Wednesday, January 9, 2013

ಇವೆಲ್ಲವು ಅತ್ಯಾಚಾರಗಳಲ್ಲವೇ? ಜನವರಿ -09-2013

ದಿಲ್ಲಿ ಸಾಮೂಹಿಕ ಅತ್ಯಾಚಾರ ಘಟನೆಯ ಬಳಿಕ ಹೊರ ಬರುತ್ತಿರುವ ಮಾನಸಿಕ ವಿಕೃತಿಗಳನ್ನು ಈ ದೇಶದ ಮಹಿಳೆಯರು ತಲ್ಲಣಿಸಿ ನೋಡುತ್ತಿದ್ದಾರೆ. ಒಬ್ಬಳು ಮಹಿಳೆಯ ಮೇಲೆ ಅತ್ಯಾಚಾರ ನಡೆದ ಬಳಿಕ, ಅದಕ್ಕೆ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆಗಳು, ಮಹಿಳೆಯ ಮೇಲೆ ನಡೆಯುವ ಇನ್ನೊಂದು ಬಗೆಯ ಅತ್ಯಾಚಾರವೆನ್ನುವುದು ಯಾರಿಗೂ ಅನಿಸುತ್ತಿಲ್ಲ. ಬಸ್‌ನಲ್ಲಿ ಅತ್ಯಾಚಾರಗೈದ ದುಷ್ಕರ್ಮಿಗಳನ್ನು ಗಲ್ಲಿಗೆ ಹಾಕಬೇಕು ನಿಜ. ಆದರೆ, ತದನಂತರ ಮಹಿಳೆಯ ಮೇಲೆ ನಡೆದ ಮಾನಸಿಕ ಅತ್ಯಾಚಾರಕ್ಕೆ ಏನು ಶಿಕ್ಷೆ? ಅದಕ್ಕೆ ಶಿಕ್ಷೆ ನೀಡುವವರು ಯಾರು? ಅತ್ಯಾಚಾರಕ್ಕೊಳಗಾದ ಮಹಿಳೆಯ ಗೆಳೆಯ ಮಾಧ್ಯಮಗಳ ಮುಂದೆ ನೀಡಿರುವ ಹೇಳಿಕೆ ಅತ್ಯಂತ ಭಯಾನಕವಾಗಿದೆ. ಬಸ್‌ನಲ್ಲಿ ಬರ್ಬರವಾಗಿ ಅತ್ಯಾಚಾರಕ್ಕೀಡಾದ ಮಹಿಳೆ ಮತ್ತು ತರುಣನನ್ನು ಬೆತ್ತಲೆಯಾಗಿ ದುಷ್ಕರ್ಮಿಗಳು ರಸ್ತೆಗೆ ಎಸೆದರು. ಸುಮಾರು ಅರ್ಧಗಂಟೆ ಇಬ್ಬರೂ ಸಹಾಯಕ್ಕಾಗಿ ಯಾಚಿಸಿದ್ದಾರೆ. ಆದರೆ, ನಾಗರಿಕರು ಎನಿಸಿಕೊಂಡ ಯಾರೂ ಇವರಿಗೆ ಸಹಾಯ ನೀಡಲು ಮುಂದಾಗಲಿಲ್ಲ. ನಾಗರಿಕರೆನಿಸಿಕೊಂಡ ನೂರಾರು ಜನರು ಆ ಹಾದಿಯಲ್ಲಿ ಹಾದು ಹೋಗಿದ್ದಾರೆ.
ಎಲ್ಲರೂ ಇದು ತಮಗೆ ಸಂಬಂಧಿಸಿದುದಲ್ಲ ಎಂಬ ನಿರ್ಲಕ್ಷವನ್ನು ತಳೆದು, ಅಲ್ಲಿಂದ ಮುಂದೆ ಹೋದರು. ಪರೋಕ್ಷವಾಗಿ, ಅಮಾಯಕ ತರುಣಿಯ ಸಾವಿಗೆ ಅವರೆಲ್ಲರೂ ಸಹಾಯ ಮಾಡಿದ್ದಾರೆ. ನಾಗರಿಕರೆನಿಸಿಕೊಂಡವರು ತಕ್ಷಣ ಅಲ್ಲಿ ನೆರೆದು, ಅವರಿಗೆ ಸಹಾಯ ನೀಡಿದ್ದರೆ ಇಂದು ಮಹಿಳೆ ಬದುಕಿಕೊಳ್ಳುತ್ತಿದ್ದಳು. ಇದಾದನಂತರ ಪೊಲೀಸರು ಅವರ ಜೊತೆಗೆ ಕ್ರೂರವಾಗಿ ವರ್ತಿಸಿದರು. ಕೇಸು ದಾಖಲಿಸಿ ಕೊಳ್ಳುವುದಕ್ಕೇ ಹಿಂದೇಟು ಹಾಕಿದರು ಎಂದು ತರುಣ ಆರೋಪಿಸಿದ್ದಾನೆ. ಇದೇನೂ ಅನಿರೀಕ್ಷಿತವಲ್ಲ.
