Monday, January 14, 2013

ಆನ್‌ಲೈನ್‌ನಲ್ಲಿ ಗ್ರಾಮೀಣ ಬದುಕಿನ ಅನಾವರಣ: ಪಿ.ಸಾಯಿನಾಥ್


 ಜನವರಿ -14-2013

ಬೆಂಗಳೂರು: ನಶಿಸಿ ಹೋಗುತ್ತಿರುವ ಗ್ರಾಮೀಣ ಜನರ ಬದುಕು, ಬವಣೆ, ಕುಲ ಕಸುಬು, ಕಲೆ, ಸಾಹಿತ್ಯ, ನೃತ್ಯ, ಜಾನಪದ ಸೇರಿದಂತೆ ವಿವಿಧ ಸಾಂಸ್ಕೃತಿಕ ಮಜಲುಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಆನ್‌ಲೈನ್ ಅಂತರ್ಜಾಲ ತಾಣವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ತಿಳಿಸಿದ್ದಾರೆ.
ರವಿವಾರ ನಗರದ ಗಾಂಧಿ ಭವನದಲ್ಲಿ  ಅವಧಿ, ಅಭಿನವ ಅಂತರ್ಜಾಲ ಬ್ಲಾಗ್ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಜಂಟಿಯಾಗಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಪತ್ರಕರ್ತನಾಗಿ ಸುಮಾರು 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ತಾನು, ದೇಶಾದ್ಯಂತ ನೂರಾರು ಭಾಷೆ, ಪಂಗಡ, ಸಂಸ್ಕೃತಿಗಳನ್ನು ನೋಡಿದ್ದೇನೆ. ಇಂದಿಗೂ ಎಷ್ಟೋ ಪಂಗಡಗಳು ಹಾಗೂ ಅವುಗಳ ಸಂಸ್ಕೃತಿ ಹೊರ ಜಗತ್ತಿಗೆ ಅನಾವರಣಗೊಂಡೇ ಇಲ್ಲ. ಈ ನಿಟ್ಟಿನಲ್ಲಿ ಗ್ರಾಮೀಣ ಜನರ ಬದುಕು ಬವಣೆ, ಸಂಸ್ಕೃತಿಗಳನ್ನು ಮುಂದಿನ ತಲೆಮಾರಿಗೆ ಪರಿಚಯಿಸಲು ಆನ್‌ಲೈನ್‌ನಲ್ಲಿ ಅಂತರ್ಜಾಲ ತಾಣವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ.
ಈ ಅಂತಾರ್ಜಾಲ ತಾಣದಲ್ಲಿ ಗ್ರಾಮೀಣ ಜನರ ಸುಂದರ ಹಾಗೂ ಬರ್ಬರ ಜೀವನ ಚಿತ್ರಗಳು, ಆಡಿಯೋ, ಡಿಯೋ ಮತ್ತು ಸಬ್ ಟೈಟಲ್ ಕಾರ್ಡ್ ಲಭ್ಯವಾಗಲಿದೆ ಎಂದು ಸಾಯಿನಾಥ್ ಹೇಳಿದರು. ಮುಂದಿನ 20ವರ್ಷಗಳಲ್ಲಿ ಭಾರತಾದ್ಯಂತ ಬ್ರಾಡ್‌ಬ್ಯಾಂಡ್‌ಯುಕ್ತ ವೊಬೈಲ್‌ಗಳು ಬಳಕೆಗೆ ಬರಲಿವೆ.
ಶಾಲೆ, ಕಾಲೇಜುಗಳಲ್ಲಿ ಪಠ್ಯ ಪುಸ್ತಕಗಳ ಬದಲಿಗೆ, ಆನ್‌ಲೈನ್ ಪಠ್ಯ ಜಾರಿಗೆ ಬರಲಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಜನರ ಬದುಕು ಬವಣೆಗಳನ್ನು ಆನ್‌ಲೈನ್ ಮೂಲಕವೇ ಒದಗಿಸಲು ಕಾರ್ಯಪ್ರವೃತ್ತರಾಗಿದ್ದೇವೆ.ಗ್ರಾಮೀಣ ಜನರ ಬಗ್ಗೆ ಪಠ್ಯ ಪುಸ್ತಕಗಳಲ್ಲೋ ಅಥವಾ ಲೇಖನಗಳಲ್ಲೋ ಓದುವ ಬದಲು, ಆನ್‌ಲೈನ್ ವ್ಯವಸ್ಥೆಯಲ್ಲಿ ವ್ಯಕ್ತಿ ತನ್ನ ಕಥೆಯನ್ನು ತಾನೇ ದೃಶ್ಯದ ಮೂಲಕ ಹೇಳುತ್ತಾನೆ ಎಂದರು.
ಈಗಾಗಲೇ ಹಲವು ಯುವ ಜನರು ಈ ರೀತಿಯ ದೃಶ್ಯಗಳನ್ನು ನಮಗೆ ಕಳುಹಿಸಿದ್ದಾರೆ. ದೇಶಾದ್ಯಂತ ಆಸಕ್ತರು ತಾವು ಗ್ರಾಮೀಣ ಬದುಕಿನ ಬಗ್ಗೆ ಸೆರೆ ಹಿಡಿದರುವ ದೃಶ್ಯಗಳನ್ನು ಕಳುಹಿಸಬಹುದು.ಮೊಬೈಲ್ ಕ್ಯಾಮರಾಗಳಲ್ಲಿ ಸೆರೆ ಹಿಡಿದಿದ್ದರೂ ಸರಿಯೇ, ಉತ್ತಮ ಗುಣಮಟ್ಟದ ಚಿತ್ರವಾಗಿದ್ದರೆ ಬಳಸಿಕೊಳ್ಳುತ್ತೇವೆ. ಯಾವುದೇ ರಾಜ್ಯ ಅಥವಾ ಪ್ರದೇಶದ ದೃಶ್ಯಗಳಾದರೂ,   ದೇಶದ ಎಲ್ಲ ಪ್ರಮುಖ ಭಾಷೆಗಳ ಸಬ್‌ಟೈಟಲ್‌ನಲ್ಲಿ ಲಭ್ಯವಾಗಲಿವೆ.
ಆದರೆ ಸಾಮಾಜಿಕ ವಿಷಯಗಳ ಬಗ್ಗೆ ಇಲ್ಲಿ ಮಾಹಿತಿ ಇರುವುದಿಲ್ಲ ಎಂದು ಪಿ.ಸಾಯಿನಾಥ್ ವಿವರಿಸಿದರು. ಸಂವಾದದಲ್ಲಿ ಹಿರಿಯ ಪತ್ರಕರ್ತ ಜಿ.ಎನ್.ಮೋಹನ್, ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ, ವಾರ್ತಾ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು

No comments:

Post a Comment