Sunday, January 6, 2013

ಟಿವಿ ಸಂದರ್ಶನದಲ್ಲಿ ವೌನ ಮುರಿದ ನಿರ್ಭಯಾಳ ಸ್ನೇಹಿತ ಜನವರಿ -06-2013

ಸ ಂತ್ರಸ್ತರಿಗೆ ಮೇಣದ ಬತ್ತಿ ಹಚ್ಚಿ ನಾವು ಬೆಂಬಲಿಸುವ ರೀತಿಯಲ್ಲಿ ರಸ್ತೆಯಲ್ಲಿ ಯಾರೇ ಬಿದ್ದಿರಲಿ ಅಂತಹವರಿಗೂ ನಾವು ಸಹಾಯ ಮಾಡಬೇಕು. ಅಂದು ರಸ್ತೆಯಲ್ಲಿ ಬಿದ್ದಿದ್ದ ನಮ್ಮಿಬ್ಬರ ಮೇಲೆ ಬಟ್ಟೆಗಳಿರಲಿಲ್ಲ. ದಾರಿ ಹೋಕರಿಗೆ ನಾವು ಸಹಾಯಕ್ಕೆ ಅಂಗಲಾಚಿದೆವು. ಸುಮಾರು ಅರ್ಧ ಗಂಟೆ ಆಟೊ ರಿಕ್ಷಾಗಳು, ಕಾರುಗಳು ಮತ್ತು ದ್ವಿಚಕ್ರ ವಾಹನಗಳು ಹೀಗೆ ಹಲವಾರು ವಾಹನಗಳಲ್ಲಿದ್ದವರು, ಪಾದಚಾರಿಗಳು ನಮ್ಮನ್ನು ನೋಡಿ ಹೋದರೇ ಹೊರತು ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ.
ಸುಮಾರು ಅರ್ಧ ಗಂಟೆಯ ನಂತರ ಯಾರೋ ಒಬ್ಬ ವ್ಯಕ್ತಿ ಪೊಲೀಸರಿಗೆ ಕರೆ ಮಾಡಿದ್ದರಿಂದ 45 ನಿಮಿಷಗಳ ಆನಂತರ ಮೂರು ಪೊಲೀಸ್ ವ್ಯಾನ್‌ಗಳು ನಮ್ಮ ಸಹಾಯಕ್ಕೆ ಬಂದವು ಎಂದರು.
ನಮ್ಮ ಮೇಲೆ ಬಟ್ಟೆಗಳಿರಲಿಲ್ಲ. ನಿಲ್ಲಲೂ ನಮಗೆ ಸಾಧ್ಯವಾಗುತ್ತಿರಲಿಲ್ಲ. ದಾರಿಹೋಕರಾರೂ ನಮಗೆ ಬಟ್ಟೆ ನೀಡಲಿಲ್ಲ ಮತ್ತು ಆಸ್ಪತ್ರೆಗೆ ಕರೆದೊಯ್ಯಲಿಲ್ಲ. ಸುಮಾರು ಒಂದೂವರೆ ಗಂಟೆಗಳವರೆಗೆ ನಾವು ರಸ್ತೆಯಲ್ಲಿ ಬಿದ್ದಿದ್ದೆವು. ಸಾಯುತ್ತಿರುವ ವ್ಯಕ್ತಿಗೆ ಪ್ರತಿ ನಿಮಿಷವೂ ಮುಖ್ಯವಾಗುತ್ತದೆ. ಪೊಲೀಸರು ನಮ್ಮನ್ನು ಆಸ್ಪತ್ರೆಗೆ ಕರೆದೊಯ್ದರೂ ಅಲ್ಲಿ ಯಾರೊಬ್ಬರೂ ನಮಗೆ ಕನಿಷ್ಠ ಹೊದಕೆಗಳನ್ನು ನೀಡಲಿಲ್ಲ ಎಂದರು.
ಆಸ್ಪತ್ರೆಯಲ್ಲಿ ನಾವು ಕಾಯಬೇಕಾಯಿತು. ಭಿಕ್ಷೆ ಬೇಡುವವರಂತೆ ನಾನು ಬಟ್ಟೆಗಾಗಿ ಬೇಡಿದೆ. ಯಾರೋ ಒಬ್ಬರು ಮೊಬೈಲ್ ನೀಡಿದ್ದರಿಂದ ನಾನು ಕುಟುಂಬದ ಸದಸ್ಯರಿಗೆ ಕರೆ ಮಾಡಿದೆ ಎಂದು ಘಟನೆಯ ಏಕೈಕ ಸಾಕ್ಷಿಯಾಗಿರುವ ಅವರು ಹೇಳಿದ್ದಾರೆ.
ನಾವಿದ್ದ ಸ್ಥಳಕ್ಕೆ ಮೂರು ಪೊಲೀಸ್ ವ್ಯಾನ್‌ಗಳು ಬಂದರೂ ಪೊಲೀಸ್ ಠಾಣಾ ವ್ಯಾಪ್ತಿಯ ವಿಚಾರದಲ್ಲಿ ಅವರ ನಡುವೆ ಚಕಮಕಿ ನಡೆಯಿತು. ಹೀಗಾಗಿ ನಮ್ಮನ್ನು ಆಸ್ಪತ್ರೆಗೆ ಕರೆದೊಯ್ಯುವುದು ವಿಳಂಬವಾಯಿತು ಎಂದಿದ್ದಾರೆ.
ಬಸ್‌ನಲ್ಲಿ ಹೋಗದೆ ಆಟೊಗಾಗಿ ಕಾದಿದ್ದರೆ ಹೀಗಾಗುತ್ತಿರಲಿಲ್ಲ. ಘಟನೆಗೆ ನನ್ನನ್ನು ನಾನೇ ದೂಷಿಸಿಕೊಳ್ಳಬೇಕಿದೆ. ಆ ರಾತ್ರಿ ನನ್ನ ಸ್ನೇಹಿತೆಯನ್ನು ರಕ್ಷಿಸಿಕೊಳ್ಳಲಾಗದಿರುವುದಕ್ಕೆ ನನ್ನಲ್ಲಿ ವಿಷಾದವಿದೆ ಎಂದರ

