಹಿಳೆಯರು ಹೆದರುತ್ತಿದ್ದಾರೆ ಹಾಗೂ ಹಿಂದೇಟು ಹಾಕುತ್ತಿದ್ದಾರೆ ಎಂದು ಅಸ್ಸೋಚಾಮ್ ಸರ್ವೇಯೊಂದು ಹೇಳಿದೆ.
ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡುವುದರಲ್ಲಿ ಸಾಕಷ್ಟು ಅಪಾಯಗಳಿವೆ ಎಂಬುದನ್ನು ಮನಗಂಡಿರುವ ಮಹಿಳೆಯರು ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡಲು ಹೆದರುತ್ತಿದ್ದಾರೆ ಹಾಗೂ ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡಬೇಕಾಗಿರುವ ಕೆಲವು ಮಹಿಳೆಯರು ಕೆಲಸವನ್ನೇ ಬಿಟ್ಟಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.
ಕೆಲಸಕ್ಕೆ ಹೋಗುವ ಮಹಿಳೆಯರು ಸೂರ್ಯಾಸ್ತದ ಬಳಿಕ ಮನೆಗೆ ಧಾವಿಸುವ ಧಾವಂತದಲ್ಲಿರುತ್ತಾರೆ. ಮನೆಗೆ ಹೋಗುವಾಗ ಏನಾದರೂ ದುರಂತ ನಡೆಯಬಹುದು ಎಂಬ ಭೀತಿಯನ್ನು ಅವರು ಹೊಂದಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಡಿಸೆಂಬರ್ 16ರಂದು ದಿಲ್ಲಿಯಲ್ಲಿ ನಡೆದ ಬರ್ಬರ ಸಾಮೂಹಿಕ ಅತ್ಯಾಚಾರ ಘಟನೆಯ ಬಳಿಕದ ಮಹಿಳೆಯ ಮನೋಸ್ಥಿತಿಯನ್ನು ಸಮೀಕ್ಷೆ ಬಿಂಬಿಸಿದೆ.
ದಿಲ್ಲಿ-ಎನ್‌ಸಿಆರ್‌ನಲ್ಲಿ ಕೆಲಸ ಮಾಡುವ ಒಟ್ಟು 2,500 ಮಹಿಳೆಯರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಸಮೀಕ್ಷೆಯಲ್ಲಿ ಪಾಲ್ಗೊಂಡ ಮಹಿಳೆಯರ ಪೈಕಿ ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡುವುದು ಅಗತ್ಯವಾದ ಐಟಿ ಮತ್ತು ಬಿಪಿಒ ಕಂಪೆನಿಗಳ ಉದ್ಯೋಗಿಗಳಿದ್ದರು. ಹೆದರಿಕೆಯಿಂದಾಗಿ ಮಹಿಳಾ ಉದ್ಯೋಗಿಗಳ ದಕ್ಷತೆ 40 ಶೇ.ದಷ್ಟು ಕುಸಿದಿದೆ ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ.
 ರಾತ್ರಿ ಪ್ರಯಾಣ ಮಾಡುವ ಅಪಾಯವನ್ನು ತಪ್ಪಿಸಲು ಈಗ ತಾವು ಅವಧಿಗಿಂತ ತುಂಬಾ ಬೇಗನೇ ಕಚೇರಿಯಿಂದ ಮನೆಗೆ ಹೋಗುತ್ತಿರುವುದಾಗಿ ಸುಮಾರು 89 ಶೇ. ಮಹಿಳೆಯರು ಹೇಳಿದ್ದಾರೆ.
ದಿಲ್ಲಿ-ಎನ್‌ಸಿಆರ್ ವಲಯದಲ್ಲಿ ಸುಮಾರು 2,500 ಐಟಿ ಮತ್ತು ಬಿಪಿಒ ಕಂಪೆನಿಗಳಿವೆ. ಇಲ್ಲಿ ಲಕ್ಷಾಂತರ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ.
ಮೊದಲು ಈ ಮಹಿಳೆಯರು ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದರೂ, ದಿಲ್ಲಿ ಸಾಮೂಹಿಕ ಅತ್ಯಾಚಾರದ ಬಳಿಕ ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡಲು ಅವರು ಇಷ್ಟಪಡುತ್ತಿಲ್ಲ. ಒಂದು ಕೆಲಸಕ್ಕಾಗಿ ತಮ್ಮ ಪ್ರಾಣವನ್ನು ಅಪಾಯಕ್ಕೊಡ್ಡಲು ತಾವು ತಯಾರಿಲ್ಲ ಎಂದು ಅವರು ಹೇಳುತ್ತಾರೆ.

No comments:

Post a Comment