Saturday, January 12, 2013

ಸುನಾಮಿಯಲ್ಲಿ ಮಕ್ಕಳನ್ನು ಕಳಕೊಂಡ ಮನೆಯಲ್ಲಿ ಮತ್ತೆ ಕಲರವ: ಅನಾಥ ಮಕ್ಕಳಿಗೆ ಮನೆಯ ಬಾಗಿಲು ತೆರೆದಿಟ್ಟ ಕರುಣಾಮಯಿ ದಂಪತಿ ಜನವರಿ -13-2013

ನಾಗಪಟ್ಟಿಣಂ: ಎಂಟು ವರ್ಷಗಳ ಹಿಂದೆ ಹಿಂದೂ ಮಹಾಸಾಗರದಲ್ಲಿ ಎದ್ದ ಸುನಾಮಿ ಸಾವಿರಾರು ಜೀವಗಳನ್ನು ಬಲಿ ಪಡೆದುಕೊಂಡಿತು ಹಾಗೂ ಸಾವಿರಾರು ಮಂದಿಯನ್ನು ಅನಾಥರಾಗಿಸಿತು.

ತಮಿಳುನಾಡಿನ ನಾಗಪಟ್ಟಿಣಂ ನಿವಾಸಿ ಕರಿಬೀರನ್ ಪರಮೇಶ್ವರನ್‌ಗೆ ಆ ಬಳಿಕ ನಗಲು ಸಾಧ್ಯವಾಗಲಿಲ್ಲ. ಡಿಸೆಂಬರ್ 26ರಂದು ಅವರ ಹುಟ್ಟಿದ ದಿನ. ಆದರೆ ಅದನ್ನು ಆಚರಿಸುವ ಸ್ಥಿತಿಯಲ್ಲಿ ಅವರಿರಲಿಲ್ಲ. ಯಾಕೆಂದರೆ, ಅದೇ ಡಿಸೆಂಬರ್ 26ರಂದು ಹಿಂದೂ ಮಹಾ ಸಾಗರದ ಒಡಲಿನಿಂದ ಎದ್ದ ದೈತ್ಯ ಹಂತಕ ಅಲೆಗಳು ಅವರ ಬದುಕನ್ನು ಸರ್ವನಾಶ ಮಾಡಿದ್ದವು. ಅಂದು 48 ವರ್ಷ ಪ್ರಾಯದ ತೈಲ ಎಂಜಿನಿಯರ್ ತನ್ನ ಮೂವರು ಮಕ್ಕಳೊಂದಿಗೆ-ಪುತ್ರಿಯರಾದ ರಕ್ಷಣ್ಯ (12), ಕಾರುಣ್ಯ (9) ಮತ್ತು ಐದು ವರ್ಷದ ಮಗ ಕಿರುಬಾಸನ್ ಜೊತೆ ಸಮುದ್ರ ದಂಡೆಯಲ್ಲಿದ್ದರು. ಜೊತೆಗೆ ಅವರ ಏಳು ಮಂದಿ ಸಂಬಂಧಿಕರಿದ್ದರು.
ಬೆಳಗ್ಗೆ ಸುಮಾರು 8 ಗಂಟೆಗೆ ಬಂದ ಆ ದೈತ್ಯ ಅಲೆ ಅವರ ಮೂವರು ಮಕ್ಕಳು ಮತ್ತು ಏಳು ಸಂಬಂಧಿಕರನ್ನು ಸಮುದ್ರದ ಒಡಲಿಗೆ ಒಯ್ದಿತು. ಕರಿಬೀರನ್‌ಗೆ ಅದೃಷ್ಟವಶಾತ್ ತೆಂಗಿನ ಮರವೊಂದು ಸಿಕ್ಕಿದ್ದರಿಂದ ಅದನ್ನು ಹಿಡಿದುಕೊಂಡು ಬದುಕುಳಿದರು.
ಮರು ದಿನ ಮಗಳ ಶವ ತೀರದಿಂದ 600 ಮೀ. ದೂರದ ರೈಲ್ವೇ ಹಳಿಯಲ್ಲಿ ಸಿಕ್ಕಿದರೆ, ಪುತ್ರರ ಶವಗಳೂ ಇತರ ನೂರಾರು ಶವಗಳೊಂದಿಗೆ ಮೇಲೆ ಬಂದಿದ್ದವು. ಅಲ್ಲಿ ಒಬ್ಬರನ್ನೊಬ್ಬರು ಸಂತೈಸಲು ಯಾರೂ ಇರಲಿಲ್ಲ. ಯಾಕೆಂದರೆ, ಬಹುತೇಕ ಅಲ್ಲಿನ ಎಲ್ಲರೂ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದರು.
