Wednesday, January 23, 2013

ಚಿಕಿತ್ಸೆಗೆ ಬಂದವನನ್ನು ಒದ್ದು ಜೈಲ್‌ಗೆ ತಳ್ಳಿದರು: ಸಂತ್ರಸ್ತನ ಆರೋಪ ಜನವರಿ -23-2013

ಮಂಗಳೂರು: ಮಹಾರಾಷ್ಟ್ರದ ರತ್ನ್ನಗಿರಿಯಿಂದ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುಲು ಬಂದ ವ್ಯಕ್ತಿ ಅನುಮಾನದ ನೆಲೆಯಲ್ಲಿ ಜೈಲಿನಲ್ಲಿ ಒಂದು ವಾರ ಕಳೆಯಬೇಕಾದ ಪ್ರಕರಣ ಬಂದರ್‌ನಲ್ಲಿ ನಡೆದಿದ್ದು, ಸಹೃದಯರ ಸಹಕಾರದಿಂದ ಬಿಡುಗಡೆಗೊಂಡಿದ್ದಾರೆ.ರತ್ನಗಿರಿ ರಾಜಾಪುರ ಎಂಬಲ್ಲಿಯ ನೂರ್‌ಮುಹಮ್ಮದ್ ಜ.13 ರಂದು ರಾತ್ರಿ 11: 45ರ ಸುಮಾರಿಗೆ ಬಂದರ್  ಜುಮಾ ಮಸೀದಿ ಬಳಿ ಬಂದಿದ್ದಾಗ, ಬಂದರ್ ಪೊಲೀಸರು ಅನುಮಾನದ ನೆಲೆಯಲ್ಲಿ ಎಳೆದೊಯ್ದು ಜೈಲಿನಲ್ಲಿ ಕೊಳೆಯುವಂತೆ ಮಾಡಿದ್ದರು ಎಂದು ಆರೋಪಿಸಲಾಗುತ್ತಿದೆ. ನಾನು ಬಾಯಿಯಿಂದ ರಕ್ತ ಬರುವ ಕಾಯಿಲೆಯಿಂದ ಬಳಲುತ್ತಿದ್ದೇನೆ. ಅದಕ್ಕಾ ದೇರಳಕಟ್ಟೆ ಯೆನೆಪೊಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಊರಿನಿಂದ ಬಂದಿದ್ದೆ. ಇಲ್ಲಿ ಬಂದ ಬಳಿಕ ಕಾಸರಗೋಡ್‌ನ ಮಾಲಿಕ್ ದಿನಾರ್ ದರ್ಗಾದ ಊರೂಸ್ ಬಗ್ಗೆ ತಿಳಿಯಿತು.
ಕಾಸರಗೋಡ್‌ಗೆ ಹೋಗಿ ಬಳಿಕ ಚಿಕೆತ್ಸೆ ಪಡೆಯಲು ಯೋಚಿಸಿ, ಬಂದರ್ ಮಸೀದಿಯಲ್ಲಿ ರಾತ್ರಿ ಕಳೆಯಲು ಹೋಗಿದ್ದೆ, ಅಲ್ಲಿಗೆ ಬಂದ ಪೊಲೀಸರು ನನ್ನ ಬಗ್ಗೆ ವಿಚಾರಿಸಿದರು. ನಾನು ಮಹಾರಾಷ್ಟ್ರದಿಂದ ಬಂದಿದ್ದು ಎಂದು ತಿಳಿಯುತ್ತಿದ್ದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಮಾತ್ರವಲ್ಲದೆ ಬೂಟು ಕಾಲಿನಿಂದ ಸೊಂಟಕ್ಕೆ ಒದ್ದು ಆ ರಾತ್ರಿಯೇ ಠಾಣೆಗೆ ಕರೆದೊಯ್ದರು. ನಾನು ಡಯಾಬಿಟಿಸ್‌ನಿಂದ ಬಳಲುತ್ತಿದ್ದೇನೆ.ಕಾಲು ಮುರಿದಿದೆ. ಕಾಲನಲ್ಲಿ ರಾಡ್ ಹಾಕಲಾಗಿದೆ.
ಇದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಅದರ ದಾಖಲೆಗಳೂ ನನ್ನ ಬ್ಯಾಗ್‌ನಲ್ಲಿವೆ ನೋಡಿ ಎಂದರೂ ಕೇಳದ ಪೊಲೀಸರು ಬಟ್ಟೆ ಬಿಚ್ಚಿಸಿ  ಠಾಣೆಯ ಸೆಲ್‌ನಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿ, ಬರಿ ನೆಲದಲ್ಲಿ ಮಲಗಿದ್ದರು. ಸೊಳ್ಳೆಯ ಕಾಟದ ಮಧ್ಯೆ ಚಳಿಯಲ್ಲಿ ಬರಿ ನೆಲದ ಮೇಲೆ ಮಲಗಿದ್ದರಿಂದ ನನ್ನ ದೇಹದಲ್ಲಿ ಬಾವು ಮೂಡಿತ್ತು. ಆದರೂ ಇದನ್ನು ಕೇಳುವ ಮನಃಸ್ಥಿತಿಯಲ್ಲಿ ಪೊಲೀಸರು ಇರಲಿಲ್ಲ ಎಂದು ಸಂತ್ರಸ್ತ ನೂರ್ ಮುಹಮ್ಮದ್ ಆರೋಪಿಸುತ್ತಾರೆ. 
ಮರುದಿನ ಮಧ್ಯಾಹ್ನ ಊಟ ತಂದು ಕೊಟ್ಟರಾದರೂ ಅದರ ಹಣ ನನ್ನಿಂದಲೇ ಪಡೆದಿದ್ದರು. ಸಂಜೆಯ ಹೊತ್ತಿಗೆ ನ್ಯಾಯಾಧೀಶರ ಎದುರು ಹಾಜರು ಪಡಿಸಿ, ಅವರೆದುರು ಕೈ ಮುಗಿದು ನಿಂತರೆ ಬಿಡುತ್ತಾರೆ ಎಂದು ಜನಾರ್ದನ ಎಂಬ ಪೊಲೀಸ್ ತಿಳಿಸಿದ್ದು, ನಾನು ಹಾಗೆಯೇ ಮಾಡಿದೆ ಆದರೆ ಪೊಲೀಸರು ನನ್ನನ್ನು ತಂದು ಬಿಟ್ಟದ್ದು ಜೈಲ್‌ಗೆ.
ನನಗೆ ಎರಡು ವಾರಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂಬ ಆಘಾತಕಾರಿ ಸಂಗತಿ ತಿಳಿದದ್ದೇ ಆವಾಗ. ಚಿಕಿತ್ಸೆಗಾಗಿ ಬಂದ ನಾನು ಜೈಲು ಸೇರುವಂತಾಯಿತು ಎಂದು ನೂರ್‌ಮುಹಮ್ಮದ್ ಬೇಸರ ವ್ಯಕ್ತಪಡಿಸುತ್ತಾರೆ.
ನನ್ನ ಎರಡು ಮೊಬೈಲ್, ರೂಬಿ ಸಹಿತ 35 ಸಾವಿರ ರೂ. ಮೌಲ್ಯದ ಎರಡು ಮುತ್ತುಗಳು, ಚಿಕಿತ್ಸೆಗಾಗಿ ತಂದಿದ್ದ 6,500 ರೂ. ನಗದು ಒಂದು ರಾಡೊ ವಾಚ್ ಪೊಲೀಸರ ಬಳಿಯೇ ಇದೆ ಎಂದು ತಿಳಿಸಿದ್ದಾರೆ.

No comments:

Post a Comment