Friday, January 4, 2013

ಮಾವುತನನ್ನೇ ತಿವಿದು ಕೊಂದ ಆನೆ


ಮಾವುತನನ್ನೇ ತಿವಿದು ಕೊಂದ ಆನೆ


ಜನವರಿ -04-2013

ಪುತ್ತೂರು: ಕಳೆದ ಎರಡು ದಿನಗಳ ಹಿಂದೆ ಪುತ್ತೂರಿನಲ್ಲಿ ಭೀತಿ ಸೃಷ್ಟಿಸಿದ್ದ ಮದಗಜ ಲಕ್ಷ್ಮೀಶ ಬುಧವಾರ ಮಧ್ಯರಾತ್ರಿ ತನ್ನ ದ್ವೇಷಕ್ಕೆ ಕಾರಣ ನಾಗಿದ್ದ ಮಾವುತನನ್ನು ತಿವಿದು ಕೊಲ್ಲುವ ಮೂಲಕ ಸೇಡು ತೀರಿಸಿಕೊಂಡಿದೆ. ಈ ವೇಳೆ ಆನೆಯ ಮೇಲೆ ಸವಾರಿ ಮಾಡುತ್ತಿದ್ದ ಅದರ ಮೊದಲ ಮಾವುತ ವರದರಾಜನ್ ಎಂಬವರು ತನ್ನ ಚಾಕಚಕ್ಯತೆಯಿಂದಾಗಿ ಪಾರಾಗಿದ್ದಾರೆ.
ಕೇರಳ ವಯನಾಡ್ ಜಿಲ್ಲೆಯ ಕಲ್ಪಟ್ಟ ಮೇಪಾಡಿ ನಿವಾಸಿ ಚಂದ್ರನ್(48) ಎಂಬವರೇ ಆನೆಯ ಆಕ್ರೋಶಕ್ಕೆ ಬಳಿಯಾದ ಮಾವುತ. ಕಳೆದ ಮಂಗಳವಾರ ಮದವೇರಿ ಪುತ್ತೂರಿನಲ್ಲಿ ಯದ್ವಾ ತದ್ವಾ ವರ್ತಿಸುತ್ತಿದ್ದ ಲಕ್ಷ್ಮೀಶನನ್ನು ಶಾಂತಗೊಳಿಸಿ ಮತ್ತೆ ಉಪ್ಪಿನಂಗಡಿಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ರಾತ್ರಿ 1:15ರ ವೇಳೆಗೆ ಪುತ್ತೂರು- ಉಪ್ಪಿನಂಗಡಿ ರಸ್ತೆಯ ಕೇಪುಳು ಎಂಬಲ್ಲಿ ಈ ದುರಂತ ಸಂಭವಿಸಿದೆ. ಅನೆಯನ್ನು ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಜೊತೆಗೆ ಸಾಗಿಸುತ್ತಿದ್ದ ವೇಳೆ ಕೇಪುಳು ಬಳಿಯ ಆನೆಮಜಲು ಎಂಬಲ್ಲಿ ತನ್ನ ಮಾವುತ ಚಂದ್ರನ್ ರನ್ನು ಕಾಲಿನಿಂದ ತುಳಿದು ರಸ್ತೆಗೆಸೆದ ಆನೆ ಬಳಿಕ ತನ್ನ ಸೊಂಡಿಲಿನಿಂದ ತಿವಿದು ಅವರನ್ನು ಹತ್ಯೆ ಗೈದಿದೆ. ಈ ವೇಳೆ ಮಾವುತ ಚಂದ್ರನ್ ಆನೆಯ ಜೊತೆಗೆ ನಡೆದುಕೊಂಡು ಹೋಗುತ್ತಿದ್ದರೆ ಇನ್ನೋರ್ವ ಮಾವುತ ವರದರಾಜನ್ ಆನೆಯ ಮೇಲೆ ಕುಳಿತು ಸಾಗುತ್ತಿದ್ದರು. ಚಂದ್ರನ್‌ರನ್ನು ನೋಡಿದಾಗಲೆಲ್ಲಾ ಆನೆ ಸಿಟ್ಟಿ ಗೇಳುತ್ತಿದ್ದ ಕಾರಣ ಅವರನ್ನು ಆನೆಯ ಹಿಂದೆ ನಡೆ ಯುವಂತೆ ಸೂಚಿಸಲಾಗಿತ್ತು. ಆದರೆ ಪಾನಮತ್ತ ರಾಗಿದ್ದ ಚಂದ್ರನ್ ಆನೆಯ ಮುಂಭಾಗಕ್ಕೆ ಬಂದು ಎರಡೇಟು ಹೊಡೆದರು. ಇದರಿಂದ ಕೆರಳಿದ ಆನೆ ಅವರನ್ನು ಕಾಲಿನಿಂದ ತುಳಿದು ರಸ್ತೆಗೆಸೆದು ತಿವಿದು ಕೊಂದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನೆಯ ಹಿನ್ನ್ನೆಲೆ: ನೆಕ್ಕಿಲಾಡಿ-ಕೊಳಂಜಿಲಡ್ಕದ ಕರುಣಾಕರ ಪೂಜಾರಿ ಎಂಬವರು ಶೀರೂರು ಮಠದಿಂದ ವರ್ಷದ ಹಿಂದೆ ಲೀಸ್‌ಗೆ ಪಡೆದು ಕೊಂಡಿದ್ದ ಲಕ್ಷ್ಮೀಶನನ್ನು ಮಂಗಳವಾರ ಮಧ್ಯಾಹ್ನ ಲಾರಿಯ ಮೂಲಕ ಸುಳ್ಯ ಕಡೆಗೆ ಕೊಂಡೊಯ್ಯ ಲಾಗುತ್ತಿತ್ತು. ಈ ಸಂದರ್ಭ ಏಳ್ಮುಡಿಗೆ ಸಮೀಪಿಸು ತ್ತಿದ್ದಂತೆಯೇ ಏಕಾಏಕಿ ಮದವೇರಿದಂತೆ ವರ್ತಿ ಸಿದ ಆನೆ, ದಾಂಧಲೆ ಆರಂಭಿಸಿತ್ತು.
ದಾಂಧಲೆ ಮುಂದುವರಿದಿದ್ದರಿಂದ ಸಂಜೆಯ ವೇಳೆ ಅದರ ಮೊದಲಿನ ಮಾವುತ ವರದರಾಜ ರನ್ನು ಸಕಲೇಶಪುರದಿಂದ ಕರೆಸಿ ಆನೆಯನ್ನು ಶಾಂತಗೊಳಿಸುವ ಪ್ರಯತ್ನ ನಡೆಸಲಾಗಿತ್ತು. ಅದು ವಿಫಲವಾದ ಹಿನ್ನೆಲೆಯಲ್ಲಿ ಬಳಿಕ ಅರಿವಳಿಕೆ ತಜ್ಞ ರನ್ನು ಕರೆಸಲಾಗಿತ್ತು. ಅವರು ಮಡಿಕೇರಿಯ ದುಬಾರೆಯ ಆನೆ ಶಿಬಿರದಿಂದ ಆನೆಯೊಂದನ್ನು ತರಿಸಿ ಲಕ್ಷ್ಮೀಶನಿಗೆ ಅರಿವಳಿಕೆ ಚುಚ್ಚುಮದ್ದು ನೀಡಿದ್ದರು. ಬಳಿಕ ಅದನ್ನು ಸಂಕೋಲೆಯಿಂದ ಬಂಧಿಸಲಾಗಿತ್ತು. ಆ ಬಳಿಕ ಶಾಂತವಾಗಿದ್ದ ಆನೆ ಯನ್ನು ರಾತ್ರಿ ಮತ್ತೆ ಕರೆದೊಯ್ಯುತ್ತಿದ್ದ ಸಂದರ್ಭ ದಲ್ಲಿ ಈ ದುರ್ಘಟನೆ ನಡೆದಿದೆ. ಮಾವುತ ಚಂದ್ರನ್‌ನನ್ನು ಕೊಂದ ಆನೆ, ತನ್ನ ಮೇಲೆ ಕುಳಿತಿದ್ದ ಮಾವುತ ವರದರಾಜರನ್ನು ಕೆಳಕ್ಕೆಸೆಯಲು ಮುಂದಾಗಿತ್ತು. ಅಪಾಯ ಅರಿತ ವರದರಾಜನ್ ಅದರ ಸೊಂಡಿಲಿನಿಂದ ತಪ್ಪಿಸಿ ಕೊಂಡು ಆನೆಯನ್ನು ರಸ್ತೆ ಬದಿಯಲ್ಲಿದ್ದ ಆಲದ ಮರವೊಂದರ ಬಳಿ ಸಾಗುವಂತೆ ಮಾಡಿದ್ದರು. ಬಳಿಕ ಸಹಾಯಕನ ನೆರವಿನಿಂದ ಹಗ್ಗ ಮತ್ತು ಸರಪಳಿಯಿಂದ ಅದನ್ನು ಮರಕ್ಕೆ ಕಟ್ಟಿ ಹಾಕಿ ತಾನು ಮರದ ಬೀಳುವಿನ ಸಹಾಯದಿಂದ ಬಚಾವಾಗಿದ್ದಾರೆ.