ಕರಿಬೀರನ್‌ರ ಗ್ರಾಮದಲ್ಲಿ ಸುಮಾರು 6,000 ಮಂದಿ ಸತ್ತಿದ್ದರು.
ಅವರ ಹೆಂಡತಿ ಚೂಡಾಮಣಿ (44) ಮೂರು ದಿನಗಳವರೆಗೆ ಮಾತೇ ಆಡಲಿಲ್ಲ. ನಾಲ್ಕನೆ ದಿನ ಅವರು ಆಡಿದ ಮೊದಲ ಸಾಲು: ‘‘ಇನ್ನು ನಾವು ಯಾಕೆ ಬದುಕಿರಬೇಕು?’’. ಅದಕ್ಕೆ ಕರಿಬೀರನ್ ಬಳಿಯೂ ಉತ್ತರವಿರಲಿಲ್ಲ.
ಆದರೆ, ಆ ರಾತ್ರಿ ಚೂಡಾಮಣಿಗೆ ಕನಸೊಂದು ಬಿತ್ತು. ಅವರ ಮಕ್ಕಳು ಕನಸಲ್ಲಿ ಬಂದು ಇತರ ಮಕ್ಕಳಿಗೆ ಪ್ರೀತಿ ತೋರಿಸುವ ಮೂಲಕ ದುಃಖ ಮರೆಯಿರಿ ಎಂದು ಹೇಳಿದರಂತೆ.
‘‘ಅದೊಂದು ಮಹತ್ವದ ಘಟ್ಟ’’ ಎಂದು ಕರಿಬೀರನ್ ಹೇಳುತ್ತಾರೆ.
‘‘ನಮ್ಮ ಊರಿನಲ್ಲೇ ಸುನಾಮಿಯಿಂದಾಗಿ ಅನಾಥರಾದ 60 ಮಕ್ಕಳಿದ್ದರು. ಇದನ್ನು ನಾನು ಚೂಡಾಮಣಿಗೆ ಹೇಳಿದಾಗ ಅವರ ಪೈಕಿ ಕೆಲವರನ್ನು ಮನೆಗೆ ಕರೆದುಕೊಂಡು ಬರೋಣ ಎನ್ನುವುದು ಆಕೆಯ ತಕ್ಷಣದ ಪ್ರತಿಕ್ರಿಯೆಯಾಗಿತ್ತು’’ ಎಂದು ಕರಿಬೀರನ್ ಹೇಳಿದರು.
 ಕರಿಬೀರನ್ ಸ್ಥಳೀಯ ಶಾಲೆಯೊಂದಕ್ಕೆ ಹೋದರು. ಅದು ಪರಿಹಾರ ಶಿಬಿರವಾಗಿಯೂ ಕೆಲಸ ಮಾಡುತ್ತಿತ್ತು. ಅಲ್ಲಿನ ಕೆಲವು ಮಕ್ಕಳ ಯೋಗಕ್ಷೇಮ ನೋಡಿಕೊಳ್ಳಲು ಮುಂದಾದರು. ದಾಖಲೆ ನಿರ್ಮಾಣ ಕೆಲಸಕ್ಕೆ ಒಂದು ತಿಂಗಳು ಹಿಡಿಯಿತು. ಫೆಬ್ರವರಿ ಮೊದಲ ವಾರದಲ್ಲಿ ನಾಲ್ಕು ಮಕ್ಕಳು- ಮೂವರು ಹುಡುಗಿಯರು ಮತ್ತು ಒಬ್ಬ ಹುಡುಗ- ಕರಿಬೀರನ್ ಮನೆಗೆ ಬಂದರು. ಅವರು ಸ್ಥಳೀಯ ಬೆಸ್ತರ ಮಕ್ಕಳು. ಸುನಾಮಿಯಲ್ಲಿ ಅವರ ತಾಯಿ ಕೊಚ್ಚಿ ಹೋಗಿದ್ದರು. ಈ ಘಟನೆಯ ಬಳಿಕ ಮಕ್ಕಳ ತಂದೆ ಆರ್ಥಿಕವಾಗಿ ಮತ್ತು ಭಾವನಾತ್ಮಕವಾಗಿ ಕುಸಿದುಹೋಗಿದ್ದು ಮಕ್ಕಳನ್ನು ನೋಡಿಕೊಳ್ಳಲು ಆಗಿರಲಿಲ್ಲ.
