Monday, January 7, 2013

ತಾಳ ತಪ್ಪಿದ ಭಾಗವತಿಕೆ


 ಜನವರಿ -07-2013

ಭಾರತದಲ್ಲಿ ಎರಡು ದೇಶಗಳನ್ನು ಸೃಷ್ಟಿಸಿ ಪಾಕಿಸ್ತಾನ-ಹಿಂದೂಸ್ತಾನ ವಿಭಜನೆಗೆ ಕಾರಣ ವಾದ ಶಕ್ತಿಗಳೇ ಇದೀಗ ಭಾರತ ಮತ್ತು ಇಂಡಿಯಾ ಎಂದು ದೇಶವನ್ನು ಅಮೂರ್ತ ಗಡಿಗಳಿಂದ ವಿಭಜಿಸಿದೆ ಭಾರತದಲ್ಲಿ ಈಗಲೂ ಅತ್ಯಾಚಾರಗಳು ನಡೆಯುತ್ತಿಲ್ಲ ಮತ್ತು ಇಂಡಿಯಾದಲ್ಲಿ ಮಾತ್ರ ಅತ್ಯಾಚಾರಗಳು ನಡೆಯುತ್ತಿವೆ ಎಂಬ ಹಸಿ ಸುಳ್ಳನ್ನು ಮತ್ತೊಮ್ಮೆ ಈ ದೇಶದ ಜನರ ಹಣೆಗೆ ಅಂಟಿಸಲು ಹೊರಟಿದೆ, ಆರೆಸ್ಸೆಸ್ ಮತ್ತು ಅದರ ಸರಸಂಘಚಾಲಕ ಮೋಹನ್ ಭಾಗವತ್. ಹೀಗೆ ಹೇಳುವ ಮೂಲಕ ಪರೋಕ್ಷವಾಗಿ ಅತ್ಯಾಚಾರಕ್ಕೊಳಾಗದವರನ್ನೇ ಕಟಕಟೆಯಲ್ಲಿ ನಿಲ್ಲಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಅತ್ಯಾಚಾರ ನಡೆಯುವುದಿಲ್ಲ ಎಂಬ ಹಸಿ ಸುಳ್ಳುಗಳ ಮರೆಯಲ್ಲಿ ತಮ್ಮ ಭಾರತವನ್ನು ಕಟ್ಟಲು ಇವರು ಹೊರಟಂತಿದೆ. ಇಂಡಿಯಾದಲ್ಲಿ ಅತ್ಯಾಚಾರ ನಡೆದರೆ ಅದು ಸುದ್ದಿಯಾಗುತ್ತದೆ. ಪ್ರತಿಭಟನೆ ನಡೆಯುತ್ತದೆ. ಭಾರತದಲ್ಲಿ ಅತ್ಯಾಚಾರ ನಡೆದರೆ ಅದು ಮುಚ್ಚಿ ಹೋಗುತ್ತದೆ. ಧ್ವನಿಯೆತ್ತಿದರೆ ಅದನ್ನು ಅಮುಕಲಾಗುತ್ತದೆ. ಇದಷ್ಟೇ ವ್ಯತ್ಯಾಸ.
ಇದೀಗ ಭಾಗವತ್ ತನ್ನ ಬತ್ತಳಿಕೆಯಿಂದ ಇನ್ನೊಂದು ಅಪಾಯಕಾರಿ ಬಾಣವನ್ನು ತೆಗೆದು ನೇರವಾಗಿ ಮಹಿಳೆಯರ ಮೇಲೆ ಒಗೆದಿದ್ದಾರೆ. ಮಹಿಳೆಯರ ಕೆಲಸ ಗೃಹಕೃತ್ಯಗಳನ್ನು ನೋಡಿಕೊಳ್ಳುವುದು. ಗಂಡಸರು ದುಡಿದು ತರಬೇಕು ಎಂಬಿತ್ಯಾದಿಯಾಗಿ ಹೇಳಿದ್ದಾರೆ. ಸನಾತನ ಭಾರತದಲ್ಲಿ ನಿಂತು ಅವರು ಇಂಡಿಯಾದ ಮೇಲೆ ಈ ಬಾಣವನ್ನು ಎಸೆದಿದ್ದಾರೆ. ಇದು ಎಂತಹ ಅಪಾಯಕಾರಿ ಹೇಳಿಕೆಯೆಂದರೆ, ನಾಳೆ ಇದೇ ಹೇಳಿಕೆಯನ್ನು ಪರವಾನಿಗೆಯೆಂದು ತಿಳಿದುಕೊಂಡು ಅವರ ಅನುಯಾಯಿಗಳು, ಕಚೇರಿ ಕೆಲಸಕ್ಕೆ ಹೋಗುವ ಮಹಿಳೆಯರ ಮೇಲೆ ದಾಳಿ ನಡೆಸಿದರೂ ಅಚ್ಚರಿಯಿಲ್ಲ.