ಆಕ್ರೋಶಿತ ಆನೆಯನ್ನು ನಿಯಂತ್ರಣಕ್ಕೆ ತರಲು ಮತ್ತೆ ದುಬಾರೆ ಮತ್ತು ತಿತಿಮತಿ ಆನೆ ಕೇಂದ್ರ ದಿಂದ ಮೂರು ಆನೆಗಳನ್ನು ಕರೆತರಲಾಗಿತ್ತು. ಈ ಆನೆಗಳು ಲಕ್ಷ್ಮೀಶನನ್ನು ಸುತ್ತುವರಿದು ಆದು ಅಲುಗಾಡದಂತೆ ನಿಗಾ ವಹಿಸಿದ್ದವು. ಈ ವೇಳೆ ಅರಣ್ಯ ಇಲಾಖೆಯ ವೈದ್ಯರು ಆನೆಗೆ ಅರಿವಳಿಕೆ ಚುಚ್ಚು ಮದ್ದು ನೀಡಿದರು. ಬಳಿಕ ಆನೆಯನ್ನು ಹಗ್ಗದಿಂದ ಕಟ್ಟಿ ಬಂಧಿಸಲಾಯಿತು. ಇದೀಗ ಆನೆ ಕೇಪುಳದಲ್ಲೇ ಮೂರು ಆನೆಗಳ ನಾಕಾಬಂಧಿಯಲ್ಲಿದೆ. ಗುರುವಾರ ರಾತ್ರಿ ಅಥವಾ ಶುಕ್ರವಾರ ಬೆಳಗ್ಗೆ ವಿಶೇಷ ಬ್ಯಾರಿಕೇಡ್‌ನ ಲಾರಿ ಯಲ್ಲಿ ಲಕ್ಷ್ಮೀಶನನ್ನು ದುಬಾರೆಗೆ ಸಾಗಿಸಲಾಗು ವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಎಸ್ಪಿ ಅಭಿಷೇಕ್ ಗೋಯಲ್, ಪುತ್ತೂರು ಎಎಸ್ಪಿ ಅನುಚೇತ್, ಪುತ್ತೂರು ಉಪವಿಭಾಗಾಧಿಕಾರಿ ಪ್ರಸನ್ನ, ವಲಯ ಅರಣ್ಯ ಅಧಿಕಾರಿ ಒ.ಪಾಲಯ್ಯ, ಉಪ ವಲಯ ಅರಣ್ಯ ಅಧಿಕಾರಿ ಅಬ್ಬಾಸ್, ಪುತ್ತೂರು ನಗರ ಠಾಣಾಧಿ ಕಾರಿ ಸುದರ್ಶನ್, ತಹಶೀಲ್ದಾರ್ ಕುಳ್ಳೇಗೌಡ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಈ ಹಿಂದೆಯೂ ದಾಂಧಲೆ ನಡೆಸಿತ್ತು:
ಉಡುಪಿ-ಶೀರೂರು ಮಠದ ಆನೆಯಾಗಿದ್ದ ಲಕ್ಷ್ಮೀಶ ಈ ಹಿಂದೆ ಅಲ್ಲಿಯೂ ದಾಂಧಲೆ ನಡೆಸಿ ಜನರನ್ನು ಭೀತಿಗೊಳಿಸಿತ್ತು. ಆ ಬಳಿಕ ಇದನ್ನು ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ಎಂಬಲ್ಲಿಗೆ ಕಳುಹಿ ಸಲಾಗಿತ್ತು ಬಳಿಕ ಇದನ್ನು ಕರುಣಾಕರ ಪೂಜಾರಿ ಲೀಸ್‌ಗೆ ಪಡೆದುಕೊಂಡಿದ್ದರು. ಈ ಹಿಂದೆ ಸುಳ್ಯದಲ್ಲೂ ಈ ಆನೆ ಪುಂಡಾಟಿಕೆ ನಡೆಸಿತ್ತು.
