Sunday, January 27, 2013

ಅತ್ಯಾಚಾರ ಸಂತ್ರಸ್ತೆಯರ ಕಥೆ ಕೇಳಿ ಕಣ್ಣೀರಿಟ್ಟ ನ್ಯಾ. ವರ್ಮಾ ಸಮಿತಿ



 ಜನವರಿ -27-2013

ಹೊಸದಿಲ್ಲಿ: ದಿಲ್ಲಿಯಲ್ಲಿ ನಡೆದ ಅಮಾನುಷ ಸಾಮೂಹಿಕ ಅತ್ಯಾಚಾರ ಪ್ರಕರಣದ ನಂತರ ಮಹಿಳಾ ಸುರಕ್ಷತೆಗೆ ಸಂಬಂಧಿಸಿದಂತೆ ಮತ್ತು ಮಹಿಳಾ ದೌರ್ಜನ್ಯ ಕಾನೂನು ತಿದ್ದುಪಡಿಗೆ ಶಿಫಾರಸುಗಳನ್ನು ಸೂಚಿಸಲು ಕೇಂದ್ರ ಸರಕಾರ ರಚಿಸಿದ್ದ ನ್ಯಾಯಮೂರ್ತಿ ಜೆ.ಎಸ್.ವರ್ಮಾ ಸಮಿತಿ ತಿಂಗಳೊಳಗೆ ತ್ವರಿತಗತಿಯಲ್ಲಿ ತನ್ನ ಸಲಹೆಗಳನ್ನು ನೀಡಿ ಪ್ರಶಂಸೆಗೊಳಗಾಗಿದೆ. ಆದರೆ ಈ ಪ್ರಕ್ರಿಯೆಯ ಸಂದರ್ಭದಲ್ಲಿ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯರ ಕಥೆ ಕೇಳಿ ತ್ರಿಸದಸ್ಯರ ಸಮಿತಿ ಕಣ್ಣೀರಿಟ್ಟ ಕ್ಷಣಗಳೂ ಇವೆ.
ವಾಸ್ತವವಾಗಿ ಹದಿಹರೆಯದ ಯುವತಿಯರು ಮತ್ತು ಯುವಕನೊಬ್ಬ ಹಲವು ವರ್ಷಗಳವರೆಗೆ ತಮ್ಮನ್ನು ಲೈಂಗಿಕವಾಗಿ ಶೋಷಣೆ ನಡೆಸಿದ ಕುರಿತ ಕಥೆಯನ್ನು ಹೇಳಿದಾಗ ವರ್ಮಾ ಮತ್ತು ಇಬ್ಬರು ಸಹೋದ್ಯೋಗಿಗಳು ಕುಸಿದು ಬಿದ್ದರು ಹಾಗೂ ಕಣ್ಣೀರಿಟ್ಟರು.
ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ವರ್ಮಾ, ಹಿಮಾಚಲ ಪ್ರದೇಶದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಲೀಲಾ ಸೇಠ್ ಮತ್ತು ಭಾರತದ ಮಾಜಿ ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಮಣ್ಯಂ ಶಿಫಾರಸು ಸಿದ್ಧತೆಯ ಪ್ರಕ್ರಿಯೆ ಸಮಯದಲಿ,್ಲ ವೈಯಕ್ತಿಕವಾಗಿ ತಮ್ಮ ಮುಂದೆ ಲೈಂಗಿಕ ದೌರ್ಜನ್ಯಕ್ಕೊಳಗಾದ ಹಲವರ ಕಥೆ ಕೇಳಿದ್ದರು. ಆದರೆ ಒಬ್ಬ ಯುವತಿಯು ಹೇಳಿದ ಕಥೆಯನ್ನು ಕೇಳಿ ಕುಸಿದು ಬಿದ್ದು, ಕಣ್ಣೀರಿಟ್ಟದ್ದು ಮಾತ್ರವಲ,್ಲ ನಂತರ ಆಕೆಗೆ ಸಮಿತಿಯ ಸದಸ್ಯರೇ ಸುಮಾರು 1.5 ಲಕ್ಷ ರೂ.ಗಳಷ್ಟು ಹಣ ಸಹಾಯ ಮಾಡಿದರು.