 ಪೊಲೀಸರು ಆಕೆಯಿಂದ ಎರಡು ಬಾರಿ ಹೇಳಿಕೆ ಪಡೆದ ವಿಷಯ ಕೇಳಿ ನನಗೆ ಆಘಾತವಾಯಿತು. ಮರುದಿನ ಸಂಜೆ ಆಕೆ ಪೊಲೀಸರಿಗೆ ಹೇಳಿಕೆ ನೀಡುವಾಗ ನಾನು ಆಕೆಯ ಜತೆಗಿದ್ದೆ. ಕೆಮ್ಮುತ್ತಲೇ ಆಕೆ ಮಾತನಾಡಲು ಯತ್ನಿಸುತ್ತಿದ್ದಳು. ವೈದ್ಯರು ಕೆಲ ಸಮಯವನ್ನು ತೆಗೆದುಕೊಂಡು ನಿಧಾನವಾಗಿ ಮಾತನಾಡಲು ಸೂಚಿಸಿದರೂ ಆಕೆ ತನ್ನ ಹೇಳಿಕೆಯನ್ನು ಪೂರ್ಣಗೊಳಿಸಲು ಬಯಸಿದ್ದಳು.
ಆಸ್ಪತ್ರೆಯಲ್ಲಿ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡುವಾಗಲೂ ಆಕೆ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನೀಡುವ ಬದಲು ಅವರನ್ನು ಸಜೀವವಾಗಿ ದಹಿಸಬೆಕು ಎಂದಿದ್ದಳು ಎಂದರು.
ಬಸ್‌ನಲ್ಲಿ ಕುಳಿತಾಗ ಕೆಲ ಸಮಯ ಎಲ್ಲವೂ ಸಹಜವಾಗಿತ್ತು. ನಾವು 20 ರೂ. ಟಿಕೆಟ್ ಹಣ ನೀಡಿದ ನಂತರ ಪ್ರಯಾಣಿಕರ ಸೋಗಿನಲ್ಲಿದ್ದವರು ಆಕೆಯನ್ನು ಚುಡಾಯಿಸಲಾರಂಭಿಸಿದರು. ಅದಕ್ಕೆ ನಾನು ವಿರೋಧ ವ್ಯಕ್ತಪಡಿಸಿದಾಗ ಮಾತಿನ ಚಕಮಕಿ ಆರಂಭವಾಯಿತು. ಕೆಲವರು ನನ್ನನ್ನು ಥಳಿಸಿದರು. ನಾನೂ ಮೂವರಿಗೆ ಥಳಿಸಿದೆ.
ಮತ್ತೊಬ್ಬ ಕಬ್ಬಿಣದ ಸಲಾಕೆ ತಂದು ಹೊಡೆಯಲು ಬಂದಾಗ ನಿರ್ಭಯಾ ನನ್ನ ರಕ್ಷಣೆಗೆ ಬಂದು, ಮೊಬೈಲ್‌ನಿಂದ ಪೊಲೀಸ್ ನಿಯಂತ್ರಣ ಕೊಟಡಿಗೆ ಕರೆ ಮಾಡಲು ಮುಂದಾದಾಗ ಒಬ್ಬ ಆಕೆಯ ಮೊಬೈಲ್ ಕಸಿದುಕೊಂಡ. ರಾಡ್‌ನಿಂದ ಹೊಡೆದ ಹೊಡೆತಕ್ಕೆ ನಾನು ಕುಸಿದು ಬೀಳುತ್ತಿದ್ದಾಗ ಒಬ್ಬ ನಿರ್ಭಯಾಳನ್ನು ಕರೆದೊಯ್ದ. ಜನರ ಗಮನ ಸೆಳೆಯಲು ಕೂಗಲಾರಂಭಿಸಿದಾಗ ಒಳಗಿನ ಲೈಟನ್ನು ಬಂದ್ ಮಾಡಿದರು.
ಆನಂತರದ್ದು ಘೋರ ಕಥೆ. ನಮ್ಮನ್ನು ಬಸ್‌ನಿಂದ ಹೊರ ಹಾಕಿದ ನಂತರ ಅತ್ಯಾಚಾರಿಗಳು ನಮ್ಮ ಮೇಲೆ ಬಸ್ ಹರಿಸಲು ಮುಂದಾದರು. ಅದನ್ನು ಅರಿತು ಕೂಡಲೇ ಅವಳನ್ನು ಪಕ್ಕಕ್ಕೆಳೆದು ಕೊಂಡೆ ಎಂದರು.