ಅತ್ಯಾಚಾರ ಪ್ರಕರಣ, ಮಹಿಳೆಯರ ಮೇಲಿನ ದೌರ್ಜನ್ಯ ಇಂತಹ ಪ್ರಕರಣಗಳ ಕುರಿತಂತೆ ಪೊಲೀಸರಿಗೆ ಒಂದು ರೀತಿಯ ಅಸಡ್ಡೆಯಿದೆ. ಅಷ್ಟೇ ಅಲ್ಲ, ಅತ್ಯಾಚಾರಕ್ಕೊಳಗಾದ ಮಹಿಳೆ ಮತ್ತು ಆಕೆಯ ಕುಟುಂಬದ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ಅವರು ಎಗರಿ ಬೀಳುತ್ತಾರೆ. ನೈತಿಕ ಪೊಲೀಸರಿಂದ ಹಲ್ಲೆಗೀಡಾದ ಮಹಿಳೆಗಂತೂ ಪೊಲೀಸ್ ಠಾಣೆಯಲ್ಲಿ ನ್ಯಾಯ ದೊರಕುವುದೇ ಇಲ್ಲ. ಇಲ್ಲಿ ಮಹಿಳೆ ಬರ್ಬರವಾಗಿ ಅತ್ಯಾಚಾರಕ್ಕೊಳಗಾಗಿದ್ದಾಳೆ. ಕನಿಷ್ಠ ಮಾನವೀಯತೆಯ ಕಾರಣಕ್ಕಾದರೂ ಪೊಲೀಸರು ಅವರೊಂದಿಗೆ ಸಹಕರಿಸಬಹುದಿತ್ತು. ಆದರೆ ಕಾನೂನು ಕಾಪಾಡಬೇಕಾದ ಅವರೆಲ್ಲರೂ ನಿಷ್ಕರುಣೆಯಿಂದ ವರ್ತಿಸಿದರು. ಆಕೆಯ ಮೇಲೆ ನಮ್ಮ ಕಾನೂನು ವ್ಯವಸ್ಥೆ ಮಾಡಿದ ಅತ್ಯಾಚಾರವಿದು.
ಎಲ್ಲಕ್ಕಿಂತ ಬರ್ಬರವಾದುದೆಂದರೆ, ಆಸ್ಪತ್ರೆಯಲ್ಲೂ ಹುಡುಗ ಸರಿಯಾದ ಬಟ್ಟೆ ಬರೆಯಿಲ್ಲದೆ ಬೆತ್ತಲೆಯಾಗಿಯೇ ಇದ್ದ. ಬಟ್ಟೆಗಾಗಿ ಎಲ್ಲರೊಂದಿಗೆ ಯಾಚಿಸುತ್ತಿದ್ದ. ಆದರೆ ಅವನಿಗೆ ಬಟ್ಟೆ ಕೊಡುವುದಕ್ಕೆ ನಾಗರಿಕವೆಂದು ಕರೆಸಿಕೊಂಡ ಸಮಾಜ ಹಿಂದೇಟು ಹಾಕಿತು ಅಥವಾ ಇದು ತಮಗೆ ಸಂಬಂಧಿಸಿದ ವಿಷಯವಲ್ಲ ಎಂದು ಮುಖ ತಿರುಗಿಸಿತು. ನಾಳೆ ಅವನ ಸ್ಥಾನದಲ್ಲಿ ಯಾರೂ ನಿಲ್ಲಬಹುದು ಎನ್ನುವ ಪರಿಜ್ಞಾನ ಅದಕ್ಕಿರಲಿಲ್ಲ. ಆ ಇಬ್ಬರು ವಿದ್ಯಾರ್ಥಿಗಳ ಮೇಲೆ ನಡೆದ ಮೂರನೆ ಅತ್ಯಾಚಾರ ಅದು. ಇದೆಲ್ಲ ನಡೆದ ಬಳಿಕ, ಭಾಗವತ್ ಅತ್ಯಂತ ಬೇಜವಾಬ್ದಾರಿ ಹೇಳಿಕೆಯನ್ನು ನೀಡಿದರು.
ಮಹಿಳೆಯರು ಕಚೇರಿಗೆ ಉದ್ಯೋಗಕ್ಕೆ ತೆರಳುವುದೇ ತಪ್ಪು ಎನ್ನುವ ಮೂಲಕ, ಅತ್ಯಾಚಾರಕ್ಕೊಳಗಾದ ತರುಣಿಯನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದರು. ಇದಾದ ಬಳಿಕ, ಅತ್ಯಂತ ಬರ್ಬರ ಹೇಳಿಕೆಯನ್ನು ನೀಡಿದಾತ, ಅಸಾರಾಮ್ ಬಾಪು ಎಂಬ ಭೂಪ. ಈತನ ಆಶ್ರಮದಲ್ಲಿ ಹಿಂದೆ ಇಬ್ಬರು ಮಕ್ಕಳು ಅನುಮಾನಾಸ್ಪದ ವಾಗಿ ಸತ್ತಿದ್ದರು. ಅದರ ತನಿಖೆ ಮುಂದುವರಿದಿದೆ. ಈತನ ಆಶ್ರಮದಲ್ಲಿ ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬ ಆರೋಪಗಳಿವೆ.
