Sunday, January 6, 2013

ಹದಗೆಟ್ಟ ಕಾನೂನು ಮತ್ತು ಸುವ್ಯವಸ್ಥೆ ಜನವರಿ -05-2013

ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌ರಿಗೆ ಪತ್ರ ಬರೆದಿರುವ ಕರಂದ್ಲಾಜೆ, ಕಳೆದ ಎರಡು ತಿಂಗಳ ಅವಧಿಯಲ್ಲಿ 20ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದೆ. ಮುಖ್ಯಮಂತ್ರಿಯ ತವರು ಜಿಲ್ಲೆಯಲ್ಲೇ ಮಹಿಳೆಯರಿಗೆ ರಕ್ಷಣೆಯಿಲ್ಲದಂತಾಗಿದೆ ಎಂದು ಹೇಳಿದ್ದಾರೆ.
ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣದ ಬಗ್ಗೆ ಹಲವು ಬಾರಿ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿ ದ್ದೇನೆ. ಆರೆಸ್ಸೆಸ್ ಬೈಠಕ್‌ಗಳಲ್ಲೂ ಗಮನಕ್ಕೆ ತಂದಿರುವೆ. ಆದರೂ ಪ್ರಯೋಜನವಾಗಿಲ್ಲ ವೆಂದು ಅವರು ಹೇಳಿದ್ದಾರೆ. ಇಂತಹ ಆರೋಪವನ್ನು ಯಾರೋ ವಿರೋಧ ಪಕ್ಷದವರು ಮಾಡಿದ್ದರೆ ರಾಜಕೀಯ ಟೀಕೆಯೆಂದು ತಳ್ಳಿ ಹಾಕಬಹುದಾಗಿತ್ತು. ಆದರೆ ರಾಜ್ಯ ಸಚಿವ ಸಂಪುಟದ ಹಿರಿಯ ಸಚಿವೆ ನೇರವಾಗಿ ಮುಖ್ಯಮಂತ್ರಿಗೆ ಪತ್ರ ಬರೆದು ಈ ರೀತಿ ಆರೋಪ ಮಾಡುತ್ತಾರೆಂದರೆ ಅದನ್ನು ತಳ್ಳಿ ಹಾಕುವಂತಿಲ್ಲ. ಶೋಭಾ ಕರಂದ್ಲಾಜೆಯವರು ಮಾತ್ರವಲ್ಲ, ಸಂಘಪರಿವಾರದಲ್ಲಿ ಬೆಳೆದು ಬಂದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸಿ.ಮಂಜುಳಾ ಕೂಡ ಉಪಮುಖ್ಯಮಂತ್ರಿ ಆರ್.ಅಶೋಕ್ ರಿಗೆ ಸಲ್ಲಿಸಿದ ವರದಿಯಲ್ಲಿ 2009ರಿಂದ 2011ರವರೆಗೆ 14,989 ಯುವತಿಯರು ರಾಜ್ಯದಿಂದ ನಾಪತ್ತೆಯಾಗಿದ್ದಾರೆಂದು ತಿಳಿಸಿ ದ್ದಾರೆ. ತಾನು ಯಾವುದೇ ವರದಿ ನೀಡಿದ್ದರೂ ಸರಕಾರ ಗಣನೆಗೆ ತೆಗೆದುಕೊಳ್ಳುತ್ತಿಲ್ಲವೆಂದು ಅವರಿಗೂ ಅಸಮಾಧಾನವಿದೆ. ಗೃಹಖಾತೆ ಯನ್ನು ನೋಡಿಕೊಳ್ಳುತ್ತಿರುವ ಉಪ ಮುಖ್ಯಮಂತ್ರಿ ಅಶೋಕ್ ಅತ್ಯಾಚಾರಿಗಳ ವಿರುದ್ಧ ಗೂಂಡಾ ಕಾಯ್ದೆಯನ್ನು ಬಳಸುವು ದಾಗಿ ಹೇಳಿ ಸರಕಾರವನ್ನು ಸಮರ್ಥಿಸಿ ಕೊಂಡಿದ್ದಾರೆ. ಯಾವುದೇ ಮಹಿಳೆಯ ಮೇಲೆ ದೌರ್ಜನ್ಯವಾದರೂ ತಕ್ಷಣ ಕ್ರಮ ಕೈಗೊಳ್ಳಲು