‘‘ಅವರು ನನ್ನ ಕಳೆದು ಹೋದ ಮಕ್ಕಳ ಪ್ರಾಯದವರೇ ಆಗಿದ್ದರು. ಅವರನ್ನು ನೋಡಿದಾಗ ನನಗೆ ನನ್ನ ಮಕ್ಕಳ ನೆನಪಾಗುತ್ತದೆ’’ ಎಂದು ಹೇಳುತ್ತಾರೆ.
‘‘ಈ ಮೂಲಕ ನಾನು ನನಗೆ ಮತ್ತು ಚೂಡಾಮಣಿಗೆ ಬದುಕಲು ಒಂದು ಕಾರಣ ಒದಗಿಸಿಕೊಟ್ಟೆ’’ ಎಂದರು.
ಸುನಾಮಿ ತಾಂಡವ ನಡೆದು ಎರಡು ತಿಂಗಳು ಕಳೆಯುವ ಮುಂಚೆಯೇ ನಾನು ಮತ್ತು ಚೂಡಾಮಣಿ ನಿರ್ಧಾರವೊಂದನ್ನು ತೆಗೆದುಕೊಂಡೆವು- ಅನಾಥರು ಯಾರೇ ಬಂದರೂ ಅವರಿಗೆ ನಮ್ಮ ಬಾಗಿಲನ್ನು ತೆರೆದಿಡುವುದೆಂದು- ಎಂದು ಅವರು ಹೇಳಿದರು.
‘‘ನಮ್ಮ ನಾಲ್ಕು ಬೆಡ್ ರೂಂನ ಮನೆಯನ್ನು ನಮಗಾಗಿ ಇಟ್ಟುಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದು ನಾವು ತೀರ್ಮಾನಿಸಿದೆವು.
ಸುನಾಮಿಯಲ್ಲಿ ಅನಾಥರಾದ ಯಾರೇ ಮಕ್ಕಳು ಬಂದರೂ ಅವರಿಗೆ ಮನೆಯಲ್ಲಿ ಅವಕಾಶ ಕಲ್ಪಿಸುವ ನಿರ್ಧಾರಕ್ಕೆ ಬಂದೆವು.
ನಮ್ಮ ಮಕ್ಕಳಿಗೆ ನೀಡುವ ಎಲ್ಲ ಪ್ರೀತಿಯನ್ನು ಅವರಿಗೆ ಧಾರೆಯೆರೆಯಲು ನಿರ್ಧರಿಸಿದೆವು.
ಇದನ್ನು ಕೇಳಿ ಇನ್ನು ಹಲವರು ಅನಾಥ ಮಕ್ಕಳು ಅಲ್ಲಿಗೆ ಬಂದರು. ಅವರೆಲ್ಲರನ್ನು ಕರಿಬೀರನ್ ಔಪಚಾರಿಕವಾಗಿ ದತ್ತು ತೆಗೆದುಕೊಂಡಿಲ್ಲ. ಅದಕ್ಕೆ ತುಂಬಾ ದಾಖಲೆಗಳು ಬೇಕು. ಅದು ಪೂರ್ಣಗೊಳ್ಳಲು ತಿಂಗಳುಗಳು ಅಥವಾ ವರ್ಷಗಳೆ ಬೇಕಾಗಬಹುದು. ಎಷ್ಟು ಸಮಯ ಬೇಕೋ ಅಷ್ಟು ಸಮಯ ಅವರು ನಮ್ಮೆಂದಿಗೆ ಇರುತ್ತಾರೆ ಎಂದು ಕರಿಬೀರನ್ ಹೇಳುತ್ತಾರೆ.