ಸಾಯಿಸುವುದಾದರೆ ಸಾಯಿಸಲಿ...!
‘‘ಆನೆ ಕಾಲಿನಲ್ಲಿದ್ದ ಸಂಕೋಲೆಯನ್ನು ಲಾರಿಗೆ ಬಿಗಿದು ಲಾರಿಯನ್ನು ನಿಧಾನವಾಗಿ ಚಲಾಯಿಸಿ ಕೊಂಡು ಹೋಗುವಂತೆ ಸಲಹೆ ನೀಡಿದ್ದೆ. ಹಾಗೆ ಮಾಡುತ್ತಿದ್ದರೆ ಇಂತಹ ಅನಾಹುತ ಸಂಭವಿ ಸುತ್ತಿರಲಿಲ್ಲ. ಅಲ್ಲದೇ ಆನೆಯೆದುರು ಹೋಗಬೇಡ ಎಂದು ಚಂದ್ರನ್‌ಗೆ ಬಹಳಷ್ಟು ಸಲ ಸೂಚಿಸಿದ್ದೆ. ಆದರೆ ಪಾನಮತ್ತರಾಗಿದ್ದ ಅವರು ಕೇಳಲಿಲ್ಲ. ಸಾಯಿಸುವುದಾದರೆ ನನ್ನನ್ನು ಸಾಯಿಸಲಿ ಎಂದು ಆನೆಯ ಮುಂದೆ ಬಂದು ಅವರು ಹೊಡೆದದ್ದೇ ಆನೆ ಆಕ್ರೋಶಗೊಂಡು ಈ ಕೃತ್ಯ ಎಸಗಲು ಕಾರಣ’’ ಎಂದು ಮಾವುತ ವರದರಾಜ್ ಹೇಳಿದ್ದಾರೆ.
ಮಾಲಕನ ವಿರುದ್ಧ ಪ್ರಕರಣ
ಘಟನೆಗೆ ಸಂಬಂಧಿಸಿ ಆನೆಯನ್ನು ಲೀಸಿಂಗ್‌ಗೆ ಪಡೆದುಕೊಂಡಿರುವ ಕರುಣಾಕರ ಪೂಜಾರಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗು ವುದು. ಶೀರೂರು ಮಠದವರು ಆನೆಯನ್ನು ಲೀಸಿಗೆ ನೀಡಿರುವ ಕುರಿತು ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಆನೆ ಯನ್ನು ಮತ್ತಿಗೋಡಿನಲ್ಲಿರುವ ದುಬಾರೆ ಯಂತಹ ಶಿಬಿರಕ್ಕೆ ಕೊಂಡೊಯ್ದು ಪ್ರಸ್ತುತ ಮಲಯಾಳಂ ಭಾಷೆ ಮಾತ್ರ ತಿಳಿದಿರುವ ಈ ಆನೆಗೆ ಕನ್ನಡ ಕಲಿಸಲಾಗುವುದು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಒ. ಪಾಲಯ್ಯ ತಿಳಿಸಿದ್ದಾರೆ.

No comments:

Post a Comment