Friday, January 18, 2013

ರಾಜಸ್ಥಾನದಲ್ಲಿ ಸಾವು-ಬದುಕಿನ ಹೋರಾಟ ನಡೆಸುತ್ತಿರುವ ಇನ್ನೊಂದು ನಿರ್ಭಯ



 ಜನವರಿ -18-2013

 ಜೈಪುರ: ದಿಲ್ಲಿಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ನಿರ್ಭಯ ಪ್ರಕರಣ ದೇಶದ ಒಟ್ಟಾರೆ ಅಂತಃಸಾಕ್ಷಿಯನ್ನೇ ಕಲಕಿ ಬಿಟ್ಟಿದೆ. ಅಂಥದೇ ಬರ್ಬರ ಘಟನೆಯೊಂದು ರಾಜಸ್ಥಾನದ ಸಿಕರ್‌ನಿಂದ ವರದಿಯಾಗಿದ್ದರೂ ದೊಡ್ಡ ಸುದ್ದಿಯಾಗಿಲ್ಲ. ಘೋರ ಸಾಮೂಹಿಕ ಅತ್ಯಾಚಾರಕ್ಕೊಳಗಾದ 11 ವರ್ಷ ಪ್ರಾಯದ ಹುಡುಗಿ ಈಗ ಜೈಪುರದ ಆಸ್ಪತ್ರೆಯೊಂದರಲ್ಲಿ ಸಾವು-ಬದುಕಿನ ಹೋರಾಟ ನಡೆಸುತ್ತಿದ್ದಾಳೆ.
ಕಳೆದ ವರ್ಷದ ಆಗಸ್ಟ್ 20ರಂದು ಸಿಕರ್ ಪಟ್ಟಣದ ಬಸ್ ನಿಲ್ದಾಣದಿಂದ ಆರು ದುಷ್ಕರ್ಮಿಗಳು ಆಕೆಯನ್ನು ಅಪಹರಿಸಿದ್ದರು.
ಆಕೆಯ ಮೇಲೆ ಅತ್ಯಾಚಾರ ನಡೆಸಿದ ಅವರು ಬಳಿಕ ನಿಷ್ಕರುಣೆಯಿಂದ ಥಳಿಸಿದರು. ಬಳಿಕ ಪಟ್ಟಣದ ಹೊರವಲಯದಲ್ಲಿ ಆಕೆಯನ್ನು ಬಿಸಾಡಿ ಹೋದರು.
ಆಕೆಯ ಗುಪ್ತಾಂಗಗಳಿಗೆ ಎಷ್ಟು ಹಾನಿಯಾಗಿತ್ತೆಂದರೆ ಆರು ದೊಡ್ಡ ಮತ್ತು ಎಂಟು ಚಿಕ್ಕ ಶಸ್ತ್ರಚಿಕಿತ್ಸೆಗಳನ್ನು ನಡೆಸಬೇಕಾಯಿತು. ಈಗಲೂ ಆಕೆಯ ಪರಿಸ್ಥಿತಿ ಗಂಭೀರವಾಗಿದೆ.
ಆಗಸ್ಟ್ 22ರಂದು ಆಕೆಯನ್ನು ಸಿಕಾರ್‌ನಿಂದ ಜೈಪುರದ ಜೆ.ಕೆ. ಲೋನ್ ಆಸ್ಪತ್ರೆಗೆ ಕರೆ ತಂದಾಗ ಆಕೆಯ ಮೇಲೆ ನಡೆದ ಹಲ್ಲೆಯನ್ನು ನೋಡಿ ಒಂದು ಕ್ಷಣ ವೈದ್ಯರೇ ಆಘಾತಕ್ಕೊಳಗಾಗಿದ್ದರು.
‘‘ಕಳೆದ ನಾಲ್ಕೂವರೆ ತಿಂಗಳಲ್ಲಿ ಆಕೆಗೆ ನಮ್ಮಿಂದಾಗುವಷ್ಟು ಸಹಾಯ ಮಾಡಿದ್ದೇವೆ. ಆಕೆಯ ಸ್ಥಿತಿ ನಮ್ಮೆಲ್ಲರಲ್ಲೂ ಆಘಾತ ಹುಟ್ಟಿಸಿದೆ’’ ಎಂದು ಶಸ್ತ್ರಚಿಕಿತ್ಸೆಗಳ ನೇತೃತ್ವ ವಹಿಸಿದ ಡಾ. ಎಲ್.ಡಿ. ಅಗರ್‌ವಾಲ್ ಹೇಳಿದರು.
