Tuesday, January 22, 2013

ಅಧಿಕಾರ ವಿಷ ಎನ್ನುವುದು ನನ್ನ ತಾಯಿಗೆ ಅರ್ಥವಾಗಿದೆ: ರಾಹುಲ್



- ಜನವರಿ -22-2013

ಜೈಪುರ: ‘ಅಧಿಕಾರ ವಿಷ ಎನ್ನುವುದು ನನ್ನ ತಾಯಿಗೆ ಅರ್ಥವಾಗಿದೆ. ಹಾಗಾಗಿ ಆಕೆ ನನ್ನ ಕೊಠಡಿಗೆ ಬಂದು ಅತ್ತರು’. ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ಎಂಬ ದಂಡವನ್ನು ವಹಿಸಿಕೊಂಡ ನಂತರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾವೋದ್ರಿಕ್ತರಾಗಿ ಮಾತನಾಡುತ್ತಿದ್ದ ರಾಹುಲ್ ಗಾಂಧಿಯಿಂದ ಬಂದ ಪದಗಳಿವು.
ನನ್ನನ್ನು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷನನ್ನಾಗಿ ಆಯ್ಕೆ ಮಾಡಿದ ನಂತರ ಇಲ್ಲಿ ನೆರೆದಿದ್ದವರೆಲ್ಲರೂ ಶುಭ ಹಾರೈಕೆ ಸಲ್ಲಿಸಿದಿರಿ. ಆದರೆ ನನ್ನ ತಾಯಿ ರಾತ್ರಿ ನನ್ನ ಕೊಠಡಿಗೆ ಬಂದು ಪಕ್ಕದಲ್ಲಿ ಕುಳಿತು ಕಣ್ಣಿರಿಟ್ಟರು. ಕಾರಣ ಅಧಿಕಾರ ಎನ್ನುವುದು ವಿಷ ಎಂಬುದನ್ನು ಬಹಳಷ್ಟು ಜನರು ತಿಳಿದಿರುವುದನ್ನೇ ನನ್ನ ತಾಯಿಯೂ ಅರ್ಥ ಮಾಡಿಕೊಂಡಿದ್ದಾರೆಂದರು.
ತನ್ನ ಅಜ್ಜಿ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯನ್ನು ನೆನಪಿಸಿಕೊಂಡ ಅವರು, ಅವರ ಭದ್ರತೆಗೆ ನಿಯೋಜನೆಗೊಂಡಿದ್ದವರ ಜತೆ ಸ್ನೇಹಿತರಂತೆ ಬ್ಯಾಡ್ಮಿಂಟನ್ ಆಡುತ್ತಿದ್ದೆ ಎಂದು ತಿಳಿಸಿದರು. ದೇಶದ ಜನತೆಗೆ ಭರವಸೆ ಮೂಡಿಸಿದ್ದ ತನ್ನ ತಂದೆ ರಾಜೀವ್ ಗಾಂಧಿಯವರ ಕುರಿತೂ ಭಾವುಕವಾಗಿಯೇ ಮಾತನಾಡಿದರು.
ಹಾಗೆ ಮುಂದುವರಿದ ಅವರು, ನಾವು ಅಧಿಕಾರವನ್ನು ಬೆನ್ನಟ್ಟಬಾರದು, ಬದಲಿಗೆ ಇನನೊಬ್ಬರ ಏಳಿಗೆಗೆ ಅದನ್ನು ಬಳಸಿಕೊಳ್ಳಬೇಕು ಎಂದು ಸೂಚ್ಯವಾಗಿ ಹೇಳಿದರು.
