Monday, January 7, 2013

ಮಹಿಳೆಯರನ್ನು ಮನೆಗೆಲಸಕ್ಕೆ ಸೀಮಿತಗೊಳಿಸಿ: ಆರೆಸ್ಸೆಸ್ ಮುಖ್ಯಸ್ಥನ ಮತ್ತೊಂದು ವಿವಾದಾತ್ಮಕ ಹೇಳಿಕೆ



 ಜನವರಿ -07-2013

ಇಂದೋರ್: ಅತ್ಯಾಚಾರದಂತಹ ಪ್ರಕರಣಗಳು ಇಂಡಿಯಾದಲ್ಲಿ ನಡೆಯುತ್ತದೆಯೇ ಹೊರತು ಭಾರತದಲ್ಲಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್, ಹೆಣ್ಣು ಮನೆಗೆಲಸಕ್ಕೆ ಸೀಮಿತವಾಗಿರಬೇಕು ಎನ್ನುವ ಮೂಲಕ ಮತ್ತೊಂದು ವಿವಾದವನ್ನು ಸೃಷ್ಟಿಸಿದ್ದಾರೆ.
ಇಲ್ಲಿ ಆಯೋಜಿಸಲಾಗಿದ್ದ ಆರೆಸ್ಸೆಸ್ ಕಾರ್ಯಕರ್ತರ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ವೈವಾಹಿಕ ಜೀವನದಲ್ಲಿನ ಗಂಡ ಮತ್ತು ಹೆಂಡತಿಯ ನಡುವಿನ ಒಪ್ಪಂದದಲ್ಲಿ ‘ನನ್ನ ಮನೆಯನ್ನು ನೋಡಿಕೊಳ್ಳುವ ಜವಾಬ್ದಾರಿ ನಿನ್ನದಾಗಿದೆ. ನಿನ್ನ ಅಗತ್ಯಗಳನ್ನು ನಾನು ಪೂರೈಸುತ್ತೇನೆ’ ಎಂದು ಗಂಡ ಹೇಳುತ್ತಾನೆ. ಅದರಂತೆಯೇ ನಡೆದುಕೊಳ್ಳುತ್ತಿರುತ್ತಾನೆ. ಹೆಂಡತಿ ಈ ಒಪ್ಪಂದವನ್ನು ಅನುಸರಿಸಿಕೊಂಡು ಹೋಗುವವರೆಗೂ ಗಂಡ ಆಕೆಯೊಂದಿಗಿರುತ್ತಾನೆ. ಯಾವಾಗ ಆಕೆ ಒಪ್ಪಂದವನ್ನು ಉಲ್ಲಂಘಿಸುತ್ತಾಳೆಯೋ ಆಗ ಗಂಡ ಆಕೆಗೆ ವಿಚ್ಛೇದನ ನೀಡಬಹುದು ಎಂದರು.
ಹೆಂಡತಿಯಾದವಳು ಮನೆಯ ಜವಾಬ್ದಾರಿ ವಹಿಸಿಕೊಂಡು ಮತ್ತು ಗಂಡನಾದವನು ಹೊರಗೆ ದುಡಿಯುತ್ತಾ ಸಂಪಾದಿಸುತ್ತಿದ್ದರೆ ಆ ಕುಟುಂಬ ಸುಖೀ ಕುಟುಂಬವಾಗಿರುತ್ತದೆ. ಈ ವ್ಯವಸ್ಥೆ ಸಮಾಜಕ್ಕೂ ಒಳ್ಳೆಯದು ಎಂದರು.
ಮಹಿಳೆ ಮನೆಗೆಲಸ ಮಾಡಿಕೊಂಡು ಮನೆಯ ಜವಾಬ್ದಾರಿಯನ್ನು ವಹಿಸಿಕೊಂಡು ಹೋದರೆ ಸಮಾಜದ ಸ್ವಾಸ್ಥವೂ ಉತ್ತಮವಾಗಿರುತ್ತದೆ ಎಂದರು.
ಭಾಗವತ್ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಿಪಿಎಂ ನಾಯಕಿ ಬೃಂದಾ ಕಾರಟ್, ಆರೆಸ್ಸೆಸ್ ಮುಖ್ಯಸ್ಥರ ಈ ಹೇಳಿಕೆ ಆಶ್ಚರ್ಯ ತರಿಸಿಲ್ಲ. ಇದು ಆರೆಸ್ಸೆಸ್ ಏನು ಎಂಬುದನ್ನು ತೋರಿಸಿದೆ. ಈ ಕಾರಣಕ್ಕಾಗಿಯೇ ಇದು ಭಾರತದ ವಿರುದ್ಧಗತಿಯ ಸಮಿತಿಯಾಗಿರುವುದು. ಇದೇ ಹಿನ್ನೆಲೆಯಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ದೇಶಕ್ಕೆ ಹೊಸ ಸಂವಿಧಾನಬೇಕಾಗಿದೆ ಎಂದು ಆಶಿಸಿತ್ತು. ಮನುಸ್ಮತಿಯ ಈ ಭಾಷೆ ಭಾಗವತ್‌ರ ಸಿದ್ಧಾಂತವನ್ನು ಬಿಂಬಿಸುತ್ತದೆ ಎಂದಿದ್ದಾರೆ.
ಕಳೆದ ವಾರ ಅಸ್ಸಾಂನ ಸಿಲ್ಚಾರ್‌ನಲ್ಲಿ ನಡೆದ ಸಭೆಯೊಂದರಲ್ಲಿ ಅವರು, ಇಂಡಿಯಾದ ನಗರ ಪ್ರದೇಶಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಹೆಚ್ಚಾಗಿರುವ ಕಾರಣದಿಂದಾಗಿಯೇ ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚಾಗಿದೆ. ಆದರೆ ಗ್ರಾಮೀಣ ಭಾರತದಲ್ಲಿ ಇಂತಹ ಘಟನೆಗಳು ನಡೆಯುವುದು ವಿರಳ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು.

No comments:

Post a Comment