Friday, January 25, 2013

ಬಹುಮತ ಸಾಬೀತು ಪಡಿಸಲು ಸಿಎಂಗೆ ಸೂಚನೆ ಜನವರಿ -26-2013

*ಕೊನೆಗೂ ರಾಜ್ಯಪಾಲರ ರಂಗಪ್ರವೇಶ
ಬೆಂಗಳೂರು: ಆಡಳಿತಾರೂಢ ಬಿಜೆಪಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಕೆಜೆಪಿಗಳ ನಡುವಿನ ಸಂಘರ್ಷದಿಂದಾಗಿ ಉಂಟಾಗಿರುವ ರಾಜ್ಯ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ರಂಗ ಪ್ರವೇಶ ಮಾಡಿದ್ದಾರೆ. ಫೆ.4ರಂದು ಆರಂಭಗೊಳ್ಳಲಿರುವ ವಿಧಾನಮಂಡಲದ ಉಭಯ ಸದನಗಳ ಜಂಟಿ ಅಧಿವೇಶನದ ಕಲಾಪಗಳು ಆರಂಭ ವಾಗುವುದಕ್ಕೂ ಮುನ್ನವೇ ಬಹುಮತ ಸಾಬೀತು ಪಡಿಸುವಂತೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಸರಕಾರಕ್ಕೆ ಸೂಚಿಸಿದ್ದಾರೆ.ಶುಕ್ರವಾರ ನಗರದ ಪುರಭವನದಲ್ಲಿ ಭಾರತದ ಚುನಾವಣಾ ಆಯೋಗ ಏರ್ಪಡಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಫೆ.೪ರಂದು ಪ್ರಾರಂಭವಾಗುವ ಶಾಸನ ಸಭೆಯ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡುವುದು ರಾಜ್ಯಪಾಲರ ಸತ್ಸಂಪ್ರದಾಯವಾಗಿದೆ.
ಆ ಪ್ರಕಾರ ವರ್ಷದ ಪ್ರಥಮ ಅಧಿವೇಶನವನ್ನುದ್ದೇಶಿಸಿ ತಾನು ಭಾಷಣ ಮಾಡಲಿದ್ದೇನೆ. ಅದರೆ ಬಳಿಕ ಸದನದ ಕಾರ್ಯಕಲಾಪಗಳು ಪ್ರಾರಂಭವಾಗುವ ವೊದಲು ಮುಖ್ಯಮಂತ್ರಿ ಬಹುಮತ ಸಾಬೀತುಪಡಿಸಬೇಕು ಎಂದರು. ಈಗಾಗಲೇ ಯಡಿಯೂರಪ್ಪನವರ ಬೆಂಬಲಿಗ ಇಬ್ಬರು ಸಚಿವರು ತನಗೆ ರಾಜೀನಾಮೆ ಸಲ್ಲಿಸಿದ್ದು, ಹಲವು ಶಾಸಕರು ಸರಕಾರಕ್ಕೆ ಬೆಂಬಲವಿಲ್ಲ ಎಂದು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಹುಮತ ಸಾಬೀತುಪಡಿಸುವ ಅಗತ್ಯವಿದ್ದು, ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಸ್ಪೀಕರ್ ಚರ್ಚಿಸಿ ನಿರ್ಧಾರಕ್ಕೆ ಬರಲಿ ಎಂದು ಹಂಸರಾಜ್ ಭಾರದ್ವಾಜ್ ಹೇಳಿದರು.
ತನ್ನ ಬೆಂಬಲಿಗ ಶಾಸಕರ ರಾಜೀನಾಮೆ ವಿಷಯಕ್ಕೆ ಸಂಬಂಧಿಸಿದಂತೆ ಸ್ಪೀಕರ್‌ರ ನಡವಳಿಕೆಯ ಬಗ್ಗೆ ಯಡಿಯೂರಪ್ಪ ದೂರು ನೀಡಿದ್ದಾರೆ ಎಂದು ತಿಳಿಸಿದ ಅವರು, ಸ್ಪೀಕರ್ ಹುದ್ದೆ ಒಂದು ಸ್ವತಂತ್ರ ಹುದ್ದೆಯಾಗಿದೆ. ಅವರ ಕಾರ್ಯ ವ್ಯಾಪ್ತಿಯನ್ನು ನಾನು ವಿಮರ್ಶೆ ಮಾಡಲು ಹೋಗುವುದಿಲ್ಲ. ಆದರೆ ಈ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆಯಲು ನಿರ್ಧರಿಸಿದ್ದೇನೆ ಎಂದರು.

No comments:

Post a Comment