ಬಿಹಾರದ ದರ್ಬಾಂಗದ ನಿವಾಸಿಯಾಗಿರುವ ಹುಡುಗಿ ಆಕೆಯ ಹೆತ್ತವರ ಏಳು ಮಕ್ಕಳ ಪೈಕಿ ಕೊನೆಯವಳಾಗಿದ್ದಾಳೆ. ತಂದೆ ಮೃತಪಟ್ಟ ಬಳಿಕ ಆಕೆ ತಾಯಿಯೊಂದಿಗೆ ಸಿಕಾರ್‌ಗೆ ಬಂದಿದ್ದಳು. ತಮಗೆ ಕೆಲಸ ದೊರಕಿಸಿಕೊಡಲು ಸಿಕಾರ್‌ನಲ್ಲಿರುವ ಸಂಬಂಧಿಕರು ನೆರವು ನೀಡಬಹುದು ಎಂಬ ಭರವಸೆಯಿಂದ ಅವರು ಅಲ್ಲಿಗೆ ಬಂದಿದ್ದರು.
ಈಗ ಹುಡುಗಿ ಪ್ರತಿಕ್ರಿಯಿಸುವುದನ್ನೇ ನಿಲ್ಲಿಸಿದ್ದಾಳೆ ಎಂದು ವೈದ್ಯರು ಹೇಳುತ್ತಾರೆ. ‘‘ಆರಂಭದಲ್ಲಿ ಆಕೆಗೆ ಇಂಜೆಕ್ಷನ್‌ಗಳೆಂದರೆ ಭಯವಿತ್ತು. ಆದರೆ, ಈಗ ಆಕೆ ಯಾವುದಕ್ಕೂ ಪ್ರತಿಕ್ರಿಯಿಸುತ್ತಿಲ್ಲ. ಆಕೆಯ ದೈಹಿಕ ಮತ್ತು ಮಾನಸಿಕ ಕ್ಷಮತೆ ದಿನೇ ದಿನೇ ಕುಸಿಯುತ್ತಿದೆ’’ ಎಂದು ಕುಟುಂಬದ ಸದಸ್ಯರೊಬ್ಬರು ಹೇಳಿದರು.
ಈ ಪ್ರಮಾಣದ ಬರ್ಬರ ಘಟನೆ ನಡೆದಿದ್ದರೂ ಪೊಲೀಸರ ನಿರ್ಲಕ್ಷ ಆಘಾತಕಾರಿಯಾಗಿದೆ. ಆರಂಭದಲ್ಲಿ ಪೊಲೀಸರು ಪ್ರಕರಣ ದಾಖಲಿಸಲು ನಿರಾಕರಿಸಿದ್ದರು. ಸ್ಥಳೀಯರು ಪ್ರತಿಭಟನೆ ನಡೆಸಿದ ಬಳಿಕವಷ್ಟೇ ಪೊಲೀಸರು ಪ್ರಕರಣ ದಾಖಲಿಸಿದ್ದರು. ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಜೊತೆ ಮಾತನಾಡಿದ ಬಳಿಕವಷ್ಟೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು.
ಘಟನೆ ಸಂಬಂಧ ಆರು ಮಂದಿಯನ್ನು ಬಂಧಿಸಲಾಗಿದ್ದರೂ ಇಬ್ಬರಿಗೆ ಈಗಾಗಲೇ ಜಾಮೀನು ಸಿಕ್ಕಿದೆ. ಅವರ ವಿರುದ್ಧ ಪೊಲೀಸರು ಲಘು ಪ್ರಕರಣಗಳನ್ನು ದಾಖಲಿಸಿದುದೇ ಇದಕ್ಕೆ ಕಾರಣವಾಗಿದೆ. ಆರೋಪಿಗಳು ರಾಜಕೀಯ ಸಂಪರ್ಕ ಹೊಂದಿದ್ದು ಅವರ ಬಗ್ಗೆ ಪೊಲೀಸರು ಮೃದು ಧೋರಣೆ ತಾಳಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ನಿಜವಾದ ಅಪರಾಧಿಗಳನ್ನು ಈಗಲೂ ಬಂಧಿಸಲಾಗಿಲ್ಲ ಎಂದು ಬಾಲಕಿಯ ಹೆತ್ತವರು ಆರೋಪಿಸಿದ್ದಾರೆ.

No comments:

Post a Comment