Sunday, January 6, 2013

ಮಹಿಳೆಯರ ಮೇಲೆ ದೌರ್ಜನ್ಯ ನಡೆಸುವವರಿಗೆ ಉಗ್ರ ಶಿಕ್ಷೆ ಜನರ ಧ್ವನಿಗೆ ಸುಪ್ರೀಂ ಕೋರ್ಟ್ ಬೆಂಬಲ



 ಜನವರಿ -06-2013

ಹೊಸದಿಲ್ಲಿ: ಅತ್ಯಾಚಾರ ಸೇರಿದಂತೆ ಮಹಿಳೆಯರ ಮೇಲೆ ದೌರ್ಜನ್ಯ ನಡೆಸುವ ಅಪರಾಧಿಗಳಿಗೆ ಉಗ್ರ ಶಿಕ್ಷೆ ನೀಡಬೇಕೆಂಬ ಕೂಗಿಗೆ ಬೆಂಬಲ ಸೂಚಿಸುರುವ ಸುಪ್ರೀಂ ಕೋರ್ಟ್, ಇಂತಹ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಯಾವುದೇ ರಿಯಾಯಿತಿ ತೋರಿಸಬಾರದು ಎಂದಿದೆ.


ವರದಕ್ಷಿಣೆಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಮಹಿಳೆಯನ್ನು ಸಜೀವವಾಗಿ ದಹಿಸಿದ ಅತ್ತೆ ಮತ್ತು ಇಬ್ಬರು ನಾದಿನಿಯರಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿದ ನ್ಯಾಯಮೂರ್ತಿಗಳಾದ ಪಿ. ಸದಾಶಿವಂ ಮತ್ತು ರಂಜನಾ ದೇಸಾಯಿದ್ದ ಪೀಠವು, ಸಾಯುವ ಮುನ್ನ ಸಂತ್ರಸ್ತೆ ನೀಡುವ ಹೇಳಿಕೆ ಸ್ವಂತಿಕೆಯದ್ದಾಗಿರುತ್ತದೆ.
ಅದರಲ್ಲಿ ಯಾವುದೇ ಊಹೆಗಳಿಲ್ಲದಿರುವುದರಿಂದ ಈ ಹೇಳಿಕೆ ನ್ಯಾಯಾಲಯಕ್ಕೆ ಸಾಕಾಗುತ್ತದೆ. ಒಂದು ವೇಳೆ ಎರಡು ಹೇಳಿಕೆ ನೀಡಿದ್ದಲ್ಲಿ ಕೆಲ ವೈರುಧ್ಯಗಳಿವೆ ಎಂದು ಆ ಹೇಳಿಕೆಯನ್ನು ತಿರಸ್ಕರಿಸಲು ಸಾಧ್ಯವಿಲ್ಲ ಎಂದಿದೆ.
ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗದಲ್ಲಿ ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ವಿಧಿಸುವುದಕ್ಕೆ ಇದು ಸಕಾಲವಾಗಿರುವುದರಿಂದ ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರುವುದು ಅಗತ್ಯವಾಗಿದೆ ಎಂದು ಮಹಿಳಾ ದೌರ್ಜನ್ಯ ಕಾಯ್ದೆಗೆ ತಿದ್ದುಪಡಿ ತರಬೇಕೆನ್ನುವ ಕೂಗಿಗೆ ಬೆಂಬಲ ನೀಡಿದೆ.
  
ಮಹಾರಾಷ್ಟ್ರದ ಜಲಗಾಂವ್‌ನಲ್ಲಿ 2003ರ ಮಾರ್ಚ್ 5 ರಂದು ವಂದನಾ ಎಂಬ ಮಹಿಳೆಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರ ಜತೆಗೆ ಆಕೆ ಗರ್ಭೀಣಿಯಾಗಲಿಲ್ಲ ಎಂಬ ಕಾರಣಕ್ಕೆ ಪತಿಯ ವಿರೋಧದ ನಡುವೆಯೂ ಅತ್ತೆ ಮತ್ತು ಇಬ್ಬರು ನಾದಿನಿಯರು ಸೀಮೆಎಣ್ನೆ ಸುರಿದು ವಂದನಾಳನ್ನು ಸಜೀವವಾಗಿ ದಹಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಲಗಾಂವ್ ವಿಚಾರಣಾ ನ್ಯಾಯಾಲಯ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಅವರು ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಅದು ಅವರ ಅರ್ಜಿಯನ್ನು ವಜಾಗೊಳಿಸಿತ್ತು.
ಸುಪ್ರಿಂ ಕೋರ್ಟ್‌ನಲ್ಲಿ ಅವರ ಮನವಿ ಅರ್ಜಿಯ ವಿಚಾರಣೆ ನಡೆಯುತ್ತಿದ್ದಾಗ ಅತ್ತೆ ಕೇಶರ್‌ಬಾಯಿ ನಿಧನಳಾಗಿದ್ದಳು.ಇಬ್ಬರು ನಾದಿನಿಯರು ಸಲ್ಲಿಸಿದ್ದ ಮನವಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್, ಸಾಯುವಾಗ ವಂದನಾ ನೀಡಿದ್ದ ನಾಲ್ಕು ಹೇಳಿಕೆ ಗಳಲ್ಲಿ ಯಾವುದೇ ವೈರುಧ್ಯಗಳಿಲ್ಲ ಎಂದು ಹೇಳಿ ಅಧೀನ ನ್ಯಾಯಾಲಯ ನೀಡಿದ್ದ ಆದೇಶವನ್ನು ಎತ್ತಿ ಹಿಡಿಯಿತು.

No comments:

Post a Comment