ಅಧಿಕಾರ ಎನ್ನುವುದು ವಿಷ ಎಂಬುದು ನನ್ನ ತಾಯಿ ಅರ್ಥ ಮಾಡಿಕೊಂಡಿರುವ ಕಾರಣ ಅವರು ಅದರಿಂದ ದೂರವುಳಿದಿದ್ದಾರೆ. ಅದರಂತೆಯೇ ಅಧಿಕಾರ ಎನ್ನುವುದು ಏನು ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಂಡು ಅದರಿಂದ ದೂರವುಳಿಯುವುದೇ ಅದಕ್ಕಿರುವ ಮದ್ದು. ಹಾಗಾಗಿ ಅದನ್ನು ನಾವು ಇತರರ ಏಳಿಗೆಗೆ ಬಳಸಿಕೊಳ್ಳಬೇಕು ಎಂದರು.
ತಮ್ಮ ಬಾಲ್ಯವನ್ನು ನೆನಪಿಸಿಕೊಂಡ ರಾಹುಲ್, ಬ್ಯಾಡ್ಮೀಟನ್ ಆಟವನ್ನು ನಾನು ಪ್ರೀತಿಸುತ್ತೇನೆ. ಕಾರಣ ಇಂದಿನ ಸಂಕಿರ್ಣ ಬಗತ್ತಿನಲ್ಲಿ ಅದು ನನಗೆ ಸ್ಥೀಮಿತವನ್ನು ನೀಡುತ್ತದೆ. ನಾನು ಅಜ್ಜಿಯ ಜತೆ ಇದ್ದಾಗ ಅವರ ಅಂಗ ರಕ್ಷಕರಾಗಿದ್ದ ಇಬ್ಬರು ಪೊಲೀಸರು ಬ್ಯಾಡ್ಮಿಂಟನ್ ಆಡುವುದನ್ನು ಕಲಿಸಿಕೊಟ್ಟರು ಮತ್ತು ಅವರಿಬ್ಬರು ನನಗೆ ಆಗ ಸ್ನೇಹಿತರಾಗಿದ್ದರು.
ಆದರೆ ಒಂದು ದಿನ ಅವರು ನನ್ನ ಅಜ್ಜಿಯನ್ನು ಹತ್ಯೆ ಮಾಡಿ, ನನ್ನ ಜೀವನದ ಸ್ಥೀಮಿತತೆಯನ್ನೇ ಕೊಂಡೊಯ್ದರು. ಆಗ ಬಂಗಾಳದಲ್ಲಿದ್ದ ನನ್ನ ತಂದೆ ಬಮದಾಗ ಮೊದಲ ಬಾರಿಗೆ ಅವರು ಅತ್ತದ್ದನ್ನು ನೋಡಿದೆ. ಅವರೊಬ್ಬ ಧೈರ್ಯಶಾಲಿ ವ್ಯಕ್ತಿಯಾಗಿದ್ದರು. ಅವರು ಅಳುತ್ತಾ ಕುಸಿದು ಬಿದ್ದಿದ್ದನ್ನು ನಾನು ನೋಡಿದೆ. ಅಂದು ನಾನು ಅನುಭವಿಸಿದ ಯಾತನೆಯನ್ನು ಮತ್ತಿನ್ನೆಂದೂ ಅನುಭವಿಸಲಿಲ್ಲ ಎಂದು ಭಾವುಕರಾದರು.
ಸುಮಾರು 40 ನಿಮಿಷಗಳ ಕಾಲ ಮಾತನಾಡಿದ ರಾಹುಲ್, ನಾನು ಹಿಂದಿರುಗಿ ನೋಡಿದರೆ ನನಗೆ 8 ವರ್ಷಗಳ ರಾಜಕೀಯ ಅನುಭವವಿದೆ. ಈಗ ನನಗೆ 42 ವರ್ಷ. ನನಗೆ ದೊಡ್ಡ ಜವಾಬ್ದಾರಿಯಿದೆ ಮತ್ತು ಜನರು ನನ್ನ ಹಿಂದಿದ್ದಾರೆಂದು ನಾನು ಅರ್ಥ ಮಾಡಿಕೊಂಡಿದ್ದೇನೆ ಎಂದರು.
ರಾಹುಲ್ ತಮ್ಮ ಭಾಷಣ ಮುಗಿಯುತ್ತಿದ್ದಂತೆಯೇ ತಾಯಿ ಸೋನಿಯಾ ಮತ್ತು ಪ್ರಧಾನಿ ಮನಮೋಹನ್ ಸಿಂಗ್‌ರನ್ನು ತಬ್ಬಿ ಕೊಂಡರು.

No comments:

Post a Comment