ಕಚೇರಿಯಲ್ಲಿ ಕೆಲಸ ಮಾಡುವುದನ್ನೇ ಅಪರಾಧ ಎಂದು ಹೇಳುವ ಮೂಲಕ ಅವರು ಒಂದು ದೊಡ್ಡ ಮಹಿಳಾ ಸಮುದಾಯವನ್ನೇ ಎದುರು ಹಾಕಿಕೊಂಡಿದ್ದಾರೆ ಮಾತ್ರವಲ್ಲ, ಆ ಮಹಿಳೆಯರನ್ನು ಅಪಾಯಕ್ಕೆ ದೂಡಿದ್ದಾರೆ. ಈಗಾಗಲೇ ನೈತಿಕ ಪೊಲೀಸರು ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಕಾರು-ಬಾರುಗಳನ್ನು ನಡೆಸುತ್ತಿರುವಾಗ, ಈ ಹೇಳಿಕೆ ಮಂಗಗಳಿಗೆ ಹೆಂಡ ಕುಡಿಸಿದಂತಾಗಬಹುದು. ಆದುದರಿಂದ ತಕ್ಷಣ ಭಾಗವತ್ ಈ ಹೇಳಿಕೆಯಿಂದ ಹಿಂದೆ ಸರಿದು, ದೇಶದ ಮಹಿಳೆಯರ ಕ್ಷಮೆ ಯಾಚಿಸಬೇಕಾಗಿದೆ.
ಆದರೆ ಇದೇ ಸಂದರ್ಭದಲ್ಲಿ ನಾವು ಪರೋಕ್ಷವಾಗಿ ಗೃಹಕೃತ್ಯ ಮಾಡುತ್ತಿರುವ ಲಕ್ಷಾಂತರ ಹೆಣ್ಣು ಮಕ್ಕಳನ್ನು ಹಗುರವಾಗಿ ನೋಡುವಂತಾಗಬಾರದು. ಗೃಹ ಕೃತ್ಯವೆನ್ನುವುದು ಇಂಡಿಯಾದಲ್ಲಿ ತುಸು ಹಗುರವಾಗಿದ್ದರೂ, ಭಾಗವತರ ಭಾರತದಲ್ಲಿ ಮಾತ್ರ ಇನ್ನೂ ಸಂಬಳವಿಲ್ಲದ ದುಡಿಮೆಯಾಗಿಯೇ ಉಳಿದಿದೆ. ಹಗಲು ರಾತ್ರಿ ಮನೆ, ಮಕ್ಕಳು ಎಂದು ದುಡಿದರೂ, ಆಕೆಯ ದುಡಿಮೆಗೆ ಭಾರತದಲ್ಲಿ ಸಿಕ್ಕುವ ಗೌರವವೆಷ್ಟು ಎನ್ನುವುದು ವಿಶ್ವಕ್ಕೇ ಗೊತ್ತಿರುವ ಸಂಗತಿ. ‘‘ನಿಮ್ಮ ಹೆಂಡತಿ ಜಾಬ್ ಮಾಡುತ್ತಿದ್ದಾರೆಯೆ’’ ಎಂಬ ಮಾತಿಗೆ ಉತ್ತರ ‘‘ಇಲ್ಲ, ಆಕೆ ಮನೆಯಲ್ಲೇ ಇರುವುದು’’.
ಅದರರ್ಥ ಮನೆಗೆಲಸವನ್ನು ಯಾವ ಗಂಡಸರೂ ದುಡಿಮೆಯಾಗಿ ನೋಡಿದ್ದೇ ಇಲ್ಲ. ಸರಿ. ಆಕೆ ಹೊರಗೆ ದುಡಿಮೆಗೆ ಹೋದಾಕ್ಷಣ ಅವಳು ಸ್ವಾವಲಂಬಿಯಾದಳು ಎನ್ನುವಂತಿಲ್ಲ. ಹೊರಗಿನ ಕೆಲಸ ಮಾಡಿದಾಕ್ಷಣ ಯಾವ ಹೆಣ್ಣು ಮಕ್ಕಳೂ ಆರಾಮವಾಗಿ ಜೀವಿಸುತ್ತಾರೆ ಎಂದು ಭಾವಿಸುವುದು ಭಾರತದಲ್ಲೂ ಸಾಧ್ಯವಿಲ್ಲ. ಇಂಡಿಯಾದಲ್ಲೂ ಸಾಧ್ಯವಿಲ್ಲ. ಹೊರಗೆ ಕಚೇರಿಯಲ್ಲಿ ಕೆಲಸ ಮಾಡಿದ ಹೆಣ್ಣು ಮನೆಗೆ ಬಂದು ಮತ್ತೆ ದುಡಿಯಬೇಕಾಗುತ್ತದೆ.