ಇದೀಗ ಇವನು ಅತ್ಯಾಚಾರಕ್ಕೆ ಮಹಿಳೆಯರೇ ಹೊಣೆ ಎಂದು ಹೇಳಿದ್ದಾನೆ. ಮಾತ್ರವಲ್ಲ ‘‘ಅತ್ಯಾಚಾರ ಮಾಡುವಾಗ ದುಷ್ಕರ್ಮಿಗಳನ್ನು ಅಣ್ಣಾ ಎಂದು ಕರೆದು ಮನವಿ ಮಾಡಬೇಕಂತೆ. ಅಂದರೆ ಅತ್ಯಾಚಾರ ಮಾಡುವಾಗ ಮಹಿಳೆ ಪ್ರತಿಭಟಿಸಬಾರದು. ಬದಲಿಗೆ ಅಣ್ಣಾ ಎಂದು ಗೋಗರೆಯಬೇಕು. ಇವನೊಬ್ಬ ಮಾನಸಿಕ ವಿಕೃತನಲ್ಲದೆ ಇದ್ದರೆ ಇಂತಹ ಹೇಳಿಕೆ ನೀಡಲು ಸಾಧ್ಯವಿದೆಯೇ? ಈ ಹೇಳಿಕೆಯನ್ನು ನೀಡಿಯೂ ಈತ ಇನ್ನೂ ಬಂಧನಕ್ಕೊಳಗಾಗಿಲ್ಲ. ಪೊಲೀಸರು ಈತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದ ಮೇಲೆ, ಈ ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಎಲ್ಲಿದೆ?
ಬಸ್‌ನಲ್ಲಿ ಅತ್ಯಾಚಾರಗೈದ ದುಷ್ಟರು ಕುಡಿದಿದ್ದರು. ಆದುದರಿಂದ ಅವರು ಅಂತಹ ಕೃತ್ಯವನ್ನು ಎಸಗಿದರು ಎಂದು ಇಟ್ಟುಕೊಳ್ಳೋಣ. ಆದರೆ ಆ ಬಳಿಕ ಆ ಮಹಿಳೆಯ ಮೇಲೆ ಮಾನಸಿಕವಾಗಿ ನಡೆದ ಅತ್ಯಾಚಾರಗಳಿಗೆ ಕಾರಣವೇನು? ಈ ಅತ್ಯಾಚಾರಗಳನ್ನು ಮಾಡಿದವರು ನಾಗರಿಕರೆನಿಸಿಕೊಂಡವರು. ನಾಯಕರು. ಸ್ವಾಮೀಜಿಗಳು. ಇವರು ಕುಡಿದಿದ್ದರೇ? ನಾಗರಿಕರೆನಿಸಿಕೊಂಡ ನಮ್ಮ ನಿಮ್ಮಾಳಗೆ ಆಳದಲ್ಲಿ ಮಲಗಿರುವ ಇಂತಹ ಮೃಗೀಯ ಮನಸ್ಥಿತಿಯ ಪರಿಣಾಮವಾಗಿಯೇ ಈ ದೇಶ ಅತ್ಯಾಚಾರಗಳ ದೇಶ ಎಂದು ವಿಶ್ವದಲ್ಲಿ ಗುರುತಿಸಲ್ಪಡುತ್ತಿವೆ. ಮೊದಲು ಶಿಕ್ಷಿತರು ಮನುಷ್ಯರಾಗಬೇಕಾಗಿದೆ.
ಒಬ್ಬ ಅನ್ಯಾಯಕ್ಕೊಳಗಾಗುವಾಗ ಅವನ ನೆರವಿಗೆ ಧಾವಿಸುವ ಮನೋಭಾವವನ್ನು ನಾವು ಬೆಳೆಸಿಕೊಳ್ಳಬೇಕು. ರಸ್ತೆಯಲ್ಲಿ ಯಾರಿಗೋ ಒಂದು ಸಣ್ಣ ಅಪಘಾತವಾದಾಕ್ಷಣ, ನಾವು ಅದರ ಹತ್ತಿರ ಹೋಗಲೂ ಹೆದರುತ್ತೇವೆ. ನೆರವು ನೀಡಲು ಹಿಂದೇಟು ಹಾಕುತ್ತೇವೆ. ಈ ಮನಸ್ಥಿತಿಯಿಂದ ಮೊದಲು ಹೊರಗೆ ಬಂದು, ಅನ್ಯಾಯವನ್ನು ಪ್ರತಿಭಟಿಸುವ ಧೈರ್ಯವನ್ನು ಬೆಳೆಸಿಕೊಳ್ಳ ಬೇಕು. ಆಗ ಮಾತ್ರ ನಾವು ಹಚ್ಚುವ ಕ್ಯಾಂಡಲ್‌ಗಳು ಸಮಾಜಕ್ಕೆ ಬೆಳಕು ನೀಡಬಲ್ಲವು.

No comments:

Post a Comment