Sunday, January 6, 2013

ಕುಡಂಕುಳಂ ಯೋಜನಾಧಿಕಾರಿಗೆ ಅಜ್ಞಾತ ಬೆದರಿಕೆ ಪತ್ರ: ತನಿಖೆಗೆ ಆದೇಶ



 ಜನವರಿ -06-2013

: ವಿವಾದಿತ ಕುಡಂಕುಳಂ ಪರಮಾಣು ವಿದ್ಯುತ್ ಸ್ಥಾವರ ಈ ತಿಂಗಳಲ್ಲಿ ಕಾರ್ಯಾರಂಭಕ್ಕೆ ಸಿದ್ಧವಾಗುತ್ತಿರುವಂತೆಯೇ, ಅದರ ನಿವೇಶನ ನಿರ್ದೇಶಕರಿಗೆ ಬಂದಿರುವ ಅಜ್ಞಾತ ಬೆದರಿಕೆ ಪತ್ರವೊಂದು ಅಧಿಕಾರಿಗಳನ್ನು ಹಾಗೂ ಪೊಲೀಸರನ್ನು ಗೊಂದಲದಲ್ಲಿ ಕೆಡವಿದೆ. ನಿರ್ದೇಶಕ ಆರ್.ಎಸ್.ಸುಂದರ್ ಎಂಬವರ ಹೆಸರಿಗೆ ನಿನ್ನೆ ಸಂಜೆ ಅಂಚೆಯಲ್ಲಿ ಬಂದಿರುವ ಪತ್ರವೊಂದು, ಘಟಕದ ಕಾರ್ಯಾರಂಭವನ್ನು ಮುಂದುವರಿಸಿದಲ್ಲಿ ಅವರನ್ನು ಕೊಲ್ಲುವ ಬೆದರಿಕೆ ಹಾಕಿದೆಯೆಂದು ಪೊಲೀಸರು ತಿಳಿಸಿದ್ದಾರೆ. ತಮಿಳಿನಲ್ಲಿ ಬರೆದಿರುವ ಈ ಪತ್ರದಲ್ಲಿ ‘ಕುಡಂಕುಳಂ ಮಕ್ಕಳ್ ಗಂಬನ್’ (ಕುಡಂಕುಳಂ ಜನರ ಮಿತ್ರ) ಎಂಬ ಸಹಿಯಿದ್ದು, ಚೆನ್ನೈಯ ಅಣ್ಣಾ ಸಲಾಯಿಯಲ್ಲಿ ಅಂಚೆಗೆ ಹಾಕಲಾಗಿದೆಯೆಂದು ಅವರು ಹೇಳಿದ್ದಾರೆ. ಮೂರು ಹಂತಗಳ ಭದ್ರತೆಯು ಘಟಕಕ್ಕೇ ಹೊರತು ಅಧಿಕಾರಿಗಳಿಗಲ್ಲ ಎಂದು ಪತ್ರ ತಿಳಿಸಿವೆ. ಭಾರತ-ರಶ್ಯ ಜಂಟಿ ಸಾಹಸದ ಮೊದಲ 1000 ಮೆ.ವಾ. ಘಟಕ ಎರಡು ವಾರಗಳಲ್ಲಿ ಕಾರ್ಯಾರಂಭಿಸಲಿದೆಯೆಂದು ಪರಮಾಣು ಶಕ್ತಿ ಆಯೋಗದ ಅಧ್ಯಕ್ಷ ರತನ್ ಕುಮಾರ್ ಸಿನ್ಹಾ ಹೇಳಿದ ಮರುದಿನವೇ ಈ ಪತ್ರ ಬಂದಿದೆ.
ಈ ಸಂಬಂಧ ತಿರುನೆಲ್ವೇಲಿಯ ಪೊಲೀಸ್ ಅಧೀಕ್ಷಕ ವಿಜಯೇಂದ್ರ ಎಸ್.ಬಿದರಿಯವರಿಗೆ ದೂರು ನೀಡಲಾಗಿದ್ದು, ಅವರು ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಇದೇ ವೇಳೆ, ತೀರ ರಕ್ಷಕರು ಹಾಗೂ ರಾಜ್ಯದ ಸಾಗರ ಪೊಲೀಸರು ಇಂದು ಕುಡಂಕುಳಂ ತೀರದಲ್ಲಿ ಜಂಟಿ ಭದ್ರತಾ ಕವಾಯತು ನಡೆಸಿದ್ದಾರೆ.

No comments:

Post a Comment