ಇಂದಿಗೂ ಸರಕಾರದ ಪರವಾಗಿ ಯಾರೂ ನನ್ನನ್ನು ಭೇಟಿ ಮಾಡಿಲ್ಲ. ಚಿಕಿತ್ಸೆಯ ಕುರಿತು ವಿವರ ಪಡೆದಿಲ್ಲ. ನನ್ನ ಸ್ವಂತ ಖರ್ಚಿನಲ್ಲಿಯೇ ಚಿಕಿತ್ಸೆ ಪಡೆದಿದ್ದೇನೆ ಎಂದರು. ನನ್ನ ತಂದೆ ಸೇರಿದಂತೆ ಕುಟುಂಬದ ಹಲವು ಸದಸ್ಯರು ವಕೀಲರಾಗಿರುವುದರಿಂದ ಪೊಲೀಸರ ಕಾರ್ಯವೈಖರಿ ತಿಳಿದಿದ್ದಾರೆ.
ಅವರು ಮುಂದೆ ಬಂದು ನಿಂತಿದ್ದರಿಂದ ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾದರು. ಒಂದು ವೇಳೆ ನಾನು ಸಾಮಾನ್ಯ ನಾಗರಿಕನಾಗಿದ್ದರೆ ಪೊಲೀಸರು ಆರೊಪಿಗಳೊಂದಿಗೆ ಶಾಮೀಲಾಗಿ ಎಫ್‌ಐಆರ್ ದಾಖಲಿಸಲು ಹಿಂದೆ ಮುಂದೆ ನೋಡುತ್ತಿದ್ದರು ಎಂದು ಆತ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.
ಆರಂಭದಿಂದಲೇ ಆಕೆಯನ್ನು ಉತ್ತಮ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವುದಕ್ಕೆ ಮುಂದಾಗಿದ್ದರೆ ಆಕೆ ಇಂದು ಬದುಕುಳಿಯುತ್ತಿದ್ದಳು. ಪ್ರತಿಭಟನೆಯ ಕಾವು ಹೆಚ್ಚಿದ್ದರಿಂದ ಸರಕಾರ ಒತ್ತಡಕ್ಕೆ ಸಿಲುಕಿ ಆಕೆಯನ್ನು ಸಿಂಗಾಪುರಕ್ಕೆ ಸ್ಥಳಾಂತರಿಸಲು ನಿರ್ಧರಿಸಿತು. ಸರಿಯಾದ ಸಮಯದಲ್ಲಿ ಆಕೆಗೆ ಉತ್ತಮ ಚಿಕಿತ್ಸೆ ನೀಡುವ ನಿರ್ಧಾರ ತೆಗೆದುಕೊಂಡಿದ್ದರೆ ಆಕೆ ಇಂದು ನಮ್ಮೆಂದಿಗಿರುತ್ತಿದ್ದಳು ಎಂದರು.
ಇಷ್ಟೆಲ್ಲಾ ನಡೆದರೂ ಅತ್ಯಾಚಾರ ಪ್ರಕರಣಗಳು ಇನ್ನೂ ನಿಂತಿಲ್ಲ. ಪ್ರತಿದಿನ ಅದು ನಡೆಯುತ್ತಲೇ ಇದೆ ಎಂದು ಅವರು ವಿಷಾದಿಸಿದರು.
ಝಿ ಚಾನಲ್‌ನಲ್ಲಿ ನಿರ್ಭಯಾಳ ಸ್ನೇಹಿತನ ಸಂದರ್ಶನ ಪ್ರಸಾರವಾದ ಕೂಡಲೇ ದಿಲ್ಲಿ ಪೊಲೀಸರು ಚಾನಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅತ್ಯಾಚಾರ ಸೇರಿದಂತೆ ಕೆಲ ಅಪರಾಧಗಳಿಗೆ ಸಂಬಂಧಿಸಿದಂತೆ ಸಂತ್ರಸ್ತೆಯ ಗುರುತು ಬಹಿರಂಗ ಪಡಿಸಿರುವುದು ಮತ್ತು ಪ್ರಮುಖ ಸಾಕ್ಷವನ್ನು ಬಹಿರಂಗ ಪಡಿಸಿರುವುದಕ್ಕೆ ಸಂಬಂಧಿಸಿದಂತೆ ಚಾನಲ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ದಿಲ್ಲಿ ಪೊಲೀಸ್ ವಕ್ತಾರ ರಾಜನ್ ಭಗತ್ ತಿಳಿಸಿದ್ದಾರೆ.

No comments:

Post a Comment