ಅನುಕೂಲವಾಗುವಂತೆ 24 ಗಂಟೆ ಕಾರ್ಯ ನಿರ್ವಹಿಸುವ ಮಹಿಳಾ ಸಹಾಯವಾಣಿ ಯನ್ನು ಆರಂಭಿಸುವುದಾಗಿ ಗೃಹ ಸಚಿವರು ಹೇಳಿದ್ದಾರೆ. ದೂರವಾಣಿ ನಂಬರನ್ನು ಪ್ರಕಟಿಸಿದ್ದಾರೆ. ಆದರೆ ಈ ಸಹಾಯವಾಣಿ ಹೇಗಿದೆ ಎಂದರೆ, ಅದಕ್ಕೆ ಫೋನ್ ಮಾಡು ವುದು ಅರಣ್ಯರೋದನವಲ್ಲದೆ ಮತ್ತೇನು ಅಲ್ಲ.
ಅನ್ಯಾಯಕ್ಕೊಳಗಾಗುವ ಮಹಿಳೆಯರು ಅಪತ್ಕಾಲದ ನೆರವಿಗಾಗಿ ಫೋನ್ ಮಾಡಿದರೆ ಸಹಾಯವಾಣಿ ಬರೀ ರಿಂಗ್ ಆಗುತ್ತದೆ. ಯಾರೂ ತೆಗೆಯುವುದಿಲ್ಲ. ಕೆಲ ಬಾರಿ ಸಿದ್ಧಪಡಿಸಿದ ಉತ್ತರ ಸಿಗುತ್ತದೆ. ರಕ್ಷಣೆಗೆ ಬರಬೇಕಾದ ಪೊಲೀಸರೇ ಸಿಗುವುದಿಲ್ಲ. ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದುದು ಇತ್ತೀಚೆಗಲ್ಲ, ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ಕುಸಿಯುತ್ತ ಬಂದಿದೆ. ಕರಾವಳಿಯ ಜಿಲ್ಲೆಗಳಲ್ಲಿ ಸಂಘಪರಿವಾರದ ಸಂವಿಧಾನೇತರ ಶಕ್ತಿಗಳು ಪೊಲೀಸ್ ಇಲಾಖೆಯನ್ನು ನಿಯಂತ್ರಿಸುತ್ತಿವೆ. ಪೊಲೀಸರು ಗಣವೇಷಧಾರಿಗಳಂತೆ ಕಾರ್ಯ ನಿರ್ವಹಿಸುತ್ತಾರೆ.
ಚರ್ಚ್ ಮೇಲೆ ದಾಳಿ ನಡೆದಾಗ, ದನ ಸಾಗಾಟ ಮಾಡುತ್ತಿದ್ದಾರೆಂದು ಸಂಘಪರಿವಾರದ ಕಾರ್ಯಕರ್ತರಿಗೆ ಕಾನೂನು ಕೈಗೆತ್ತಿಕೊಂಡಾಗ ಚಿತ್ರಹಿಂಸೆ ನೀಡಿದಾಗ ಪೊಲೀಸರು ನಡೆದುಕೊಂಡ ರೀತಿ ಎಲ್ಲರಿಗೂ ಗೊತ್ತಿದೆ. ಅಂತಲೇ ಕಾನೂನು ಸುವ್ಯವಸ್ಥೆಯನ್ನು ಪಾಲನೆ ಮಾಡುವಲ್ಲಿ ಸರಕಾರ ಸಂಪೂರ್ಣವಾಗಿ ವಿಫಲಗೊಂಡಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿ ನಿಂದ ನಾನಾ ಹಗರಣಗಳು ಅದನ್ನು ಸುತ್ತಿಕೊಳ್ಳುತ್ತಲೇ ಇವೆ. ಇದರ ಆಪರೇಶನ್ ಕಮಲದ ಫಲಾನುಭವಿಗಳಿಗೂ ಮೂಲ ನಿವಾಸಿಗಳಿಗೂ ಆಗಾಗ ಸಂಘರ್ಷ ನಡೆಯುತ್ತಿದೆ. ಈ ಆಂತರಿಕ ಸಂಘರ್ಷದಲ್ಲಿ ಮುಳುಗಿರುವ ಸರಕಾರಕ್ಕೆ ಆಡಳಿತದ ಮೇಲಿನ ಹಿಡಿತ ಕೈತಪ್ಪಿ ಹೋಗುತ್ತಿದೆ. ಕೋಮುವಾದಿ ಕಾರ್ಯಸೂಚಿಯನ್ನು ಜಾರಿಗೆ ತರಲು ಮಾತ್ರ ಅಧಿಕಾರವನ್ನು ಈ ಸರಕಾರ ದುರುಪಯೋಗ ಪಡಿಸಿಕೊಳ್ಳುತ್ತಾ ಬಂದಿದೆ.

No comments:

Post a Comment