ಅವರ ಶಾಲಾ ಶುಲ್ಕವನ್ನು ಕರಿಬೀರನ್ ಕೊಡುತ್ತಾರೆ ಹಾಗೂ ವರ್ಷಕ್ಕೊಮ್ಮೆ ಉಡುಗೊರೆ ಕೊಡುತ್ತಾರೆ. ಈಗ ಕರಿಬೀರನ್ ತಾನು ಸಂಪಾದಿಸಿದ ಹಣವನ್ನೆಲ್ಲ ಮನೆ ವಿಸ್ತರಣೆಗೆ ಬಳಸುತ್ತಾರೆ ಹಾಗೂ ಹೆಚ್ಚು ಕೋಣೆಗಳನ್ನು ಕಟ್ಟುತ್ತಾರೆ.
ಮೊದಲ ವರ್ಷ 12 ಮಕ್ಕಳು ಮನೆಯಲ್ಲಿದ್ದರು. ‘‘ಈಗ ನಮ್ಮ ಮನೆಯಲ್ಲಿ 30 ಮಕ್ಕಳು ಇದ್ದಾರೆ. ಅವರೆಲ್ಲ ನಾಲ್ಕು ಮತ್ತು 14ರ ನಡುವಿನ ವಯಸ್ಸಿನವರು.
ಸುನಾಮಿ ಸಂತ್ರಸ್ತರ ಹೊರತಾಗಿ ಇಬ್ಬರು ಅನಾಥ ಮಕ್ಕಳು ಅಲ್ಲಿ ಇದ್ದಾರೆ. ಅವರ ತಂದೆ ಕುಡಿತದ ಭರದಲ್ಲಿ ತಾಯಿಯನ್ನು ಕೊಲೆ ಮಾಡಿಬಿಟ್ಟ. ಅವನೀಗ ಜೈಲಿನಲ್ಲಿದ್ದಾನೆ. ಮಕ್ಕಳು ಅನಾಥರಾದರು.
‘‘ಅಂಗಳದಲ್ಲಿ ಮಕ್ಕಳು ನಲಿದಾಡುವುದನ್ನು ನೋಡಿ ಸಂತೋಷವಾಗುತ್ತದೆ. ಕೆಲವರು ನಮ್ಮನ್ನು ಅಮ್ಮ, ಅಪ್ಪ ಎಂದು ಕರೆಯುತ್ತಾರೆ. ಇನ್ನು ಹಲವರು ಆಂಟಿ, ಅಂಕಲ್ ಎನ್ನುತ್ತಾರೆ. ಅಮಾಯಕ ಮಕ್ಕಳು ಸಂತೋಷದ, ಸುರಕ್ಷಿತ ಜೀವನ ನಡೆಸುವುದನ್ನು ನೋಡುವಾಗ ಹೃದಯ ತುಂಬಿ ಬರುತ್ತದೆ’’ ಎಂದರು.
ಕರಿಬೀರನ್ ದಂಪತಿಗೆ ಈಗ ಇಬ್ಬರು ಸ್ವಂತ ಮಕ್ಕಳಿದ್ದಾರೆ. ಆರು ವರ್ಷ ಪ್ರಾಯದ ಶಮಯ ಮತ್ತು ನಾಲ್ಕು ವರ್ಷ ಪ್ರಾಯದ ನಿಚಯ. ಎರಡೂ ಗಂಡು ಮಕ್ಕಳು.
‘‘ದೇವರು ದಯಾಮಯಿ. ನಮಗೆ ಮತ್ತೆ ಇಬ್ಬರು ಮಕ್ಕಳನ್ನು ದಯಪಾಲಿಸಿದ್ದಾನೆ’’ ಎಂದು ಕರಿಬೀರನ್ ಹೇಳುತ್ತಾರೆ.
ಕರಿಬೀರನ್ ದಂಪತಿಯ ಉದಾತ್ತ ಕಾರ್ಯ ಸರ್ವತ್ರ ಪ್ರಶಂಸೆಗೆ ಒಳಗಾಗಿದೆ. 2005 ಮೇ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಕರಿಬೀರನ್ ದಂಪತಿಯನ್ನು ಭೇಟಿಯಾಗಿದ್ದರು. ‘‘ನಾನು ನಿಮ್ಮನ್ನು ಎಂದೂ ಮರೆಯಲಾರೆ. ನೀವು ಮಾನವೀಯತೆಯ ಶ್ರೇಷ್ಠ ಮುಖವನ್ನು ತೋರಿಸಿದ್ದೀರಿ’’ ಎಂದು ಕ್ಲಿಂಟನ್ ದಂಪತಿಯನ್ನು ಪ್ರಶಂಸಿಸಿದ್ದರು.

No comments:

Post a Comment