ನಮ್ಮ ಮುಂದೆ ಬಂದು ಕುಳಿತ ಯುವತಿಯೊಬ್ಬಳ ಕಥೆ ಕೇಳಿ ಸಮಿತಿಯ ಮೂವರು ಸದಸ್ಯರೂ ಕುಸಿದೆವು ಮತ್ತು ಕಣ್ಣೀರಿಟ್ಟೆವು. ಆಕೆ ತನ್ನ ಜೀವನವನ್ನು ಪುನರ್ ನಿರ್ಮಿಸಿಕೊಳ್ಳಲು ಪ್ರಯತ್ನಿಸಲಿ ಎಂಬ ಕಳಕಳಿಯಿಂದ ನಾವು ಆಕೆಗೆ ಹಣದ ನೆರವು ನೀಡಿದೆವು. ಅಂತಹದ್ದೊಂದು ಭಾವನೆ ಆಕೆಯ ಕಥೆ ಕೇಳಿದಾಗ ನಮ್ಮಲ್ಲಿ ಮೂಡಿತು. ಆಕೆಗೆ ಬೇರೆ ರೀತಿಯಲ್ಲಿ ಸಹಾಯ ಮಾಡಲು ನಾವು ಅಸಹಾಯಕರಾಗಿದ್ದರಿಂದ ಹಣ ಸಹಾಯ ಮಾಡಲು ನಾವು ನಿರ್ಧರಿಸಿದೆವು ಎಂದು ಸಮಿತಿಯ ಸದಸ್ಯರಾಗಿರುವ ಗೋಪಾಲ್ ಸುಬ್ರಮಣ್ಯಂ ಸುದ್ದಿ ಸಂಸ್ಥೆಗೆ ತಿಳಿಸಿದರು.
ಆ ಯುವತಿಯ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಸಲಾಯಿತು. ಮಾತ್ರವಲ್ಲ ಆಕೆ ಕೆಲಸ ಮಾಡುತ್ತಿದ್ದ ಮನೆಯಲ್ಲಿದ್ದ ಜನರು ಆಕೆಗೆ ಯಾವುದೇ ಹಣವನ್ನೂ ನೀಡಿಲ್ಲ. ಆಕೆಯನ್ನು ಮನೆಗೆಲಸಕ್ಕೆ ನೇಮಿಸಿಕೊಂಡವರು ಆಕೆಯ ಮೇಲೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಅತ್ಯಾಚಾರ ನಡೆಸಿದರೇ ಹೊರತು ಬೇರೇನೂ ಮಾಡಲಿಲ್ಲ. ನಮ್ಮ ನ್ಯಾಯ ವಿವೇಚನೆ ಎಲ್ಲಿದೆ, ಆಕೆಯ ಹಕ್ಕುಗಳ ಗತಿ ಏನು ಎಂದು ಅವರು ಪ್ರಶ್ನಿಸಿದರು.
ಸಮಿತಿಯು ತನ್ನ ಪ್ರಕ್ರಿಯೆಯ ವೇಳೆ ಹಲವಾರು ಅತ್ಯಾಚಾರ ಸಂತ್ರಸ್ತೆಯರು, ಕಳ್ಳ ಸಾಗಣೆ ಜಾಲದಲ್ಲಿ ಸಿಲುಕಿದ ಮಹಿಳೆಯರು ಮತ್ತು ಮಕ್ಕಳು ಹಾಗೂ ಬಲವಂತದಿಂದ ಮಾದಕ ದ್ರವ್ಯ ಸೇವಿಸಿದಂತಹ ಸಂತ್ರಸ್ತರ ಜತೆ ಸಮಾಲೋಚನೆ ನಡೆಸಿದ್ದು, ಅವರು ಹೇಳಿದ ಕಥೆಯನ್ನು ಸಮಿತಿ ಗೃಹ ಸಚಿವಾಲಯಕ್ಕೆ ಸಲ್ಲಿಸಿರುವ ತನ್ನ ವರದಿಯಲ್ಲಿ ಅಡಕ ಮಾಡಿದೆ.
ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯರ ಮಾನಸಿಕ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕೆಂಬ ಉದ್ದೇಶದಿಂದ ನಾವು ಹಲವಾರು ಅತ್ಯಾಚಾರ ಸಂತ್ರಸ್ತೆಯರನ್ನು ಸಂದರ್ಶಿಸಿದೆವು. ಅವರೊಂದಿಗೆ ಮಾತುಕತೆ ನಡೆಸಿದ ನಂತರ ಭಾರತದಲ್ಲಿರುವ ಇದಕ್ಕೆ ಸಂಬಂಧಿಸಿದ ಕಾನೂನು ವಿಫಲವಾಗಿದೆ ಎಂಬ ನಿರ್ಧಾರಕ್ಕೆ ಬಂದ ನಾನು ಅವರೆಲ್ಲರಿಗೂ ವಿಷಾದ ವ್ಯಕ್ತಪಡಿಸಿದೆ ಎಂದು ಗೋಪಾಲ್ ಸುಬ್ರಮಣ್ಯಂ ಹೇಳಿದ್ದಾರೆ.
ಒಂದು ಹಂತದಲ್ಲಿ ಸಮಿತಿಯಲ್ಲಿರುವ ಮೂವರು ಸದಸ್ಯರೂ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯನ್ನು ವಿಧಿಸುವುದಕ್ಕೆ ಶಿಫಾರಸು ಮಾಡುವ ನಿರ್ಧಾರಕ್ಕೆ ಬಂದಿದ್ದೆವು. ಆದರೆ ನಂತರ ಅದಕ್ಕೆ ವಿರುದ್ಧವಾದ ನಿರ್ಧಾರಕ್ಕೆ ಕೂಡಾ ಬಂದೆವು. ಅತ್ಯಾಚಾರ ಅಪರಾಧಿಗಳಿಗೆ ಗರಿಷ್ಠ 20 ವರ್ಷ ಶಿಕ್ಷೆ ಅಥವಾ ಜೀವಿತಾವಧಿಯ ಶಿಕ್ಷೆಯ ಶಿಫಾರಸು ಮಾಡುವ ನಿರ್ಧಾರಕ್ಕೆ ಬಂದೆವು ಎಂದು ಅವರು ಕೆಲ ವಿವರಗಳನ್ನು ಬಹಿರಂಗಪಡಿಸಿದರು.
ಅತ್ಯಾಚಾರಿಗಳಿಗೆ ಗರಿಷ್ಠ ಪ್ರಮಾಣವಾದ 14 ವರ್ಷಗಳ ಜೀವಾವಧಿ ಶಿಕ್ಷೆಗೆ ಬಹಳಷ್ಟು ಮಹಿಳಾ ಸಂಘಟನೆಗಳು ಒಲವು ವ್ಯಕ್ತಪಡಿಸಿದ್ದವು. ಒಂದು ವೇಳೆ ಅತ್ಯಾಚಾರಿಗಳಿಗೆ ಮರಣ ದಂಡನೆಯ ಶಿಫಾರಸು ಮಾಡಿದಲ್ಲಿ ಮಹಿಳಾ ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತವೆ ಎಂಬ ಕಾರಣಕ್ಕೆ ಸಮಿತಿ ಅತ್ಯಾಚಾರಿಗಳಿಗೆ ಜೀವಿತಾವಧಿಯ ಶಿಕ್ಷೆಯನ್ನು ನೀಡಲು ಶಿಫಾರಸು ಮಾಡಿದೆ.

No comments:

Post a Comment