ಮಕ್ಕಳಿಗೆ ಪಾಠ ಹೇಳಿಕೊಡುವುದು, ಅವರನ್ನು ಶಾಲೆಗೆ ಸಿದ್ಧಪಡಿಸುವುದು, ಅಡುಗೆ ತಯಾರಿಸುವುದು ಇದೆಲ್ಲವನ್ನೂ ಆ ಮಹಿಳೆಯೇ ಮತ್ತೆ ಮಾಡಬೇಕಾಗುತ್ತದೆ. ಹೆಂಡತಿ ಹೊರಗೆ ಹೋಗಿ ಕೆಲಸ ಮಾಡುತ್ತಿದ್ದಾಳೆ ಎಂದು ಯಾವ ಗಂಡೂ ಅವಳಿಗೆ ನೆರವನ್ನು ನೀಡುವುದಿಲ್ಲ. ಆದುದರಿಂದ ಭಾರತವಿರಲಿ, ಇಂಡಿಯಾವಿರಲಿ ಪುರುಷರ ಮನಸ್ಥಿತಿ ಒಂದೇ ಆಗಿದೆ. ಹೊರಗೆ ದುಡಿದು ಬಂದ ಹೆಣ್ಣು ಮನೆಗೆಲಸವನ್ನೂ ಮಾಡಬೇಕಾಗುತ್ತದೆ. ಯಾಕೆಂದರೆ ಮನೆಗೆಲಸವನ್ನು ಸಮಾಜ ಯಾವತ್ತೂ ‘ಕೆಲಸ’ ಎಂದು ತಿಳಿದುಕೊಂಡೇ ಇಲ್ಲ.
ಆದುದರಿಂದ, ಈ ದೇಶದಲ್ಲಿ ಹೊರಗೆ ದುಡಿಯುವವರ ತಲೆಯ ಮೇಲೆ ಎರಡೆರಡು ಹೊರೆಗಳು. ಅವರು ಸ್ವಾವಲಂಬಿಯಾಗುವ ಬದಲು ಇನ್ನಷ್ಟು ಶೋಷಣೆಗೆ ಒಳಗಾಗುತ್ತಾರೆ. ದುಡಿಯುವ ಮಹಿಳೆಯ ಸಂಘರ್ಷವೇ ಇನ್ನೊಂದು ಬಗೆಯದು. ಹೊರಗೆ ದುಡಿಯುವ ಮಹಿಳೆ ಸಂತೋಷವಾಗಿ, ಸ್ವೇಚ್ಛೆಯಿಂದ ಓಡಾಡುತ್ತಿರುತ್ತಾಳೆ ಎಂದರೆ ಅದು ಭಾಗವತರ ತಾಳ ತಪ್ಪಿದ ಭಾಗವತಿಕೆ.
ಇದೇ ಸಂದರ್ಭದಲ್ಲಿ ಭಾಗವತ್ ಅವರ ಹೇಳಿಕೆಯ ಬಗ್ಗೆ ಬಿಜೆಪಿಯ ಮಹಿಳಾ ನಾಯಕಿಯರು ತಮ್ಮ ಸ್ಪಷ್ಟೀಕರಣವನ್ನು ನೀಡಬೇಕಾಗಿದೆ. ಸುಷ್ಮಾ ಸ್ವರಾಜ್, ಉಮಾ ಭಾರತಿ ಸೇರಿದಂತೆ ದೇಶಾದ್ಯಂತವಿರುವ ಬಿಜೆಪಿಯ ಮಹಿಳಾ ನಾಯಕಿಯರು ಮನೆಯಲ್ಲಿ ಗೃಹಕೃತ್ಯ ಮಾಡುತ್ತಾ ಬಿದ್ದಿರಬೇಕು ಎಂದು ಪರೋಕ್ಷವಾಗಿ ಈ ಮೂಲಕ ಆರೆಸ್ಸೆಸ್ ಸೂಚನೆ ನೀಡಿದೆಯೇ? ಮನು ಸಂವಿಧಾನದ ಪ್ರಕಾರ ಮಹಿಳೆಯೂ ಶೂದ್ರಳೇ ಆಗಿದ್ದಾಳೆ. ಅವಳಿಗೆ ಆಳುವ ಅಧಿಕಾರವೇ ಇಲ್ಲದಿರುವಾಗ, ಬಿಜೆಪಿಯ ಮಹಿಳಾ ಮಣಿಗಳನ್ನು ಆರೆಸ್ಸೆಸ್ ಸಹಿಸೀತಾದರೂ ಹೇಗೆ? ಒಟ್ಟಿನಲ್ಲಿ ಭಾಗವತರ ಹೇಳಿಕೆ, ಸರಣಿ ಅತ್ಯಾಚಾರಗಳಿಂದ ಕಂಗೆಟ್ಟಿರುವ ಮಹಿಳೆಯರ ಗಾಯಗಳಿಗೆ ಬರೆ ಎಳೆದಂತಾಗಿದೆ ಎಂದಷ್ಟೇ ಹೇಳಬಹುದು.

No comments:

Post a Comment